ಗುರುವಾರ , ಮೇ 19, 2022
21 °C

ದೊಡ್ಡ ಬೂಟಾಟಿಕೆ ನಡೀತಾ ಇದೆ: ಮೈಸೂರಿನಲ್ಲಿ ಹಂಸಲೇಖ ಹೇಳಿದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ ಮಾಡಕ್ ಹೋಗಿದಾರೆ ಅಂತ ಸ್ಟೇಟ್‌ಮೆಂಟ್‌ ಬಂದಿತ್ತು. ನಿಜಾನಾ?! ದಲಿತರ ಮನೆಗೆ ಹೋಗಿ ಕೂತಿದ್ದರಂತೆ. ಕುಳಿತುಕೊಳ್ಳೊದಕ್ ಆಗುತ್ತಷ್ಟೇ. ಅವರು ಕೋಳಿ ಕೊಟ್ಟರೆ ತಿನ್ನಕ್‌ ಆಗುತ್ತಾ? ಕೋಳಿ ಬೇಡ ಕುರಿ ರಕ್ತ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್‌ ತಿಂತಾರಾ? ಆಗಲ್ಲ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅವರು ಹೇಳಿದ್ದು ಚರ್ಚೆಗೆ ಕಾರಣವಾಗಿದೆ.

‘ನೆಲೆ ಹಿನ್ನೆಲೆ’ ಸಂಸ್ಥೆಯು ನಗರದಲ್ಲಿ ಶುಕ್ರವಾರ (ನ.12) ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಮುಳ್ಳೂರು ರಾಜು ಕಾವ್ಯ ಪ್ರಶಸ್ತಿ’ ಮತ್ತು ರಾಜಶೇಖರ ಕೋಟಿ ನುಡಿನಮನ ಕಾರ್ಯಕ್ರಮದಲ್ಲಿ ಹಂಸಲೇಖ ಮಾತನಾಡಿದ್ದರು.

ಅವರ ಮಾತುಗಳು: ‘ಅಂದರೆ ದಲಿತರ ಮನೆಗೆ ಬಲಿತರು ಹೋಗಿ ಬರುವುದೇನು ದೊಡ್ಡ ವಿಷ್ಯಾ ಅಂತ ನನಗನ್ನಿಸಿತು. ಈಗ ಇವರು ಶುರು ಮಾಡಿಕೊಂಡು ಬಿಟ್ಟಿದ್ದಾರೆ. ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ಅಂತ ಶುರು ಮಾಡಿ ದೊಡ್ಡ ಗೀಳಾಯ್ತು. ಅಶ್ವತ್ಥನಾರಾಯಣ ಅವರೂ ಗ್ರಾಮ ವಾಸ್ತವ್ಯ. ಯಾರು ನೋಡಿದರೂ ಗ್ರಾಮ ವಾಸ್ತವ್ಯ! ಈಗ ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಆ ಹೆಣ್ಣಿನ ಜೊತೆ ರಮಿಸ್ತಾನೆ ಅಂದ್ರೆ ಅದರಲ್ಲೇನ್‌ ದೊಡ್ಡ ವಿಷ್ಯ ಇದೆ. ಅವನು ಆ ಸೋಲಿಗರ ಹೆಣ್ಣನ್ನ ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ದೇವರ ಗುಡಿಯಲ್ಲಿ ಕೂರಿಸಿ ಅಲ್ಲಿ ಅವಳನ್ನ ರಮಿಸಿದ್ರೆ ಅದು ಬಿಳಿಗಿರಿಗೊಂದು ಇದಾಗುತ್ತಿತ್ತು (ಕೈ ತೋರುತ್ತಾ). ಬೆಳಗಿನ ಜಾವಾದಲ್ಲಿ ಸೂರ್ಯ ಇನ್ನು ಹುಟ್ಟಿದನಂತೆ ಬಿಳಿಗಿರಿ ರಂಗ ಕೆಳಗಿಳಿದು ಬಂದು ಸೋಲಿಗರ ಮನೆಗೆ ಹೋಗಿ ಸಂಸಾರ ಮಾಡಿ ತಿರಗಾ ಹೋಗಿ ಕಲ್ಲಾಗಿಬಿಡುತ್ತಾನಂತೆ. ಅದೊಂದು ನಾಟಕ, ಬೂಟಾಟಿಕೆ’.

‘ಗಾಂಧಿ ಹೇಳಿದಂತೆ ದಲಿತರ ಮನೆಗೆ ಬಲಿತರು ಬರಬೇಕು. ತಮ್ಮ ಜೊತೆಗೆ ಅವರ ಮನೆಗೆ ಕರೆದುಕೊಂಡು ಹೋಗಬೇಕು. ನಿಮ್ಮನೇಲಲ್ಲ ಊಟ ನಮ್ಮನೇಲಿ ಊಟ, ನಮ್ಮನೆ ಲೋಟ ನೀನು ಮುಟ್ಟು. ನೀ ಕುಡಿದದನ್ನ ನಾವು ತೊಳಿತೀವಿ ಅಂತ ಅವರು ಹೇಳಬೇಕು. ಅದು ನಿಜವಾದ ಕ್ಷಣ.’

‘ಈಗ ಭಾರತದಲ್ಲಿ ದೊಡ್ಡ ಬೂಟಾಟಿಕೆ ನಡೀತಾ ಇದೆ. ಅಂಬೇಡ್ಕರ್‌ ಅವರನ್ನ ಎತ್ತರದ ಸ್ಥಾನದಲ್ಲಿ ಕೊಂಡಾಡೊದಕ್ಕೂ ಪರ್ಮಿಷನ್‌ ಕೊಟ್ಟಿದ್ದಾರೆ. ‘ಮಹಾನಾಯಕ’ ಎಂಬ ಸೀರಿಯಲ್ ಭಾರತದಾದ್ಯಂತ ಕೆಲಸ ಮಾಡುತ್ತಿದೆ. ಸೀರಿಯಲ್‌ನಿಂದ ಪರಿಣಾಮ ಏನಂದ್ರೆ, ನನ್ನ ಹೆಂಡತಿಯು ಎಷ್ಟೊಂದು ಚಾನಲ್‌ಗಳಿದ್ದಾವೆ. ಎಷ್ಟೊಂದು ಸಿರೀಯಲ್‌ಗಳಿದ್ದಾವೆ. ಯಾವ ಸೀರಿಯಲ್‌ ನೋಡದೆ ಒಂದು ಸರಿಗಮಪ, ಮಹಾನಾಯಕ ನೋಡುತ್ತಿದ್ದಾಳೆ. ಅವಳು ಅಂಬೇಡ್ಕರ್ ಅವರನ್ನು. ಅವರೊಂದು ಅವತಾರರೀ. ದೇವರ‍್ರೀ. ನೋಡಿಲ್ವಲ್‌ರೀ, ನಾವ್‌ ಅರ್ಥ ಮಾಡಿಕೊಳ್ಳಲಿಲ್ವಲ್ರೀ ಅಂತ ಮೂರ್ನಾಲ್ಕು ತಿಂಗಳಿಂದ ಅಳೋದು. ಇದೊಂತರ ಅಂಬೇಡ್ಕರ್‌ ಫೋಬಿಯಾ ರೀ ಅವಳದು’

ಹಂಸಲೇಖ ಅವರ ಮಾತುಗಳ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಚರ್ಚೆಗಳನ್ನು ಹುಟ್ಟುಹಾಕಿದೆ. ಹಂಸಲೇಖ ಅವರು ಕ್ಷಮೆ ಕೇಳಿದ್ದು ಸರಿಯೋ ತಪ್ಪೋ ಎಂಬುದು ಈಗ ಚರ್ಚೆಗೆ ಹೊಸದಾಗಿ ಸೇರಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು