ಮಂಗಳವಾರ, ಮೇ 18, 2021
30 °C
ಅಂತಿಮ ವರ್ಷದ ಪರೀಕ್ಷೆ ಮುಂದೂಡುವಂತೆ ಸೂಚನೆ: ಡಾ.ಸುಧಾಕರ್

ಕೋವಿಡ್‌ | ಆರೋಗ್ಯ ಸೇವೆ ಒದಗಿಸಲು ವೈದ್ಯಕೀಯ ವಿದ್ಯಾರ್ಥಿಗಳ ಬಳಕೆ: ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ಆರೋಗ್ಯ ಸೇವೆ ಒದಗಿಸಲು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು’ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಗುರುವಾರ ಇಲ್ಲಿ ಹೇಳಿದರು.

‘ಅಂತಿಮ ವರ್ಷದ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿಯ ಪರೀಕ್ಷೆಗಳನ್ನು ಎರಡು ತಿಂಗಳು ಮುಂದೂಡಲು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹೇಳಿದ್ದೇನೆ. ಹೌಸ್‌ ಸರ್ಜನ್‌ಗಳು, ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು ಆಯಾ ಊರು ಮತ್ತು ಜಿಲ್ಲೆಗ
ಳಲ್ಲಿ ಕೋವಿಡ್‌ ನಿರ್ವಹಣೆಯ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಮುಖ್ಯಮಂತ್ರಿ ಸಲಹೆಯಂತೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದರು.

ಜೀವ ಉಳಿಸುವ ಔಷಧಿ ಅಲ್ಲ: ‘ವೈಜ್ಞಾನಿಕವಾಗಿ ಹೇಳುವುದಾದರೆ ರೆಮ್‌ಡೆಸಿವಿರ್‌ ಜೀವ ಉಳಿಸಬಲ್ಲ (ಲೈಫ್‌ ಸೇವಿಂಗ್‌) ಔಷಧಿ ಅಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಔಷಧಿಗಳ ಪಟ್ಟಿಯಲ್ಲೂ ಅದರ ಹೆಸರು ಇಲ್ಲ. ರೆಮ್‌ಡೆಸಿವಿರ್‌ ಇದ್ದರೆ ಪ್ರಾಣ ಉಳಿಯುತ್ತದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಬಂದುಬಿಟ್ಟಿದೆ. ಆದ್ದರಿಂದ ಬೇಡಿಕೆ ಹೆಚ್ಚಿದ್ದು, ಅದನ್ನು ಪೂರೈಸಬೇಕಿದೆ’ ಎಂದು ತಿಳಿಸಿದರು.

’ವೈದ್ಯಕೀಯ ಹಿನ್ನೆಲೆಯಿಂದ ಹೇಳುವುದಾದರೆ ರೆಮ್‌ಡೆಸಿವಿರ್‌ಗಿಂತ ಸ್ಟಿರಾಯ್ಡ್‌ಗಳು ಹೆಚ್ಚು ಪರಿಣಾಮಕಾರಿ. ಡೆಕ್ಸಾಮೆಥಜೋನ್‌ ಎಂಬ ಔಷಧಿಗೆ ಇರುವುದು ಕೇವಲ 50 ಪೈಸೆ. ಆದರೆ, ರೆಮ್‌ಡೆಸಿವಿರ್‌ ಮಾತ್ರ ಹೆಚ್ಚು ಪ್ರಚಾರಕ್ಕೆ ಬಂದಿದೆ’ ಎಂದರು.

ದೇಶದಲ್ಲಿ 8–9 ಕಂಪನಿಗಳು ಮಾತ್ರ ರೆಮ್‌ಡೆಸಿವಿರ್‌ ಉತ್ಪಾದನೆ ಮಾಡುತ್ತವೆ. ಕೋವಿಡ್ ಪ್ರಕರಣಗಳು ಕಡಿಮೆಯಾದ ಕಾರಣ ನವೆಂಬರ್‌ನಿಂದ ಮಾರ್ಚ್‌ವರೆಗೆ ಎಲ್ಲ ಕಂಪನಿಗಳು ಉತ್ಪಾದನೆ ನಿಲ್ಲಿಸಿದ್ದವು. ಈಗ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಿ ಸಮಸ್ಯೆ ಸೃಷ್ಟಿಯಾಗಿದೆ. ಎಲ್ಲ ರಾಜ್ಯಗಳಲ್ಲೂ ಔಷಧಿಯ ಕೊರತೆಯಿದೆ ಎಂದು ನುಡಿದರು.

‘ಆಮ್ಲಜನಕದ ಕೊರತೆ ಇಲ್ಲ‘

ರಾಜ್ಯದಲ್ಲಿ ಸದ್ಯಕ್ಕೆ ಆಮ್ಲಜನಕದ ಕೊರತೆ ಎದುರಾಗಿಲ್ಲ. 30 ಸಾವಿರ ಆಕ್ಸಿಜನ್‌ ಬೆಡ್‌ಗಳು ಇವೆ. ಆದರೆ, ಪ್ರಕರಣಗಳು ಇದೇ ರೀತಿ ಹೆಚ್ಚುತ್ತಿದ್ದರೆ ಬೆಡ್‌ಗಳು ಸಾಕಾಗುವುದೇ ಎಂಬ ಆತಂಕ ಸೃಷ್ಟಿಯಾಗಿದೆ ಎಂದು ಸುಧಾಕರ್ ತಿಳಿಸಿದರು.

ಬೆಂಗಳೂರಿಗೆ ಹೆಚ್ಚುವರಿಯಾಗಿ ಬೇಕಾಗಿದ್ದ 40 ಮೆಟ್ರಿಕ್‌ ಟನ್‌ ಆಮ್ಲಜನಕ ಪೂರೈಕೆ ಆಗಿದೆ. 5,500 ಜಂಬೋ ಸಿಲಿಂಡರ್‌ಗಳನ್ನು ಸರಬರಾಜು ಮಾಡಲಾಗಿದೆ. ಬೆಂಗಳೂರಿನಲ್ಲಿ ಎದುರಾಗಿದ್ದ ಆಕ್ಸಿಜನ್‌ ಕೊರತೆಯ ಸಮಸ್ಯೆ ನೀಗಿದೆ ಎಂದು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು