ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆಗೆ ಸೂಚನೆ: ಕಂದಾಯ ಸಚಿವ ಆರ್. ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ನಿಂದಾಗಿ ಕುಸಿತ ಕಂಡಿರುವ ಸ್ಥಿರಾಸ್ತಿ ಮಾರಾಟ ವಹಿವಾಟಿಗೆ ಉತ್ತೇಜನ ನೀಡಲು ಮುಂದಾಗಿರುವ ಕಂದಾಯ ಇಲಾಖೆ, ರಾಜ್ಯದಾದ್ಯಂತ ಹೆದ್ದಾರಿ ಬದಿಗಳನ್ನು ಹೊರತುಪಡಿಸಿದಂತೆ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಇಳಿಕೆ ಮಾಡಲು ಸಿದ್ಧತೆ ಆರಂಭಿಸಿದೆ.

ಕಂದಾಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ, ‘ರಾಜ್ಯದಲ್ಲಿ ಸ್ಥಿರಾಸ್ತಿ ನೋಂದಣಿ ಕುಸಿದಿದೆ. ಹೆಚ್ಚಿನವರು ನೇರವಾಗಿ ಕ್ರಯ ಪತ್ರಗಳನ್ನು ನೋಂದಣಿ ಮಾಡುತ್ತಿಲ್ಲ. ಜಿಪಿಎ ಪತ್ರಗಳನ್ನು ನೋಂದಣಿ ಮಾಡುತ್ತಿದ್ದಾರೆ. ಇದರಿಂದ ವರಮಾನ ಸಂಗ್ರಹ ಕುಸಿಯುತ್ತಿದೆ. ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿ ನೋಂದಣಿ ಹೆಚ್ಚಳಕ್ಕೆ ಉತ್ತೇಜನ ನೀಡಲು ಯೋಚಿಸಲಾಗಿದೆ’ ಎಂದರು.

ಯಾವ ಪ್ರದೇಶಗಳಲ್ಲಿ ಮಾರ್ಗಸೂಚಿ ದರ ಇಳಿಕೆ ಮಾಡಲು ಸಾಧ್ಯವಿದೆ ಎಂಬುದನ್ನು ಪರಿಶೀಲಿಸಿ, ಡಿಸೆಂಬರ್‌ ಅಂತ್ಯದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಈ ಸಂಬಂಧ ಮೌಲ್ಯಮಾಪನ ವರದಿಗಳನ್ನು ಸಿದ್ಧಪಡಿಸಲು ನೋಂದಣಿ ಇಲಾಖೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಸಮೀಪದಲ್ಲಿರುವ ಆಸ್ತಿಗಳ ಮಾರ್ಗಸೂಚಿ ದರ ಹೆಚ್ಚಳಕ್ಕೆ ಇರುವ ಸಾಧ್ಯತೆಗಳ ಬಗ್ಗೆಯೂ ವರದಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನೋಂದಣಿ ಮತ್ತು ಮುದ್ರಾಂಕ ಶುಲ್ಕವು ರಾಜ್ಯ ಸರ್ಕಾರದ ಪ್ರಮುಖ ಆದಾಯದ ಮೂಲಗಳಲ್ಲಿ ಒಂದಾಗಿದೆ.

‘ರಿಯಲ್‌ ಎಸ್ಟೇಟ್‌ ವಹಿವಾಟು ಉತ್ತೇಜಿಸುವುದಕ್ಕಾಗಿ ₹ 45 ಲಕ್ಷದವರೆಗಿನ ಮೌಲ್ಯದ ಫ್ಲ್ಯಾಟ್‌ಗಳ ನೋಂದಣಿ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ಆದರೂ, ವಹಿವಾಟಿನಲ್ಲಿ ಚೇತರಿಕೆ ಆಗಿಲ್ಲ. ಪ್ರಸಕ್ತ ವರ್ಷವೂ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಇಳಿಮುಖವಾಗಿದೆ’ ಎಂದು ಅಶೋಕ ತಿಳಿಸಿದರು.

ದರ ಪರಿಷ್ಕರಣೆ ಹೇಗೆ?
ಉಪ ನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ಸ್ಥಿರಾಸ್ತಿ ದರ ಪರಿಷ್ಕರಣೆಗೆ ಪೂರಕವಾಗಿ ಮೌಲ್ಯಮಾಪನ ವರದಿಗಳನ್ನು ಸಿದ್ಧಪಡಿಸಲಾಗುತ್ತದೆ. ಆ ಪ್ರದೇಶದಲ್ಲಿ ಲಭ್ಯವಿರುವ ಮೂಲಸೌಕರ್ಯ, ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳು ಹಾದು ಹೋಗಿರುವುದು ಸೇರಿದಂತೆ ವಿವಿಧ ಮಾನದಂಡಗಳ ಆಧಾರದಲ್ಲಿ ಸ್ಥಳೀಯ ಮೌಲ್ಯಮಾಪನ ಸಮಿತಿಗಳು ದರ ಪರಿಷ್ಕರಣೆಗ ಶಿಫಾರಸು ಮಾಡುತ್ತವೆ. ಹಿಂದಿನ ವರ್ಷದಲ್ಲಿ ಆಯಾ ಪ್ರದೇಶದಲ್ಲಿ ನಡೆದಿರುವ ಸ್ಥಿರಾಸ್ತಿ ಮಾರಾಟ ದರವನ್ನೂ ಪರಿಗಣಿಸಿ ನಿರ್ಧಾರಕ್ಕೆ ಬರಲಾಗುತ್ತದೆ.

ಸ್ಥಳೀಯ ಮೌಲ್ಯಮಾಪನ ಸಮಿತಿಗಳು ಸಿದ್ಧಪಡಿಸಿದ ವರದಿಗಳನ್ನು ಪ್ರಕಟಿಸಿ, ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಕೇಂದ್ರೀಯ ಮೌಲ್ಯಮಾಪನ ಸಮಿತಿಯ(ರಾಜ್ಯಮಟ್ಟ) ಪರಿಶೀಲನೆ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ಪರಿಷ್ಕೃತ ಮಾರ್ಗಸೂಚಿ ದರದ ಆಧಾರದಲ್ಲೇ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ನಿರ್ಧರಿಸಲಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು