ಭಾನುವಾರ, ಆಗಸ್ಟ್ 14, 2022
23 °C

ರಾಜ್ಯ ಸರ್ಕಾರ ರೈತರ ಬೆನ್ನುಮೂಳೆ ಮುರಿಯಲು ಹೊರಟಿದೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರ ಬೆನ್ನುಮೂಳೆಯನ್ನು ಮುರಿಯಲು ಹೊರಟಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘12ನೇ ಶತಮಾನದಲ್ಲಿಯೇ ಬಸವಾದಿ ಶರಣರು ಕಾಯಕ, ದಾಸೋಹ ತತ್ವವನ್ನು ಪ್ರತಿಪಾದನೆ ಮಾಡಿದ್ದರು. ಎಲ್ಲರೂ ದುಡಿಯಬೇಕು, ಎಲ್ಲರೂ ಉಣ್ಣಬೇಕು ಎಂಬುದು ಇದರ ಆಶಯ. ಅವರ ಈ ತತ್ವಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಿದ್ದರೆ ಇಂದು ಸಾಮಾಜಿಕ ಅಂತರ ಕಣ್ಮರೆಯಾಗಿ, ಸಮಸಮಾಜ ಸ್ಥಾಪನೆಯಾಗಿರುತ್ತಿತ್ತು’ ಎಂದು ಹೇಳಿದ್ದಾರೆ. 

‘ಕೃಷಿಯನ್ನು ಹೊರತುಪಡಿಸಿ ಇತರೆ ಎಲ್ಲಾ ಉತ್ಪಾದನಾ ವಲಯಗಳಲ್ಲೂ ಬೆಲೆ ನಿಗದಿ ಮಾಡುವ ಹಕ್ಕು ಉತ್ಪಾದಕರಿಗೇ ಇದೆ. ಆದರೆ ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡುವವರು ಕೊಳ್ಳುವವರಾಗಿದ್ದಾರೆ. ಇದರಿಂದ ರೈತಾಪಿ ವರ್ಗ ನಿರಂತರ ಅರ್ಥಿಕ ಶೋಷಣೆ ಎದುರಿಸುವಂತಾಗಿದೆ. ಭವಿಷ್ಯದಲ್ಲಿ ಈ ವ್ಯವಸ್ಥೆಯೂ ಬದಲಾಗಬೇಕು’ ಎಂದು ಆಗ್ರಹಿಸಿದ್ದಾರೆ. 

‘ದಶಕಗಳ ಹಿಂದಿದ್ದ ಅವಿಭಜಿತ ಕುಟುಂಬಗಳೆಲ್ಲಾ ಕಾಲಕ್ರಮೇಣ ವಿಭಜನೆಯಾಗುತ್ತಾ, ಇಂದು ಸಮಾಜದಲ್ಲಿ ಕೂಡು ಕುಟುಂಬಗಳು ಕಣ್ಮರೆಯಾಗುತ್ತಿವೆ. ಇದರಿಂದ ಬೃಹತ್ ಹಿಡುವಳಿಗಳು ಕುಟುಂಬಗಳ ನಡುವೆ ಹರಿದು ಹಂಚಿಹೋಗಿ ಕೃಷಿ ಕ್ಷೇತ್ರ ಬಡವಾಗುವ ಜೊತೆಗೆ ರೈತರೂ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ... ‌ಅನುಭವ ಮಂಟಪ | ಭೂಸುಧಾರಣೆ ಕಾಯ್ದೆ: 70 ವರ್ಷಗಳ ಗಳಿಕೆ ಕಸಿಯುವ ಕೆಲಸ

‘ನಾಡಿನ ರೈತರು ಬರಗಾಲ, ಪ್ರವಾಹ, ಕೊರೊನಾ ಹಾವಳಿಗಳಿಂದಾಗಿ ಈಗಾಗಲೇ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ, ಇಂತಹ ಸಂಕಷ್ಟದ ಸಮಯದಲ್ಲಿ ಅವರ ಜೊತೆಗೆ ನಿಲ್ಲಬೇಕಿದ್ದ ಸರ್ಕಾರ ಭೂಸುಧಾರಣಾ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರ ಬೆನ್ನುಮೂಳೆಯನ್ನೇ ಮುರಿಯಲು ಹೊರಟಿದೆ’ ಎಂದಿದ್ದಾರೆ. 

‘ರಾಜ್ಯ ಸರ್ಕಾರದ ಜನ ವಿರೋಧಿ, ರೈತ ವಿರೋಧಿ ಕಾಯ್ದೆಗಳ ವಿರುದ್ಧ ಸದನದಲ್ಲಿ ಸುದೀರ್ಘ ಚರ್ಚೆ ನಡೆಸಿ, ಅವುಗಳ ಸಾಧಕ- ಬಾಧಕಗಳನ್ನು ರಾಜ್ಯದ ಜನರ ಮುಂದೆ ಇಡಬೇಕು ಎಂಬುದು ನಮ್ಮ ಆಶಯ. ಆದರೆ ಈ ಬಾರಿಯ ಅಧಿವೇಶನದಲ್ಲಿ ಪ್ರಮುಖ ವಿಚಾರಗಳ ಚರ್ಚೆಗೆ ಅಗತ್ಯ ಸಮಯ ಸಿಗುವುದೇ ಅನುಮಾನವೆಂಬಂತಿದೆ’ ಎಂದು ಬರೆದುಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು