ಶನಿವಾರ, ಆಗಸ್ಟ್ 20, 2022
22 °C
ಏರೊ ಇಂಡಿಯಾ: 12 ರಸ್ತೆ ಗುರುತಿಸಿದ್ದ ಸರ್ಕಾರ

ಏರೊ ಇಂಡಿಯಾ ಶೋಗೆ ರಸ್ತೆ ಅಭಿವೃದ್ಧಿಗೆ ಅನುದಾನ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂದಿನ ವರ್ಷ ಫೆ. 3ರಿಂದ 7ರವರೆಗೆ ನಡೆಯಲಿರುವ ಏರೊ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೂ ಮೊದಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುದಾನದ ಕೊರತೆ ಎದುರಾಗಿದೆ.

ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಗಳೂ ಸೇರಿದಂತೆ ಸುತ್ತಮುತ್ತಲಿನ 12 ರಸ್ತೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಗುರುತಿಸಿತ್ತು.

ರಸ್ತೆ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಸೆ. 4ರಂದು ಲೋಕೋಪಯೋಗಿ ಇಲಾಖೆಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ₹ 30 ಕೋಟಿ ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಆದರೆ, ಮರುದಿನ ಆ ಆದೇಶವನ್ನು ತಿದ್ದುಪಡಿ ಮಾಡಿ ಮೊದಲ ಕಂತಿನಲ್ಲಿ ₹ 16 ಕೋಟಿ ಬಿಡುಗಡೆ ಮಾಡಲಾಗಿದೆ. ಸಂಬಂಧಿಸಿದ ಲೆಕ್ಕ ಶೀರ್ಷಿಕೆಯ ಖಾತೆಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಿ ಅಧಿಕಾರಿಗಳು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

ಏರೊ ಇಂಡಿಯಾ ಪ್ರದರ್ಶನದ ಕಾರಣಕ್ಕೆ, ರಸ್ತೆಗಳ ಅಭಿವೃದ್ಧಿಗೆ ₹ 48 ಕೋಟಿ ಅಗತ್ಯವಿದೆ ಎಂದು ಸರ್ಕಾರಕ್ಕೆ ಲೋಕೋಪಯೋಗಿ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಆರ್ಥಿಕ ಸಂಕಷ್ಟ ಕಾರಣದಿಂದ ₹ 30 ಕೋಟಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಸಹಮತ ವ್ಯಕ್ತಪಡಿಸಿತ್ತು. ಆದರೆ, ಸಂಬಂಧಿಸಿದ ಲೆಕ್ಕ ಶೀರ್ಷಿಕೆಯ ಖಾತೆಯಲ್ಲಿ ಕೇವಲ ₹20.10 ಕೋಟಿ ಲಭ್ಯವಿದೆ. ಹೀಗಾಗಿ, ಅನುದಾನ ಕಡಿತಗೊಳಿಸಲಾಗಿದೆ.

‘ಅನುದಾನ ಲಭ್ಯ ಇಲ್ಲವೆಂದು ಹೇಳುವುದರಲ್ಲಿ ಅರ್ಥವಿಲ್ಲ. ಹಣಮಂಜೂರಾತಿಗೆ ತಾಂತ್ರಿಕ ಸಮಸ್ಯೆಯೂ ಇದೆ. ನಿಗದಿತ ಲೆಕ್ಕ ಶೀರ್ಷಿಕೆಯ ಖಾತೆಯಲ್ಲಿ ಹಣ ಇಲ್ಲ. ‍ಅಧಿವೇಶನದಲ್ಲಿಪೂರಕ ಅಂದಾಜು ಮಂಡಿಸುವ ಸಂದರ್ಭದಲ್ಲಿ ಉಳಿದ ಹಣವನ್ನು ನೀಡ
ಲಾಗುವುದು’ ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್‌ ಹೇಳಿದರು. 

ನಾಗೇಹಳ್ಳಿ ಕ್ರಾಸ್‌ನಿಂದ ಕಣ್ಣೂರು ಗ್ರಾಮ, ಮೈಲನಹಳ್ಳಿ ಗ್ರಾಮ, ಬಂಡಿಕೊಡಿಗೇಹಳ್ಳಿ, ಬೇಗೂರು ವೃತ್ತ, ಆಂಬಿಯನ್ಸ್ ಡಾಬಾದಿಂದ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮೂಲಕ ರಾಜ್ಯ ಹೆದ್ದಾರಿ–9ವರೆಗಿನ ರಸ್ತೆಯೂ ಸೇರಿದಂತೆ 12 ರಸ್ತೆಗಳನ್ನು
ಅಭಿವೃದ್ಧಿಪಡಿಸಲು ಗುರುತಿಸಲಾಗಿತ್ತು.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳನ್ನು ₹ 105.85 ಕೋಟಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಈ ಹಿಂದೆಯೇ ಮಂಜೂರಾತಿ ನೀಡಿತ್ತು. ಈ ಪೈಕಿ, ಭೂಸ್ವಾಧೀನಕ್ಕೆ ₹ 69.96 ಕೋಟಿ ಮತ್ತು ಕಾಮಗಾರಿಗೆ ₹ 35.89 ಕೋಟಿ ನಿಗದಿಪಡಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು