ಮಂಗಳವಾರ, ಅಕ್ಟೋಬರ್ 27, 2020
27 °C

ಮಳೆಯಿಂದ ಬೇಳೆ–ಕಾಳುಗಳು ಹಾನಿಗೀಡು: ಅಕ್ಕಿ ಕೇಳುವವರಿಲ್ಲ; ಬೇಳೆ ಕೊಳ್ಳಲಾಗಲ್ಲ!

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಕ್ಕಿ, ತೊಗರಿ ಬೇಳೆ ಸೇರಿದಂತೆ ಎಲ್ಲ ಬೇಳೆಕಾಳುಗಳು ಮತ್ತು ದವಸ–ಧಾನ್ಯಗಳಿಗೆ ಬೇಡಿಕೆ ಕಡಿಮೆಯಾಗಿದ್ದರೂ, ಬೆಲೆಯಲ್ಲಿ ಮಾತ್ರ ಹೆಚ್ಚಿನ ಇಳಿಕೆ ಕಂಡುಬರುತ್ತಿಲ್ಲ. ಅಕ್ಕಿ ಬೆಲೆ ಕೆ.ಜಿ.ಗೆ ₹ 3ರಿಂದ ₹ 4ರಷ್ಟು ಕಡಿಮೆಯಾಗಿದ್ದರೆ, ಬೇಳೆ–ಕಾಳುಗಳ ಬೆಲೆ ₹ 15ರಿಂದ ₹ 20ರಷ್ಟು ಹೆಚ್ಚಾಗಿದೆ.

ಹೆಚ್ಚು ಬೇಡಿಕೆಯಿಲ್ಲದ ಈ ಸಂದರ್ಭದಲ್ಲಿ ಬೆಲೆ ಕಡಿಮೆ ಇರಬಹುದು ಎಂದು ಬೇಳೆ ಕೊಳ್ಳಲು ಮಾರುಕಟ್ಟೆಗೆ ಹೋದವರಿಗೆ ಅಚ್ಚರಿಯಾಗುತ್ತಿದೆ. ಲಾಕ್‌ಡೌನ್‌ಗಿಂತಲೂ ಮುಂಚೆ ಇದ್ದ ಬೆಲೆಗಿಂತಲೂ ಹೆಚ್ಚಿನ ದರದಲ್ಲಿ ಬೇಳೆ–ಕಾಳುಗಳನ್ನು ಮಾರಲಾಗುತ್ತಿದೆ.

‘ವ್ಯಾಪಾರ–ವಹಿವಾಟು ಶೇಕಡ 50ರಷ್ಟು ಕುಸಿದಿದೆ. ಸಭೆ–ಸಮಾರಂಭಗಳು, ಮದುವೆ, ಕೇಟರಿಂಗ್‌ ಸೌಲಭ್ಯ ಎಲ್ಲವೂ ಬಂದ್ ಆಗಿವೆ. ಸೂಪರ್‌ ಮಾರ್ಕೆಟ್‌ ಮತ್ತು ಸಣ್ಣ–ಪುಟ್ಟ ಹೋಟೆಲ್‌ಗಳು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಬೇಳೆ–ಕಾಳುಗಳನ್ನು ಖರೀದಿಸುತ್ತಿವೆ’ ಎಂದು ಬೇಳೆ–ಕಾಳುಗಳ ವರ್ತಕರ ಸಂಘದ ಮಾಜಿ ಅಧ್ಯಕ್ಷ ರಮೇಶಚಂದ್ರ ಲಹೋಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇಡಿಕೆ ಕುಸಿದಿರುವುದು ನಿಜ. ಆದರೆ, ದೇಶದಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಶೇಕಡ 50ರಷ್ಟು ಬೇಳೆ–ಕಾಳುಗಳು ಹಾಳಾಗುತ್ತಿವೆ. ಕಲಬುರ್ಗಿ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಬೇಳೆ–ಕಾಳುಗಳ ಪೂರೈಕೆ ಪ್ರಮಾಣವೂ ಕಡಿಮೆಯಾಗುತ್ತಿದೆ’ ಎಂದು ಅವರು ಹೇಳಿದರು. 

‘ಈಗ ಸಂಗ್ರಹ ಮಿತಿ ತೆಗೆದುಹಾಕಲಾಗಿದೆ. ಯಾರು, ಎಷ್ಟು ಬೇಕಾದರೂ ಸಂಗ್ರಹಿಸಿಟ್ಟುಕೊಳ್ಳಬಹುದು. ಮಾರುಕಟ್ಟೆಯಲ್ಲಿ ಎಷ್ಟು ಪ್ರಮಾಣದಲ್ಲಿ ಬೇಳೆ–ಕಾಳುಗಳ ಸಂಗ್ರಹವಿದೆ ಎಂಬುದು ನಿಖರವಾಗಿ ತಿಳಿಯುವುದಿಲ್ಲ. ಹೊಸ ಕಾಯ್ದೆಗಳ ಅನ್ವಯ, ಈಗಾಗಲೇ ಹಲವು ರೈತರು ನೇರವಾಗಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಾಯ್ದೆಯ ಅಂಶಗಳು ಶೇ 5ರಷ್ಟು ಅನುಷ್ಠಾನವಾಗುತ್ತಿವೆ’ ಎಂದು ಅವರು ತಿಳಿಸಿದರು.

‘ಜನರಲ್ಲಿ ಕೊಳ್ಳುವ ಶಕ್ತಿಯೂ ಕಡಿಮೆಯಾಗುತ್ತಿದೆ. ಹೆಚ್ಚು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳದೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಕೊಳ್ಳುತ್ತಿದ್ದಾರೆ. ಹಣದ ಹರಿವಿನ ಚಕ್ರವೇ ಏರುಪೇರಾಗಿದೆ. ಇದು ವ್ಯಾಪಾರದ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಸಭೆ ಸಮಾರಂಭಗಳು ನಡೆಯದಿರುವುದು, ಪಿ.ಜಿ., ಹಾಸ್ಟೆಲ್‌ಗಳು ಬಂದ್‌ ಆಗಿರುವುದು ಮತ್ತು ಸಾಫ್ಟ್‌ವೇರ್‌ ಕಂಪನಿಗಳ ಕ್ಯಾಂಟೀನ್‌ ಕೂಡ ಬಂದ್ ಆಗಿರುವುದರಿಂದ ಅಕ್ಕಿ ಮಾರಾಟ ಕಡಿಮೆ ಆಗಿದೆ. ಲಾಕ್‌ಡೌನ್‌ ನಂತರ ಕೆಜಿಗೆ ₹ 3ರಿಂದ ₹ 4ರಷ್ಟು ಬೆಲೆ ಕಡಿಮೆ ಆಗಿದೆ. ಶೇ 70ರಿಂದ ಶೇ 80ರಷ್ಟು ವ್ಯಾಪಾರ ಕಡಿಮೆ ಆಗಿದೆ’ ಎನ್ನುತ್ತಾರೆ ಬೆಂಗಳೂರು ಗ್ರೈನ್ ಮರ್ಚಂಟ್ಸ್‌  ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಎಂ. ರಮೇಶ್. ‘ಅಕ್ಕಿಯು ಕೆ.ಜಿ.ಗೆ ಕನಿಷ್ಠ ₹28ರಿಂದ ಗರಿಷ್ಠ ₹60ರವರೆಗೆ ಮಾರಾಟವಾಗುತ್ತಿದೆ’ ಎಂದು ವರ್ತಕ ಮಂಜಣ್ಣ ತಿಳಿಸಿದರು.

ಬೇಳೆ–ಕಾಳುಗಳ ದರ (ಕೆಜಿಗೆ ₹ಗಳಲ್ಲಿ ಅ.15ರಂತೆ)

ತೊಗರಿಬೇಳೆ;105–120

ಕಡಲೆಬೇಳೆ;68–78

ಕಡಲೆಕಾಳು;70–74

ಹೆಸರುಕಾಳು;90–110

ಹೆಸರುಬೇಳೆ;90–100

ಬಟಾಣಿ; 130–150

ಸೋನಾ ಮಸೂರಿ ಅಕ್ಕಿ;29–33

ಎರಡು ವರ್ಷ ಹಳೆಯ ಅಕ್ಕಿ; ₹58ರಿಂದ ₹60

ದಪ್ಪ ಅಕ್ಕಿ;24

ದೋಸೆ ಅಕ್ಕಿ;26

ನಿರ್ವಹಣೆ: ವಿಜಯ್‌ ಜೋಷಿ, ಮಾಹಿತಿ: ಗುರು ಪಿ.ಎಸ್ (ಬೆಂಗಳೂರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು