ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹೆಚ್ಚಳ: ಅಧಿಕಾರಿಗಳೊಂದಿಗೆ ಎರಡು ದಿನ ಸಚಿವ ಈಶ್ವರಪ್ಪ ವಿಡಿಯೊ ಸಂವಾದ

Last Updated 22 ಮೇ 2021, 9:59 IST
ಅಕ್ಷರ ಗಾತ್ರ

‌ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ, ಪರಿಸ್ಥಿತಿ ಅವಲೋಕಿಸಲು ಮತ್ತು ಸೋಂಕು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚಿಸಲು ಇದೇ 24 ಮತ್ತು 25ರಂದು ವಿಡಿಯೊ ಸಂವಾದ ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ನಿರ್ಧರಿಸಿದ್ದಾರೆ.

ಈ ಸಂವಾದದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಸೋಂಕು ನಿಯಂತ್ರಿಸಲು ಗ್ರಾಮ ಪಂಚಾಯಿತಿಮಟ್ಟದಲ್ಲಿ ಕೈಗೊಂಡಿರುವ ಮತ್ತು ಕೈಗೊಳ್ಳಬೇಕಿರುವ ಕ್ರಮಗಳನ್ನು ವಿಡಿಯೊ ಸಂವಾದ ವೇಳೆ ಸಚಿವರು ಚರ್ಚಿಸಲಿದ್ದಾರೆ. 24ರಂದು ಬೆಳಿಗ್ಗೆ 10.30ಕ್ಕೆ ಮೈಸೂರು ಮತ್ತು ಬೆಂಗಳೂರು ವಿಭಾಗದ ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗಳು ಹಾಗೂ 25ರಂದು ಬೆಳಗಾವಿ ಮತ್ತು ಕಲಬುರ್ಗಿ ವಿಭಾಗದ ಎಲ್ಲ ಜಿಲ್ಲೆಗಳ ವ್ಯಾಪ್ರಿಯಲ್ಲಿರುವ ಗ್ರಾಮ ಪಂಚಾಯಿತಿಗಳ ಪರಿಸ್ಥಿತಿಯನ್ನು ಸಚಿವರು ಅವಲೋಕಿಸಲಿದ್ದಾರೆ ಎಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

‘ವೆಬೆಕ್ಸ್‌ನಲ್ಲಿ ಈ ಸಂವಾದ ನಡೆಯಲಿದೆ. ಒಂದು ಬಾರಿಗೆ 1,000 ಲಾಗಿನ್‌ ಮಾಡಲು ಮಾತ್ರ ಅವಕಾಶ ಇರುವುದರಿಂದ, ಮೂರು ಗ್ರಾಮ ಪಂಚಾಯಿತಿಗಳು ಒಟ್ಟಾಗಿ ಒಂದು ಸ್ಥಳದಲ್ಲಿ ಲಾಗಿನ್ ಆಗಿ ಭಾಗವಹಿಸಬೇಕು. ಇದನ್ನು ತಾಲ್ಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಯೋಜಿಸಬೇಕು.ಸಂವಾದದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದೂ ಅವರು ಸೂಚಿಸಿದ್ದಾರೆ.

ಪಿಡಿಒಗಳಿಗೆ ಸೂಚನೆ: ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಪತ್ರ ಬರೆದಿರುವುದು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ‘ಕೊರೊನಾ ಎರಡನೇ ಅಲೆ ಗ್ರಾಮೀಣ ಭಾಗಕ್ಕೂ ವ್ಯಾಪಿಸಿದ್ದು, ಜನರನ್ನು ರಕ್ಷಿಸಬೇಕಿದೆ. ಈ ಉದ್ದೇಶದಿಂದ ಮೊದಲ ಅಲೆಯ ಸಂದರ್ಭದಲ್ಲಿ ರಚಿಸಿದ್ದ ಗ್ರಾಮ ಪಂಚಾಯಿತಿ ಮತ್ತು ಗ್ರಾಮಮಟ್ಟದ ಕಾರ್ಯಪಡೆಯನ್ನು ಮತ್ತೆ ಸಕ್ರಿಯಗೊಳಿಸಲಾಗಿದ್ದು, ಜನರಿಗೆ ಜಾಗೃತಿ ಮೂಡಿಸಬೇಕಿದೆ. ಹೀಗಾಗಿ ಜನರಲ್ಲಿ ಮಾಸ್ಕ್‌ ಧರಿಸುವಂತೆ, ಅಂತರ ಕಾಪಾಡಿಕೊಳ್ಳುವಂತೆ, ಸ್ಯಾನಿಟೈಸರ್‌ ಬಳಸುವಂತೆ ಮಾಡಿ ಸೋಂಕು ಹರಡದಂತೆ ಕ್ರಮ ತೆಗೆದುಕೊಳ್ಳಬೇಕು. ಅರ್ಹ ಎಲ್ಲರಿಗೂ ಲಸಿಕೆ ಹಾಕಿಸಬೇಕು. ಸೋಂಕಿತರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಿ ಪ್ರತ್ಯೇಕವಾಗಿ ಇರಿಸಬೇಕು. ಸೋಂಕು ದೃಢಪಟ್ಟವರನ್ನು ಕೋವಿಡ್‌ ಆರೈಕೆ ಕೇಂದ್ರಗಳಿಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು. ಅಗತ್ಯ ಇರುವರನ್ನು ಆಸ್ಪತ್ರೆಗೆ ದಾಖಲಿಸಬೇಕು. ತೊಂದರೆಯಲ್ಲಿರುವ ಮಕ್ಕಳು, ಮಹಿಳೆಯರು ವೃದ್ಧರು, ಅಂಗವಿಕಲರಿಗೆ ಊಟೋಪಚಾರದ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದ್ದಾರೆ.

‘ಈ ಅಗತ್ಯಗಳಿಗೆ ಸರ್ಕಾರದ ವತಿಯಿಂದ, ಎಸ್‌ಡಿಆರ್‌ಎಫ್‌ ನಿಧಿಯಿಂದ ಪ್ರತಿ ಗ್ರಾಮ ಪಂಚಾಯಿತಿಗೆ ₹ 50 ಸಾವಿರ ಬಿಡುಗಡೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿಯ ಸ್ವಂತ ಸಂಪನ್ಮೂಲ, 14ನೇ ಹಣಕಾಸು ಆಯೋಗದ ಉಳಿದಿರುವ ಅನುದಾನ ಮತ್ತು 15ನೇ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನ ಮತ್ತು ಆರೋಗ್ಯ ಸೆಸ್‌ನಡಿ ಸಂಗ್ರಹಿಸುವ ಹಣವನ್ನು ಬಳಸಿಕೊಳ್ಳಬಹುದು. ಸಂಘ ಸಂಸ್ಥೆಗಳಿಂದ ದೇಣಿಗೆ, ನೆರವು ಪಡೆದುಕೊಳ್ಳಬಹುದು’ ಎಂದೂ ಅವರು ಸೂಚಿಸಿದ್ದಾರೆ.

ಬಾಡಿಗೆ ವಾಹನ: ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಮತ್ತು ಮೃತಪಟ್ಟವರನ್ನು ಚಿತಾಗಾರಗಳಿಗೆ ಸಾಗಿಸಲು ಆಂಬುಲೆನ್ಸ್‌ಗಳು ಸಿಗದಿರುವ ಪರಿಸ್ಥಿತಿ ನಿರ್ಮಾಣ ಆಗಬಹುದು. ಹೀಗಾಗಿ, ಈ ಉದ್ದೇಶಕ್ಕೆಂದೇ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ವಾಹನವನ್ನು ಬಾಡಿಗೆ ಪಡೆದು ಬಳಸುವಂತೆ ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಇಲಾಖೆಯಿಂದ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT