ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆ: ಪೊಲೀಸ್ ಕಮಿಷನರ್‌ ಭೇಟಿಯಾದ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್‌

ನಟಿ ಅನುಷ್ಕಾ ಶೆಟ್ಟಿ ಸಹೋದರನಿಂದ ಮಾಹಿತಿ ಪಡೆದ ಪೊಲೀ‌ಸರು
Last Updated 29 ಜೂನ್ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ಚಿತ್ರ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಅವರು ಭೂಗತ ಪಾತಕಿಗಳಿಂದ ಜೀವ ಬೆದರಿಕೆ ಎದುರಿಸುತ್ತಿದ್ದು, ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಅವರನ್ನು ಬುಧವಾರ ಭೇಟಿಯಾಗಿ ಈ ಬೆಳವಣಿಗೆ ಬಗ್ಗೆ ಮಾಹಿತಿ ಹಂಚಿಕೊಂಡರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನ ಜೀವಕ್ಕೆ ಅಪಾಯ ಇರುವ ಬಗ್ಗೆ ನಂಬಲರ್ಹ ಮೂಲಗಳಿಂದ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಈ ಪ್ರಕರಣವನ್ನು ಮಂಗಳೂರಿನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಾಗಾಗಿ ಪೊಲೀಸ್‌ ಕಮಿಷನರ್‌ ಹಾಗೂ ಇತರ ಅಧಿಕಾರಿಗಳನ್ನು ಭೇಟಿಯಾಗಿದ್ದೆ. ಅವರು ತನಿಖೆಗೆ ಅಗತ್ಯವಿರುವ ಕೆಲವು ಮಾಹಿತಿಗಳನ್ನು ನನ್ನಿಂದ ಪಡೆದುಕೊಂಡರು’ ಎಂದು ತಿಳಿಸಿದರು.

‘ನಾವು ನಿರ್ದಿಷ್ಟ ವ್ಯಕ್ತಿ ವಿರುದ್ಧ ದೂರು ನೀಡಿ ಎಫ್‌ಐಆರ್‌ ದಾಖಲಿಸುವ ಮುನ್ನ, ಅವರು ಯಾರು ಎಂಬುದನ್ನು ಖಚಿತವಾಗಿ ತಿಳಿದುಕೊಳ್ಳಬೇಕಾಗುತ್ತದೆ. ನನಗೆ ಜೀವ ಬೆದರಿಕೆ ಒಡ್ಡಿರುವುದು ನಿರ್ದಿಷ್ಟವಾಗಿ ಇಂತಹದ್ದೇ ವ್ಯಕ್ತಿ ಎಂದು ನಾನು ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಎಲ್ಲ ವಿಚಾರಗಳೂ ಸ್ಪಷ್ಟವಾಗಲಿವೆ. ನಾನು ಸಾರ್ವಜನಿಕ ಜೀವನದಲ್ಲಿದ್ದೇನೆ. ಹಲವಾರು ಕೆಲಸಕಾರ್ಯ ಮಾಡುತ್ತಿದ್ದೇನೆ. ನಾವು ಬೊಟ್ಟು ಮಾಡುವುದಕ್ಕಿಂತ ಪೊಲೀಸರೇ ಈ ಬಗ್ಗೆ ತಿಳಿಸುವುದು ಸೂಕ್ತ’ ಎಂದರು.

ಈ ಪ್ರಕರಣದಲ್ಲಿ ಮನ್ವಿತ್‌ ರೈ ಕೈವಾಡ ಇದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು,‘ಮನ್ವಿತ್ ರೈ ನನ್ನ ಪರಿಚಯದ ವ್ಯಕ್ತಿ. ಈ ಪ್ರಕರಣದಲ್ಲಿ ಅವರ ಹೆಸರು ಏಕೆ ಪ್ರಸ್ತಾಪವಾಗಿದೆಯೋ ಗೊತ್ತಿಲ್ಲ. ಈ ಬಗ್ಗೆ ಅವರೇ ಉತ್ತರ ಕೊಡಬೇಕು. ಈ ಪ್ರಕರಣದಲ್ಲಿ ಅವರ ಹೆಸರು ಥಳಕು ಹಾಕಿಕೊಂಡಿದ್ದು ನನಗೆ ಗೊತ್ತಾಗಿದ್ದು, ಮಾಧ್ಯಮದ ಮೂಲಕ. ಈ ಬಗ್ಗೆ ಮನ್ವಿತ್‌ ರೈ ಖುದ್ದಾಗಿ ಹೇಳಿಕೆ ಕೊಟ್ಟಿದ್ದಾರೆ. ಅವರು ಏಕೆ ಕೊಟ್ಟರೋ ಗೊತ್ತಿಲ್ಲ. ಅದಕ್ಕೆ ಅವರೇ ಉತ್ತರ ಕೊಡಬೇಕು. ನಾನು ಯಾವುದೇ ಹೆಸರನ್ನು ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪೊಲೀಸರು ಎಲ್ಲ ಆಯಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಒಡ್ಡಿದವರು ಯಾರೇ ಆಗಿದ್ದರೂ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಎಲ್ಲೇ ಇದ್ದರೂ ಕರೆತಂದು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ತನಿಖೆ ಬಗ್ಗೆ ವಿಶ್ವಾಸ ಇದೆ. ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಮಾಹಿತಿ ಹಂಚಿಕೊಳ್ಳುತ್ತೇನೆ’ ಎಂದರು.

‘ಚಿತ್ರನಟಿ ಅನುಷ್ಕಾ ನನ್ನ ತಂಗಿಯಾದರೂ, ತಾಯಿ ಸ್ಥಾನದಲ್ಲಿದ್ದಾಳೆ. ಸಹೋದರಿಗೆ ಈ ರೀತಿ ಜಿವ ಬೆದರಿಕೆ ಎದುರಾದಾಗ ನನ್ನ ಸುರಕ್ಷತೆ ಬಗ್ಗೆ ಅವಳಿಗೂ ಆತಂಕವಾಗುವುದು ಸಹಜ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT