ಶನಿವಾರ, ಜೂನ್ 25, 2022
25 °C

90ನೇ ವಸಂತಕ್ಕೆ ಕಾಲಿಟ್ಟ ಎಚ್‌.ಡಿ.ದೇವೇಗೌಡ: ಮೋದಿ ಸೇರಿ ಗಣ್ಯರಿಂದ ಶುಭಾಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬುಧವಾರ 90ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌, ಲೋಕಸಭಾ ಸಭಾಪತಿ ಓಂ ಬಿರ್ಲಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ. 

‘ನಮ್ಮ ಮಾಜಿ ಪ್ರಧಾನಿ ಮತ್ತು ಗೌರವಾನ್ವಿತ ರಾಜಕಾರಣಿ ಎಚ್‌.ಡಿ.ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ದೀರ್ಘ ಆಯುಷ್ಯ, ಆರೋಗ್ಯಕರ ಜೀವನವನ್ನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. 

‘ಸದಾ ನನ್ನ ಕೈಹಿಡಿದು ಮುನ್ನಡೆಸಿದ ಅವರು ನನ್ನ ಪಾಲಿಗೆ ತಂದೆಯಷ್ಟೇ ಅಲ್ಲ; ಗುರು, ದೈವ, ಶಕ್ತಿಯೂ ಹೌದು. ನನಗಷ್ಟೇ ಅಲ್ಲ, ಈ ನಾಡಿಗೆ, ದೇಶಕ್ಕೆ ಇನ್ನಷ್ಟು ದೀರ್ಘಕಾಲ ಅವರ ಸೇವೆ-ಮಾರ್ಗದರ್ಶನ ಅಗತ್ಯವಿದೆ. ಆ ಭಗವಂತ ಅವರಿಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಅಲ್ಪಕಾಲವಷ್ಟೇ ಅಧಿಕಾರದಲ್ಲಿದ್ದರೂ ಕರ್ನಾಟಕ ಮತ್ತು ಭಾರತಕ್ಕೆ ಆವಿಸ್ಮರಣೀಯ ಕೊಡುಗೆ ನೀಡಿದವರು ಇವರು. ಕಾಯಾ ವಾಚಾ, ಮನಸಾ ಜನರ ಉದ್ಧಾರಕ್ಕಾಗಿ ಶ್ರಮಿಸಿದ ಅವರು ಭಾರತದ ರಾಜಕೀಯ ಕರ್ಮಯೋಗಿ. ತೊಂಬತ್ತರ ಹರೆಯದಲ್ಲೂ ಜನರಪರ ಹೋರಾಟ ನಡೆಸುತ್ತಿರುವ ಧಣಿವರಿಯದ ಕಾಯಕಯೋಗಿ.

ಭಾರತದ ಮಾಜಿ ಪ್ರಧಾನಮಂತ್ರಿಗಳು, ಮಣ್ಣಿನಮಗ, ನನ್ನ ಪೂಜ್ಯ ತಂದೆಯವರಾದ ಎಚ್.ಡಿ.ದೇವೇಗೌಡರಿಗೆ ಜನ್ಮದಿನದ ಶುಭಾಶಯಗಳು ಹಾಗೂ ನನ್ನ ಗೌರವಪೂರ್ವಕ ಪ್ರಣಾಮಗಳು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

‘ಹಿರಿಯರು, ಮಾಜಿ ಪ್ರಧಾನಮಂತ್ರಿಗಳು, ಎಚ್.ಡಿ.ದೇವೇಗೌಡ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಭಗವಂತನ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

‘ಹಿರಿಯರು, ಮಾಜಿ ಪ್ರಧಾನಮಂತ್ರಿಗಳು, ಆತ್ಮೀಯರಾದ ಎಚ್.ಡಿ.ದೇವೇಗೌಡರಿಗೆ ಜನ್ಮದಿನದ ಹೃತ್ಪೂರ್ವಕ ಶುಭಕಾಮನೆಗಳು. ಭಗವಂತನ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. 

‘ಪ್ರಧಾನ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ರಾಜ್ಯ ಮತ್ತು ದೇಶದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಎಚ್.ಡಿ.ದೇವೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ಅವರಿಗೆ ಆಯುರಾರೋಗ್ಯ ನೀಡಿ ಈ ನಾಡಿಗೆ ಸನ್ಮಾನ್ಯರ ಸೇವೆ ಇನ್ನಷ್ಟು ದೊರೆಯುವಂತೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ. 

‘ದೇಶ ಕಂಡ ಧೀಮಂತ ನಾಯಕ, ದಣಿವರಿಯದ ಹಿರಿಯ ರಾಜಕೀಯ ಮುತ್ಸದ್ಧಿ, ಮಾಜಿ ಪ್ರಧಾನಮಂತ್ರಿ, ನನ್ನ ಪ್ರೀತಿಯ ತಾತ ಎಚ್.ಡಿ.ದೇವೇಗೌಡ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ, ನಟ ನಿಖಿಲ್ ಕುಮಾರಸ್ವಾಮಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು