ಸೋಮವಾರ, ಮಾರ್ಚ್ 20, 2023
30 °C
ಪೊಲೀಸರಿಂದ ಹಲ್ಲೆ

ರಾಯ್ ಡಿಸೋಜಾ ಸಾವು ಪ್ರಕರಣ: ಮಾನವ ಹಕ್ಕು ಆಯೋಗದಿಂದ ತನಿಖೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ (ಕೊಡಗು): ಪೊಲೀಸರ ಅಮಾನುಷ ಹಲ್ಲೆಯಿಂದ ಮೃತಪಟ್ಟಿದ್ದಾರೆಂದು ಆರೋಪಿಸಲಾಗಿರುವ ರಾಯ್ ಡಿಸೋಜಾ ಅವರ ಸಾವಿನ ಪ್ರಕರಣದ ತನಿಖೆ ಶುರುವಾಗಿದ್ದು ರಾಜ್ಯ ಮಾನವ ಹಕ್ಕುಗಳ ಆಯೋಗದ ಡಿವೈಎಸ್‌ಪಿ ಕೇಶವ ನೇತೃತ್ವ ವಹಿಸಿದ್ದಾರೆ.

ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿರುವ ಆಯೋಗದ ಸೂಚನೆ ಮೇರೆಗೆ ಅಧಿಕಾರಿಯು, ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಯ್ ಡಿಸೋಜಾ ಅವರ ತಾಯಿ ಮೆಟಿಲ್ಡಾ ಲೋಬೊ, ಸಹೋದರ ರಾಬಿನ್ ಡಿಸೋಜಾ ಹಾಗೂ ಸಾಕ್ಷಿಗಳಿಂದ ಮಾಹಿತಿ ಸಂಗ್ರಹಿಸಿದರು.

ಇದೇ ಸಂದರ್ಭದಲ್ಲಿ ಪ್ರವಾಸಿ ಮಂದಿರದ ಮತ್ತೊಂದು ಬದಿಯಲ್ಲಿ ಡಿವೈಎಸ್‌ಪಿ ಗೋಪಾಲಕೃಷ್ಣ ನೇತೃತ್ವದ ಸಿಐಡಿ ತಂಡವು ಘಟನೆ ವೇಳೆ ರಾಯ್ ಡಿಸೋಜಾ ಧರಿಸಿದ್ದ ಬಟ್ಟೆಗಳ ಮಹಜರು ನಡೆಸಿತು. ಜತೆಗೆ, ಮೆಟಿಲ್ಡಾ ಲೋಬೊ, ರಾಬಿನ್ ಡಿಸೋಜಾ ಹಾಗೂ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿತು. ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.

ಜೂನ್‌ 9ರ ಮಧ್ಯರಾತ್ರಿ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪಟ್ಟಣದ ಸಮುಚ್ಚಯ ಪೊಲೀಸ್ ಠಾಣೆಯ ಬಳಿ ಪತ್ತೆಯಾಗಿದ್ದ ರಾಯ್ ಡಿಸೋಜಾ ಅವರು, ಬಳಿಕ ಮಡಿಕೇರಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಪೊಲೀಸರ ಹಲ್ಲೆಯಿಂದಲೇ ರಾಯ್ ಡಿಸೋಜಾ ಮೃತಪಟ್ಟಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಉನ್ನತ ಮಟ್ಟದ ತನಿಖೆಗೆ ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು