ಶನಿವಾರ, ಜೂನ್ 19, 2021
29 °C
ಲಸಿಕೆಯ ಎರಡನೇ ಡೋಸ್‌ ಪಡೆಯಲು ಹರಸಾಹಸ ಪಡುತ್ತಿದ್ದಾರೆ 45 ವರ್ಷ ಮೇಲ್ಪಟ್ಟ ನಾಗರಿಕರು

ಊರೂರು ಅಲೆದರೂ ಸಿಗುತ್ತಿಲ್ಲ ಕೋವ್ಯಾಕ್ಸಿನ್‌!

ಪ್ರವೀಣ್ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವ್ಯಾಕ್ಸಿನ್‌ ಲಸಿಕೆ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಆಗದಿರುವುದು ಸಮಸ್ಯೆ ಸೃಷ್ಟಿಸಿದೆ. ಈಗಾಗಲೇ ಕೋವ್ಯಾಕ್ಸಿನ್‌ ಲಸಿಕೆ ಪಡೆದವರು ಎರಡನೇ ಡೋಸ್‌ ಪಡೆಯಲು ಹರಸಾಹಸಪಡುತ್ತಿದ್ದಾರೆ. ಎಲ್ಲಿ ಲಸಿಕೆ ಸಿಗುತ್ತದೆ ಎಂಬುದನ್ನು ಹುಡುಕುತ್ತಾ ಊರೂರು ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

‘ನಾನು ವಿಜಯನಗರದ ಮಾರುತಿ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಪಡೆದಿದ್ದೆ. ಈದರ ಎರಡನೇ ಡೋಸ್‌ ಅನ್ನು 28ರಿಂದ 45 ದಿನಗಳ ಒಳಗೆ ಪಡೆಯಬೇಕಿದೆ. ಆರೆ ಎಲ್ಲೂ ಈ ಲಸಿಕೆ ಸಿಗುತ್ತಿಲ್ಲ. ಈಗಾಗಲೇ 38 ದಿನಗಳು ಕಳೆದಿವೆ’ ಎಂದು ವಿಜಯನಿಗರ ನಿವಾಸಿ ಶಿವಯೋಗಿ ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

‘ಮಣಿಪಾಲ ಆಸ್ಪತ್ರೆ, ಅಪೋಲೊ ಆಸ್ಪತ್ರೆಗಳು ಲಸಿಕೆ ನೀಡಲಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ, ಅಲ್ಲಿ ಕೋವ್ಯಾಕ್ಸಿನ್‌ ಎರಡನೇ ಡೋಸ್‌ ಪಡೆಯಬೇಕಿದ್ದರೆ ಕೋವಿನ್‌ ಪೋರ್ಟಲ್‌ ನೋಂದಾಯಿಸಬೇಕು ಎಂದರು. ಈಗ 45 ವರ್ಷ ಮೇಲಿನವರಿಗೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೇರವಾಗಿ ಎರಡನೇ ಲಸಿಕೆ ಪಡೆಯಬಹುದು. ಆದರೆ, ನಾಲ್ಕೈದು ಪಿಎಚ್‌ಸಿಗಳಿಗೆ ಹೋದರೂ ಕೋವ್ಯಾಕ್ಸಿನ್‌ ಲಸಿಕೆ ಸಿಗಲಿಲ್ಲ’ ಎಂದರು.

‘ಆನೇಕಲ್‌ನ ಆಸ್ಪತ್ರೆಯೊಂದರಲ್ಲಿ ಲಸಿಕೆ ಲಭ್ಯವಿದೆ ಎಂಬ ಮಾಹಿತಿ ಸಿಕ್ಕಿತು. ಅಲ್ಲಿ ನೋಂದಣಿ ಮಾಡಿಸಿಕೊಂಡೆ. ಮೊನ್ನೆ 44 ಕಿ.ಮೀ ದೂರ ಪ್ರಯಾಣಿಸಿ ಅಲ್ಲಿ ತಲುಪಿದೆ. ಅಷ್ಟರಲ್ಲಿ ಅಲ್ಲಿ ದಾಸ್ತಾನು ಮುಗಿದಿತ್ತು. ಬಂದ ದಾರಿಗೆ ಸುಂಕವಿಲ್ಲ ಎಂದು ಬರಿಗೈಯಲ್ಲಿ ಮರಳಬೇಕಾಯಿತು’ ಎಂದು ತಮ್ಮ ಅನುಭವ ಹೇಳಿಕೊಂಡರು. 

‘ಕೋವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್‌ ಅನ್ನು 45 ದಿನಗಳ ಒಳಗೆ ಪಡೆಯದಿದ್ದರೆ ಮೊದಲ ಡೋಸ್‌ ಪಡೆದೂ ಪ್ರಯೋಜನವಾಗುವುದಿಲ್ಲ ಎನ್ನುತ್ತಾರೆ. ಇನ್ನು ವಾರದೊಳಗೆ ಲಸಿಕೆ ಪಡೆಯಬೇಕು. ಏನು ಮಾಡಬೇಕೆಂದೇ ತೋಚುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಪಿಎಚ್‌ಸಿಗಳಲ್ಲಿ ಸರದಿ ಸಾಲು

ಕೋವಿಡ್‌ ಲಸಿಕೆ ಪಡೆಯಲು ಪಿಎಚ್‌ಸಿಗಳ ಬಳಿ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಬೇಡಿಕೆ ಇರುವಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗುತ್ತಿಲ್ಲ. ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುತ್ತಿರುವ ಲಸಿಕಾ ಕೇಂದ್ರಗಳ ಸಿಬ್ಬಂದಿ ದಾಸ್ತಾನು ಮುಗಿದ ಬಳಿಕ ಉಳಿದವರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಕೆಲವು ಲಸಿಕಾ ಕೇಂದ್ರಗಳಲ್ಲಿ ಸಿಬ್ಬಂದಿ ದಾಸ್ತಾನು ನೋಡಿಕೊಂಡು ಅಷ್ಟು ಮಂದಿಗೆ ಮಾತ್ರ ಟೋಕನ್‌ ನೀಡಿ ಉಳಿದವರನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ.

‘ಬಿಬಿಎಂಪಿಯ ಯಾವುದೇ ಪಿಎಚ್‌ಸಿಗಳಲ್ಲೂ ಕೋವ್ಯಾಕ್ಸಿನ್‌ ಲಸಿಕೆ ನೀಡುತ್ತಿಲ್ಲ. ಸದ್ಯಕ್ಕೆ 45 ವರ್ಷ ಮೀರಿದವರಿಗೆ ಮಾತ್ರ ಕೋವಿಶೀಲ್ಡ್‌ ಲಸಿಕೆ ನೀಡುತ್ತಿದ್ದೇವೆ. ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಲಸಿಕೆಗೆ ಬೇಡಿಕೆ ತೀವ್ರ ಹೆಚ್ಚಳ ಕಂಡಿದೆ. ಈ ಬೇಡಿಕೆಯನ್ನು ಪೂರೈಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಸಾಕಷ್ಟು ಲಸಿಕೆ ಪೂರೈಕೆಯೂ ಆಗುತ್ತಿಲ್ಲ. ಹಾಗಾಗಿ ಲಸಿಕೆ ಹಾಕಿಸಿಕೊಳ್ಳಲು ಬರುವವವರನ್ನು ವಾಪಸ್‌ ಕಳುಹಿಸಬೇಕಾದ ಸ್ಥಿತಿ ಇದೆ’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರವೊಂದರ ವೈದ್ಯಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಿಎಂಎಸ್‌ಎಸ್‌ವೈ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್‌ ಲಭ್ಯ’

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನಾ (ಪಿಎಂಎ‌ಸ್‌ಎಸ್‌ವೈ) ಆಸ್ಪತ್ರೆಯಲ್ಲಿ 45 ವರ್ಷ ಮೀರಿದವರಿಗೆ ಕೋವ್ಯಾಕ್ಸಿನ್‌ ಲಸಿಕೆ ಲಭ್ಯ ಇದೆ.

‘ನಮ್ಮಲ್ಲಿ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಗಳೆರಡೂ ಲಭ್ಯ ಇವೆ. ಮೊದಲ ಡೋಸ್‌ ಪಡೆಯಲು ಬರುವ 45 ವರ್ಷ ಮೀರಿದವರಿಗೆ ಕೋವಿಶೀಲ್ಡ್‌ ಮಾತ್ರ ನೀಡುತ್ತಿದ್ದೇವೆ. ಕೋವ್ಯಾಕ್ಸಿನ್‌ನ ದಾಸ್ತಾನು ತೀರಾ ಕಡಿಮೆ ಇರುವುದರಿಂದ ಅದನ್ನು ಎರಡನೇ ಡೋಸ್‌ ಪಡೆಯುವ 45 ವರ್ಷ ಮೀರಿದವರಿಗೆ ಮಾತ್ರ ನೀಡುತ್ತಿದ್ದೇವೆ. ನಿತ್ಯ 700ರಿಂದ 800 ಮಂದಿ ನಮ್ಮಲ್ಲಿ ಲಸಿಕೆ ಪಡೆಯುತ್ತಿದ್ದಾರೆ’ ಎಂದು ಪಿಎಂಎಸ್‌ಎಸ್‌ವೈ ಆಸ್ಪತ್ರೆಯ ಲಸಿಕೆ ವಿಭಾಗದ ಮುಖ್ಯಸ್ಥ ಡಾ.ರಂಗನಾಥ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

'ದಾಸ್ತಾನು ಇಲ್ಲದೇ ಲಸಿಕೆ ನೀಡಲಾರಂಭಿಸಿದ್ದು ಏಕೆ’

‘ಸಾಕಷ್ಟು ಲಸಿಕೆಯನ್ನು ದಾಸ್ತಾನು ಮಾಡಿಕೊಳ್ಳದೇ ಸರ್ಕಾರ ಲಸಿಕಾ ಅಭಿಯಾನದವನ್ನು ಆರಂಭಿಸಿದ್ದು ಸರಿಯಲ್ಲ. ಮೊದಲ ಡೋಸ್‌ ಪಡೆದ 45 ವರ್ಷ ಮೇಲಿನವರಿಗೆ ಎರಡನೇ ಡೋಸ್‌ ನೀಡುವಷ್ಟು ಲಸಿಕೆಯೂ ಸರ್ಕಾರದ ಬಳಿ ಇಲ್ಲ. ಈ ನಡುವೆ 18 ವರ್ಷ ಮೇಲಿನವರಿಗೂ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದ್ದು ಸರಿಯಲ್ಲ. ಈಗ ನಾವು ದುಡ್ಡು ಕೊಟ್ಟು ಲಸಿಕೆ ಪಡೆಯುತ್ತೇವೆ ಎಂದರೂ ಎಲ್ಲೂ ಲಸಿಕೆ ಸಿಗುತ್ತಿಲ್ಲ’ ಎಂದು ಶಿವಯೋಗಿ ಅಭಿಪ್ರಾಯಪಟ್ಟರು.

ಕೋವ್ಯಾಕ್ಸಿನ್‌ ಲಸಿಕೆ ನಗರದ ಬೇಡಿಕೆಯನ್ನು ಪೂರೈಸುವಷ್ಟು ಪ್ರಮಾಣದಲ್ಲಿ ಪೂರೈಕೆ ಆಗಿಲ್ಲ. ಸರ್ಕಾರದಿಂದ ಲಸಿಕೆ ಪೂರೈಕೆ ಆದ ತಕ್ಷಣವೇ ಬಿಬಿಎಂಪಿಯ ಎಲ್ಲ ವಾರ್ಡ್‌ಗಳಿಗೆ ಸಮಾನವಾಗಿ ಹಂಚಿಕೆ ಮಾಡಲಿದ್ದೇವೆ.
– ಗೌರವ್ ಗುಪ್ತ, ಮುಖ್ಯ ಆಯುಕ್ತ, ಬಿಬಿಎಂಪಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು