ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ ನಾಪತ್ತೆ: ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದ ಕಾಗೇರಿ

Last Updated 31 ಮಾರ್ಚ್ 2022, 16:08 IST
ಅಕ್ಷರ ಗಾತ್ರ

ಬೆಂಗಳೂರು: 19 ಲಕ್ಷ ಇವಿಎಂಗಳು ನಾಪತ್ತೆ ಆಗಿವೆ ಎಂದು ಕಾಂಗ್ರೆಸ್‌ ಶಾಸಕ ಎಚ್‌.ಕೆ.ಪಾಟೀಲ ಅವರು ಎತ್ತಿರುವ ಪ್ರಶ್ನೆಯ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮಾಹಿತಿ ತರಿಸುವುದಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಷ್ಟು ದೊಡ್ಡ ಪ್ರಮಾಣದಲ್ಲಿ ಇವಿಎಂಗಳು ನಾಪತ್ತೆ ಆಗಿದ್ದರೆ ದೇಶದಲ್ಲಿ ವಿರೋಧ ಪಕ್ಷಗಳು ಮತ್ತು ಸಾಮಾನ್ಯ ಜನರ ಸುಮ್ಮನೆ ಕೂರಲು ಸಾಧ್ಯವಿತ್ತೆ? ದೊಡ್ಡ ಗದ್ದಲವೇ ಆಗುತ್ತಿತ್ತು. ಅವರೊಂದು ಸಂಶಯದ ಬೀಜ ಬಿತ್ತಿದ್ದಾರೆ. ಅದಕ್ಕೆ ಸೂಕ್ತ ಉತ್ತರ ತರಿಸಿ, ಸದಸ್ಯರಿಗೆ ಕೊಡುವುದು ನಮ್ಮ ಜವಾಬ್ದಾರಿ’ ಎಂದು ಅವರು ಹೇಳಿದರು.

ಚುನಾವಣೆ ವ್ಯವಸ್ಥೆಯ ಬಗ್ಗೆ ವಿಧಾನಸಭೆಯಲ್ಲಿ ಎಲ್ಲ ಸದಸ್ಯರೂ ಉತ್ತಮವಾಗಿ ಮಾತನಾಡಿದರು. ಆರಂಭದಲ್ಲಿ ಕೆಲವು ಶಾಸಕರು ಬೇರೆಯದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ದಿಕ್ಸೂಚಿ ಭಾಷಣವನ್ನು ಓದಿದ ಬಳಿಕ ಎಲ್ಲರೂ ಉತ್ಸಾಹದಿಂದ ಮಾತನಾಡಿದರು ಎಂದರು.

‘ವಿಧಾನಪರಿಷತ್ತಿಗೆ ನೂರಾರು ವರ್ಷದ ಇತಿಹಾಸವಿದೆ. ಇತ್ತೀಚೆಗೆ ವಿಧಾನಪರಿಷತ್ತಿನ ಚುನಾವಣೆಗಳು ಹೇಗೆ ನಡೆದಿವೆ. ವಿಧಾನಪರಿಷತ್ತಿನಲ್ಲಿ ನಡೆದ ಘಟನೆಗಳನ್ನು ಜನರು ನೋಡಿದ್ದಾರೆ. ವಿಧಾನಮಂಡಲದ ಅಧ್ಯಕ್ಷನಾಗಿ ಅದರ ಸುಧಾರಣೆಗೆ ಪ್ರಯತ್ನಿಸಬೇಕು. ಚುನಾವಣಾ ವ್ಯವಸ್ಥೆ ಬಗ್ಗೆ ಅಲ್ಲಿಯೂ ಚರ್ಚೆ ನಡೆಯಬೇಕು ಎಂಬ ಕಾರಣಕ್ಕೆ ಭಾಷಣದ ಪ್ರತಿಗಳನ್ನು ಕಳುಹಿಸಿದ್ದೆ. ಅದಕ್ಕೆ ವಿರೋಧ ವ್ಯಕ್ತಪಡಿಸುವ ಮನಸ್ಥಿತಿ ಇದ್ದರೆ, ಅವರ ಮಾನಸಿಕ ಸ್ಥಿತಿ ಹೇಗಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ’ ಎಂದು ಕಾಗೇರಿ ಹೇಳಿದರು.

ಈ ಬಾರಿ ಅಧಿವೇಶನ ಸುಗಮವಾಗಿ ಮತ್ತು ಉತ್ತಮವಾಗಿ ನಡೆಯಿತು. ಫೆಬ್ರುವರಿ 14 ರಿಂದ 22 ರವರೆಗೆ ಮತ್ತು ಮಾರ್ಚ್‌ 4 ರಿಂದ ಮಾರ್ಚ್‌ 30 ರವರೆಗೆ ಒಟ್ಟು 26 ದಿನಗಳು ಕಾಲ 116 ಗಂಟೆ 20 ನಿಮಿಷ ಕಾರ್ಯಕಲಾಪ ನಡೆಸಲಾಯಿತು. ಒಟ್ಟು 13 ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು. ಒಟ್ಟು 4769 ಪ್ರಶ್ನೆಗಳಲ್ಲಿ ಸದನದಲ್ಲಿ ಉತ್ತರಿಸಬೇಕಾದ 405 ಪ್ರಶ್ನೆಗಳ ಪೈಕಿ 385 ಕ್ಕೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸಬೇಕಾದ 4264 ಪ್ರಶ್ನೆಗಳಲ್ಲಿ 3489 ಪ್ರಶ್ನೆಗಳಿಗೆ ಉತ್ತರ ಸ್ವೀಕರಿಸಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT