ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಾಲ್‌–ಜಟ್ಕಾ ವಿವಾದ: ಸೊರಗಿದ ಕುರಿ ಸಂತೆ

ಹೊರರಾಜ್ಯದ ವ್ಯಾಪಾರಸ್ಥರ ಸಂಖ್ಯೆಯಲ್ಲಿ ಇಳಿಕೆ, ವಹಿವಾಟು ಕುಸಿತ
Last Updated 14 ಏಪ್ರಿಲ್ 2022, 19:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಾಂಸಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಭುಗಿಲೆದ್ದ ಹಲಾಲ್‌–ಜಟ್ಕಾ ವಿವಾದದಿಂದಾಗಿ ಇಲ್ಲಿನ ಕುರಿ ಮಾರುಕಟ್ಟೆ ಸೊರಗುತ್ತಿದೆ. ಹೊರ ರಾಜ್ಯದ ವ್ಯಾಪಾರಸ್ಥರು ಖರೀದಿಗೆ ಆಸಕ್ತಿ ತೋರದಿರುವುದರಿಂದ ವಹಿವಾಟು ಕುಸಿತವಾಗುತ್ತಿದ್ದು, ಕುರಿ ಸಾಕಣೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಗರದ ಎಪಿಎಂಸಿ ಆವರಣದಲ್ಲಿ ಪ್ರತಿ ಗುರುವಾರ ಕುರಿ ಮಾರುಕಟ್ಟೆ ನಡೆಯುತ್ತದೆ. ಮಧ್ಯ ಕರ್ನಾಟಕದಲ್ಲಿಯೇ ಅತಿ ಹೆಚ್ಚು ವಹಿವಾಟು ನಡೆಯುವ ಖ್ಯಾತಿಯೂ ಇದಕ್ಕಿದೆ. ಜಿಲ್ಲೆಯಲ್ಲಿ ಕುರಿ ಸಾಕಣೆದಾರರ ಸಂಖ್ಯೆ ಹೆಚ್ಚಿರುವುದರಿಂದ ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿಯೂ ಪ್ರತ್ಯೇಕ ಕುರಿ ಮಾರುಕಟ್ಟೆಗಳಿವೆ.

‘ಸಾಕಿದ ಹಾಗೂ ಹಳ್ಳಿಯಲ್ಲಿ ಖರೀದಿಸಿದ ಕುರಿಗಳನ್ನು ಸಂತೆಗೆ ತಂದು ಮಾರಾಟ ಮಾಡುವ ಕಾಯಕವನ್ನು 25 ವರ್ಷಗಳಿಂದ ಮಾಡುತ್ತಿದ್ದೇನೆ. ಪ್ರತಿ ವಾರದ ಸಂತೆಗೆ 20 ಕುರಿ ತರುತ್ತಿದ್ದೆ. ಎಲ್ಲವೂ ನಿರೀಕ್ಷಿತ ಬೆಲೆಗೆ ಮಾರಾಟವಾಗುತ್ತಿದ್ದವು. ಒಂದೂವರೆ ತಿಂಗಳಿಂದ ಈಚೆಗೆ ಕುರಿ ಮಾರಾಟ ಕಡಿಮೆಯಾಗಿದೆ. ಕಳೆದ ವಾರ ಐದು ಕುರಿ ಕೂಡ ಮಾರಾಟವಾಗಲಿಲ್ಲ. ಮಾರುಕಟ್ಟೆಗೆ ಬರುವ ಕುರಿ ವ್ಯಾಪಾರಸ್ಥರ ಸಂಖ್ಯೆಯಲ್ಲಿ ಇಳಿಮುಖವಾಗಿದೆ’ ಎನ್ನುತ್ತಾರೆ ಚಿತ್ರದುರ್ಗ ತಾಲ್ಲೂಕಿನ ಮಾರಗಟ್ಟ ಗ್ರಾಮದ ಬಸಣ್ಣ.

ಪಶುಸಂಗೋಪನಾ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ 17.37 ಲಕ್ಷ ಕುರಿಗಳಿವೆ. ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿಯೇ 10 ಲಕ್ಷಕ್ಕೂ ಹೆಚ್ಚು ಕುರಿಗಳಿವೆ. ಗೊಲ್ಲ, ಮ್ಯಾಸಬೇಡ ಹಾಗೂ ಕುರುಬ ಸಮುದಾಯದ ಪ್ರಮುಖ ಕಾಯಕ ಕುರಿ ಸಾಕಣೆ. ಹೀಗೆ ಸಾಕಣೆ ಮಾಡಿದ ಕುರಿಗಳನ್ನು ಮಾರಾಟ ಮಾಡಲು ವಾರದ ಸಂತೆಗೆ ತರುವುದು ವಾಡಿಕೆ. ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದಿಂದ ವ್ಯಾಪಾರಸ್ಥರು ಇಲ್ಲಿಗೆ ಬರುತ್ತಾರೆ. ಬೆಳಿಗ್ಗೆ 6ರಿಂದ 11ರವರೆಗೆ ನಡೆಯುವ ಸಂತೆಯಲ್ಲಿ ಸಾವಿರಾರು ಕುರಿಗಳು ಮಾರಾಟವಾಗುತ್ತವೆ.

‘ತಮಿಳುನಾಡು, ಮಹಾರಾಷ್ಟ್ರದ ವ್ಯಾಪಾರಸ್ಥರು ಗಣನೀಯ ಪ್ರಮಾಣದಲ್ಲಿ ಕುರಿ ಖರೀದಿಸುತ್ತಾರೆ. ಖರೀದಿದಾರರಲ್ಲಿ ಬಹುತೇಕರು ಮುಸ್ಲಿಮರು. ಇವರು ಮಾರುಕಟ್ಟೆಗೆ ಬರದಿರುವುದರಿಂದ ಕುರಿಗೆ ಬೇಡಿಕೆ ಕಡಿಮೆಯಾಗಿದೆ. ವಹಿವಾಟು ಕುಸಿತವಾಗಿ ನಿರೀಕ್ಷಿತ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ₹ 20 ಸಾವಿರ ಮೌಲ್ಯದ ಕುರಿಯನ್ನು ₹ 15 ಸಾವಿರಕ್ಕೆ ಮಾರಾಟ ಮಾಡಬೇಕಾಗಿದೆ’ ಎನ್ನುತ್ತಾರೆ ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರದ ಕುರಿ ಸಾಕಣೆದಾರ ದಾಸಪ್ಪ.

ದಾವಣಗೆರೆ, ಬಳ್ಳಾರಿ, ವಿಜಯನಗರ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ರಾಜ್ಯದ ಇತರ ಜಿಲ್ಲೆಯ ವ್ಯಾಪಾರಸ್ಥರು ಮಾತ್ರ ಸಂತೆಗೆ ಬರುತ್ತಿದ್ದಾರೆ. ಬೆಂಗಳೂರು ವ್ಯಾಪಾರಸ್ಥರ ಸಂಖ್ಯೆಯೂ ಕಡಿಮೆಯಾಗಿದೆ. ಸ್ಥಳೀಯರು, ಜಾತ್ರೆಗೆ ಖರೀದಿಸುವ ಗ್ರಾಮೀಣರು ಹಾಗೂ ಮಾಂಸದಂಗಡಿಯ ಮಾಲೀಕರು ಮಾತ್ರ ಮಾರುಕಟ್ಟೆಯಲ್ಲಿ ಕಾಣಸಿಗುತ್ತಾರೆ. ಸಂತೆಗೆ ತಂದಿದ್ದ ಕುರಿಗಳು ಮಾರಾಟವಾಗದೇ ಕುರಿಗಾಹಿಗಳು ನಿರಾಸೆಯಿಂದ ಮನೆಗೆ ಮರಳುತ್ತಿದ್ದಾರೆ.

‘ಸಂತೆಯಲ್ಲಿ ಸರಾಸರಿ ನಾಲ್ಕು ಸಾವಿರ ಕುರಿಗಳು ಮಾರಾಟವಾಗುತ್ತವೆ. ತಿಂಗಳಿಂದ ಈಚೆಗೆ ಕುರಿ ಮಾರಾಟ ಕಡಿಮೆಯಾಗಿದೆ. ಕಳೆದ ವಾರ ಶೇ 20ರಷ್ಟು ವಹಿವಾಟು ಕುಸಿತವಾಗಿದೆ’ ಎನ್ನುತ್ತಾರೆ ದೇವರಾಜ ಅರಸು ಕುರಿ ಸಾಕಣೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮಹಾಂತೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT