ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ರಾಜ್ಯದ ಮತ್ತೊಂದು ಆತಂಕ ದೂರ

ಸ್ವಯಂ ಪ್ರೇರಿತ ವಿಚಾರಣೆ ಇತ್ಯರ್ಥಪಡಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪ್ರಧಾನ ಪೀಠ
Last Updated 18 ಜೂನ್ 2021, 21:46 IST
ಅಕ್ಷರ ಗಾತ್ರ

ನವದೆಹಲಿ: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ದಕ್ಷಿಣ (ಚೆನ್ನೈ)ದ ಪೀಠ ಆರಂಭಿಸಿದ್ದ ಸ್ವಯಂ ಪ್ರೇರಿತ ವಿಚಾರಣೆಯನ್ನು ಇತ್ಯರ್ಥಪಡಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯ ಪ್ರಧಾನ ಪೀಠ ಶುಕ್ರವಾರ ತೀರ್ಪು ನೀಡಿದೆ.

ಮೇಕೆದಾಟು ಯೋಜನೆಯನ್ನೇ ಪ್ರಶ್ನಿಸಿ ತಮಿಳುನಾಡು ಸಲ್ಲಿಸಿರುವ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಈ ಸಂಬಂಧ ಅಗತ್ಯ ಪರಿಸರ ಅನುಮತಿ ಕೋರಿ ಕರ್ನಾಟಕ ಸಲ್ಲಿಸಿರುವ ಅರ್ಜಿಯೂ ಕೇಂದ್ರ ಸರ್ಕಾರದೆದುರು ಬಾಕಿ ಇದೆ. ಈ ಹಂತದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿ, ವಿಚಾರಣೆ ನಡೆಸುವಂತಿಲ್ಲ ಎಂದು ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ಪೀಠ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

‘ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅನುಮತಿ ಪಡೆಯದೆಯೇ ಅಣೆಕಟ್ಟೆ ನಿರ್ಮಿಸಲಾಗುತ್ತಿದೆ’ ಎಂಬ ಚೆನ್ನೈ ಮೂಲದ ಪತ್ರಿಕೆಯೊಂದರ ವರದಿ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಎನ್‌ಜಿಟಿಯ ದಕ್ಷಿಣ ಪೀಠ, ಸ್ಥಳ ಪರಿಶೀಲನೆಗಾಗಿ ಸಮಿತಿ ರಚಿಸಿ, ಜುಲೈ 5ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿ ಕಳೆದ ಮೇ 21ರಂದು ಆದೇಶ ಹೊರಡಿಸಿತ್ತು.

ಈ ಆದೇಶದ ಪುನರ್‌ ಪರಿಶೀಲನೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿದ್ದ ಪ್ರಧಾನ ಪೀಠ ತೀರ್ಪು ಕಾಯ್ದಿರಿಸಿತ್ತು.

‘ಯೋಜನೆಗಾಗಿ ಶಾಸನಬದ್ಧ ಪರಿಸರ ಅನುಮತಿ ಕೋರಿ ಕರ್ನಾಟಕವು ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸಲ್ಲಿಸಿರುವ ಅರ್ಜಿಯು ಪರಿಗಣನೆಗೆ ಬಾಕಿ ಇದೆ ಎಂಬುದನ್ನು ಪತ್ರಿಕಾ ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂಬ ಕರ್ನಾಟಕದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರ ವಾದವನ್ನು ಪರಿಗಣಿಸಿ ದಕ್ಷಿಣ ಪೀಠ ದಾಖಲಿಸಿಕೊಂಡ ಪ್ರಕರಣವನ್ನು ಕೈಬಿಡಲು ನಿರ್ಧರಿಸಲಾಗಿದೆ’ ಎಂದು ಪೀಠ ಹೇಳಿದೆ.

ಅಲ್ಲದೆ, ಯೋಜನೆಗೆ ಅನುಮತಿ ನೀಡದಂತೆ ಕೋರಿ ತಮಿಳುನಾಡು ಸರ್ಕಾರ ಕೇಂದ್ರದ ಜಲಶಕ್ತಿ ಸಚಿವಾಲಯಕ್ಕೆ 2021ರ ಏಪ್ರಿಲ್‌ 27ರಂದು ಸಲ್ಲಿಸಿರುವ ದೂರಿನಲ್ಲಿ ಇದೇ ಪತ್ರಿಕಾ ವರದಿಯನ್ನು ಉದಾಹರಿಸಿದೆ. ಆದರೆ, ನ್ಯಾಯಮಂಡಳಿಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಈ ವಿಷಯ ಮರೆ ಮಾಚಿದೆ ಎಂದೂ ಪೀಠ ಅಭಿಪ್ರಾಯಪಟ್ಟಿದೆ.

ಈ ಕಾರಣದಿಂದ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠವು ಪ್ರಕರಣದ ವಿಚಾರಣೆ ನಡೆಸುವ ಅಗತ್ಯ ಕಂಡುಬರುತ್ತಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಕಾವೇರಿಯ ಹೆಚ್ಚುವರಿ ನೀರನ್ನು ತಡೆದು, ಬೆಂಗಳೂರು, ಕನಕಪುರ ಮತ್ತಿತರ ಸುತ್ತಮುತ್ತಲಿನ ಪ್ರದೇಶಗಳ ಜನತೆಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಕೈಗೆತ್ತಿಕೊಳ್ಳಲಿರುವ ಯೋಜನೆಗೆ ಆರಂಭದಲ್ಲೇ ಎದುರಾಗಿರುವ ಮತ್ತೊಂದು ಆತಂಕ ಈ ತೀರ್ಪಿನಿಂದ
ಕೊನೆಯಾದಂತಾಗಿದೆ.

ಸರ್ಕಾರದ ಮೈಮರೆವು ಅಪಾಯಕಾರಿ: ಎಚ್‌ಡಿಕೆ

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ರಾಜ್ಯದ ಬಿಜೆಪಿ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದೆ, ಆಂತರಿಕ ಕಲಹದಲ್ಲೇ ಮೈಮರೆತಿರುವುದು ಕರ್ನಾಟಕದ ಪಾಲಿಗೆ ಅಪಾಯಕಾರಿಯಾಗಲಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಈ ಕುರಿತು ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಕರ್ನಾಟಕದ ಮೇಕೆದಾಟು ಜಲಾಶಯ ನಿರ್ಮಾಣ ಕಾಮಗಾರಿಗೆ ತಡೆ ನೀಡುವಂತೆ ಮತ್ತು ಪ್ರಸಕ್ತ ವರ್ಷದಲ್ಲಿ ತಮಿಳುನಾಡಿನ ಪಾಲಿನ ಪೂರ್ಣ ನೀರನ್ನು ಬಿಡುಗಡೆ ಮಾಡಿಸುವಂತೆ ಸ್ಟಾಲಿನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಬೇಕಿದ್ದ ಆಡಳಿತಾರೂಢ ಬಿಜೆಪಿ ಮೈಮರೆತು ಕುಳಿತಿದೆ’ ಎಂದು ಟೀಕಿಸಿದ್ದಾರೆ.

ಎರಡೂ ರಾಷ್ಟ್ರೀಯ ಪಕ್ಷಗಳ ಸರ್ಕಾರಗಳು ಇದ್ದಾಗ ಮೇಕೆದಾಟು ಯೋಜನೆ ರೂಪಿಸಲು ಸಾಧ್ಯವಾಗಿರಲಿಲ್ಲ. ತಮ್ಮ ಸರ್ಕಾರ ಅದನ್ನು ಜಾರಿಗೆ ತರುವ ಧೈರ್ಯ ತೋರಿತು. ರಾಜ್ಯ ಮತ್ತು ಕೇಂದ್ರ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೂ ಯೋಜನೆಗೆ ಅನಿಶ್ಚಿತತೆ ಎದುರಾಗಿದೆ. ಸರ್ಕಾರ ನಡೆಸಲಾಗದೆ ನಲುಗಿ ಹೋಗಿರುವ ಬಿಜೆಪಿಗೆ ನೆಲ, ಜಲ, ಭಾಷೆಯ ಬಗ್ಗೆ ಅಕ್ಕರೆ ಇದೆಯೆ ಎಂದು ಪ್ರಶ್ನಿಸಿದ್ದಾರೆ.

‘ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಆ ನಾಡಿನ ಅಸ್ಮಿತೆ ಪ್ರಬಲವಾಗಿದೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳೇ ಹೆಚ್ಚು ಅಧಿಕಾರ ನಡೆಸಿವೆ. ಆದರೆ, ರಾಜ್ಯದ ಹಿತಾಸಕ್ತಿ ರಕ್ಷಣೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಜನರು ಗಮನಿಸಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT