ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಮೇಕೆದಾಟು ಯೋಜನೆಗೆ ಆರಂಭದಲ್ಲೇ ಅಡ್ಡಿ

Last Updated 22 ಜನವರಿ 2022, 19:41 IST
ಅಕ್ಷರ ಗಾತ್ರ

ಬೆಂಗಳೂರು: ರಾಮನಗರ ಜಿಲ್ಲೆಯ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸಮಾನಾಂತರ ಜಲಾಶಯವೊಂದನ್ನು ನಿರ್ಮಿಸಿ 67.14 ಟಿಎಂಸಿ ಅಡಿ ನೀರು ಸಂಗ್ರಹಿಸುವ ಮತ್ತು 400 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಯೋಜನೆಗೆ ಆರಂಭದಿಂದಲೂ ವಿಘ್ನಗಳು ಕಾಡುತ್ತಿವೆ.

1996–97ರಲ್ಲಿ ಕರ್ನಾಟಕ ವಿದ್ಯುತ್‌ ನಿಗಮದ ಮೂಲಕ ಶಿವನಸಮುದ್ರ ಬಳಿ ಈ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು. 2007ರಲ್ಲಿ ಕಾವೇರಿ ಜಲ ನ್ಯಾಯಾಧಿಕರಣದ ಐತೀರ್ಪು ಪ್ರಕಟವಾಯಿತು. 2013ರ ಫೆಬ್ರುವರಿಯಲ್ಲಿ ಐತೀರ್ಪನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಯಿತು. ಆ ಬಳಿಕ ಜಲ ಸಂಪನ್ಮೂಲ ಇಲಾಖೆಯ ಮೂಲಕ ಮೇಕೆದಾಟು ಸಮಾನಾಂತರ ಜಲಾಶಯ ನಿರ್ಮಾಣದ ಯೋಜನೆ ಕೈಗೆತ್ತಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಯಿತು.

ಬೆಂಗಳೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ, ಸಂಕಷ್ಟದ ದಿನಗಳಲ್ಲಿ ತಮಿಳುನಾಡಿಗೆ ಹರಿಸಲು ಬೇಕಾದ ನೀರನ್ನು ಸಂಗ್ರಹಿಸುವ ಉದ್ದೇಶ ಈ ಯೋಜನೆಯ ಹಿಂದಿದೆ. ಆರಂಭದಲ್ಲಿ ₹ 5,912 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಈಗ ಪರಿಷ್ಕೃತ ಯೋಜನಾ ವೆಚ್ಚ ₹ 9,000 ಕೋಟಿ ತಲುಪಿದೆ.

ಈ ಯೋಜನೆಗೆ ಹೆಚ್ಚು ಕಂದಾಯ ಜಮೀನು ಮುಳುಗಡೆ ಆಗುವುದಿಲ್ಲ. ಹೀಗಾಗಿ ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ವೆಚ್ಚ ಕಡಿಮೆ ಇರಲಿದೆ. ಆದರೆ, ದೊಡ್ಡ ಪ್ರಮಾಣದ ಅರಣ್ಯ ಜಮೀನು ಬಳಕೆಯಾಗುವುದರಿಂದ ಪರಿಸರ ಇಲಾಖೆಯ ಒಪ್ಪಿಗೆ ಪಡೆಯುವುದು ಸವಾಲಿನ ಕೆಲಸವಾಗಿದೆ.

ರಾಜ್ಯದ ಈ ಯೋಜನೆಯನ್ನು ನೆರೆಯ ತಮಿಳುನಾಡು ಸರ್ಕಾರ ವಿರೋಧಿಸುತ್ತಿದೆ. 2017ರಲ್ಲೇ ಕೇಂದ್ರ ಜಲ ಆಯೋಗಕ್ಕೆ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಸಲ್ಲಿಸಲಾಗಿತ್ತು. 2019ರಲ್ಲಿ ಪರಿಷ್ಕೃತ ಡಿಪಿಆರ್‌ ಸಲ್ಲಿಸಲಾಗಿದೆ. ಡಿಪಿಆರ್‌ ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದಿದೆ. 2019ರ ಏಪ್ರಿಲ್‌ 25ರಿಂದ ಐದು ಬಾರಿ ಪ್ರಾಧಿಕಾರದ ಸಭೆಯ ಮುಂದೆ ಬಂದಿದ್ದರೂ ಚರ್ಚೆಯಾಗದೇ ಮುಂದೂಡಲಾಗಿದೆ. ಇದರಿಂದಾಗಿ ರಾಜ್ಯದ ಈ ಯೋಜನೆಗೆ ಅಡಿಗಡಿಗೂ ಅಡ್ಡಿಗಳು ಕಾಡುತ್ತಿವೆ.

ವಾರಾಹಿಗೆ 41 ವರ್ಷ: ಬಲದಂಡೆ ಇನ್ನೂ ಬರಡು

ಬೆಂಗಳೂರು: ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ತಾಲ್ಲೂಕುಗಳ 15,702 ಹೆಕ್ಟೇರ್‌ ವಿಸ್ತೀರ್ಣದ ಕೃಷಿ ಜಮೀನುಗಳಿಗೆ ನೀರು ಪೂರೈಸುವ ಉದ್ದೇಶದಿಂದ 1980ರಲ್ಲಿ ಆರಂಭವಾಗಿದ್ದ ವಾರಾಹಿ ನೀರಾವರಿ ಯೋಜನೆ 41 ವರ್ಷಗಳಿಂದ ಕುಂಟುತ್ತಲೇ ಸಾಗಿದೆ.

₹ 9.43 ಕೋಟಿ ವೆಚ್ಚದ ಯೋಜನೆಯ ಕಾಮಗಾರಿಗೆ 1980ರಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. ಈವರೆಗೆ ₹ 1,200 ಕೋಟಿಗೂ ಹೆಚ್ಚು ವೆಚ್ಚ ಮಾಡಿದ್ದು, ಎಡದಂಡೆ ಕಾಲುವೆ ನಿರ್ಮಾಣ ಶೇಕಡ 85ರಷ್ಟು ಪೂರ್ಣಗೊಂಡಿದೆ. ಬಲದಂಡೆ ಕಾಲುವೆಯ ನಿರ್ಮಾಣ ಕಾಮಗಾರಿಯಲ್ಲಿ ಶೇ 85ರಷ್ಟು ಬಾಕಿ ಉಳಿದಿದೆ. 2004ರವರೆಗೂ ಈ ಕಾಮಗಾರಿಗೆ ₹ 37 ಕೋಟಿ ವೆಚ್ಚವಾಗಿತ್ತು. ನಂತರ ಉಡುಪಿ ಜಿಲ್ಲೆಯ ಶಾಸಕರ ಒತ್ತಡಕ್ಕೆ ಮಣಿದ ಸರ್ಕಾರ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ವಹಿಸಿತ್ತು. 2019ರವರೆಗೆ ₹ 650 ಕೋಟಿ ವೆಚ್ಚ ಮಾಡಿದ್ದರೆ, 2021ರ ಅಂತ್ಯಕ್ಕೆ ₹ 1,200 ಕೋಟಿ ವೆಚ್ಚವಾಗಿದೆ.

ಈಗ ಕೃಷಿ ಜಮೀನಿಗೆ ನೀರು ಒದಗಿಸುವುದರ ಜತೆಯಲ್ಲೇ ಉಡುಪಿ ನಗರಸಭೆಯೂ ಸೇರಿದಂತೆ ಕೆಲವು ನಗರ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿಗಳೂ ಯೋಜನೆಯಲ್ಲಿ ಸೇರಿಕೊಂಡಿವೆ. 2016ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಕೆ. ಪ್ರತಾಪಚಂದ್ರ ಶೆಟ್ಟಿ ನೇತೃತ್ವದಲ್ಲಿ ಧರಣಿ ಆರಂಭಿಸಿದ್ದ→ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರು, ವಾರಾಹಿ ಎಡದಂಡೆ ಕಾಲುವೆಯಲ್ಲಿ ನೀರು ಹರಿಸುವಂತೆ ಪಟ್ಟು ಹಿಡಿದಿದ್ದರು. ಆಗಿನ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಸ್ಥಳಕ್ಕೆ ಭೇಟಿನೀಡಿ ಮನವೊಲಿಕೆಗೆ ನಡೆಸಿದ್ದ ಪ್ರಯತ್ನ ವಿಫಲವಾಗಿತ್ತು. ಬಳಿಕ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಥಳಕ್ಕೆ ಭೇಟಿ ನೀಡಿ, ಎರಡು ತಿಂಗಳೊಳಗೆ ವಾರಾಹಿ ಎಡದಂಡೆ ಕಾಲುವೆಯಲ್ಲಿ ನೀರು ಹರಿಸುವ ಭರವಸೆ ನೀಡಿದ್ದರು. ಅದನ್ನು ಒಪ್ಪಿದ ರೈತರು ಧರಣಿ ಅಂತ್ಯಗೊಳಿಸಿದ್ದರು.

ಸಿದ್ದರಾಮಯ್ಯ ಅವರ ಭರವಸೆಯಂತೆ ಕೆಲವು ತಿಂಗಳ ಬಳಿಕ ವಾರಾಹಿ ಎಡದಂಡೆ ಕಾಲುವೆಯಲ್ಲಿ ನೀರು ಹರಿಸಲಾಯಿತು. ಆದರೆ, ಬಲದಂಡೆ ಕಾಲುವೆಯ ಕಾಮಗಾರಿ ಮಾತ್ರ ಇನ್ನೂ ಚುರುಕು ಪಡೆದಿಲ್ಲ. ಇದರಿಂದಾಗಿ ವಾರಾಹಿ ಯೋಜನೆಯ ಬಲದಂಡೆ ಭಾಗದ ರೈತರು ನೀರಿಗಾಗಿ ಕಾಯುವುದು ನಾಲ್ಕು ದಶಕಗಳಾದರೂ ಮುಂದುವರಿದಿದೆ.

ವರದಿ:ವಿ.ಎಸ್.ಸುಬ್ರಹ್ಮಣ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT