ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಶರಣರ ಜಾಮೀನು ಅರ್ಜಿ ಸೆಷನ್ಸ್‌ ಕೋರ್ಟ್‌ಗೆ?

ಶಿವಮೂರ್ತಿ ಶರಣರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ l ಇಂದು ವಿಚಾರಣೆ ಮುಂದುವರಿಕೆ
Last Updated 12 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಮಂಗಳವಾರಕ್ಕೆ (ಡಿ.13) ಮುಂದೂಡಿದೆ.

ಈ ಸಂಬಂಧ ಶಿವಮೂರ್ತಿ ಶರಣರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಶರಣರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ಹಾಜರಾಗಿ, ಎಫ್ಐಆರ್ ದಾಖಲಿಸಿದ ನಂತರ ಸಲ್ಲಿಸಿರುವ ಜಾಮೀನು ಅರ್ಜಿಯ ಮಾರ್ಪಾಡು ಮಾಡಲು ಮತ್ತು ಮಾರ್ಪಾಡಾದ ಅರ್ಜಿ ಆಧರಿಸಿ ವಿಚಾರಣೆ ನಡೆಸುವಂತೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈಗ ಸಲ್ಲಿಸಿರುವ ಜಾಮೀನು ಅರ್ಜಿ ಎಫ್‌ಐಆರ್ ದಾಖಲಾದ ನಂತರ ಹಾಕಿರುವುದು. ಪ್ರಕರಣದಲ್ಲಿ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಹಾಗಾಗಿ, ನ್ಯಾಯಪೀಠ ದೋಷಾರೋಪ ಪಟ್ಟಿಯನ್ನು ಆಧರಿಸಿಯೇ ವಿಚಾರಣೆ ನಡೆಸುತ್ತದೆ. ಒಂದು ವೇಳೆ ಅರ್ಜಿಯನ್ನು
ತಿರಸ್ಕರಿಸಿದರೆ ನೀವು ಸುಪ್ರೀಂ ಕೋರ್ಟ್‌ನಲ್ಲೇ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ಆದ್ದರಿಂದ, ಸೆಷನ್ಸ್‌ ನ್ಯಾಯಾಲಯದಲ್ಲೇ ಪುನಃ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬಹುದಲ್ಲವೇ’ ಎಂದು ಅದು ಪ್ರಶ್ನಿಸಿತು.

ಇದಕ್ಕೆ ನಾಗೇಶ್‌, ಅರ್ಜಿದಾರರನ್ನು ಕೇಳಿ ನ್ಯಾಯಪೀಠಕ್ಕೆ ಈ ಕುರಿತಂತೆ ಅಭಿಪ್ರಾಯ ತಿಳಿಸುವುದಾಗಿ ಒಂದು ದಿನದ ಕಾಲಾವಕಾಶ ಕೋರಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿತು. ಶರಣರ ಪರ ಸಂದೀಪ್‌ ಎಸ್‌.ಪಾಟೀಲ್‌ ಹಾಜರಿದ್ದರು.

ವಕಾಲತ್ತಿಗೆ ಆಕ್ಷೇಪ: ಇದೇ ವೇಳೆ ಪ್ರಕರಣದ ಸಂತ್ರಸ್ತೆ ಪರ ಹಾಜರಾಗಲು ಸಂತ್ರಸ್ತೆಯ ತಂದೆ ಪರವಾಗಿ ವಕೀಲ ಎಂ.ಎಂ.ಪ್ರಶಾಂತ್‌ ವಕಾಲತ್ತು ಸಲ್ಲಿಸಿದರು. ಆದರೆ, ಇದಕ್ಕೆ ‘ಒಡನಾಡಿ’ ಸಂಸ್ಥೆಯ ಪರ ವಕೀಲ ಡಿ.ಸಿ.ಶ್ರೀನಿವಾಸ್ ಆಕ್ಷೇಪ ಎತ್ತಿದರು. ವಕಾಲತ್ತು ಸ್ವೀಕರಿಸಿದ ನ್ಯಾಯಪೀಠ ಈ ಕುರಿತು ಯಾವುದೇ ಆದೇಶ ಹೊರಡಿಸಲಿಲ್ಲ.

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಶಿವಮೂರ್ತಿ ಶರಣರನ್ನು ಪೊಲೀಸರು 2022ರ ಸೆ.1ರಂದು ಬಂಧಿಸಿದ್ದು ಅಂದಿನಿಂದಲೂ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಆಡಳಿತಾಧಿಕಾರಿ ನೇಮಕಕ್ಕೆ ಪತ್ರ

ಚಿತ್ರದುರ್ಗ: ಶಿವಮೂರ್ತಿ ಮುರುಘಾ ಶರಣರ ಅನುಪಸ್ಥಿತಿಯಲ್ಲಿ ಮಠ, ಎಸ್‌ಜೆಎಂ ವಿದ್ಯಾಪೀಠದ ಆಡಳಿತವನ್ನು ಜವಾಬ್ದಾರಿ ಮತ್ತು ಅಧಿಕಾರಯುತ
ವಾಗಿ ನಡೆಸಲು ಆಡಳಿತಾಧಿಕಾರಿ ನೇಮಕ ಮಾಡುವಂತೆ ಮಾಜಿ ಸಚಿವ ಎಚ್‌. ಏಕಾಂತಯ್ಯ ಅವರು ಮುಖ್ಯಮಂತ್ರಿಗೆ ಎರಡನೇ ಪತ್ರ ಬರೆದಿದ್ದಾರೆ.

ನ್ಯಾಯಾಂಗ ಬಂಧನ ವಿಸ್ತರಣೆ: ಶಿವಮೂರ್ತಿ ಶರಣರ ವಿರುದ್ಧ ದೂರು
ದಾಖಲಿಸುವಂತೆ ಸಂತ್ರಸ್ತೆಯರಿಗೆ ಕುಮ್ಮಕ್ಕು ಹಾಗೂ ಷಡ್ಯಂತ್ರ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಮಾಜಿ ಆಡಳಿತಾ
ಧಿಕಾರಿ ಎಸ್‌.ಕೆ. ಬಸವರಾಜನ್‌ ನ್ಯಾಯಾಂಗ ಬಂಧನದ ಅವಧಿಯನ್ನು ನ್ಯಾಯಾಲಯ ಇದೇ 26ರವರೆಗೆ ವಿಸ್ತರಿಸಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ವಿಚಾರಣೆ

ಕೋಲಾರ: ಚಿತ್ರದುರ್ಗದ ಮುರುಘಾ ಮಠದಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ‌ ಆಯೋಗ
ದಿಂದಲೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಕರಣ ಏಕೆ ತಡವಾಗಿ ಬೆಳಕಿಗೆ ಬಂತು? ಘಟನೆ ನಡೆದಾಗ ಡಿವೈಎಸ್ಪಿ ಯಾರಿದ್ದರು, ಅಧಿಕಾರಿಗಳು ಯಾರಿದ್ದರು? ಮಠದಲ್ಲಿನ ಅಧಿಕಾರಿಗಳು ಏಕೆ ಇಷ್ಟು ವರ್ಷ ಮುಚ್ಚಿಟ್ಟಿದ್ದರು? ಪೊಲೀಸರು ಏಕೆ ವಿಫಲರಾದರು, ಕ್ರಮ ವಹಿಸಲು ಉಂಟಾದ ಅಡೆತಡೆ ಏನು? ಮುಂತಾದ ಅಂಶಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ. ಈಗಾಗಲೇ ಹಲವರ ಮೇಲೆ ಕ್ರಮವೂ ಆಗಿದೆ’ ಎಂದರು.

ಮುರುಘಾ ಮಠದ ವಸತಿ ನಿಲಯದ ತನಿಖೆಗೆ ಸೂಚನೆ

ಮೈಸೂರು: ‘ಮುರುಘಾ ಮಠ ನಡೆಸುತ್ತಿರುವ ‘ಬಸವೇಶ್ವರ ನಿರ್ಗತಿಕ ಮಕ್ಕಳ ಕುಟೀರ’ ಹಾಗೂ ‘ಅಕ್ಕಮಹಾದೇವಿ ವಸತಿನಿಲಯ’ದ ಮಕ್ಕಳ ಹಾಜರಾತಿ, ಪೋಷಣೆ ಮತ್ತು ಅವರ ಬಿಡುಗಡೆ ಪ್ರಕ್ರಿಯೆ ಬಗ್ಗೆ ತನಿಖೆ ನಡೆಸಬೇಕು’ ಎಂದು ಚಿತ್ರದುರ್ಗದ ಹೆಚ್ಚುವರಿ ಜಿಲ್ಲಾಧಿಕಾರಿ ಅಲ್ಲಿನ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸೂಚಿಸಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಇದೇ 3ರಂದು ಪತ್ರ ಬರೆದಿರುವ ಅವರು, ‘ಮಕ್ಕಳ ಆರೈಕೆ ಮತ್ತು ರಕ್ಷಣಾ ಕಾಯ್ದೆ–2015ರ ಅಡಿ ಕನಿಷ್ಠ ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯ. ಮಠವು 22 ಅನಾಥ ಮಕ್ಕಳಿಗೆ ಆಶ್ರಯ ಕಲ್ಪಿಸಿದ್ದು, ಮಕ್ಕಳ ಬಗ್ಗೆ ಕೆಲವು ಅಂಶಗಳ ಕುರಿತು ತನಿಖೆ ನಡೆಸಿ ಕ್ರಮ ಜರುಗಿಸಬೇಕು’ ಎಂದು ಕೋರಿದ್ದ ಮೈಸೂರಿನ ‘ಒಡನಾಡಿ’ ಸಂಸ್ಥೆಯ ಮನವಿ ‍ಪತ್ರವನ್ನೂ ಲಗತ್ತಿಸಿದ್ದಾರೆ.

‘ಒಡನಾಡಿ’ ಪತ್ರದಲ್ಲೇನಿದೆ?: ‘22 ಮಕ್ಕಳಲ್ಲಿ 7 ಮಕ್ಕಳು ದಾಖಲಾದ ಸಂದರ್ಭದಲ್ಲಿ 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ಪ್ರಸ್ತುತ ಐವರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಮಕ್ಕಳ ಆರೈಕೆ ಮತ್ತು ರಕ್ಷಣಾ ಕಾಯ್ದೆ–2015ರ ಕಾಯ್ದೆ ಪ್ರಕಾರ ವಿಶೇಷ ಸೌಲಭ್ಯಗಳ ಅವಶ್ಯವಿದ್ದು, ದಾಖಲಾತಿ ಸಮಯದಲ್ಲಿ ಅವು ಲಭ್ಯವಿದ್ದವೇ’ ಎಂದು ಪತ್ರದಲ್ಲಿ ಸಂಸ್ಥೆಯು ಕೇಳಿತ್ತು.

‘ಅನಾಥ ಮಕ್ಕಳ ಸ್ಥಿತಿಗತಿ, ಮಕ್ಕಳ ತಂದೆ– ತಾಯಿಗಳ ಪತ್ತೆಗಾಗಿ ಕೈಗೊಂಡ ಕ್ರಮ, ಯಾವ ಕಾರಣಕ್ಕಾಗಿ ಅನಾಥರು ಎಂಬ ವರದಿ ನೀಡಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಕಾಯ್ದೆಯಲ್ಲಿರುವಂತೆ ಜವಾಬ್ದಾರಿ
ನಿರ್ವಹಿಸಿದ್ದರೇ? ಬಾಲ ನ್ಯಾಯ ಕಾಯ್ದೆ 53ರ ಅಧಿನಿಯಮದಲ್ಲಿ ಮಠ ನೋಂದಣಿ ಆಗಿದ್ದಲ್ಲಿ ಮಾರ್ಗಸೂಚಿಯಂತೆ ಪುನರ್ವಸತಿ ಒದಗಿಸಲಾಗಿತ್ತೇ?’ ಸೇರಿದಂತೆ 13 ಮಾಹಿತಿಗಳನ್ನು ಕೇಳಿ ಸಂಸ್ಥೆಯು ನ.25ರಂದು ‍ಪತ್ರ ಬರೆದಿತ್ತು.

ಬಾಲಕಿಯರ ಹಾಸ್ಟೆಲ್‌ಗಳಿಗೆ ಕಡ್ಡಾಯವಾಗಿ ಮಹಿಳಾ ಮೇಲ್ವಿಚಾರಕರನ್ನೇ ನಿಯೋಜಿಸಬೇಕು

- ಕೆ.ನಾಗಣ್ಣ ಗೌಡ,ಅಧ್ಯಕ್ಷ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ‌ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT