ಪ್ರಮಾಣಪತ್ರ ಸಿಗದೆ ಭಾವೀ ವೈದ್ಯರ ಪರದಾಟ

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕೋ, ಬೇಡವೋ ಎಂಬ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಯಾವುದೇ ಸೂಚನೆ ನೀಡುತ್ತಿಲ್ಲ. ಕೋರ್ಸ್ ಮುಗಿಸಿ ಒಂದೂವರೆ ತಿಂಗಳು ಕಳೆದರೂ ಪ್ರಮಾಣಪತ್ರಗಳನ್ನು ನೀಡುತ್ತಿಲ್ಲ ಎಂದು ಎಂಬಿಬಿಎಸ್ ವಿದ್ಯಾರ್ಥಿಗಳು ದೂರಿದ್ದಾರೆ.
‘ವೈದ್ಯಕೀಯ ಪದವಿ ವ್ಯಾಸಂಗ ಮುಗಿಸಿದವರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಬಗ್ಗೆ ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದೊಂದಿಗೆ ಷರತ್ತುಬದ್ಧ ಒಪ್ಪಂದ ಮಾಡಿಕೊಳ್ಳಲಾಗುತ್ತಿತ್ತು. 2015ರ ಕಡ್ಡಾಯ ಸೇವಾ ತರಬೇತಿ ತಿದ್ದುಪಡಿ ಕಾಯ್ದೆಯನ್ವಯ ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ಸೇವೆಸಲ್ಲಿಸಬೇಕು ಎಂದಿದೆ. ಆದರೆ, ಈ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸುತ್ತಿಲ್ಲ’ ಎಂದು ಎಂಬಿಬಿಎಸ್ ಪದವೀಧರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
‘2015ರ ಜುಲೈ 24ರ ಮೊದಲು ಎಂಬಿಬಿಎಸ್‌ಗೆ ದಾಖಲಾದವರಿಗೆ ಈ ನಿಯಮ ಅನ್ವಯಿಸುವುದಿಲ್ಲ. ನಂತರ ದಾಖಲಾದವರಿಗೆ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆ ವರ್ಷದಲ್ಲಿ ಒಂದೇ ಬ್ಯಾಚ್‌ನ ಅಭ್ಯರ್ಥಿಗಳು ಈ ದಿನಾಂಕದ ಹಿಂದೆ–ಮುಂದೆ ದಾಖಲಾತಿಯಾಗಿದ್ದಾರೆ. ದಿನಾಂಕದ ಬದಲು ನಿರ್ದಿಷ್ಟ ಶೈಕ್ಷಣಿಕ ವರ್ಷದಲ್ಲಿ ಓದಿದವರಿಗೆ ಅನ್ವಯಿಸಬೇಕಾಗಿತ್ತು’ ಎಂದೂ ಹೇಳಿದರು.
‘ಎಂಬಿಬಿಎಸ್ ಪೂರ್ಣಗೊಳಿಸಿದವರು ಕರ್ನಾಟಕ ವೈದ್ಯಕೀಯ ಮಂಡಳಿ (ಕೆಎಂಸಿ) ಅಡಿ ನೋಂದಾಯಿಸಿಕೊಳ್ಳಬೇಕು. ಆಗ ಮಾತ್ರ ನಾವು ಪ್ರಾಕ್ಟೀಸ್ ಆರಂಭಿಸಲು ಸಾಧ್ಯ. ಪ್ರಮಾಣಪತ್ರ ಸೇರಿದಂತೆ ಕಾಲೇಜಿನಿಂದ ಒಟ್ಟು 12 ದಾಖಲೆಗಳು ನಮಗೆ ಬೇಕು. ಆದರೆ, ಯಾವುದೇ ದಾಖಲೆಗಳನ್ನು ನೀಡಬಾರದು ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ (ಡಿಎಂಇ) ಹೇಳಿದೆ ಎಂದು ಕಾಲೇಜು ಆಡಳಿತ ಮಂಡಳಿ ಹೇಳುತ್ತಿದೆ’ ಎಂದು ಮತ್ತೊಬ್ಬ ಅಭ್ಯರ್ಥಿ ಹೇಳಿದರು.
‘ಕಳೆದ ವರ್ಷ ನಾವು ಕೋವಿಡ್ ಕರ್ತವ್ಯ ಕೂಡ ನಿಭಾಯಿಸಿದ್ದೇವೆ. ಈ ಬಾರಿಯೂ ಅದೇ ಕರ್ತವ್ಯಕ್ಕೆ ನಿಯೋಜಿಸಬೇಕು ಎಂಬ ಕಾರಣದಿಂದ ವಿಳಂಬ ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಕೋರ್ಸ್ ಮುಗಿದು, ಫಲಿತಾಂಶ ಬಂದು ಒಂದೂವರೆ ತಿಂಗಳಾದರೂ ದಾಖಲಾತಿಗಳನ್ನು ನೀಡುವುದು ಸರಿ ಅಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ಪ್ರಸಕ್ತ ಸಾಲಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದವರು ಸುಮಾರು 6000 ಪದವೀಧರರಿದ್ದೇವೆ. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಬಹುತೇಕರು ಸಿದ್ಧರಿದ್ದಾರೆ. ಆದರೆ, ಬ್ಯಾಚ್‌ನ ಎಲ್ಲರಿಗೂ ಒಂದೇ ನಿಯಮ ಅನ್ವಯಿಸಬೇಕು. ತಾರತಮ್ಯ ಮಾಡಬಾರದು. ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಇಲಾಖೆ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯೆಗೆ ಅಧಿಕಾರಿಗಳು ಲಭ್ಯರಾಗಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.