ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ವರ್ಷದ ಹೊನ್ನಮ್ಮಳಿಗೆ 40 ವರ್ಷಗಳಿಂದ ಪೊಲೀಸ್‌ ಠಾಣೆಯೇ ಮನೆ!

40 ವರ್ಷಗಳಿಂದ ಪೊಲೀಸರ ಆಶ್ರಯದಲ್ಲಿರುವ ವೃದ್ಧೆ
Last Updated 22 ಮಾರ್ಚ್ 2021, 5:40 IST
ಅಕ್ಷರ ಗಾತ್ರ

ಮಂಗಳೂರು: ಅದೊಂದು ಪೊಲೀಸ್ ಠಾಣೆ. ನಿತ್ಯವೂ ಹಲವಾರು ನಾಪತ್ತೆ, ಕಾಣೆಯಾದವರ ಬಗ್ಗೆ ದೂರುಗಳು ಬರುತ್ತವೆ. ಅವರಲ್ಲಿ ಹಲವರನ್ನು ಪತ್ತೆ ಮಾಡಿ, ಪಾಲಕರು, ಸಂಬಂಧಿಕರಿಗೆ ಒಪ್ಪಿಸುವುದು ಪೊಲೀಸರ ಕೆಲಸ. ಆದರೆ, ಹೀಗೆ ಪತ್ತೆಯಾದ ಮಹಿಳೆ ಯೊಬ್ಬರಿಗೆ ಅದೇ ಪೊಲೀಸ್‌ ಠಾಣೆ ಯಲ್ಲಿ 40 ವರ್ಷಗಳಿಂದ ಆಶ್ರಯ ನೀಡಲಾಗಿದೆ.

60 ವರ್ಷದ ಹೊನ್ನಮ್ಮ ನಗರದ ಬಂದರು (ಮಂಗಳೂರು ಉತ್ತರ) ಠಾಣೆಯಲ್ಲಿ 40 ವರ್ಷಗಳಿಂದ ವಾಸವಾಗಿದ್ದಾರೆ. ಅವರಿಗೆ ಠಾಣೆಯೇ ಮನೆ. ಅವರ ಎಲ್ಲ ದಾಖಲೆಗಳ ವಿಳಾಸವೂ ಬಂದರು ಠಾಣೆಯೇ ಆಗಿದೆ.

ಪೊಲೀಸ್ ಸಿಬ್ಬಂದಿ ‘ಹೊನ್ನಮ್ಮ’ ಎಂದು ಕರೆಯುವ ಈ ಮಹಿಳೆಗೆ ಮಾತು ಬರುವುದಿಲ್ಲ. ಕಿವಿ ಕೇಳುವುದಿಲ್ಲ. 40 ವರ್ಷಗಳ ಹಿಂದೆ ನಗರದರೈಲ್ವೆ ನಿಲ್ದಾಣದಲ್ಲಿ ಇವರು ಪತ್ತೆಯಾಗಿ ದ್ದರು. ಆದರೆ, ಮಾತು ಬರದೇ ಇರುವುದು, ಸಂಬಂಧಿಕರು ಪತ್ತೆ ಆಗದೇಇರುವುದರಿಂದ ಅವರನ್ನು ಎಲ್ಲಿಬಿಡುವುದು ಎನ್ನುವುದೇ ಚಿಂತೆಯಾ ಗಿತ್ತು. ಆದರೆ, ಆಗಿನ ಪೊಲೀಸ್‌ ಅಧಿಕಾರಿಗಳು ಮಾನವೀಯತೆ ತೋರಿ, ಅವರಿಗೆ ಪೊಲೀಸ್ ಠಾಣೆಯಲ್ಲಿಯೇ ಆಶ್ರಯ ನೀಡಿದರು.

ಇದೀಗ ಹೊನ್ನಮ್ಮ ಅವರ ಆಧಾರ ಕಾರ್ಡ್‌, ಮತದಾರರ ಗುರುತಿನ ಚೀಟಿ, ಬ್ಯಾಂಕ್‌ ಖಾತೆಯಲ್ಲಿ ಬಂದರು ಠಾಣೆಯೇ ಅವರ ವಿಳಾಸವಾಗಿದೆ. ಠಾಣೆಗೆ ಹೊಂದಿಕೊಂಡಿರುವ ಪುಟ್ಟ ಕೋಣೆಯೇ ಅವರ ಮನೆ. ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿಕೊಂಡು, ಪಕ್ಕದ ಕೋಣೆಯಲ್ಲಿ ಅವರು ವಾಸ ಮಾಡುತ್ತಿದ್ದಾರೆ.

ಆರಂಭದಲ್ಲಿ ಹೊನ್ನಮ್ಮ ಅವರು ಠಾಣೆಯ ಸ್ವಚ್ಛತೆ ಕೆಲಸ ಮಾಡುತ್ತಿದ್ದರು. ವಯಸ್ಸಾದಂತೆ ಕಾಲಿನ ನೋವು ಕಾಣಿಸಿ
ಕೊಂಡಿದ್ದು, ಈಗ ಠಾಣೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ಹಲವಾರು ಪೊಲೀಸ್ ಅಧಿಕಾರಿಗಳು ಈ ಠಾಣೆಗೆ ಬಂದು ಹೋಗಿದ್ದಾರೆ. ಅವರೆಲ್ಲರಿಗೂ ಈ ಹೊನ್ನಮ್ಮ ಚಿರಪರಿಚಿತರು.

ಕೈ ಸನ್ನೆಯಿಂದಲೇ ಎಲ್ಲರ ಜೊತೆಗೆ ಸಂವಹನ ನಡೆಸುವ ಹೊನ್ನಮ್ಮ ಅವರನ್ನು ಪೊಲೀಸ್‌ ಸಿಬ್ಬಂದಿ ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ. ಈಚೆಗೆ ನಗರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಅವರು ಪೊಲೀಸರ ಕುಟುಂಬದವರಿಗೆ ಆಯೋಜಿಸಿದ್ದ ಮನರಂಜನಾ ಕಾರ್ಯಕ್ರಮದಲ್ಲೂ ಹೊನ್ನಮ್ಮ ಪಾಲ್ಗೊಂಡಿದ್ದರು.

ಹೊನ್ನಮ್ಮ ಅವರಿಗೆ ಆಗಾಗ ಉಡುಗೊರೆ, ಸೀರೆ, ಅಗತ್ಯವಿರುವ ಸಾಮಗ್ರಿಗಳನ್ನು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಒದಗಿಸುತ್ತಾರೆ. ಕೆಲವೊಮ್ಮೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದಾಗ, ಮನೆಯ ಸದಸ್ಯರೇ ಆಸ್ಪತ್ರೆಯಲ್ಲಿ ಇರುವಂತೆ ಕಾಳಜಿ ವಹಿಸಿದ್ದಾರೆ.

***

ಈ ಠಾಣೆಗೆ ಹಲವು ಅಧಿಕಾರಿಗಳು ಬಂದು, ಹೋಗಿದ್ದಾರೆ. ಆದರೆ, 40 ವರ್ಷಗಳಿಂದ ಹೊನ್ನಮ್ಮ ಭಾವನಾತ್ಮಕವಾಗಿ ಎಲ್ಲರೊಂದಿಗೆ ಹೊಂದಿಕೊಂಡಿದ್ದಾರೆ.

- ಗೋವಿಂದರಾಜು, ಬಂದರು ಠಾಣೆ ಇನ್‌ಸ್ಪೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT