ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕು ಉದ್ಯಮಗಳಿಗೆ ಇನ್ನು ಗಣಿಗಳು ‘ದೂರ’!

ಟೆಂಡರ್‌ ಷರತ್ತು ಮಾರ್ಪಾಡಿಗೆ ಸೂಚನೆ; ರಾಜ್ಯಕ್ಕೆ ಕೇಂದ್ರದ ನೋಟಿಸ್‌
Last Updated 15 ಅಕ್ಟೋಬರ್ 2021, 20:48 IST
ಅಕ್ಷರ ಗಾತ್ರ

ಬಳ್ಳಾರಿ: ಅದಿರು ಗಣಿಗಳನ್ನು ಉದ್ಯಮಗಳಿಗೆ ಮಾತ್ರ ಮೀಸಲಿಡುವ ರಾಜ್ಯದ ನಿಲುವಿಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ ನೋಟಿಸ್‌ ಜಾರಿಗೊಳಿಸಿದ್ದು, ‘ಇನ್ನು ಮುಂದೆ ಅದಿರು ಗಣಿಗಳನ್ನು ಉಕ್ಕು ಉದ್ಯಮಗಳಿಗೆ ಮೀಸಲಿಡಬಾರದು’ ಎಂದು ಹೇಳಿದೆ.

ಕೇಂದ್ರದ ಸೂಚನೆ ಯಿಂದಾಗಿ ಗಣಿಗಳ ಇ– ಹರಾಜಿಗೆ ದಾರಿ ಮುಕ್ತವಾದಂತಾಗಿದ್ದು, ಅರ್ಹತೆ ಹೊಂದಿರುವ ಯಾವುದೇ ಕಂಪನಿ ಅಥವಾ ವ್ಯಕ್ತಿಗಳು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಕೇಂದ್ರ ಸರ್ಕಾರ ಕಳುಹಿಸಿರುವ ನೋಟಿಸ್‌ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಮೆಸರ್ಸ್‌ ಶ್ರೀನಿವಾಸುಲು, ರಾಮಗಢ ಮೈನ್ಸ್‌ ಅಂಡ್‌ ಮಿನರಲ್ಸ್‌ ಪ್ರೈವೇಟ್‌ ಲಿ., ತಂಗವೇಲು ಅಂಡ್‌ ಅದರ್ಸ್‌, ಯೋಗೇಂದ್ರ ನಾಥ್‌ ಸಿಂಗ್‌, ಮತ್ತು ಅಲ್ಲಂ ವೀರಭದ್ರಪ್ಪ ಸೇರಿದಂತೆ ಐದು ಗಣಿ ಗುತ್ತಿಗೆಗಳ ಇ– ಹರಾಜಿಗೆ ರಾ‌ಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಆಗಸ್ಟ್‌ 31ರಂದು ಆಹ್ವಾನಿಸಿರುವ ಟೆಂಡರ್‌, ‘ಎಂಎಂಡಿಆರ್‌ (ಗಣಿ ಮತ್ತು ಖನಿಜ ಅಭಿವೃದ್ಧಿ ನಿಯಮಾವಳಿ) ಕಾಯ್ದೆಗೆ ವಿರುದ್ಧ ವಾಗಿದೆ’ ಎಂದು ಕೇಂದ್ರ ಸರ್ಕಾರ ನೋಟಿಸ್‌ನಲ್ಲಿ ಹೇಳಿದೆ.

ರಾ‌ಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಾರ್ಯದರ್ಶಿಗೆ ಕೇಂದ್ರ ಗಣಿ ಸಚಿವಾಲಯ ಕಳುಹಿಸಿರುವ ನೋಟಿಸ್‌ನಲ್ಲಿ, ಐದು ಗಣಿ ಗುತ್ತಿಗೆಗಳ ಇ– ಹರಾಜು ಷರತ್ತುಗಳನ್ನು ಮಾರ್ಪಾಡು ಮಾಡಿ, ಹೊಸದಾಗಿ ಟೆಂಡರ್‌ ಪ್ರಕಟಣೆ ಹೊರಡಿಸುವಂತೆ ನಿರ್ದೇಶಿಸಿದೆ.

1957ರಲ್ಲಿ ಜಾರಿಗೆ ಬಂದಿರುವ ಎಂಎಂಡಿಆರ್‌ ಕಾಯ್ದೆಗೆ 2021ರ ಜೂನ್‌ 18ರಂದು ಸಂಸತ್ತು ತಿದ್ದುಪಡಿ ಅಂಗೀಕರಿಸಿದೆ. ಅದರಂತೆ, ‘ರಾಜ್ಯಗಳು ಗಣಿಗಳನ್ನು ಉಕ್ಕು ಉದ್ಯಮಗಳಿಗೆ ಮಾತ್ರ ಮೀಸಲಿಡುವಂತಿಲ್ಲ. ಅದಿರನ್ನು ಉಕ್ಕು ಉತ್ಪಾದನೆಗೇ ಬಳಸುವಂತೆ ಷರತ್ತೂ ಹಾಕುವಂತಿಲ್ಲ. ಹಾಗೆ, ಅದಿರನ್ನು ಉಕ್ಕು ತಯಾರಿಕೆಗೇ ಬಳಸಲಾಗುವುದು ಎಂದು ಗುತ್ತಿಗೆದಾರರೂ ಖಾತರಿ ಕೊಡಬೇಕಿಲ್ಲ. ಈ ರೀತಿ ಗಣಿಗಳನ್ನು ಮೀಸಲಿಡುವುದು ಖನಿಜ ಕಾಯ್ದೆ ಸೆಕ್ಷನ್‌ 10ಬಿ, ಉಪಬಂಧ 6ರ ಆಶಯಗಳಿಗೆ ವಿರುದ್ಧವಾದುದು’ ಎಂದೂ ನೋಟಿಸ್‌ನಲ್ಲಿ ವಿವರಿಸಲಾಗಿದೆ.

ರಾಜ್ಯ ಸರ್ಕಾರ ಆಗಸ್ಟ್‌ 31ರಂದು ಹೊರಡಿಸಿರುವ ‘ಮಾಡೆಲ್‌ ಟೆಂಡರ್‌ ಡಾಕ್ಯುಮೆಂಟ್‌’ನಲ್ಲಿ, 2015ರ ಜುಲೈ 30ರಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಉಲ್ಲೇಖಿಸಿದೆ. ಈ ಆದೇಶವು, ‘ಸಮಾಜ ಪರಿವರ್ತನಾ ಸಮುದಾಯ’ ವರ್ಸಸ್‌ ಕರ್ನಾಟಕ ರಾಜ್ಯದ ಪ್ರಕರಣದಲ್ಲಿ ಹೊರಬಂದಿದ್ದು, ವ್ಯಾಪಕವಾಗಿ ಅಕ್ರಮವೆಸಗಿದ ‘ಸಿ’ ವರ್ಗದ ಗಣಿಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದ ವಿಧಿವಿಧಾನಗಳನ್ನು ಸೂಚಿಸಲಾಗಿದೆ. ಅಲ್ಲದೆ, ಕೋರ್ಟ್‌ ಆದೇಶ ಆಗಿನ ಎಂಎಂಡಿಆರ್ ಕಾಯ್ದೆ ನಿಯಮಾವಳಿಗೆ ಅನುಗುಣವಾಗಿತ್ತು ಎಂದೂ ನೋಟಿಸ್‌ನಲ್ಲಿಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT