ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಕರ್ಫ್ಯೂ ಜಾರಿ: ಭಿನ್ನ ನಿಲುವು

ಕರ್ಫ್ಯೂ ಜಾರಿಯನ್ನು ಪ್ರತಿಪಾದಿಸಿದ ಸಚಿವ ಆರ್‌. ಅಶೋಕ, ಅಗತ್ಯವಿಲ್ಲ ಎಂದ ಬಿಎಸ್‌ವೈ, ಡಾ.ಕೆ. ಸುಧಾಕರ್‌
Last Updated 30 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿಯಂತ್ರಿಸುವುದಕ್ಕಾಗಿ ರಾಜ್ಯದಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದೊಳಗೆ ವಿಭಿನ್ನ ನಿಲುವು ವ್ಯಕ್ತವಾಗಿದೆ. ಕಂದಾಯ ಸಚಿವ ಆರ್‌. ಅಶೋಕ ಕರ್ಫ್ಯೂ ಜಾರಿಯನ್ನು ಪ್ರತಿಪಾದಿಸಿದ್ದರೆ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರು ಅಗತ್ಯವಿಲ್ಲ ಎಂದಿದ್ದಾರೆ.

ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅಶೋಕ, ‘ಬ್ರಿಟನ್‌ನಿಂದ ಬಂದಿರುವ ರೂಪಾಂತರ ಹೊಂದಿರುವ ಕೊರೊನಾ ವೈರಸ್‌ ವೇಗವಾಗಿ ಹರಡುತ್ತಿದೆ. ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಅಗತ್ಯವಿದೆ. ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು’ ಎಂದರು.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಮತ್ತೆ ಲಾಕ್‌ ಡೌನ್‌ ಜಾರಿಗೊಳಿಸಬೇಕಾದ ಪರಿಸ್ಥಿತಿ ಇಲ್ಲ. ಆದರೆ, ಸೋಂಕು ನಿಯಂತ್ರಿಸಲು ಇನ್ನಷ್ಟು ನಿರ್ಬಂಧಗಳನ್ನು ಹೇರುವ ಅಗತ್ಯವಿದೆ. ಜನರು ಕೂಡ ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಹೇಳಿದರು.

ಬದಲಾವಣೆ ಇಲ್ಲ: ಇದೇ ವಿಷಯ ಕುರಿತು ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ‘ಕೇಂದ್ರ ಸರ್ಕಾರ ನೀಡುವ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತರುತ್ತೇವೆ. ಸದ್ಯ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದರು.

ಅಗತ್ಯ ಕಂಡುಬಂದಲ್ಲಿ ಮಾತ್ರ, ಸ್ಥಳೀಯ ಪರಿಸ್ಥಿತಿ ಆಧಾರದಲ್ಲಿ ಬದಲಾವಣೆ ಮಾಡಲಾಗುವುದು. ಬ್ರಿಟನ್‌ನಿಂದ ಬಂದಿರುವ ಕೆಲವರು ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಅವರೆಲ್ಲರೂ ತಕ್ಷಣವೇ ಆರೋಗ್ಯ ಇಲಾಖೆಯ ಸಂಪರ್ಕಕ್ಕೆ ಬರಬೇಕು. ಕೋವಿಡ್‌ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ರಾತ್ರಿ ಕರ್ಫ್ಯೂ ಇಲ್ಲ: ‘ರಾತ್ರಿ ಕರ್ಫ್ಯೂ ಮುಗಿದ ಅಧ್ಯಾಯ. ಈ ಬಾರಿ ರಾತ್ರಿ ಕರ್ಫ್ಯೂ ಇರುವುದಿಲ್ಲ ಎಂದು ಮುಖ್ಯಮಂತ್ರಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಹೊಸ ವರ್ಷಾಚರಣೆಯನ್ನು ನಿರ್ಬಂಧಿಸಲು ಕೆಲವು ಸಲಹೆಗಳನ್ನು ಗೃಹ ಇಲಾಖೆಗೆ ನೀಡಲಾಗಿದೆ’ ಎಂದು ಡಾ.ಕೆ. ಸುಧಾಕರ್‌ ಹೇಳಿದರು.

ಬ್ರಿಟನ್ ವೈರಾಣು: ಮತ್ತೆ ನಾಲ್ವರಲ್ಲಿ ದೃಢ
ಬೆಂಗಳೂರು:
ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರಲ್ಲಿ ಮತ್ತೆ ನಾಲ್ವರಿಗೆ ರೂಪಾಂತರಗೊಂಡ ಕೊರೊನಾ ವೈರಾಣು ಇರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಹೊಸ ಮಾದರಿಯ ಕೋವಿಡ್ ಪೀಡಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ವರದಿಯಾದ ಪ್ರಕರಣಗಳಲ್ಲಿ ನಾಲ್ವರು ಒಂದೇ ಕುಟುಂಬದವರಾಗಿದ್ದು, ಶಿವಮೊಗ್ಗದಲ್ಲಿ ನೆಲೆಸಿದ್ದರು. ಅವರು ಇಲ್ಲಿಗೆ ವಾಪಸಾದ ದಿನವೇ ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ಸೋಂಕಿತರಾಗಿರುವುದು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿ, ಮಾದರಿಗಳನ್ನು ಜೆನೆಟಿಕ್ ಸೀಕ್ವೆನ್ಸ್ ಪರೀಕ್ಷೆಗೆ ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪರೀಕ್ಷೆಯ ವರದಿಯಲ್ಲಿ ರೂಪಾಂತರ ವೈರಾಣು ಇರುವುದು ದೃಢಪಟ್ಟಿದೆ. ಅವರೊಂದಿಗೆ ಸಂಪರ್ಕ ಹೊಂದಿದ್ದ 7 ಮಂದಿಯನ್ನು ಗುರುತಿಸಲಾಗಿದೆ. ಅವರಲ್ಲಿ ಮೂವರು ಕೋವಿಡ್‌ ಪೀಡಿತರಾಗಿರುವುದು ಖಚಿತಪಟ್ಟಿದೆ.

‌ಬೆಂಗಳೂರಿನಲ್ಲಿ ತಾಯಿ, ಮಗು ಸೇರಿದಂತೆ ಮೂವರಿಗೆ ರೂಪಾಂತರ ವೈರಾಣು ಇರುವುದು ಮಂಗಳವಾರ ಖಚಿತಪಟ್ಟಿತ್ತು. ಇವರಲ್ಲಿ ಇಬ್ಬರು ಬೆಂಗಳೂರಿನ ರಾಜಾಜಿನಗರ ಮತ್ತು ಒಬ್ಬರು ಆರ್‌.ಆರ್. ನಗರದವರಾಗಿದ್ದರು. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಇವರ ನೇರ ಹಾಗೂ ಪರೋಕ್ಷ ಸಂಪರ್ಕಿತ ಹೊಂದಿದ್ದ 39 ಮಂದಿಯನ್ನು ಪತ್ತೆ ಮಾಡಿ, ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ ಯಾರು ಕೂಡ ಸೋಂಕಿತರಾಗಿಲ್ಲ ಎನ್ನುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ.

ಶೇ 70ರಷ್ಟು ವೇಗ ಹೆಚ್ಚಳ: ಈಕುರಿತು ಸುದ್ದಿಗಾರರ ಜತೆ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ‘ಕರ್ನಾಟಕದಲ್ಲಿ 7 ಮಂದಿ ಸೇರಿದಂತೆ ದೇಶದಲ್ಲಿ 20 ಮಂದಿಗೆ ರೂಪಾಂತರಗೊಂಡ ವೈರಾಣು ಇರುವುದು ದೃಢಪಟ್ಟಿದೆ. ಅವರ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ವೈರಾಣು ಹರಡುವಿಕೆಯನ್ನು ತಡೆಯಬೇಕಿದೆ. ಹಾಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಹೊಸ ಮಾದರಿಯ ವೈರಾಣು ಈ ಮೊದಲಿಗಿಂತ ಶೇ 70 ರಷ್ಟು ವೇಗವಾಗಿ ಹರಡುವ ಗುಣ ಹೊಂದಿದೆ. ಆದರೆ, ತೀವ್ರತೆ ಕಡಿಮೆ ಇರಲಿದೆ’ ಎಂದರು.

‘ಕಳೆದ ನ.22ರಿಂದ ಬ್ರಿಟನ್‌ನಿಂದ ನಮ್ಮ ರಾಜ್ಯಕ್ಕೆ 2,500 ಮಂದಿ ಪ್ರಯಾಣಿಕರು ಬಂದಿದ್ದಾರೆ. 1,600ಕ್ಕೂ ಅಧಿಕ ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನುಳಿದವರು ಎಲ್ಲಿದ್ದಾರೆ ಎನ್ನುವುದನ್ನು ಗೃಹ ಇಲಾಖೆ ಪತ್ತೆ ಮಾಡುತ್ತಿದೆ. ಕಳೆದ 15 ದಿನಗಳ ಅವಧಿಯಲ್ಲಿ ಇಲ್ಲಿಗೆ ಬಂದವರಿಂದ ವೈರಾಣು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇರುತ್ತದೆ. ಅದಕ್ಕೂ ಮೊದಲು ಬಂದವರಲ್ಲಿ ವೈರಾಣು ಸಕ್ರಿಯವಾಗಿರುವ ಸಾಧ್ಯತೆ ಕಡಿಮೆ’ ಎಂದು ಹೇಳಿದರು.

ವೇಗದ ಹರಡುವಿಕೆಗೆ ತಡೆ ಅಗತ್ಯ: ತಜ್ಞರ ಅಭಿಮತ
‘ರೂಪಾಂತರಗೊಂಡ ವೈರಾಣು ವೇಗವಾಗಿ ಹರಡುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು. ಜನರು ಬಟ್ಟೆ ಬದಲಿಸಿದಂತೆ ವೈರಾಣು ಕೂಡ ಸ್ವರೂಪ ಬದಲಾಯಿಸುತ್ತಾ ಇರುವುದು ವಿಶೇಷ. ಈ ಸಂದರ್ಭದಲ್ಲಿ ಸಂಪರ್ಕಿತರ ಪತ್ತೆ ಮತ್ತು ಸಾಂಸ್ಥಿಕ ಕ್ವಾರಂಟೈನ್‌ಗೆ ಸಂಬಂಧಿಸಿದ ನಿಯಮಾವಳಿಗಳನ್ನು ಪರಿಣಾಮಕಾರಿಯಾಗಿ ಜಾರಿಮಾಡಬೇಕು. ಕೋವಿಡ್‌ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು’ ಎಂದು ತಜ್ಞರು ತಿಳಿಸಿದ್ದಾರೆ.

‘ಈ ಮೊದಲು ಕಾಣಿಸಿಕೊಂಡ ಲಕ್ಷಣವೇ ರೂಪಾಂತರಗೊಂಡ ವೈರಾಣು ಹೊಂದಿರುವವರಲ್ಲಿ ಕೂಡ ಪತ್ತೆಯಾಗುತ್ತವೆ. ಚಿಕಿತ್ಸೆ ಕೂಡ ಈ ಮೊದಲಿನಂತೆ ಇರಲಿದೆ. ಇಂಗ್ಲೆಂಡ್‌ನಲ್ಲಿ ವೇಗವಾಗಿ ವೈರಾಣು ವ್ಯಾಪಿಸಿಕೊಂಡಿದೆ. ಹಾಗಾಗಿ ನಾವು ವೈರಾಣು ಹರಡದಂತೆ ಕ್ರಮಕೈಗೊಳ್ಳಬೇಕು. ಮುಖಗವಸು ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ವಿವಿಧ ನಿಯಮಗಳನ್ನು ಜನತೆ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಕೋವಿಡ್‌ ತಜ್ಞರ ಸಮಿತಿಯ ಸದಸ್ಯ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.

12 ಮಾದರಿಗಳ ಫಲಿತಾಂಶ ಇಂದು
‘ಬ್ರಿಟನ್‌ನಿಂದ ಬಂದವರಲ್ಲಿ 29 ಮಂದಿಗೆ ಕೋವಿಡ್‌ ದೃಢಪಟ್ಟ ಕಾರಣ ಅವರ ಮಾದರಿಗಳನ್ನು ಜೆನೆಟಿಕ್ ಸೀಕ್ವೆನ್ಸ್ ಪರೀಕ್ಷೆಗೆ ಪಡೆಯಲಾಗಿತ್ತು. ಅದರಲ್ಲಿ 15 ಮಾದರಿಗಳ ಪರೀಕ್ಷೆ ನಡೆದಿದ್ದು, 7 ಮಂದಿಯಲ್ಲಿ ರೂಪಾಂತರಗೊಂಡ ವೈರಾಣು ಇರುವುದು ದೃಢಪಟ್ಟಿದೆ. ಗುರುವಾರ ಮತ್ತೆ 12 ಮಾದರಿಗಳ ಫಲಿತಾಂಶ ದೊರೆಯುತ್ತದೆ’ ಎಂದು ನಿಮ್ಹಾನ್ಸ್‌ನ ವೈರಾಣು ತಜ್ಞ ಹಾಗೂ ಕೋವಿಡ್‌ ತಾಂತ್ರಿಕಸಲಹಾ ಸಮಿತಿಯ ಸದಸ್ಯ ಡಾ.ವಿ. ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT