ಸೋಮವಾರ, ಮೇ 16, 2022
24 °C
ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ

ಮದರಸದಲ್ಲಿ ಎಸ್ಸೆಸ್ಸೆಲ್ಸಿ ಸಮಾನಾಂತರ ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಮದರಸಗಳಲ್ಲಿ ಎಸ್ಸೆಸ್ಸೆಲ್ಸಿ ಸಮಾನಾಂತರ ಶಿಕ್ಷಣ ಪದ್ಧತಿ ಜಾರಿಗೆ ತರುವ ಚಿಂತನೆ ಇದ್ದು, ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುವುದು’ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧಾರ್ಮಿಕ ಶಿಕ್ಷಣ ಪಡೆದ ಮುಸ್ಲಿಂ ಯುವಜನರು ಔದ್ಯೋಗಿಕವಾಗಿ ವಂಚಿತರಾಗುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಸಮಾನಾಂತರ ಪ್ರಮಾಣ ಪತ್ರ ಸಿಕ್ಕರೆ, ಶಿಕ್ಷಣ ಮುಂದುವರಿಸಲು ಸಹಕಾರಿಯಾಗಲಿದೆ’ ಎಂದರು.

‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಪ್ರತಿ ಜಿಲ್ಲೆಗೊಂದು ಐಟಿಐ ಹಾಗೂ ವಿಭಾಗ ಮಟ್ಟದಲ್ಲಿ ಪಾಲಿಟೆಕ್ನಿಕ್‌ ಆರಂಭಿಸಲಾಗುವುದು’ ಎಂದೂ ತಿಳಿಸಿದರು.

‘ಬೆಂಗಳೂರಿನಲ್ಲಿ ಐದು ಪ್ರಿಯದರ್ಶಿನಿ ಮಳಿಗೆಗಳನ್ನು ನವೀಕರಿಸಲಾಗುವುದು. ರಾಜ್ಯದ ಕೈಮಗ್ಗ ಹಾಗೂ ಜವಳಿ ಉತ್ಪನ್ನಗಳನ್ನು ಆನ್‌ಲೈನ್‌ ಮಾರುಕಟ್ಟೆ(ಇ–ಕಾಮರ್ಸ್‌)ಯಲ್ಲಿ ಮಾರಾಟ ಮಾಡುಲು ಸಿದ್ಧತೆ ನಡೆಸಲಾಗುತ್ತಿದೆ. ಜವಳಿ ಕ್ಷೇತ್ರದ ಅಭಿವೃದ್ಧಿಗಾಗಿ ಫೆ.23ರಂದು ಬೆಂಗಳೂರಿನಲ್ಲಿ ಜವಳಿ ತಜ್ಞರು ಹಾಗೂ ಉದ್ಯಮಿಗಳ ಜೊತೆ ಸಮಾಲೋಚನೆ ಏರ್ಪಡಿಸಲಾಗಿದೆ’ ಎಂದು ಅವರು ವಿವರಿಸಿದರು.

‘ನೇಕಾರಿಕೆಯಲ್ಲಿ ಸಾಧನೆ ಮಾಡಿದ ಐದು ಮಂದಿಗೆ ಪ್ರತಿ ವರ್ಷ ರಾಜ್ಯ ಮಟ್ಟದ ‘ನೇಕಾರ’ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಬಾರಿ ಆಗಸ್ಟ್ 7ರಂದು ಪ್ರದಾನ ಮಾಡಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು