ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ರಾಜ್ಯಕ್ಕೆ ನ್ಯಾಯದ ಭರವಸೆ ನೀಡಿದ ಕೇಂದ್ರ

Last Updated 13 ಜುಲೈ 2021, 20:28 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿಯುವ ನೀರಿನ ಉದ್ದೇಶದ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಕರ್ನಾಟಕದ ಪ್ರಸ್ತಾವನೆಗೆ ನ್ಯಾಯ ಒದಗಿಸುವುದಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ಭರವಸೆ ನೀಡಿದ್ದಾರೆ.

ಜಲ ಜೀವನ್‌ ಮಿಷನ್‌ ಯೋಜನೆಯ ಪ್ರಗತಿ ಪರಿಶೀಲನೆಗಾಗಿ ಬೆಂಗಳೂರಿಗೆ ಬಂದಿದ್ದ ಶೆಖಾವತ್ ಅವರ ಜತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮೇಕೆದಾಟು ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುಮತಿ ಬಾಕಿ ಇರುವ ಬಗ್ಗೆ ಮಾತುಕತೆ ನಡೆಸಿದರು.

ರಾಜ್ಯಕ್ಕೆ ಹಂಚಿಕೆಯಾಗಿರುವ ಕಾವೇರಿ ನದಿ ನೀರಿನ ಪಾಲಿನಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್‌ ಉತ್ಪಾದನೆಗಾಗಿ ಮೇಕೆದಾಟು ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ಆದರೆ, ತಮಿಳುನಾಡು ಆಕ್ಷೇಪ ಎತ್ತಿದೆಯಲ್ಲದೇ, ಯೋಜನೆಗೆ ಅನುಮತಿ ನೀಡಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವ ನಿರ್ಣಯವನ್ನು ತಮಿಳುನಾಡಿನ ಸರ್ವಪಕ್ಷ ಸಭೆ ಕೈಗೊಂಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಕೇಂದ್ರ ಜಲಶಕ್ತಿ ಸಚಿವರ ಹೇಳಿಕೆ ಮಹತ್ವ ಪಡೆದಿದೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶೆಖಾವತ್‌, ಮೇಕೆದಾಟು ಯೋಜನೆಯ ಬಗ್ಗೆ ಸಂಪೂರ್ಣ ಅರಿವಿದ್ದು, ಕರ್ನಾಟಕಕ್ಕೆ ನ್ಯಾಯ ಒದಗಿಸುವುದಾಗಿ ಹೇಳಿದರು.

‘ತಮಿಳುನಾಡು ಸರ್ಕಾರ ಏನೇ ತೀರ್ಮಾನ ತೆಗೆದುಕೊಳ್ಳಲಿ. ಅದು ಆ ರಾಜ್ಯಕ್ಕೆ ಸಂಬಂಧಿಸಿದ್ದು. ಈಗಾಗಲೇ ಯೋಜನೆಯನ್ನು ಪ್ರಶ್ನಿಸಿ ಆ ರಾಜ್ಯ ಸುಪ್ರೀಂಕೋರ್ಟ್‌ನಲ್ಲೂ ದಾವೆ ಹೂಡಿದೆ. ತೀರ್ಪು ಬಂದ ಮೇಲೆ ಎರಡೂ ರಾಜ್ಯಗಳ ಹಿತ ಗಮನದಲ್ಲಿ ಇಟ್ಟುಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಅವರು ತಿಳಿಸಿದರು.

‘ಕೇಂದ್ರ ಸರ್ಕಾರ ಯಾವ ಸಂದರ್ಭದಲ್ಲಿ ಏನು ತೀರ್ಮಾನ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತದೆ. ಯಾವ ರಾಜ್ಯ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದು ಮುಖ್ಯವಲ್ಲ. ನಾವು ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತೇವೆ. ಪಕ್ಷ ಬೇರೆ, ಸರ್ಕಾರ ಬೇರೆ. ಇಲಾಖೆಯ ನಿಯಮ, ಕಾನೂನು, ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಬದ್ಧರಾಗಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಮಾತನಾಡಿ, ‘ಮೇಕೆದಾಟು ಅಲ್ಲದೆ, ಕೃಷ್ಣಾ ಮೇಲ್ದಂಡೆ, ಕಳಸಾ ಬಂಡೂರಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರದ ವಿವಿಧ ಇಲಾಖೆಗಳ ಅನುಮತಿ ಬಾಕಿ ಇರುವ ಬಗ್ಗೆಯೂ ಅವರಲ್ಲಿ ಪ್ರಸ್ತಾಪಿಸಿದ್ದೇವೆ’ ಎಂದರು.

‘ಕೇಂದ್ರ ಸಚಿವರ ಜತೆ ನಾವು ನಮ್ಮ ಎಲ್ಲ ನೀರಾವರಿ ಯೋಜನೆಗಳ ಬಗ್ಗೆಯೂ ಅವರ ಜತೆ ಚರ್ಚಿಸಿದ್ದೇವೆ.ಮೇಕೆದಾಟು ಯೋಜನೆ ಕುರಿತು ಈಗಾಗಲೇ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿ, ಅದನ್ನು ಈಗಾಗಲೇ ಕೇಂದ್ರ ಜಲ ಮಂಡಳಿಗೆ ಸಲ್ಲಿಸಿದ್ದೇವೆ. ಕೇಂದ್ರದ ಸಹಕಾರ ಸಿಗಲಿದೆ’ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಇದ್ದರು.

ನಿಯಮಗಳ ಸಲ್ಲಿಕೆ

ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಸಿದ್ಧಪಡಿಸಲಾಗಿದ್ದ ನಿಯಮ–ನಿಬಂಧನೆಗಳ (ಟರ್ಮ್ಸ್‌ ಆಫ್‌ ರೆಫರೆನ್ಸ್) ಪ್ರತಿಯನ್ನು ಯೋಜನೆಗೆ ಪರಿಸರ ಅನುಮತಿ ಪಡೆಯುವುದಕ್ಕಾಗಿ ಕಳುಹಿಸಿಕೊಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದಕ್ಕೆ ಕೇಂದ್ರ ಸರ್ಕಾರ ನೆರವು ನೀಡಲಿದೆ. ಈ ಯೋಜನೆಯಿಂದ ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಿಗೆ ನೀರಾವರಿಗೆ ಅನುಕೂಲವಾಗಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಸಿಗುವ ಅಂತಿಮ ಹಂತದಲ್ಲಿದೆ. ಯಾವುದೇ ಕ್ಷಣದಲ್ಲಾದರೂ ಆದೇಶ ಹೊರ ಬೀಳುವ ಸಾಧ್ಯತೆ ಇದೆ ಎಂದು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT