ಶುಕ್ರವಾರ, ಏಪ್ರಿಲ್ 23, 2021
31 °C
ಮುಸಲ್ಮಾನರಿಗೆ ಪಿಎಫ್‌ಐ ಪ್ರಧಾನ ಕಾರ್ಯದರ್ಶಿ ಅನಿಸ್‌ ಅಹಮ್ಮದ್‌ ಸಲಹೆ, ವಿಡಿಯೊ ವೈರಲ್

‘ರಾಮಮಂದಿರಕ್ಕೆ ಒಂದೂ ಪೈಸೆ ಕೊಡಬೇಡಿ; ಅದು ರಾಮಮಂದಿರವಲ್ಲ, ಆರ್‌ಎಸ್‍ಎಸ್ ಮಂದಿರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ರಾಮಮಂದಿರ ನಿರ್ಮಾಣಕ್ಕೆ ಒಂದೂ ಪೈಸೆ ಕೊಡಬೇಡಿ. ಅದು ರಾಮಮಂದಿರ ಅಲ್ಲ, ಆರ್‌ಎಸ್‍ಎಸ್ ಮಂದಿರ’ ಎಂದು ಪಿಎಫ್‍ಐ ಪ್ರಧಾನ ಕಾರ್ಯದರ್ಶಿ ಅನಿಸ್ ಅಹಮ್ಮದ್ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಉಳ್ಳಾಲದಲ್ಲಿ ಎರಡು ದಿನಗಳ ಹಿಂದೆ ನಡೆದ ’ಯುನಿಟಿ ಮಾರ್ಚ್‌’ನಲ್ಲಿ ಅನಿಸ್‌ ಅಹಮ್ಮದ್‌ ಮಾಡಿರುವ ಭಾಷಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ‘ರಾಮಮಂದಿರ ದೇಣಿಗೆ ಸಂಗ್ರಹಿಸಲು ನಿಮ್ಮ ಮನೆ ಬಾಗಿಲಿಗೆ ಬಂದರೆ ಹಣ ಕೊಡಬೇಡಿ’ ಎಂದು ಮುಸ್ಲಿಮರಿಗೆ ಹೇಳಿದ್ದಾರೆ.

‘ದೇಶದಲ್ಲಿ ಶಾಂತಿ ಸ್ಥಾಪನೆಗೆ ಬಾಬ್ರಿ ಮಸೀದಿ ಜಾಗ ಬಿಟ್ಟು ಕೊಡಿ ಎಂದಿದ್ದರು. ಈಗ ಜಾಗ ಬಿಟ್ಟು ಕೊಟ್ಟಾಯ್ತು. ಆದರೆ ದೇಶದಲ್ಲಿ ಶಾಂತಿ ಸ್ಥಾಪನೆ ಆಯ್ತಾ? ಇನ್ನೂ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಹಿಂದೂ ವಿರೋಧಿ ಸಂಘಟನೆ ನಮ್ಮದಲ್ಲ, ಆರ್‍ಎಸ್‍ಎಸ್ ಹಿಂದೂ ವಿರೋಧಿ ಸಂಘಟನೆ’ ಎಂದು ಹೇಳಿದ್ದಾರೆ. ‘ಆರ್‍ಎಸ್‍ಎಸ್ ಕ್ಯಾನ್ಸರ್ ಇದ್ದ ಹಾಗೆ. ಅದು ವಾಸಿ ಆಗಲ್ಲ. ದೇಶದಲ್ಲಿ ಹಿಂದೂ ವರ್ಸಸ್ ಮುಸ್ಲಿಂ ಅಲ್ಲ, ಮುಸ್ಲಿಂ ವರ್ಸಸ್ ಆರ್‍ಎಸ್‍ಎಸ್ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಪಿಎಫ್‍ಐನ ಶತ್ರುತ್ವ ಏನೇ ಇದ್ದರೂ ಆರ್‍ಎಸ್‍ಎಸ್ ಜೊತೆ ಮಾತ್ರ’ ಎಂದಿದ್ದಾರೆ.

ಅನುಮತಿ ಪಡೆಯದೇ ‘ಯುನಿಟಿ ಮಾರ್ಚ್‌‘ ನಡೆಸಿರುವುದು, ಅನ್ಯ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವ ರೀತಿ ಘೋಷಣೆ ಕೂಗಿರುವುದು ಹಾಗೂ ಪೊಲೀಸರ ಆದೇಶವನ್ನು ಉಲ್ಲಂಘಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಇದನ್ನೂ ಓದಿ: ‘ದೇಶದ್ರೋಹದ ವಿಚಾರದಲ್ಲಿ ಸಿದ್ದು, ಪಿಎಫ್ಐ ಒಂದೇ’

‘ಪಿಎಫ್‌ಐ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ’
ಬೆಂಗಳೂರು: ಮಂಗಳೂರಿನ ಉಳ್ಳಾಲದಲ್ಲಿ ನಡೆದ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಸ್ಥಾಪನಾ ದಿನಾಚರಣೆಯಲ್ಲಿ ದೇಶದ ಏಕತೆ, ಸಾರ್ವಭೌಮತೆ ಮತ್ತು ಸಂವಿಧಾನದ ವಿರುದ್ಧ ಭಾಷಣ ಮಾಡಲಾಗಿದೆ. ಸಂಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪಿಎಫ್‌ಐ ಸಂಘಟನೆ ತನ್ನ ನೈಜ ಬಣ್ಣವನ್ನು ಮತ್ತೊಮ್ಮೆ ತೋರಿಸಿದೆ. ಸಂಘಟನೆಯ ನಾಯಕರು ದೇಶದ್ರೋಹಿ ಹೇಳಿಕೆ ನೀಡಿದ್ದು, ಸೌಹಾರ್ದ ಕೆಡಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ದೇಶದ ಜನರನ್ನು ವಿಭಜಿಸುವುದಕ್ಕೆ ಕಾರಣವಾಗುವ ದ್ವೇಷದ ಹೇಳಿಕೆ ನೀಡಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಆರ್‌ಎಸ್‌ಎಸ್‌ ಮತ್ತು ರಾಮ ಮಂದಿರ ನಿರ್ಮಾಣದ ವಿರುದ್ಧ ಪಿಎಫ್‌ಐ ಸಮಾವೇಶದಲ್ಲಿ ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ ದೇಶಪ್ರೇಮಿ ಸಂಘಟನೆ. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ನೈತಿಕತೆ ಪಿಎಫ್‌ಐ ಸಂಘಟನೆಗೆ ಇಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್‌ ಸಮ್ಮತಿ ನೀಡಿದೆ. ಪಿಎಫ್‌ಐ ದೇಶಕ್ಕೆ ಮಾರಕವಾದ ಸಂಘಟನೆ. ಹಣಕ್ಕಾಗಿ ದೇಶದ ವಿರುದ್ಧ ಇರುವ ವಿಚ್ಛಿದ್ರಕಾರಿ ಶಕ್ತಿಗಳ ಜತೆ ಸೇರಿರುವ ಸಂಘಟನೆ ಅದಾಗಿದೆ’ ಎಂದು ತಿಳಿಸಿದರು.

ಈಗಾಗಲೇ ಪಿಎಫ್‌ಐ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಘಟನೆಗೆ ಕಾರಣವಾದ ಎಲ್ಲರಿಗೂ ಶಿಕ್ಷೆಯಾಗುವಂತೆ ಕ್ರಮ ಜರುಗಿಸಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು