ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಉತ್ತರ ವಿವಿ ಭೂಮಿ ಹಸ್ತಾಂತರ ತೊಡಕು ಶೀಘ್ರ ಇತ್ಯರ್ಥ: ಅಶ್ವತ್ ನಾರಾಯಣ

Last Updated 15 ಫೆಬ್ರುವರಿ 2021, 11:35 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿಡ್ಲಘಟ್ಟ ತಾಲ್ಲೂಕಿನ ಜಂಗಮನ ಕೋಟೆಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಜಮೀನು ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿದೆ. 61 ಎಕರೆ ಭೂಮಿ ಹಸ್ತಾಂತರ ಸಂಬಂಧ ಕೆಲವು ತೊಡಕುಗಳಿವೆ. ಆದಷ್ಟು ಬೇಗ ಅದನ್ನು ಇತ್ಯರ್ಥಪಡಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ ನಾರಾಯಣ ಹೇಳಿದರು.

ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಮಾತನಾಡಿದ ಅವರು, ‘ಈ ವಿಶ್ವವಿದ್ಯಾಲಯಕ್ಕೆ 170 ಎಕರೆ ನಿಗದಿ ಮಾಡಲಾಗಿತ್ತು. ಅದರಲ್ಲಿ 110 ಎಕರೆ ಸರ್ಕಾರಿ ಜಮೀನು. 57 ಎಕರೆ ಹಸ್ತಾಂತರ ಆಗಿದೆ. ಭೂಮಿ ನೀಡಿದ ರೈತರಿಗೆ ಪರ್ಯಾಯ ಭೂಮಿ ನೀಡಲು ಕ್ರಮ ತೆಗೆದುಕೊಳ್ಳಲಾವುದು’ ಎಂದು ಅವರು ಹೇಳಿದರು.

‘ಪರ್ಯಾಯವಾಗಿ ನೀಡುವ ಭೂಮಿ ಎಲ್ಲಿ ಎಂದು ಹೇಳಿದರೆ ಸಾಲದು, ಮೊದಲು ಭೂಮಿಯ ಹಕ್ಕು ಪತ್ರ ನೀಡುವಂತೆ ರೈತರು ಪಟ್ಟು ಹಿಡಿದಿದ್ದಾರೆ. ಆದಷ್ಟು ಬೇಗ ಅದಕ್ಕೆ ಕ್ರಮಕೈಗೊಳ್ಳಲಾಗುವುದು. ಈ ಪ್ರದೇಶವನ್ನು ಜ್ಞಾನ ನಗರ ಮಾಡಲು ತೀರ್ಮಾನಿಸಲಾಗಿದೆ’ ಎಂಂದು ಸಚಿವರು ವಿವರಿಸಿದರು.

‘ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಅವಶ್ಯಕತೆ ತುಂಬಾ ಇದೆ. ಒಂದು ತಿಂಗಳಲ್ಲಿ ವಿಶ್ವವಿದ್ಯಾಲಯಕ್ಕೆ ಕ್ಯಾಂಪಸ್‌ ಜಮೀನು ನೀಡಲಾಗುವುದು. ನಮಗೆ ಇದು ಸವಾಲು ಆಗಿದೆ. ಈ ಪ್ರಕ್ರಿಯೆ ಕಳೆದ ಒಂದು ವರ್ಷದಿಂದ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೇವೆ. ಇನ್ನು ಒಂದು ತಿಂಗಳಲ್ಲಿ ರೈತರಿಗೆ ಪರ್ಯಾಯ ಭೂಮಿ ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ. ಜಮೀನು ಸಿಕ್ಕಿದ ತಕ್ಷಣ ಕಟ್ಟಡ ನಿರ್ಮಾಣ ಆರಂಭಿಸಲಾಗುವುದು’ ಎಂದರು.

‘ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನರಿದ್ದು, ಇಲ್ಲಿರುವ ಕಾಲೇಜುಗಳು ಸಾಲುತ್ತಿಲ್ಲ. ಪದವಿ ಕಾಲೇಜುಗಳು ಕಡಿಮೆ ಇದೆ. ಹೀಗಾಗಿ, ಬೆಂಗಳೂರಿನ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಕಾಲೇಜುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಎಕರೆ, ಐದು ಎಕರೆ ಜಾಗಗಳ ಬಗ್ಗೆ ಮಾಹಿತಿ ಪಡೆಯುತ್ತೇವೆ. ರಾತ್ರೋರಾತ್ರಿ ಕಾಲೇಜು ಆರಂಭಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಆರಂಭಿಸಲಾಗುವುದು’ ಎಂದರು.

ಟಿವಿ, ಫ್ರಿಡ್ಜ್, ಬೈಕ್ ಇದ್ದವರ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ. ಆಧಾರ್ ಕಾರ್ಡ್ ಲಿಂಕ್ ಮೊದಲು ಪೂರ್ಣ ಆಗಬೇಕು. ಈ ಬಗ್ಗೆ ನಾನು ಕೂಡ ಸಚಿವರ ಜೊತೆ ಮಾತಾಡಿದ್ದೇನೆ. ಆಧಾರ್ ಲಿಂಕ್ ಮಾಡಿದರೆ ಸಹಜವಾಗಿಯೇ ಬೋಗಸ್‌ ಕಾರ್ಡ್ ತಡೆ ಹಿಡಿಯಬಹುದು‘ ಎಂದರು.

‘ನ್ಯಾಯಸಮ್ಮತವಾಗಿ ಜನರಿಗೆ ಬಿಪಿಎಲ್‌ ಕಾರ್ಡ್ ಸಿಗಬೇಕು. ಈ ವಿಷಯದಲ್ಲಿ ಮುಂಜಾಗ್ರತೆ ಕ್ರಮ ವಹಿಸಿ, ಒಳ್ಳೆಯ ನಿರ್ಧಾರ ಕೈಗೊಳ್ಳಬೇಕು. ಸದ್ಯಕ್ಕೆ ಯಾವುದನ್ನು ಕೈಗೆತ್ತಿ ಕೊಳ್ಳದಂತೆ ಸಚಿವರಿಗೂ ಹೇಳಿದ್ದೇನೆ. ಸಾಮಾನ್ಯವಾಗಿ ಯಾವುದೇ ಮನೆಗಳಲ್ಲಿ ಟಿವಿ, ಬೈಕ್ ಇದ್ದೆ ಇರುತ್ತದೆ’ ಎಂದು ಅಶ್ವಥ್ ನಾರಾಯಣ ಹೇಳಿದರು.

‘ಜಾತಿ ಗಣತಿ ವರದಿಯನ್ನು ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿಲ್ಲ. ಈಗ ಕಾಂಗ್ರೆಸ್‌ನವರು ನಮಗೆ ಸಲಹೆ, ಕಿವಿಮಾತು ಕೊಡುತ್ತಿದ್ದಾರೆ. ಅವರ ಸರ್ಕಾರ ಇದ್ದಾಗ ಜಾರಿ ಮಾಡಿಲ್ಲ. ನಾವು ಎಲ್ಲವನ್ನೂ ಪರಿಶೀಲಿಸಿ ಸೂಕ್ತ ಸಮಯದಲ್ಲಿ ಕ್ರಮ ತೆಗದುಕೊಳ್ಳುತ್ತೇವೆ’ ಎಂದ ಅವರು, ‘ಆಯಾ ಸಮುದಾಯಗಳು ತಮ್ಮ ಬೇಡಿಕೆಗಳೊಂದಿಗೆ ಹೋರಾಟ ನಡೆಸುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT