ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್ ಜಿಹಾದ್ ಹೆಸರಿನಲ್ಲಿ ಹಕ್ಕುಗಳ ಹರಣ: ನ್ಯಾ. ನಾಗಮೋಹನ್ ದಾಸ್

ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಕಳವಳ
Last Updated 8 ಡಿಸೆಂಬರ್ 2020, 15:40 IST
ಅಕ್ಷರ ಗಾತ್ರ

ಬೆಂಗಳೂರು: ‘ಮೊದಲಿನಿಂದಲೂ ಅಂತರ್ಜಾತಿ ಹಾಗೂ ಅಂತರ್ ಧರ್ಮೀಯ ವಿವಾಹಗಳು ನಡೆದುಕೊಂಡು ಬಂದಿವೆ. ಈಗ ಲವ್ ಜಿಹಾದ್ ಹೆಸರಿನಲ್ಲಿ ವ್ಯಕ್ತಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಕಳವಳ ವ್ಯಕ್ತಪಡಿಸಿದರು.

ಅಖಿಲ ಭಾರತ ವಕೀಲರ ಸಂಘ ಹಾಗೂ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ‘ಧಾರ್ಮಿಕ ಸ್ವಾತಂತ್ರ್ಯ–ಮತಾಂತರ–ಆಯ್ಕೆಯ ಹಕ್ಕು’ ವಿಷಯದ ಬಗ್ಗೆ ವರು ಮಾತನಾಡಿದರು.

‘ದೇಶದಲ್ಲಿ 4 ಸಾವಿರಕ್ಕೂ ಅಧಿಕ ಜಾತಿ ಮತ್ತು ಉಪಜಾತಿಗಳಿವೆ. ವಿವಿಧ ಧರ್ಮಗಳ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಬಿಂದುಸಾರ, ಅಶೋಕ, ಅಕ್ಬರ್, ಆದಿಲ್ ಷಾ ಸೇರಿದಂತೆ ವಿವಿಧ ರಾಜ ಮಹಾರಾಜರು ಬೇರೆ ಧರ್ಮದವರನ್ನು ವಿವಾಹವಾಗಿದ್ದರು. ಇತಿಹಾಸದ ಉದ್ದಕ್ಕೂ ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ಮದುವೆಗಳು ನಡೆದಿವೆ. ತಮ್ಮಿಚ್ಛೆಯ ವ್ಯಕ್ತಿಯನ್ನು ಹಾಗೂ ಧರ್ಮವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ’ ಎಂದರು.

‘ಗಣ್ಯರು ಹಾಗೂ ಅವರ ಕುಟುಂಬದ ಸದಸ್ಯರು ಅಂತರ್ಜಾತಿ, ಅಂತರ್ ಧರ್ಮೀಯ ವಿವಾಹವಾದರೆ ಅದು ಅಪರಾಧವಲ್ಲ. ಆದರೆ, ಸಾಮಾನ್ಯರು ಈ ರೀತಿ ಮದುವೆಯಾದರೆ ಅದನ್ನು ಲವ್ ಜಿಹಾದ್ ಎಂದು ಕರೆಯಲಾಗುತ್ತದೆ. ಸ್ವಾತಂತ್ರ್ಯ ಹಾಗೂ ಧಾರ್ಮಿಕ ಹಕ್ಕುಗಳನ್ನು ನಿಯಂತ್ರಿಸಲು ಸರ್ಕಾರಕ್ಕೆ ಅವಕಾಶವಿಲ್ಲ. ಹಾಗಾಗಿ ಹೊಸದಾದ ಕಾನೂನಿನ ಅಗತ್ಯವಿಲ್ಲ. ಆದರೆ, ಜೀವನಾಂಶ ನೀಡುವಿಕೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಲೋಪಗಳನ್ನು ಸರಿಪಡಿಸಬೇಕು’ ಎಂದರು.

‘ಲವ್ ಜಿಹಾದ್–ಮತಾಂತರ–ಕೋರ್ಟ್ ತೀರ್ಪುಗಳು’ ಕುರಿತು ಮಾತನಾಡಿದ ವಕೀಲೆ ಬಾನು ಮುಷ್ತಾಕ್, ‘ಲವ್ ಜಿಹಾದ್ ಹೆಸರಿನಲ್ಲಿ ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಸಲಾಗುತ್ತಿದೆ. ವ್ಯಕ್ತಿ ಹಾಗೂ ಆತನ ಧರ್ಮವನ್ನು ಒಪ್ಪಿ ಮದುವೆ ಆಗುವುದು ಗಂಧರ್ವ ವಿವಾಹ ಎಂದು ಮನುಸ್ಮೃತಿಯಲ್ಲಿ ಹೇಳಲಾಗಿದೆ. ಹೀಗಾಗಿ ಪರಸ್ಪರ ಪ್ರೀತಿಸಿ ವಿವಾಹವಾಗುವುದು ಲವ್ ಜಿಹಾದ್ ಆಗಲಾರದು. ಲವ್ ಜಿಹಾದ್ ಪದದ ಹಿಂದೆ ಕೌರ್ಯದಿಂದ ಕೂಡಿದ ರಾಜಕೀಯ ಅಡಗಿದೆ’ ಎಂದು ಹೇಳಿದರು.

ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ, ‘ಲವ್ ಜಿಹಾದ್ ಪ್ರಸ್ತಾಪವಾದಾಗ ಮದುವೆ, ಆಯ್ಕೆ, ಹಕ್ಕು ಸೇರಿದಂತೆ ವಿವಿಧ ಸಂಗತಿಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತವೆ. ಲವ್ ಜಿಹಾದ್‌ ಎನ್ನುವುದು ಕೋವಿಡ್ ಸಂದರ್ಭದಲ್ಲಿ ನಮ್ಮ ಮುಂದೆ ಬಂದಿದೆ. ಮದುವೆ ಮೂಲಕ ಮಹಿಳೆ, ಜಾತಿ ಮತ್ತು ಧರ್ಮವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆಯುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT