ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಶ್ರೀಗೆ ಪೀಠತ್ಯಾಗಕ್ಕೆ ನಿರ್ದೇಶನ ನೀಡಿ: ಹೈಕೋರ್ಟ್‌ ಸಿಜೆಗೆ ಯತ್ನಾಳ ಪತ್ರ

ಲೈಂಗಿಕ ಕಿರುಕುಳ ಪ್ರಕರಣ: ಹೈಕೋರ್ಟ್‌ ಸಿಜೆಗೆ ಯತ್ನಾಳ ಪತ್ರ
Last Updated 17 ಸೆಪ್ಟೆಂಬರ್ 2022, 20:07 IST
ಅಕ್ಷರ ಗಾತ್ರ

ವಿಜಯಪುರ: ಲೈಂಗಿಕ ಕಿರುಕುಳ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶರಣರಿಗೆ ಪೀಠತ್ಯಾಗ ಮಾಡಲು ನಿರ್ದೇಶಿಸಬೇಕು ಎಂದು ಕೋರಿಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿಗಳಿಗೆ ಹಾಗೂ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಅವರು, ‘ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ಸುಪ್ರೀಂ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮಠಕ್ಕೆತಾತ್ಕಾಲಿಕ ಮೇಲುಸ್ತುವಾರಿ ಸಮಿತಿ ರಚನೆ ಮಾಡುವ ಮೂಲಕಮಠದ ದೈನಂದಿನ ಆಡಳಿತ ಸುಗಮವಾಗಿ ನಡೆಯುವಂತೆ ಕ್ರಮಕೈಗೊಳ್ಳಬೇಕು’ ಎಂದು ಕೋರಿ ದ್ದಾರೆ.

‘ಚಿತ್ರದುರ್ಗದ ಬೃಹನ್ಮಠವು ವಿರಕ್ತ‌ ಪರಂಪರೆಯ ಶೂನ್ಯಪೀಠದ ಅಗ್ರಗಣ್ಯ ಮಠವಾಗಿದೆ. ಮುರುಘಾಶ್ರೀಗಳ ಕಾರಣದಿಂದಾಗಿ ವೀರಶೈವ ಲಿಂಗಾಯತ ಸಮಾಜಕ್ಕೆ ಅವಮಾನವಾಗಿದೆ. ಪ್ರಕರಣ ಕೋರ್ಟ್‌ನಲ್ಲಿದೆ. ಸ್ವಾಮೀಜಿಗಳು ಸ್ವ ಇಚ್ಛೆಯಿಂದ ಪೀಠ ತ್ಯಾಗ ಮಾಡಬೇಕು. ಇಲ್ಲದಿದ್ದರೆ ಭಕ್ತ ಸಮೂಹ ಕಾನೂನು ಬದ್ಧವಾಗಿ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸಬೇಕು’ ಎಂದು ಯತ್ನಾಳ ಮನವಿ ಮಾಡಿದ್ದಾರೆ.

ಶರಣರು ಸದ್ಯ ಜೈಲಿನಲ್ಲಿರುವ ಕಾರಣ ಶ್ರೀಮಠದ ಸಮಸ್ತ ಆಡಳಿತ ಚಟುವಟಿಕೆ ಅಸ್ತವ್ಯಸ್ತವಾಗಿದೆ. ಈ ಸಂದಿಗ್ಧ ಸಮಯದಲ್ಲಿ ಶ್ರೀಮಠದ ಕೋಟ್ಯಂತರ ಮೊತ್ತದ ಚರ ಮತ್ತು ಸ್ಥಿರಾಸ್ತಿ ದುರುಪಯೋಗವಾಗುವ ಸಾಧ್ಯತೆ ಇದೆ ಎಂದೂ ಅನುಮಾನ ವ್ಯಕ್ತ ಪಡಿಸಿದ್ದಾರೆ.

ಉನ್ನತ ಮಟ್ಟದ ಮೇಲುಸ್ತುವಾರಿಗೆ ಕೂಡಲೇ ಸಮಿತಿ ನೇಮಿಸಬೇಕು, ಈ ಸಮಿತಿ ಶ್ರೀಮಠದ ದೈನಂದಿನ ಆಡಳಿತ, ಆರ್ಥಿಕ ವ್ಯವಹಾರಗಳು ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ನಿರ್ಧಾರ ಕೈಗೊಳ್ಳುವ ತಾತ್ಕಾಲಿಕ ಅಧಿಕಾರ ಹೊಂದಿರಬೇಕು. 3 ತಿಂಗಳಲ್ಲಿ ಮಠಕ್ಕೆ ಹೊಸ ಪೀಠಾಧ್ಯಕ್ಷರನ್ನು ನೇಮಿ ಸುವ ಪ್ರಕ್ರಿಯೆಯನ್ನು ಸಮಿತಿಯೇ ಮಾಡಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

ಆದೇಶ ಕಾಯ್ದಿರಿಸಿದ ಕೋರ್ಟ್

ಪ್ರೌಢಶಾಲೆ ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣ ಕುರಿತು ಬೆಂಗಳೂರಿನ ಕಾಟನ್‌ಪೇಟೆ ಹಾಗೂ ಮೈಸೂರಿನ ನಜರಬಾದ್‌ ಠಾಣೆಯಲ್ಲಿ ಲಭ್ಯವಿರುವ ದಾಖಲೆಗಳನ್ನು ಒದಗಿಸಲು ಕೋರಿ ಸಿಆರ್‌ ಪಿಸಿ ಸೆಕ್ಷನ್‌ 91ರ ಅಡಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿತ ಆದೇಶವನ್ನು ನ್ಯಾಯಾಲಯ ಸೆ.21ಕ್ಕೆ ಕಾಯ್ದಿರಿಸಿದೆ.

ಪ್ರಕರಣದ ನಾಲ್ಕನೇ ಆರೋಪಿ ಪರಮಶಿವಯ್ಯ ಹಾಗೂ ಐದನೇ ಆರೋಪಿ ಗಂಗಾಧರಯ್ಯ ಪರವಾಗಿ ಹಾಜರಾಗಿದ್ದ ಹೈಕೋರ್ಟ್‌ ವಕೀಲ ಸಿ.ಎಚ್‌.ಹನುಮಂತರಾಯ ಈ ಅರ್ಜಿ ಸಲ್ಲಿಸಿದ್ದರು. ‌ಸರ್ಕಾರಿ ವಕೀಲರಾದ ಕೆ.ಬಿ.ನಾಗವೇಣಿ ಶನಿವಾರ ತಕರಾರು ಸಲ್ಲಿಸಿದ್ದರು. ‌‌ವಾದ, ಪ್ರತಿವಾದ ಆಲಿಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಕೆ.ಕೋಮಲಾ ಅವರು ಆದೇಶವನ್ನು ಕಾಯ್ದಿರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT