ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕೈಗಾರಿಕಾ ನೀತಿ ಬಿಡುಗಡೆ: 20 ಲಕ್ಷ ಉದ್ಯೋಗ ಸೃಷ್ಟಿ

5 ವರ್ಷಗಳಲ್ಲಿ ₹5 ಲಕ್ಷ ಕೋಟಿ ಬಂಡವಾಳ ಹೂಡಿಕೆ
Last Updated 19 ಜನವರಿ 2021, 10:49 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ ₹5 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಗುರಿಯನ್ನು ಹಮ್ಮಿಕೊಂಡಿದ್ದು, ಇದರಿಂದ ಸುಮಾರು 20 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ಕರ್ನಾಟಕ ಕೈಗಾರಿಕಾ ನೀತಿ 2020–2025 ಅನ್ನು ನಗರದ ತಾಜ್‌ ವೆಸ್ಟ್‌ಎಂಡ್‌ ಹೊಟೇಲ್‌ನಲ್ಲಿ ಮಂಗಳವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಈ ಬಾರಿ ಕೈಗಾರಿಕೆಗಳಲ್ಲಿ ಹಿಂದುಳಿದ ಜಿಲ್ಲೆಗಳು, 2 ಮತ್ತು 3 ನೇ ಸ್ತರದ ನಗರಗಳಿಗೆ ಒತ್ತು ನೀಡಲು ತೀರ್ಮಾನಿಸಿದ್ದೇವೆ. ಮುಖ್ಯವಾಗಿ ವಾಹನ ಮತ್ತು ವಾಹನಗಳ ಬಿಡಿಭಾಗಗಳು,ಔಷಧಿ ಮತ್ತು ವೈದ್ಯಕೀಯ ಉಪಕರಣಗಳು, ಎಂಜಿನಿಯರಿಂಗ್‌ ಮತ್ತು ಯಂತ್ರೋಪಕರಣ ಬಿಡಿಭಾಗಗಳು, ಜ್ಞಾನ ಆಧಾರಿತ ಕೈಗಾರಿಕೆಗಳು, ಲಾಜಿಸ್ಟಿಕ್ಸ್‌, ನವೀಕರಿಸಬಹುದಾದ ಇಂಧನ, ಏರೋಸ್ಪೇಸ್‌, ರಕ್ಷಣೆ ಮತ್ತು ವಿದ್ಯುತ್‌ ಚಾಲಿತ ವಾಹನ ತಯಾರಿಕೆ ಬಗ್ಗೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ ಎಂದು ಶೆಟ್ಟರ್‌ ಹೇಳಿದರು.

ಈ ನೀತಿಗೆ ಪೂರಕವಾಗಿ ಭೂಸುಧಾರಣೆ ಕಾಯ್ದೆಯ 79 ಎ ಮತ್ತು 79 ಬಿ ಸೆಕ್ಷನ್‌ ತೆಗೆದು ಹಾಕಿರುವುದರಿಂದ ರಾಜ್ಯದಲ್ಲಿ ಉದ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಗೊಳ್ಳಲು ಅನುಕೂಲವಾಗಿದೆ. ಅಲ್ಲದೆ, ಕಂದಾಯ ಇಲಾಖೆ ಅಧಿಕಾರಿಗಳ ಕಿರುಕುಳವೂ ತಪ್ಪಿದೆ. ರೈತರ ಜತೆ ನೇರವಾಗಿ ಒಪ್ಪಂದ ಮಾಡಿಕೊಂಡು 54 ಎಕರೆವರೆಗೆ ಭೂಮಿ ಖರೀದಿ ಮಾಡಬಹುದು ಎಂದು ಶೆಟ್ಟರ್‌ ಹೇಳಿದರು.

ಅಲ್ಲದೆ, ರಾಜ್ಯದಲ್ಲಿ ಸಿ ಮತ್ತು ಡಿ ಶ್ರೇಣಿಯ ಹುದ್ದೆಗಳಲ್ಲಿ ಕ್ರಮವಾಗಿ ಶೇ 70 ಮತ್ತು ಶೇ 100 ರಷ್ಟು ಕನ್ನಡಿಗರಿಗೇ ಉದ್ಯೋಗ ನೀಡಬೇಕು. ಇದನ್ನು ನೀತಿಯಲ್ಲಿ ಸೇರಿಸಲಾಗಿದೆ ಎಂದು ಅವರು ತಿಳಿಸಿದರು.

ಅಲ್ಲದೆ, ಬೆಂಗಳೂರು ಬಿಟ್ಟು ಬೇರೆ ಕಡೆಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುತ್ತಿದೆ. ವಿಶೇಷವಾಗಿ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಬಂಡವಾಳ ಹೂಡುವವರಿಗೆ ವಿಶೇಷ ಪ್ರೋತ್ಸಾಹವನ್ನೂ ನೀತಿಯಲ್ಲಿ ಪ್ರಕಟಿಸಲಾಗಿದೆ ಎಂದು ಶೆಟ್ಟರ್‌ ತಿಳಿಸಿದರು.

6 ಕೈಗಾರಿಕಾ ವಸಾಹತುಗಳ ನಿರ್ಮಾಣಕ್ಕೆ ತೀರ್ಮಾನ:

ರಾಜ್ಯದಲ್ಲಿ 5 ರಿಂದ 6 ಕೈಗಾರಿಕಾ ವಸಾಹತುಗಳ (ಟೌನ್‌ಶಿಪ್‌) ನಿರ್ಮಾಣಕ್ಕೆ ತೀರ್ಮಾನಿಸಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ಬಹಳ ಸಮಯದಿಂದ ನನೆಗುದಿಯಲ್ಲಿರುವ ಮತ್ತು ಉದ್ಯಮ ವಲಯದ ಅತ್ಯಂತ ಹಳೆಯ ಬೇಡಿಕೆಯಾದ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಸಂಬಂಧ ನಗರಾಭಿವೃದ್ಧಿ ಇಲಾಖೆ ಜತೆಗೆ ಚರ್ಚಿಸಿ ಸಂಪುಟ ಸಭೆಗೆ ಟಿಪ್ಪಣಿಯನ್ನು ಸಿದ್ಧಪಡಿಸಲಾಗಿದೆ ಎಂದರು.

*5 ವರ್ಷಗಳಲ್ಲಿ ವಾಣಿಜ್ಯ ರಫ್ತು ವ್ಯವಹಾರದಲ್ಲಿ 3ನೇ ಸ್ಥಾನಕ್ಕೇರುವುದು

*ವಾರ್ಷಿಕ ಶೇ 10 ಕೈಗಾರಿಕಾ ಬೆಳವಣಿಗೆ ದರ ಕಾಯ್ದುಕೊಳ್ಳುವುದು

*ತಂತ್ರಜ್ಞಾನ ಅಳವಡಿಕೆ, ನವೋನ್ವೇಷಣೆಗೆ ಪೂರಕ ವಾತಾವರಣ ನಿರ್ಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT