ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಹೋರಾಟ ನಿರಂತರ: ಡಿಕೆಶಿ

ಸಮಾರೋಪದಲ್ಲಿ 12 ರಾಜ್ಯಗಳ ಯುವ ಕಾಂಗ್ರೆಸ್ ಅಧ್ಯಕ್ಷರು ಭಾಗಿ l ಪಾದಯಾತ್ರೆಗೆ ಕೈ ಜೋಡಿಸಿದ ಕಾರ್ಮಿಕರು, ರೈತರು, ನಾಗರಿಕರು
Last Updated 3 ಮಾರ್ಚ್ 2022, 2:46 IST
ಅಕ್ಷರ ಗಾತ್ರ

ಬೆಂಗಳೂರು: 'ರಾಜ್ಯದ ಮೂಲೆ ಮೂಲೆಯಿಂದ ಪಕ್ಷದ ಕಾರ್ಯಕರ್ತರು ಪಾದಯಾತ್ರೆಗೆ ಬರುತ್ತಿದ್ದು, ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆಯಲಿರುವ ಬೃಹತ್ ಸಮಾವೇಶದಲ್ಲಿ 12 ರಾಜ್ಯಗಳ ಯುವ ಕಾಂಗ್ರೆಸ್ ಅಧ್ಯಕ್ಷರು‌ ಭಾಗವಹಿಸಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಈ ಸಮಾವೇಶದ ಮೂಲಕ ಪಾದಯಾತ್ರೆ ಅಂತ್ಯವಾದರೂ, ನಮ್ಮ ಹೋರಾಟ ಮುಂದುವರಿಯಲಿದೆ. ಇದು ಹೋರಾಟದ ಮೊದಲ ಭಾಗ ಅಷ್ಟೇ’ ಎಂದರು.

‘ಸರ್ವಧರ್ಮ, ಜನಾಂಗ, ಪಕ್ಷಗಳಿಗೆ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಅವಕಾಶ ಮಾಡಿಕೊಡಲಾಗಿದೆ. ಕೇವಲ ಕಾಂಗ್ರೆಸಿಗರು ಮಾತ್ರವಿಲ್ಲ. ಎಲ್ಲ ವರ್ಗಗಳಿಗೆ ಸೇರಿದ ಕಾರ್ಮಿಕರು, ರೈತರು, ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಕೈ ಜೋಡಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ ಜತೆ ಗುರುತಿಸಿಕೊಳ್ಳಲಾಗದವರೂ ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ’ ಎಂದರು.

‘ಗುರುವಾರ ಪಾದಯಾತ್ರೆಯ ನೇತೃತ್ವವನ್ನು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮತ್ತು ಬೆಂಗಳೂರಿನ ಎಲ್ಲ ಶಾಸಕರು ವಹಿಸಲಿದ್ದಾರೆ. ರಾಜ್ಯದ ಎಲ್ಲ ಸಂಘಟನೆಗಳು, ಕನ್ನಡಪರ ಹೋರಾಟಗಾರರು, ರೈತರು, ಕಲಾವಿದರು, ಹೊಟೇಲ್ ಮಾಲೀಕರು, ಅಪಾರ್ಟ್‌ಮೆಂಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳನ್ನು ಸಮಾವೇಶಕ್ಕೆ ಆಹ್ವಾನಿಸುತ್ತೇನೆ’ ಎಂದರು.

ಡಬ್ಬಾ ಎಂಜಿನ್ ಸರ್ಕಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ‘ಬಿಜೆಪಿಯವರು ಮೊದಲೇ ಹೊಟ್ಟೆಕಿಚ್ಚಿನ ಜನ. ಎರಡೂವರೆ ವರ್ಷದಿಂದ ರಾಜ್ಯದಲ್ಲಿ ಬಿಜೆಪಿಯವರು ಅಧಿಕಾರದಲ್ಲಿದ್ದಾರೆ. ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ
ಅನುಮತಿ ಕೊಟ್ಟಿದ್ದರೆ ನಾವು ಪಾದಯಾತ್ರೆ ಹಮ್ಮಿಕೊಳ್ಳುವ ಪ್ರಮೇಯವೇ ಎದುರಾಗುತ್ತಿರಲಿಲ್ಲ. ಅವರದ್ದು ಡಬಲ್ ಎಂಜಿನ್ ಸರ್ಕಾರ ಅಲ್ಲ, ಡಬ್ಬಾ ಎಂಜಿನ್ ಸರ್ಕಾರ’ ಎಂದು ಗೇಲಿ ಮಾಡಿದರು.

‘ಬ್ಯಾನರ್ ವಿಚಾರದಲ್ಲಿ ಬಿಜೆಪಿ ಚಿಲ್ಲರೆ ರಾಜಕೀಯ ಮಾಡುತ್ತಿದೆ. ಇತ್ತೀಚೆಗೆ ಬೊಮ್ಮನಹಳ್ಳಿ ಮೈದಾನ ಉದ್ಘಾಟನೆಗೆ ಮುಖ್ಯಮಂತ್ರಿ ಬಂದಿದ್ದಾಗ ಸಾವಿರಕ್ಕೂ ಅಧಿಕ ಫ್ಲೆಕ್ಸ್, ಬ್ಯಾನರ್ಗಳನ್ನು ಅಳವಡಿಸಿದ್ದರು. ಆರ್.ಆರ್.ನಗರದಲ್ಲಿ ಶಿವರಾತ್ರಿ ಪ್ರಯುಕ್ತ 4 ಸಾವಿರದಿಂದ 5 ಸಾವಿರ ಫ್ಲೆಕ್ಸ್,
ಅಶ್ವತ್ಥನಾರಾಯಣ, ಸೋಮಣ್ಣ ಹುಟ್ಟುಹಬ್ಬಕ್ಕೆ ಬೆಂಗಳೂರಿನ ತುಂಬ ಸಾವಿರಾರು ಫ್ಲೆಕ್ಸ್ ಹಾಕಿದ್ದಾರೆ. ಸಚಿವ ಗೋಪಾಲಯ್ಯ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರವಾಗಿ ಫ್ಲೆಕ್ಸ್ ಹಾಕಿಕೊಂಡಿದ್ದಾರೆ. ಬಿಜೆಪಿಯವರು ಫ್ಲೆಕ್ಸ್ ಹಾಕಬಹುದು ಆದರೆ, ಕಾಂಗ್ರೆಸ್ ಹೋರಾಟ ಪರವಾಗಿ ಸಂಘ ಸಂಸ್ಥೆಗಳು ಹಾಕಿರುವ ಫ್ಲೆಕ್ಸ್ ತೆಗೆಯುವುದು ಎಷ್ಟು ಸರಿ? ತೆಗೆದರೆ ಎಲ್ಲರದ್ದೂ ತೆಗೆಯಿರಿ. ಎಲ್ಲರಿಗೂ ಕಾನೂನು ಒಂದೇ’
ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘1.5 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಶೇ 30ರಿಂದ ಶೇ 40ರಷ್ಟು ಜನರಿಗೆ ಮಾತ್ರ ಕಾವೇರಿ ನೀರು ಸಿಗುತ್ತಿದೆ. ನಾವು ಜನರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಮೂರು ದಿನ ಸಂಚಾರ ದಟ್ಟಣೆ ಸಮಸ್ಯೆ ಎದುರಾಗಬಹುದು. ಆದರೆ, ಮುಂದಿನ 50 ವರ್ಷಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಇದಕ್ಕೆ ಜನರ ಸಹಕಾರ ಅಗತ್ಯ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT