ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಡ್ಸ್‌, ಕ್ಯಾನ್ಸರ್‌ಗೆ ಸ್ವಮೂತ್ರಪಾನವೇ ಮದ್ದು!

ಪದವಿ ತರಗತಿಯ ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕದಲ್ಲಿ ಉಲ್ಲೇಖ
Last Updated 17 ನವೆಂಬರ್ 2022, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಮೂತ್ರ ಚಿಕಿತ್ಸೆಯು ಪ್ರಕೃತಿ ಚಿಕಿತ್ಸೆಯ ಒಂದು ಭಾಗ. ಸ್ವಮೂತ್ರ ಪಾನ, ಮೂತ್ರ ಲೇಪನದಿಂದ ಏಡ್ಸ್‌, ಕ್ಯಾನ್ಸರ್, ಕಣ್ಣು, ಕಿವಿ,ಹಲ್ಲು, ಚರ್ಮ ರೋಗಗಳನ್ನು ನಿಯಂತ್ರಿಸಬಹುದು. . .’

–ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಅನ್ವಯ ಕೆಲ ಲೇಖಕರು ಮೈಸೂರು ವಿಶ್ವವಿದ್ಯಾಲಯದ ಪದವಿ (ಬಿ.ಎ) ತರಗತಿಗೆಂದು ಬರೆದ ‘ವೈದ್ಯಕೀಯ ಸಮಾಜಶಾಸ್ತ್ರ’ ಪುಸ್ತಕದ ಒಂದು ಅಧ್ಯಾಯದಲ್ಲಿರುವ ವಿವರ.

‘ಪ್ರಕೃತಿಯು ರೋಗನಿರೋಧಕ ಶಕ್ತಿಯನ್ನು ಮನುಷ್ಯನಿಗೆ ಆತನ ದೇಹದಲ್ಲೇ ನೀಡಿದೆ. ಆ ಶಕ್ತಿಯೇ ಮೂತ್ರ. ಸಹಸ್ರಾರು ವರ್ಷಗಳಿಂದ ಯೋಗಿಗಳು ಮೂತ್ರ ಸೇವಿಸುತ್ತಿದ್ದರು’ ಎಂಬ ವಿವರಗಳಿವೆ.

‘ಚಿಕಿತ್ಸೆಯ ಪರಿಣಾಮ ಹಾಗೂ ಮಹತ್ವ ವಿವರಿಸಲು ಲೇಖನದಲ್ಲಿ ಹಲವು ಸಾಧಕರ ಹೆಸರು ಬಳಸಿಕೊಳ್ಳಲಾಗಿದೆ.ಭಾರತದ ದಿವಂಗತ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಈ ಪದ್ಧತಿಯನ್ನು ಅನುಸರಿಸುತ್ತಿದ್ದರು. ಸಂಸ್ಕೃತ ಸಾಹಿತ್ಯ ನಿಧಿಯಲ್ಲಿ ‘ಶಿವಾಂಬು ಸಂಹಿತೆ’ಯಲ್ಲಿ ಈ ಬಗ್ಗೆ ಮಾಹಿತಿ ದೊರೆಯುತ್ತದೆ’ ಎಂದು ಮಾಹಿತಿ ನೀಡಲಾಗಿದೆ.

ಮೈಸೂರು ವಿಶ್ವವಿದ್ಯಾಲಯದ ಪದವಿ ಪಠ್ಯಕ್ರಮಕ್ಕೆ ಅನುಗುಣವಾಗಿ ರೂಪಿಸಿದ ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕ
ಮೈಸೂರು ವಿಶ್ವವಿದ್ಯಾಲಯದ ಪದವಿ ಪಠ್ಯಕ್ರಮಕ್ಕೆ ಅನುಗುಣವಾಗಿ ರೂಪಿಸಿದ ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕ

‘ನಿಮ್ಮ ಆರೋಗ್ಯ ರಕ್ಷಣೆಗಾಗಿ ನಿಮ್ಮ ದೇಹವನ್ನೇ ಅವಲಂಬಿಸಿ ಎಂಬ ಉಲ್ಲೇಖ ಬೈಬಲ್‌ನಲ್ಲೂ ಇದೆ. ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ನೀಲ್‌ ಆರ್ಮ್‌ಸ್ಟ್ರಾಂಗ್‌ ಬರೆದಿರುವ ‘ವಾಟರ್‌ ಆಫ್‌ ಲೈಫ್‌’ ಪುಸ್ತಕದಲ್ಲೂ ಸ್ವಮೂತ್ರ ಪಾನದ ವಿವರಣೆ ಇದೆ’ ಎಂಬ ಮಾಹಿತಿ ಇದೆ.

ಗೋಮೂತ್ರ ಚಿಕಿತ್ಸೆಗೂ ಒತ್ತು: ‘ಪವಿತ್ರ ವೈದ್ಯ ಪದ್ಧತಿ ಅಧ್ಯಾಯದ ಪ್ರಕೃತಿ ಚಿಕಿತ್ಸೆ ಪಾಠದಲ್ಲಿ ಗೋಮೂತ್ರ ಚಿಕಿತ್ಸೆಯ ವಿಧಾನಗಳನ್ನೂ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಹಿಂದೂಗಳಲ್ಲಿ ಗೋಮೂತ್ರ ಸೇವನೆ ಪವಿತ್ರವಾದುದು. ಇದು ಕ್ಯಾನ್ಸರ್‌, ಮೈಗ್ರೇನ್‌, ಆಸ್ತಮಾ, ಅರ್ಥ್ರೈಟಿಸ್‌, ಮಧುಮೇಹ ಮೊದಲಾದ ರೋಗಗಳನ್ನು ನಿವಾರಣೆ ಮಾಡುತ್ತದೆ. ಗೋಮೂತ್ರದಿಂದ ಕಣ್ಣು ಗಳನ್ನು ತೊಳೆದುಕೊಂಡಾಗ ಸುತ್ತಲೂ ಇರುವ ಕಪ್ಪುಕಲೆಗಳು ಇಲ್ಲವಾಗುತ್ತವೆ. ಕಣ್ಣಿನ ಜ್ಯೋತಿಯ ಹೊಳಪು ಹೆಚ್ಚಾಗುತ್ತದೆ’ ಎಂಬ ವಿವರಗಳಿವೆ.

ಗೋವು, ಎಮ್ಮೆ, ಮೇಕೆ, ಒಂಟೆಗಳ ಮೂತ್ರವನ್ನು ಬಿಸಿಮಾಡಿ ಕಿವಿಗಳಿಗೆ ಹಾಕಿದರೆ ಕಿವಿರೋಗದ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂಬ ವಿವರಗಳು ‘ಭೈಸಜ್ಯ ರತ್ನಾವಳಿ’ ಎಂಬ ಗ್ರಂಥದಲ್ಲಿವೆ ಎಂದು ಉದಾಹರಣೆ ನೀಡಲಾಗಿದೆ.

ಅಲ್ಲದೇ,ಪವಿತ್ರ ವೈದ್ಯ ಪದ್ಧತಿ ಅಧ್ಯಾಯದಲ್ಲಿ ಶಂಖ ಚಿಕಿತ್ಸೆ, ತೈಲ ಚಿಕಿತ್ಸೆ, ಚುಟ್ಕಿ ಚಿಕಿತ್ಸೆ, ಸಿದ್ಧ ವೈದ್ಯ ಪದ್ಧತಿ, ಜ್ಯೂಸ್‌ ಥೆರಪಿಗಳ ಚಿಕಿತ್ಸಾ ವಿಧಾನ, ಅಂತಹ ಚಿಕಿತ್ಸೆಗಳಿಂದ ವಾಸಿಯಾಗುವ ರೋಗಗಳ ಪಟ್ಟಿಯನ್ನೂ ನೀಡಲಾಗಿದೆ. ಎಲ್ಲ ರೋಗಗಳಿಗೂ ಪವಿತ್ರ ವೈದ್ಯ ಪದ್ಧತಿಯಲ್ಲಿ ಸೂಕ್ತ ಪರಿಹಾರಗಳಿವೆ ಎಂದು ವಿವರಿಸಲಾಗಿದೆ.

‘ಹಲವು ಲೇಖಕರು ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕವನ್ನು ಮಾರುಕಟ್ಟೆಗೆ ತಂದಿದ್ದಾರೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಭೈರಪ್ಪ ಅವರ ಪುಸ್ತಕ ಅಧ್ಯಯನ ಮಾಡುತ್ತಿದ್ದಾರೆ. ಅದರಲ್ಲಿ ಸ್ವಮೂತ್ರ ಪಾನದ ಬಗ್ಗೆ ವಿವರಗಳಿವೆ. ಆದರೆ, ನಾವು ಪಾರಂಪರಿಕ ವೈದ್ಯ ಪದ್ಧತಿಯ ಯೋಗ, ಯುನಾನಿ ಇತರೆ ವಿಧಾನಗಳನ್ನಷ್ಟೇ ಪಾಠ ಮಾಡುತ್ತಿದ್ದೇವೆ’ ಎನ್ನುತ್ತಾರೆ ಪ್ರಾಧ್ಯಾಪಕರು.

**

ಹೊಸ ಎನ್‌ಇಪಿ ಪಠ್ಯಕ್ರಮದಂತೆ ಆರೋಗ್ಯ ಸಮಾಜಶಾಸ್ತ್ರ ಪರಿಚಯಿಸಲಾಗಿದೆ. ಆದರೆ, ಪೂರ್ಣ ಪಠ್ಯಕ್ರಮ ಅಂತಿಮವಾಗಿಲ್ಲ. ಪುಸ್ತಕ ಗಮನಿಸಿದೆ. ಲೇಖಕರು ಏಕೆ ಹಾಗೆ ಬರೆದಿದ್ದಾರೆ ಎನ್ನುವ ಮಾಹಿತಿ ಇಲ್ಲ.
–ಪ್ರೊ. ಎ.ರಾಮೇಗೌಡ, ಅಧ್ಯಕ್ಷ, ರಾಜ್ಯ ಸಮಾಜಶಾಸ್ತ್ರ ಪಠ್ಯಕ್ರಮ ರಚನಾ ಮಂಡಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT