ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧ ಧ್ವಜ ಹಾರಾಟದ ಹಿಂದಿದೆ ಶ್ರಮ

ಸೂರ್ಯೋದಯ, ಸೂರ್ಯಾಸ್ತದ ಸಮಯದಲ್ಲಿ ಧ್ವಜಾರೋಹಣ, ಅವರೋಹಣ ಕೆಲಸ: ಸಿಬ್ಬಂದಿ
Last Updated 11 ಆಗಸ್ಟ್ 2022, 21:09 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಯಿರಲಿ, ಚಳಿಯಿರಲಿ ವಿಧಾನಸೌಧದ ಮುಕುಟದ ಮೇಲೆ ರಾಷ್ಟ್ರಧ್ವಜ ನಿತ್ಯ ಹಾರಾಡುತ್ತಲೇ ಇರುತ್ತದೆ. ವಿಧಾನಸೌಧದ ಎದುರು ಓಡಾಡುವ ಜನ ಅದನ್ನು ನೋಡಿ ಖುಷಿಪಡುತ್ತಾರೆ. ಈ ಧ್ವಜ ಹಾರಾಡುವುದರ ಹಿಂದೆ ವಿಧಾನಸೌಧ ಸಿಬ್ಬಂದಿಯ ಒಂದು ತಂಡದ ಶ್ರಮ ಅಡಗಿದೆ.

ಪ್ರತಿನಿತ್ಯ ಬೆಳಿಗ್ಗೆ ಹಾರಾಡುವ ಧ್ವಜವನ್ನು ಸಂಜೆ ವೇಳೆಗೆ ಬಿಚ್ಚಿಡಲಾಗುತ್ತದೆ. ಈ ಧ್ವಜವನ್ನು ಮನಸಿಗೆ ಬಂದಾಗ ಹಾರಿಸಲು ಮತ್ತು ಬಿಚ್ಚಿಡಲು ಸಾಧ್ಯವಿಲ್ಲ. ಸೂರ್ಯೋದಯದ ಸಮಯ ತಿಳಿದುಕೊಂಡು ನಿಖರ ಸಮಯಕ್ಕೆ ಧ್ವಜ ಹಾರಿಸಲಾಗುತ್ತದೆ. ಅದೇ ರೀತಿ ಸೂರ್ಯಾಸ್ತದ ಸಮಯವನ್ನೂ ನಿಖರವಾಗಿ ತಿಳಿದುಕೊಂಡು ಧ್ವಜ ಬಿಚ್ಚಿಡಲಾಗುತ್ತದೆ.

‘ಪ್ರತಿನಿತ್ಯ ಸೂರ್ಯೋದಯ ಮತ್ತು ಸೋರ್ಯಾಸ್ತದ ಸಮಯ ಬದಲಾಗುತ್ತಿರುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಸಮಯವನ್ನು ನೋಡಿಕೊಂಡು ಧ್ವಜ ಹಾರಿಸುವ ಮತ್ತು ಇಳಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ವಿಧಾನಸೌಧದಲ್ಲಿ ಧ್ವಜ ಹಾರಿಸುವ ಕೆಲಸವನ್ನು 26 ವರ್ಷಗಳಿಂದ ಮಾಡುತ್ತಿರುವ ಅಂಥೋನಿ ದಾಸ್ ಹೇಳುತ್ತಾರೆ.

‘ವಿಧಾನಸೌಧದ ಭದ್ರತೆ ಮತ್ತು ಧ್ವಜ ನಿರ್ವಹಣೆ ಮಾಡಲು 1997ರಲ್ಲಿ 90ಕ್ಕೂ ಹೆಚ್ಚು ಸಿಬ್ಬಂದಿ ಇದ್ದೆವು. ಅವರಲ್ಲಿ ಈಗ ಏಳು ಜನ ಮಾತ್ರ ಉಳಿದುಕೊಂಡಿದ್ದೇವೆ. ಇನ್ನು ನಾಲ್ಕು ವರ್ಷಗಳಲ್ಲಿ ಎಲ್ಲರೂ ನಿವೃತ್ತಿ ಆಗುತ್ತೇವೆ. ಸಿಬ್ಬಂದಿ ನೇಮಕವನ್ನು ಸರ್ಕಾರ ಮಾಡಿಯೇ ಇಲ್ಲ. ಆದರೆ, ಗೃಹ ರಕ್ಷಕ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ’ ಎಂದು ವಿವರಿಸಿದರು.

‘ಮೂರು ಪಾಳಿಯಲ್ಲಿ ಕೆಲಸ ಮಾಡುತ್ತೇವೆ. ರಾತ್ರಿ ಪಾಳಿಯಲ್ಲಿ ಇದ್ದವರಿಗೆ ಬೆಳಗಿನ ಜಾವ ಧ್ವಜ ಹಾರಿಸುವ ಜವಾಬ್ದಾರಿ ಇರುತ್ತದೆ. ಮಧ್ಯಾಹ್ನ 2ರಿಂದ ಆರಂಭವಾಗುವ ಪಾಳಿಯವರಿಗೆ ಸಂಜೆ ಧ್ವಜ ಇಳಿಸುವ ಜವಾಬ್ದಾರಿ ಇರುತ್ತದೆ. ಎಲ್ಲರೂ ಈ ಕೆಲಸವನ್ನು 15 ದಿನಕ್ಕೊಮ್ಮೆ ಹಂಚಿಕೊಂಡು ನಿರ್ವಹಿಸುತ್ತೇವೆ’ ಎಂದು ಹೇಳಿದರು.

‘ಇದರೊಂದಿಗೆ ವಿಧಾನಸೌಧದ ಎಲ್ಲಾ ಕೊಠಡಿಗಳು ಮತ್ತು ಮುಖ್ಯ ದ್ವಾರಗಳಿಗೆ ಬೀಗ ಹಾಕುವ ಜವಾಬ್ದಾರಿಯನ್ನೂ ನಿರ್ವಹಿಸುತ್ತೇವೆ. ಒಂದು ಮಹಡಿಯಲ್ಲಿ ಒಂದು ಸುತ್ತು ಬರಬೇಕೆಂದರೆ ಒಂದು ಕಿಲೋ ಮೀಟರ್ ನೆಡೆಯಬೇಕು. ನಾಲ್ಕು ಮಹಡಿಯಲ್ಲಿ ಬೀಗ ಹಾಕಲು ನಾಲ್ಕು ಕಿಲೋ ಮೀಟರ್ ಸುತ್ತಿದಂತೆ ಆಗಲಿದೆ. ಪ್ರತಿ ಮಹಡಿಯನ್ನೂ ತಲಾ ಇಬ್ಬರು ವಹಿಸಿಕೊಂಡು ಈ ಕೆಲಸ ಮಾಡುತ್ತೇವೆ’ ಎಂದು ಅಂಥೋನಿ ದಾಸ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT