ಶನಿವಾರ, ಫೆಬ್ರವರಿ 27, 2021
31 °C

ಲಸಿಕಾ ಅಭಿಯಾನದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ: ಬಿ.ಎಸ್‌.ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್‌–19 ಲಸಿಕಾ ಅಭಿಯಾನದಲ್ಲಿ ರಾಜ್ಯ ಸರ್ಕಾರವು ಮುಂಚೂಣಿಯಲ್ಲಿದೆ. ಸಕಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ನಾವು ಬದ್ಧರಾಗಿದ್ದೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಕೆ.ಸಿ.ಜನರಲ್‌ ಆಸ್ಪ‍ತ್ರೆಯ ಆವರಣದಲ್ಲಿ ಸೋಮವಾರ ನಡೆದ 100 ಹಾಸಿಗೆಗಳ ಮಾಡ್ಯುಲರ್‌ ಐಸಿಯು, ಆರ್‌ಟಿ–ಪಿಸಿಆರ್‌ ಪರೀಕ್ಷಾ ಕೇಂದ್ರ ಮತ್ತು ಆಮ್ಲಜನಕ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಆಸ್ಪತ್ರೆಯಲ್ಲಿ ಇದುವರೆಗೂ 2,162 ಮಂದಿಗೆ ಕೋವಿಡ್‌ ಚಿಕಿತ್ಸೆ ನೀಡಲಾಗಿದೆ. ಪ್ರಧಾನ ಮಂತ್ರಿಗಳ ನಿಧಿ ಹಾಗೂ ಕೇಂದ್ರ ಸರ್ಕಾರದ ಸಹಕಾರದಿಂದ ಆಸ್ಪತ್ರೆಗೆ ವೆಂಟಿಲೇಟರ್‌ಗಳನ್ನು ಒದಗಿಸಲಾಗಿದೆ. 50 ಹಾಸಿಗೆಗಳ ಐಸಿಯುಗೆ ಸರ್ಕಾರದ ವತಿಯಿಂದ ಸುಮಾರು ₹4 ಕೋಟಿ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಿ ಅಳವಡಿಸಲಾಗಿದೆ. ಗ್ಯಾಸ್‌ ಪೈಪ್‌ಲೈನ್‌ ಮೂಲಕ ದ್ರವ ರೂಪದಲ್ಲಿ ಆಮ್ಲಜನಕ ಪೂರೈಸುವ ಮೂಲಕ ತೀವ್ರ ನಿಗಾ ಘಟಕಗಳನ್ನು ಬಲಪಡಿಸಲಾಗಿದೆ. ಇವುಗಳನ್ನು ನಿರ್ವಹಿಸಲು ಹೆಚ್ಚಿನ ಸಿಬ್ಬಂದಿಯನ್ನೂ ನೇಮಿಸಲಾಗಿದೆ’ ಎಂದರು.

‘ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ₹5 ಕೋಟಿ ವೆಚ್ಚದಲ್ಲಿ 50 ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕವನ್ನು ಸ್ಥಾಪಿಸಲು ಮುಂದಾಗಿದ್ದೇವೆ. ಜಯದೇವ ಹೃದ್ರೋಗ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಆಸ್ಪತ್ರೆಯ ಆವರಣದಲ್ಲಿ 50 ಹಾಸಿಗೆಗಳ ಕ್ಯಾಥ್‌ ಲ್ಯಾಬ್‌ ಸ್ಥಾಪಿಸಲೂ ಕ್ರಮ ಕೈಗೊಳ್ಳಲಾಗಿದೆ. ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಸುಮಾರು ₹1.5 ಕೋಟಿ ವೆಚ್ಚದಲ್ಲಿ ಆರ್‌ಟಿ–ಪಿಸಿಆರ್‌ ಪ್ರಯೋಗಾಲಯವನ್ನು ಸ್ಥಾಪಿಸಿ ಸರ್ಕಾರಕ್ಕೆ ಕೊಡುಗೆಯಾಗಿ ನೀಡಿದೆ. ಈ ಮೂಲಕ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿದೆ. ಇದೇ ರೀತಿ ಇತರರು ನೆರವು ನೀಡಲು ಮುಂದಾಗಬೇಕು. ಇದರಿಂದ ಸರ್ಕಾರದ ಮೇಲಿನ ಹೊರೆ ಕಡಿಮೆಯಾಗಲಿದ್ದು, ಇನ್ನಷ್ಟು ಜನಪರ ಕೆಲಸಗಳನ್ನು ಮಾಡಲು ಸಹಕಾರಿಯಾಗುತ್ತದೆ’ ಎಂದೂ ಅವರು ಹೇಳಿದರು.

‘ಕೋವಿಡ್‌ ಸೇರಿದಂತೆ ಇನ್ನಿತರ ತುರ್ತು ಸಂದರ್ಭಗಳಲ್ಲಿ ಮಾಡ್ಯೂಲರ್‌ ಐಸಿಯು ಹೆಚ್ಚು ಪರಿಣಾಮಕಾರಿ. ₹5 ಕೋಟಿ ವೆಚ್ಚದಲ್ಲಿ ಕೇವಲ ಮೂರು ತಿಂಗಳಲ್ಲಿ ಇದನ್ನು ನಿರ್ಮಿಸಲಾಗಿದೆ. 14 ಖಾಸಗಿ ಸಂಸ್ಥೆಗಳು ತಲಾ ₹25 ಲಕ್ಷ ದೇಣಿಗೆ ನೀಡಿ ಈ ಕಾರ್ಯಕ್ಕೆ ಕೈ ಜೋಡಿಸಿವೆ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಶಾಸಕ ದಿನೇಶ್‌ ಗುಂಡೂರಾವ್‌ ಮಾತನಾಡಿ ‘ಸರ್ಕಾರದ ಈ ಕಾರ್ಯ ಶ್ಲಾಘನೀಯವಾದುದು. ಕೆ.ಸಿ.ಜನರಲ್‌ ಆಸ್ಪ‍ತ್ರೆಯ ಆವರಣದಲ್ಲಿ ಕ್ಯಾಥ್‌ ಲ್ಯಾಬ್‌, ಟ್ರಾಮಾ ಕೇರ್‌ ಸೆಂಟರ್‌ ಹಾಗೂ 150 ಹಾಸಿಗೆಗಳ ತಾಯಿ–ಮಗು ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವು ನಿರ್ಧರಿಸಿದೆ. ಇದು ಸ್ವಾಗತಾರ್ಹ’ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಇದ್ದರು.

ಹೇಗಿರುತ್ತೆ ಮಾಡ್ಯುಲರ್‌ ಐಸಿಯು
*ಸರಕು ಸಾಗಣೆಯ ಕಂಟೇನರ್‌ ಮಾದರಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಪ್ರತಿ ಕಂಟೇನರ್‌ನಲ್ಲಿ 5 ಸುಸಜ್ಜಿತ ಐಸಿಯು ಹಾಸಿಗೆಗಳು ಇರುತ್ತವೆ.
*ಒಂದು ಕಂಟೇನರ್‌ ಅಥವಾ ಮಾಡ್ಯುಲರ್ ಐಸಿಯು ನಿರ್ಮಾಣಕ್ಕೆ ₹ 25 ಲಕ್ಷ ವೆಚ್ಚವಾಗಿದೆ.
*ಈ ಎಲ್ಲ ಮಾಡ್ಯುಲರ್‌ ಐಸಿಯುಗಳ ನಿರ್ವಹಣೆಗೆ ತಜ್ಞ ವೈದ್ಯರು, ಅರೆವೈದ್ಯ ಸಿಬ್ಬಂದಿ, ಶುಶ್ರೂಷಕಿಯರು ಸೇರಿ ಒಟ್ಟು 150 ಮಂದಿಯನ್ನು ನೇಮಿಸಲಾಗಿದೆ.
*ಐಸಿಯು ಒಂದರ ಗಾತ್ರ 12.135 X 3.3 X 2.62 ಮೀಟರ್ ಇರುತ್ತದೆ.
*ಪ್ರತಿ ಮಾಡ್ಯುಲರ್‌ ಐಸಿಯುನಲ್ಲೂ ಹೈ ಸ್ಪೀಡ್‌ ವೈಫೈ, ಪ್ರತ್ಯೇಕ ಲ್ಯಾನ್‌ ಕೇಬಲ್‌, ಎಚ್‌ಡಿ ಕ್ಯಾಮೆರಾಗಳು, ಸೆಂಟ್ರಲ್‌ ಮಾನಿಟರಿಂಗ್‌ ವ್ಯವಸ್ಥೆ ಇರುತ್ತದೆ.
*ಸೆಂಟ್ರಲ್‌ ಮಾನಿಟರಿಂಗ್‌ ವ್ಯವಸ್ಥೆಯ ಸಹಾಯದಿಂದ ವೈದ್ಯರು ತಾವಿದ್ದಲ್ಲಿಂದಲೇ ರೋಗಿಗೆ ಚಿಕಿತ್ಸೆ ನೀಡಬಹುದು.
*ಮುಖ್ಯವಾಗಿ ಲಿಕ್ವಿಡ್‌ ಆಕ್ಸಿಜನ್‌ (ದ್ರವರೂಪದ ಆಮ್ಲಜನಕ) ವ್ಯವಸ್ಥೆ ಇರುತ್ತದೆ. ಇದರ ಪ್ರಮಾಣವನ್ನು 2,000 ಲೀಟರುಗಳಿಂದ 8,000 ಲೀಟರಿಗೆ ಹೆಚ್ಚಿಸಲಾಗಿದೆ.
*ಹವಾನಿಯಂತ್ರಿತ ವ್ಯವಸ್ಥೆಯ ಜೊತೆಗೆ ಶುದ್ಧ ಗಾಳಿ ತುಂಬಿಸಿ ಸಂಪೂರ್ಣವಾಗಿ ಏರ್‌ಟೈಟ್ ಮಾಡಲಾಗಿರುತ್ತದೆ.
*ಭಾರತದಲ್ಲಿ ಇದು ಮೊದಲ ಪ್ರಯೋಗ.
*ಪ್ರಾಯೋಗಿಕವಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ 10 ಕಂಟೇನರುಗಳನ್ನು ಒದಗಿಸಲಾಗಿದೆ. ಅಲ್ಲಿನ ವೈದ್ಯರೇ ಇವುಗಳಲ್ಲಿ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆ ನೀಡುವರು.
*ಶಸ್ತ್ರಚಿಕಿತ್ಸಾ ಘಟಕ ಹಾಗೂ ಕ್ಲೀನ್ ಕೊಠಡಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಸರಾಗಿರುವ ಬೆಂಗಳೂರು ಮೂಲದ ‘ರಿನ್ಯಾಕ್’ ಕಂಪನಿ ಇವುಗಳನ್ನು ಅಭಿವೃದ್ಧಿಪಡಿಸಿದೆ.

ಎರಡನೇ ಹಂತದ ಲಸಿಕಾ ಅಭಿಯಾನಕ್ಕೆ ಚಾಲನೆ: ಮುಖ್ಯಮಂತ್ರಿ ಹಾಗೂ ಸಚಿವರುಗಳ ಸಮ್ಮುಖದಲ್ಲಿ ಬಿಬಿಎಂಪಿ ಪೌರಕಾರ್ಮಿಕ, 34 ವರ್ಷ ವಯಸ್ಸಿನ ರಮೇಶ್‌ ಅವರಿಗೆ ಲಸಿಕೆ ಹಾಕುವ ಮೂಲಕ ಸೋಮವಾರ ಎರಡನೇ ಹಂತದ ಕೋವಿಡ್‌–19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಮೊದಲ ಹಂತದ ಅಭಿಯಾನದಲ್ಲಿ ಶೇ 40 ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ ‘ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮೊದಲು ಲಸಿಕೆ ಹಾಕಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದೇವೆ. ಇದನ್ನು ಕಡ್ಡಾಯಗೊಳಿಸಿಲ್ಲ. ನಮ್ಮಲ್ಲಿ ಬಳಕೆಯಾಗುತ್ತಿರುವ ಲಸಿಕೆಯು ಬೇರೆ ದೇಶಗಳಲ್ಲಿ ನೀಡಲಾಗುತ್ತಿರುವ ಲಸಿಕೆಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ. ಉನ್ನತ ಗುಣಮಟ್ಟವನ್ನೂ ಹೊಂದಿದೆ’ ಎಂದರು.

ಪೆಟ್ರೋಲ್‌, ಡೀಸೆಲ್‌ ಬೆಲೆ ₹100ರ ಗಡಿ ಸಮೀಪಿಸುತ್ತಿರುವುದರ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಬೆಲೆ ಹೆಚ್ಚಳದಿಂದ ಜನಸಾಮಾನ್ಯರಿಗೆ ತೊಂದರೆಯಾಗಿರುವುದು ನಿಜ. ಕೋವಿಡ್‌ನಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸಿವೆ. ಅನೇಕ ಸವಾಲುಗಳೂ ಎದುರಾಗಿವೆ. ಇವೆಲ್ಲವನ್ನೂ ನಿಭಾಯಿಸಲು ಆದಾಯ ಕ್ರೋಡೀಕರಣ ಮಾಡಬೇಕಾಗಿದೆ. ಹೀಗಾಗಿ ಅನಿವಾರ್ಯವಾಗಿ ಬೆಲೆ ಹೆಚ್ಚಿಸಲಾಗಿದೆ’ ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು