ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧಾರವಾಡಿ ಎಮ್ಮೆ’ ತಳಿಗೆ ರಾಷ್ಟ್ರೀಯ ಮಾನ್ಯತೆ

ಪೇಢಾ, ಕುಂದಾ, ಕರದಂಟು ಸಿಹಿತಿನಿಸಿಗೆ ರುಚಿ ಹೆಚ್ಚಿಸುವ ಎಮ್ಮೆಗೆ ಮನ್ನಣೆ
Last Updated 5 ಸೆಪ್ಟೆಂಬರ್ 2021, 20:41 IST
ಅಕ್ಷರ ಗಾತ್ರ

ಧಾರವಾಡ: ಕೃತಕ ಗರ್ಭಧಾರಣೆ ಭಾರತಕ್ಕೆ ಕಾಲಿಟ್ಟು 60 ವರ್ಷಗಳ ನಂತರವೂ ತಳಿ ಶುದ್ಧತೆ ಕಾಪಾಡಿಕೊಂಡಿರುವ ‘ಧಾರವಾಡಿ ಎಮ್ಮೆ’ ತಳಿಗೆ ಕೊನೆಗೂ ರಾಷ್ಟ್ರೀಯ ಮಾನ್ಯತೆ ದೊರೆತಿದೆ.

ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಪಶು ಸಂಗೋಪನೆ ವಿಭಾಗವು ಇತ್ತೀಚಿಗೆ ನಡೆಸಿದ ಸಭೆಯಲ್ಲಿ ರಾಜ್ಯದ ‘ಧಾರವಾಡಿ ತಳಿ’ ಎಮ್ಮೆಗೆ ‘ಇಂಡಿಯಾ_ಬಫೆಲೊ_0800_ಧಾರವಾಡಿ_01018’ ಎಂದು ತಳಿ ಪ್ರವೇಶ ಸಂಖ್ಯೆ ನೀಡಿದೆ. ಈ ಮೂಲಕ ಎಮ್ಮೆಗಳಲ್ಲಿ ಮಾನ್ಯತೆ ಪಡೆದ ರಾಜ್ಯದ ಮೊದಲ ತಳಿ ಇದಾಗಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪಶು ವಿಜ್ಞಾನ ವಿಭಾಗವು 1970ರಿಂದ ಈ ಎಮ್ಮೆ ತಳಿಗೆ ಮಾನ್ಯತೆ ಪಡೆಯಲು ಪ್ರಯತ್ನ ನಡೆಸುತ್ತಿತ್ತು. ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಅಂಗ ಸಂಸ್ಥೆಯಾದ ಪಶು ವಂಶವಾಹಿ ಸಂಪನ್ಮೂಲ ಸಂರಕ್ಷಣೆಯ ರಾಷ್ಟ್ರೀಯ ಸಂಸ್ಥೆ (ಎನ್‌ಬಿಎಆರ್‌ಜಿ) ಹಾಗೂ ಕೃಷಿ ವಿ.ವಿಯ ಪಶು ವಿಜ್ಞಾನ ವಿಭಾಗದ ಸಹಯೋಗದಲ್ಲಿ ಸಂಶೋಧನೆ ನಡೆದಿತ್ತು.

‘ತಳಿ ಶುದ್ಧತೆ ಕುರಿತು 2017ರಲ್ಲಿ ಸಂಶೋಧಕರು ಪರಿಷತ್‌ಗೆ ವರದಿ ಸಲ್ಲಿಸಿದ್ದರು. ಈ ಕುರಿತು ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಈ ಮಾನ್ಯತೆಯಿಂದಾಗಿಈವರೆಗೂ ಜಾಗತಿಕ ಮನ್ನಣೆ ದೊರೆತ
ದೇಶದ 18ಎಮ್ಮೆ ತಳಿಯ ಸಾಲಿಗೆ ‘ಧಾರವಾಡಿ’ ಹೊಸ ಸೇರ್ಪಡೆ ಆಗಿದೆ’ ಎಂದು ಈ ತಳಿ ಕುರಿತು ಸಂಶೋಧನೆ ನಡೆಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯ ಪ್ರಾಣಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ವಿ.ಎಸ್‌.ಕುಲಕರ್ಣಿ ತಿಳಿಸಿದ್ದಾರೆ.

‘ಧಾರವಾಡಿ ತಳಿಯು ರಾಜ್ಯದ ಉತ್ತರ ಭಾಗದ 14 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾಣಿಸುತ್ತಿವೆ.ಒಟ್ಟು 12.05 ಲಕ್ಷ ಧಾರವಾಡಿ ತಳಿಯ ಎಮ್ಮೆಗಳು ಇರಬಹುದು ಎಂದು ಅಂದಾಜಿಸಲಾಗಿದೆ.ತಳಿ ಕುರಿತುಧಾರವಾಡ, ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಗಳಲ್ಲಿ ಸಂಶೋಧನೆ ಕೈಗೊಳ್ಳಲಾಗಿತ್ತು. ಈ ಭಾಗದ 64 ಹಳ್ಳಿಗಳ 3,937 ಜನ ರೈತರ ಮನೆಯಲ್ಲಿನ 10,650 ಧಾರವಾಡಿ ಎಮ್ಮೆಗಳ ಕುರಿತು ಸತತ ಎರಡು ವರ್ಷ ಅಧ್ಯಯನ ನಡೆಸಲಾಗಿದೆ. ಇವುಗಳಲ್ಲಿ ಶೇ 80 ರಷ್ಟು ತಳಿ ಶುದ್ಧತೆ ಕಂಡು ಬಂದಿದೆ’ ಎಂದು ಕುಲಕರ್ಣಿ ವಿವರಿಸಿದರು.

ಪೇಢಾಗೆ ಎಮ್ಮೆ ಹಾಲಿನಿಂದ ರುಚಿ...

‘ಧಾರವಾಡಿ ಎಮ್ಮೆ’ ತನ್ನ ಜೀವಿತಾವಧಿಯಲ್ಲಿ ಐದು ಬಾರಿ ಕರು ಹಾಕುತ್ತದೆ. ಒಮ್ಮೆ ಕರುಹಾಕಿದರೆ 335 ದಿನ ಹಾಲು ನೀಡುತ್ತದೆ. ಇದರ ಹಾಲಿನಲ್ಲಿ ಶೇ 7ರಷ್ಟು ಕೊಬ್ಬಿನಾಂಶ ಇದೆ. ಹೀಗಾಗಿ ಈ ಭಾಗದ ಸುಪ್ರಸಿದ್ಧ ಸಿಹಿ ತಿನಿಸುಗಳಾದ ಧಾರವಾಡ ಪೇಢಾ, ಬೆಳಗಾವಿ ಕುಂದಾ, ಜಮಖಂಡಿ ಕಲ್ಲಿ ಪೇಢಾ, ಐನಾಪುರ ಪೇಢಾ, ಗೋಕಾಕ ಮತ್ತು ಅಮೀನಗಡ ಕರದಂಟು ಇತ್ಯಾದಿಗಳಲ್ಲಿ ಈ ಎಮ್ಮೆಯ ಹಾಲು ಬಳಸಲಾಗುತ್ತದೆ.

‘ಊರೆಲ್ಲಾ ಅಡ್ಡಾಡಿ ಬರುವ ‘ಧಾರವಾಡಿ’ ಒಂದು ಸೂಲಿನಲ್ಲಿ 970 ಲೀಟರ್ ಹಾಲು ಕೊಡುತ್ತದೆ. ಕೊಟ್ಟಿಗೆಯಲ್ಲೇ ಸಾಕಿದರೆ ‘ಸುರ್ತಿ’ ಎಮ್ಮೆಯಷ್ಟೇ (1,200 ಲೀಟರ್) ಹಾಲು ಕೊಟ್ಟಿದೆ. ರೈತರು ಉತ್ತಮ ಪದ್ಧತಿ ಅಳವಡಿಸಿದಲ್ಲಿ ಇನ್ನೂ ಹೆಚ್ಚಿನ ಹಾಲು ಪಡೆಯಲು ಸಾಧ್ಯವಿದೆ’ ಎನ್ನುತ್ತಾರೆ ಡಾ.ವಿ.ಎಸ್‌. ಕುಲಕರ್ಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT