ಗುರುವಾರ , ಆಗಸ್ಟ್ 18, 2022
27 °C

14.27 ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿ: ಸಚಿವ ಆರ್‌.ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ರಾಜ್ಯದಲ್ಲಿ ಒಟ್ಟು 62.72 ಲಕ್ಷ ಎಕರೆ ಸರ್ಕಾರಿ ಜಮೀನು ಇದ್ದು, ಅದರಲ್ಲಿ 14.27 ಲಕ್ಷ ಎಕರೆ ಒತ್ತುವರಿಯಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಬುಧವಾರ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಪ್ರಶ್ನೆಗೆ ಅವರು, ‘ಚಿತ್ರದುರ್ಗ ಜಿಲ್ಲೆಯಲ್ಲಿ 2.06 ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 1.45 ಲಕ್ಷ ಎಕರೆ, ಶಿವಮೊಗ್ಗ ಜಿಲ್ಲೆಯಲ್ಲಿ 1.44 ಲಕ್ಷ ಎಕರೆ, ಉಡುಪಿ ಜಿಲ್ಲೆಯಲ್ಲಿ 1.11 ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಲಾಗಿದೆ’ ಎಂದು ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ 38,894 ಎಕರೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 36,229 ಎಕರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 61,095 ಎಕರೆ ಹಾಗೂ ರಾಮನಗರ ಜಿಲ್ಲೆಯಲ್ಲಿ 38,026 ಎಕರೆ ಸರ್ಕಾರಿ ಜಮೀನು ಅತಿಕ್ರಮಣಗೊಂಡಿದೆ ಎಂದರು.

ದಾಖಲೆಗಳ ಪ್ರಕಾರ ರಾಜ್ಯದಲ್ಲಿ 19.39 ಲಕ್ಷ ಎಕರೆ ಗೋಮಾಳದ ಜಮೀನು ಲಭ್ಯವಿದೆ. ಅದರಲ್ಲೂ ಸಾಕಷ್ಟು ಒತ್ತುವರಿಯಾಗಿದೆ. ಬಗರ್‌ ಹುಕುಂ ಯೋಜನೆಯಡಿ ಜಮೀನು ಕೋರಿ ನಮೂನೆ 50 ಮತ್ತು 53ರ ಅಡಿಯಲ್ಲಿ ಅರ್ಜಿಸಲ್ಲಿಸಿರುವವರು ಒಟ್ಟು 9.97 ಲಕ್ಷ ಎಕರೆ ಒತ್ತುವರಿ ಮಾಡಿದ್ದಾರೆ ಎಂದು ತಿಳಿಸಿದರು.

ಅರ್ಜಿಗಳು ವಿಲೇವಾರಿಗೆ ಬಾಕಿ ಇಲ್ಲದ ಮತ್ತು ವ್ಯಾಜ್ಯಗಳಿಲ್ಲದ ಪ್ರಕರಣಗಳಲ್ಲಿ 2.70 ಲಕ್ಷ ಎಕರೆ ಜಮೀನುಗಳ ಒತ್ತುವರಿಯನ್ನು ತೆರವು ಮಾಡಲಾಗಿದೆ. 1.36 ಲಕ್ಷ ಎಕರೆ ಸರ್ಕಾರಿ ಜಮೀನಿನ ಒತ್ತುವರಿ ತೆರವು ಬಾಕಿ ಇದೆ ಎಂದು ಅಶೋಕ ಮಾಹಿತಿ ನೀಡಿದರು.

ಹರಿಪ್ರಸಾದ್ ಮಾತನಾಡಿ, ‘ಕೆಲವು ಬಲಾಢ್ಯರು ನಗರ ಪ್ರದೇಶಗಳಲ್ಲಿನ ಸರ್ಕಾರಿ ಜಮೀನುಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸುತ್ತಿದ್ದಾರೆ. ಇದಕ್ಕೆ ತಡೆ ಹಾಕಬೇಕು.  ಬೆಂಗಳೂರಿನಲ್ಲಿ ಕೊಳೆಗೇರಿ ಪ್ರದೇಶದ ಜನರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರಿ ಜಮೀನು ಮೀಸಲಿಡಬೇಕು. ಕಾನೂನು ಮೀರಿ ಕೆಲವು ಸಂಘ ಸಂಸ್ಥೆಗಳಿಗೆ ಸರ್ಕಾರಿ ಜಮೀನುಗಳನ್ನು ಗುತ್ತಿಗೆಗೆ ನೀಡಲಾಗಿದೆ. ಅವುಗಳನ್ನು ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಕೊಳೆಗೇರಿ ಜನರು ಮತ್ತು ಬಡವರಿಗೆ ವಸತಿಗಾಗಿ ಸರ್ಕಾರಿ ಜಮೀನು ಮೀಸಲಿಡುವುದಾಗಿ ಮತ್ತು ಸಂಘ ಸಂಸ್ಥೆಗಳಿಗೆ ಗುತ್ತಿಗೆಗೆ ನೀಡಿರುವ ಜಮೀನುಗಳನ್ನು ಮಾರ್ಗಸೂಚಿ ದರದ ಆಧಾರದಲ್ಲಿ ಶುದ್ಧ ಕ್ರಯಕ್ಕೆ ನೀಡುವುದಾಗಿ ಸಚಿವರು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು