ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನಾಡಗೀತೆ ಸಮಯ: ಶೀಘ್ರ ನಿರ್ಣಯ ಕೈಗೊಳ್ಳಬೇಕು’-ಕಸಾಪ

ಕಸಾಪದಿಂದ ಸಚಿವ ಅರವಿಂದ ಲಿಂಬಾವಳಿಗೆ ಪತ್ರ
Last Updated 15 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕುವೆಂಪು ಅವರ ‘ಜಯಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡುಗಳಲ್ಲಿ ಹಾಡಿ ಮುಗಿಸಬೇಕೆಂಬ ಬಗ್ಗೆ ವಿಷಯದಲ್ಲಿ ಸಾಹಿತಿಗಳು, ಕನ್ನಡಪರ ಚಿಂತಕರು ಈಗಾಗಲೇ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಶೀಘ್ರ ನಿರ್ಣಯ ಕೈಗೊಂಡು ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಸರ್ಕಾರಕ್ಕೆ ಪತ್ರ ಬರೆದಿದೆ.

‘ನಾಡಗೀತೆ ಹಾಡಲು ಒಂದು ಕ್ರಮ ಬೇಕು. ಅದಕ್ಕೆ ಸಂಬಂಧಿಸಿದಂತೆ ತಜ್ಞರ ಸಭೆ ಕರೆಯುವ ಚಿಂತನೆ ಇದೆ’ ಎಂದು ಲಿಂಬಾವಳಿ ಭಾನುವಾರ ಹೇಳಿಕೆ ನೀಡಿದ್ದರು.

ಇದರ ಬೆನ್ನಲ್ಲೇ, ನಾಡಗೀತೆಯ ಅವಧಿ ನಿಗದಿಗೊಳಿಸಲು 2018ರ ನ. 14ರಂದು ನಡೆದ ಸಾಹಿತಿಗಳ, ಕನ್ನಡಪರ ಚಿಂತಕರ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ನಡಾವಳಿಯ ಸಮೇತ ಸಚಿವರಿಗೆ ಕಸಾಪ‌ ಅಧ್ಯಕ್ಷ ಮನು ಬಳಿಗಾರ್‌ಪತ್ರ ಬರೆದಿದ್ದಾರೆ.

‘ನಾಡಗೀತೆ ಹಾಡುವ ಕಾಲಾವಧಿಯನ್ನು ನಿಗದಿಪಡಿಸುವ ಬಗ್ಗೆ ಅನೇಕ ಸಭೆಗಳು ನಡೆದಿವೆ. ಹಿರಿಯರು ತಮ್ಮ ಅಭಿಪ್ರಾಯವನ್ನು ಪ್ರತಿಪಾದಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗದೇ ಇದ್ದುದರಿಂದ 2018ರಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಸಭೆ ಸೇರಿ, 2.30 ನಿಮಿಷದಲ್ಲಿ ಹಾಡಿ ಮುಗಿಸಲು ಏಕಕಂಠದಿಂದ ಸಹಮತ ಸೂಚಿಸಲಾಗಿದೆ. ಅದಕ್ಕೆ ಪೂರಕವಾಗಿ ಪ್ರಸಿದ್ಧ ಗಾಯಕರಿಂದ ಸೋದಾಹರಣ ಪ್ರಾತ್ಯಕ್ಷಿಕೆ ಏರ್ಪಡಿಸಿ, ಅಷ್ಟೇ ಅವಧಿಯಲ್ಲಿ ಈಗಿನ ಪೂರ್ಣ ಪಠ್ಯವನ್ನು ಹಾಡಿ ಮುಗಿಸಲು ಸಾಧ್ಯ ಎಂದೂ ತೋರಿಸಿಕೊಡಲಾಗಿದೆ. ಅಂದಿನ ಸಭೆಯ ನಡವಳಿಯನ್ನು ಆಗಿನ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

‘ನಾಡಗೀತೆ ಹಾಡಲು ಈವರೆಗೆ ಒಂದು ಕಾಲಮಿತಿ ಮತ್ತು ಕ್ರಮ ನಿಗದಿ‍ಪಡಿಸಿಲ್ಲ. ಹೀಗಾಗಿ, ಎಲ್ಲಿಯೇ ಹಾಡಲಿ ಅದಕ್ಕೆ ಸಮಯದ ಮಿತಿ ಇಲ್ಲ. ವಾದ್ಯಗೋಷ್ಠಿಯಲ್ಲಿ ಇತರ ಭಾವಗೀತೆಗಳನ್ನು ಹಾಡಿದಂತೆ ನಾಡಗೀತೆಯನ್ನೂ ನಾಲ್ಕೂವರೆ ನಿಮಿಷ ಹಾಡಲಾಗುತ್ತಿದೆ. ಅದರಲ್ಲಿ ಆಲಾಪಗಳು, ಪುನರಾವರ್ತನೆಗಳು, ಚಪ್ಪಾಳೆಗಳು ಎಲ್ಲವೂ ಇರುತ್ತದೆ. ಹೀಗಾಗಿ, ನಾಡಗೀತೆ ಯಾವಾಗ ಮುಗಿಯುತ್ತದೆ ಎಂದು ಕೆಲವು ಚಡಪಡಿಸುತ್ತಾರೆ. ಯಾವುದೇ ಪುನರಾವರ್ತನೆ ಇಲ್ಲದೆ, ಆಲಾಪಗಳಿಲ್ಲದೆ, ನಡು ನಡುವೆ ವಾದ್ಯಗೋಷ್ಠಿಗೆ ಅವಕಾಶ ಕೊಡದೆ ನಾಡಗೀತೆ ಹಾಡಿ ಮುಗಿಸುವುದು ಗೌರವದ ಸಂಕೇತ’ ಎಂದೂ ಪತ್ರದಲ್ಲಿ ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT