ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು 2023: ಸಾಧಕರ ಸಮಾಗಮದಲ್ಲಿ ಸ್ಫೂರ್ತಿಯ ಚಿಲುಮೆ

ವಿವಿಧ ಕ್ಷೇತ್ರಗಳ 20 ಸಾಧಕರಿಗೆ ‘ಪ್ರಜಾವಾಣಿ ಸಾಧಕರು–2023 ಪ್ರಶಸ್ತಿ ಪ್ರದಾನ
Last Updated 29 ಜನವರಿ 2023, 16:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರೋತ್ಸಾಹ, ಪ್ರೇರಣೆ, ಸ್ಫೂರ್ತಿ ಮತ್ತು ಸಕಾರಾತ್ಮಕ ಬದುಕಿನ ಹದ ಆ ಸಭಾಂಗಣದಲ್ಲಿ ಹರಿದಾಡುತ್ತಿತ್ತು. ಸಮಾಜದ ಬದಲಾವಣೆಗೆ, ಸುಧಾರಣೆಗೆ ಶ್ರಮಿಸಿದ ಸಾಧಕರು, ಮಹತ್ತರವನ್ನು ಸಾಧಿಸಿದ್ದರೂ, ಅದು ತಮ್ಮ ಖುಷಿಗೆ ಎಂಬಂತೆ ಇದ್ದರು. ಪ್ರೇರಕನುಡಿಗಳಾಡಿ ಮೆಚ್ಚುಗೆ ಸೂಸಲು ಬಂದ ಅತಿಥಿಗಳು, ಈ ಸಾಧಕರ ಮುಂದೆ ವಿನಮ್ರರಾಗಿದ್ದರು. ರಾಘವ ಕಮ್ಮಾರ ಅವರ ನಾದನಿಧಿ ಹೊಸತೊಂದು ಲೋಕವನ್ನೇ ತೆರೆದಿಟ್ಟಿತು.

ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ನಡೆದ ‘ಪ್ರಜಾವಾಣಿ ಸಾಧಕರು–2023 ಪ್ರಶಸ್ತಿ ಪ್ರದಾನ ಸಮಾರಂಭ’ದ ತುಣುಕುಗಳಿವು.

ಕೃಷಿ, ಪರಿಸರ, ಸ್ವಾವಲಂಬನೆ, ಉದ್ಯಮ, ಕಲೆ, ಕ್ರೀಡೆ, ಮಾನವ ಹಕ್ಕುಗಳ ಪರ ಹೋರಾಟ, ಸಮಾಜ ಸೇವೆ, ವೈದ್ಯಕೀಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು, ಸಮಾಜಕ್ಕೆ ಅಗಾಧ ಕೊಡುಗೆ ನೀಡಿದವರ ಮಾತುಗಳು ಎಲ್ಲರೆದೆಯಲ್ಲಿ ಸ್ಫೂರ್ತಿ ತುಂಬಿತು. ಅಲ್ಲಿದ್ದ ಯುವಜನರಲ್ಲಿ, ತಾವೂ ಏನನ್ನಾದರೂ ಸಾಧಿಸಬೇಕು ಎಂಬ ಕಿಚ್ಚು ಹಚ್ಚಿತು. ಕಿತ್ತೂರು ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ, ವಿಜಯಪುರ ಹಾಗೂ ಬಾಗಲಕೋಟೆ ಏಳು ಜಿಲ್ಲೆಗಳ ವಿವಿಧ ಕ್ಷೇತ್ರಗಳ ಸಾಧಕರು ಹಾಜರಿದ್ದರು.

ಗಾಯನದ ರಸದೌತಣ

ರಂಗಗೀತೆ ಸಂಯೋಜಕ ಗದುಗಿನ ರಾಘವ ಕಮ್ಮಾರ ಅವರ ಗಾಯನ ರಸದೌತಣ ಬಡಿಸಿತು. ಭಾವಗೀತೆ, ರಂಗಗೀತೆ, ಗಜಲ್ ಹಾಗೂ ತತ್ವಪದಗಳು ಬೇರೊಂದು ಲೋಕಕ್ಕೆ ಕರೆದೊಯ್ದವು. ವಿಜಯಕುಮಾರ ಸುತಾರ ಅವರಿಗೆ ತಬಲಾದಲ್ಲಿ ಸಾಥ್ ನೀಡಿದರು.

ಕಾರ್ಯಕ್ರಮ ವೀಕ್ಷಣೆಗೆ ಲಿಂಕ್:

‘ತಲೆಯಲ್ಲಿ ಸಾಧನೆಯ ಹುಚ್ಚು, ಹೃದಯದಲ್ಲಿ ಸಾಧಿಸುವ ಕಿಚ್ಚು ಇರಲಿ’

ಸಾಧನೆಗೆ ತಲೆಯಲ್ಲಿ ಹುಚ್ಚು, ಹೃದಯದಲ್ಲಿ ಕಿಚ್ಚು ಇರಬೇಕು. ಸಾಧಕರಲ್ಲಿ ಇವೆರಡೂ ಇದ್ದಿದ್ದಕ್ಕೆ ಈ ಮಟ್ಟದ ಸಾಧನೆ ಸಾಧ್ಯವಾಯಿತು. ಎಲ್ಲರಲ್ಲೂ ಸಾಧಿಸುವ ಸಾಮರ್ಥ್ಯವಿದೆ. ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟಿನ್ ಅವರು ಸಂದರ್ಶನವೊಂದರಲ್ಲಿ, ಶಾಲೆಯಲ್ಲಿ ತಾವು ಅತ್ಯಂತ ಹಿಂದುಳಿದಿದ್ದ ವಿದ್ಯಾರ್ಥಿಯಾಗಿದ್ದರ ಕುರಿತ ಪ್ರಶ್ನೆಗೆ, ‘ನಾನು ಮೀನಾಗಿದ್ದೆ. ಆದರೆ, ಶಾಲೆಯಲ್ಲಿ ನನಗೆ ಮರ ಹತ್ತು ಎನ್ನುತ್ತಿದ್ದರು...’ ಎಂದು ಉತ್ತರಿಸಿದ್ದರು. ‘ನಿನ್ ಕೈಲಿ ಆಗೋದಿಲ್ಲ ಬಿಡು’ ಎಂಬ ಮಾತುಗಳೇ ನಮ್ಮಲ್ಲಿರುವ ಸಾಧಕನನ್ನು ಹೊರಬಾರದಂತೆ ಮಾಡುತ್ತವೆ. ಇದನ್ನು ಮೀರಿ ಬದುಕಿನ ಪ್ರತಿ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳಬೇಕು. ಎಲ್ಲರಿಗೂ ಉತ್ತಮ ಬದುಕು ಸಿಗಬೇಕು ಎಂದು ಯೋಚಿಸುವುದು ಸಹ ಸಾಧನೆಯೇ.

ಪ್ರೀತಿಸಲು ಸಮಯ ಇಲ್ಲದಿದ್ದಾಗ ದ್ವೇಷಿಸಲು ಇದೆಯೇ? ಇರುವಷ್ಟು ದಿನ ಎಲ್ಲ ಜೀವಗಳನ್ನು ಪ್ರೀತಿಸಬೇಕು. ಪ್ರೀತಿ ಹಂಚಬೇಕು. ತಪ್ಪು ಮಾಡಿ ಕಲಿಯುವುದು ಮನುಷ್ಯನ ಸ್ವಭಾವ. ತಪ್ಪುಗಳನ್ನು ಒಪ್ಪಿಕೊಂಡು ಸುಧಾರಿಸಿಕೊಂಡಾಗಲೇ ಪ್ರೀತಿ ಹಂಚಲು ಪ್ರಾರಂಭಿಸುತ್ತೇವೆ. ಆಗಲೇ ಜೀವನ ಬಹಳ ಸುಂದರವಾಗುತ್ತದೆ.

– ಶಿವಪ್ರಸಾದ್, ನಿರ್ದೇಶಕರು, ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ, ಧಾರವಾಡ

‘ಸಾಧನೆ ಗುರುತಿಸುವುದು ಮುಖ್ಯ’

ತೆರೆಮರೆಯ ಈ ಸಾಧಕರನ್ನು ‘ಪ್ರಜಾವಾಣಿ’ ಗುರುತಿಸಿ ಜಗತ್ತಿಗೆ ಪರಿಚಯಿಸಿದೆ. ನಾವು ಯೋಚನೆಯನ್ನೇ ಮಾಡದ‌ ಕೆಲ ಕ್ಷೇತ್ರಗಳ ಸಾಧಕರೊಂದಿಗೆ ಕೆಲ ಹೊತ್ತು ಕಳೆಯುವ ಭಾಗ್ಯ ಸಿಕ್ಕಿದೆ. ಸೋಲುಗಳು ಕೂಡ ಸಾಧನೆಗೆ ಪ್ರೇರಣೆ. ದೇಶ ಕಟ್ಟುವಲ್ಲಿ ಪ್ರತಿ ಕೆಲಸವೂ ಮುಖ್ಯ. ಒಳ್ಳೆಯ ಮಾತುಗಳು ಮತ್ತು ಕೆಲಸಗಳು ಕೂಡ ಸಾಧನೆಯೇ. ಇತ್ತೀಚೆಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಹೃದಯಾಘಾತ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ, ಕುಟುಂಬದ ಹಾಗೂ ಸುತ್ತಲಿನ ಜನರ ಆರೋಗ್ಯ ಕಾಳಜಿ ಮಾಡುವ ಜ್ಞಾನ ಹಂಚಬೇಕು. ನಾವು ಆರೋಗ್ಯವಾಗಿದ್ದಾಗ ಮಾತ್ರ ಸಾಧನೆ ಸಾಧ್ಯ.

– ಡಾ. ಷಣ್ಮುಖ ಹಿರೇಮಠ, ಹೃದಯ ಶಸ್ತ್ರಚಿಕಿತ್ಸೆ ತಜ್ಞರು, ಕೆಎಲ್‌ಇ– ಸುಚಿರಾಯು ಆಸ್ಪತ್ರೆ, ಹುಬ್ಬಳ್ಳಿ

‘ಸೇವೆಯಲ್ಲಿ ಸಾರ್ಥಕ್ಯ’

ನಮ್ಮ ಹೊಟ್ಟೆ ಪಾಡಿಗೆ ದುಡಿಯುವುದು ದೊಡ್ಡದಲ್ಲ. ಸಮಾಜಕ್ಕಾಗಿ, ಆತ್ಮ ತೃಪ್ತಿಗಾಗಿ ಮಾಡುವ ಕೆಲಸಗಳು ಶ್ಲಾಘನೀಯ. ಮಾನವನ ಜೀವನ ನಶ್ವರ. ಈ ಕ್ಷಣ ಜೀವಿಸಿದ್ದೇವೆ ಎಂದರೆ, ನಮ್ಮ ವೈಯಕ್ತಿಕ ಹಿತದ ಜೊತೆಗೆ ಸಮಾಜದ ಹಿತಕ್ಕಾಗಿಯೂ ದುಡಿಯಬೇಕು. ಸಮಾಜಕ್ಕಾಗಿ ಮಾಡುವ ಉತ್ತಮ ಕೆಲಸದಲ್ಲಿ ಜೀವನದ ಸಾರ್ಥಕತೆ ಅಡಗಿದೆ. ಪುರಾತನ ಭಾರತದ ವೇದ, ಉಪನಿಷತ್ತು, ಆಯುರ್ವೇದದಲ್ಲಿ ಅಗಾಧ ಜ್ಞಾನ ಹೊಂದಿತ್ತು. ಆ ಶ್ರೇಷ್ಠ ಚರಿತ್ರೆ ಮತ್ತೆ ಮರುಕಳಿಸಬೇಕು. ನಮ್ಮ ಸಾಧನೆಯೊಂದಿಗೆ ದೇಶವು ಉತ್ತುಂಗ ಮಟ್ಟಕ್ಕೆ ಬೆಳೆಯಬೇಕು.

– ಪ್ರಕಾಶ ಜೋಶಿ, ವ್ಯವಸ್ಥಾಪಕ ನಿರ್ದೇಶಕರು, ಶ್ರೀದತ್ತಾ ಇನ್ಫ್ರಾಟೆಕ್ ಪ್ರೈ. ಲಿಮಿಟೆಡ್, ಹುಬ್ಬಳ್ಳಿ

‘ತಿರಸ್ಕಾರಕ್ಕೆ ಒಳಗಾದವರಿಗೆ ಸಿಕ್ಕ ಪುರಸ್ಕಾರ’

ಸಮಾಜದಲ್ಲಿ ಮಹಿಳೆಯನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡಲಾಗುತ್ತಿದೆ. ಅದರಲ್ಲೂ ಲೈಂಗಿಕ ಅಲ್ಪಸಂಖ್ಯಾತರನ್ನು ಯಾವಾಗಲೂ ತಿರಸ್ಕಾರದಿಂದಲೇ ಕಾಣಲಾಗುತ್ತದೆ. ಇಂತಹ ತಿರಸ್ಕಾರದ ಮಧ್ಯೆ ಸಿಕ್ಕ ಪ್ರಶಸ್ತಿಗೆ ಬೆಲೆ ಕಟ್ಟಲಾಗದು. ಬದುಕಿಗಾಗಿ ಭಿಕ್ಷುಕಿಯಾಗಿದ್ದವಳು ಈಗ ‘ಪ್ರಜಾವಾಣಿ’ಯ ಸಾಧಕಿಯಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ.

ಪ್ರಶಸ್ತಿಗಳಿಗಾಗಿ ಅರ್ಜಿ ಹಾಕಿ ಲಾಬಿ ನಡೆಸುವ ಸಂದರ್ಭದಲ್ಲಿ ಪತ್ರಿಕೆಯು ನನ್ನನ್ನು ಕೇಳದೆ, ಏನೊಂದು ಈ ಗೌರವವನ್ನು ನೀಡಿದೆ. ಬಸವಣ್ಣ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅಪ್ಪಿಕೊಂಡಿದ್ದರ ಫಲವಾಗಿ ನಿಮ್ಮ ಮುಂದೆ ನಿಂತಿದ್ದೇನೆ.

ಮಾಧ್ಯಮ ಕ್ಷೇತ್ರದ ಮೇರು ಪತ್ರಿಕೆಯಾದ ‘ಪ್ರಜಾವಾಣಿ’ಯು, ಸರ್ಕಾರದ ತಪ್ಪುಗಳನ್ನು ಅನಾವರಣಗೊಳಿಸಿ ಕಿವಿ ಹಿಂಡುತ್ತಲೇ, ಶೋಷಿತ ಸಮುದಾಯಗಳಿಗೆ ದನಿಯಾಗಿ, ಅವರಲ್ಲಿ ಭರವಸೆ ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ನಾವೆಲ್ಲರೂ ಹೃದಯ ಸರಿ ಮಾಡಿಕೊಳ್ಳಬೇಕಿದೆ. ನಮ್ಮ ನಡುವಿನ ಪ್ರೀತಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಕಲ್ಲು, ಮಣ್ಣಿನಲ್ಲಿ ದೇವರನ್ನು ಹುಡುಕುತ್ತಿದ್ದೇವೆ. ಅದರ ಬದಲು ಪ್ರೀತಿಯಲ್ಲಿ ದೇವರನ್ನು ಕಾಣಬೇಕಿದೆ.

– ಕೆ.ಸಿ. ಅಕ್ಷತಾ, ಮಾನವ ಹಕ್ಕುಗಳ ಹೋರಾಟಗಾರ್ತಿ, ಹಾವೇರಿ

‘ಸಮಾಜಕ್ಕೆ ಮರಳಿ ಕೊಡಬೇಕು’

ಸಮಾಜದಿಂದ ನಾವು ಬೇಕಾದಷ್ಟು ಪಡೆದಿದ್ದೇವೆ. ಅದರಲ್ಲಿ ಸ್ವಲ್ಪವನ್ನಾದರೂ ಮರಳಿ ಸಮಾಜಕ್ಕೆ ಕೊಡುವ ಪ್ರಯತ್ನವನ್ನು ಪ್ರತಿಯೊಬ್ಬರು ಮಾಡಬೇಕು. ಸಾಧನೆ ಯಾವತ್ತು ತಲೆಗೇರಬಾರದು. ಸೋಲು–ಗೆಲುವು ಏನೇ ಬಂದರೂ ಹಿಗ್ಗದೆ–ಕುಗ್ಗದೆ ಸಮಾಧಾನಚಿತ್ತದಲ್ಲಿ ನಮ್ಮ ಕೆಲಸ ಮಾಡುವುದರಲ್ಲಿ ಯಶಸ್ಸು ಅಡಗಿದೆ. ಮೀನುಗಾರ ಸಮುದಾಯದಿಂದ ಬಂದ ನಾನು ಆ ನಿಟ್ಟಿನಲ್ಲಿ ಒಂದಿಷ್ಟು ಕೆಲಸ ಮಾಡಿದ್ದನ್ನು ‘ಪ್ರಜಾವಾಣಿ’ ಗುರುತಿಸಿರುವುದು ನನಗೆ ಮತ್ತಷ್ಟು ಪ್ರೇರಣೆ ನೀಡಿದೆ. ಒಬ್ಬೊಬ್ಬರ ಸಾಧನೆಯೂ ಮತ್ತಷ್ಟು ಸಾಧನೆಗೆ ಪ್ರೇರಣೆ ನೀಡುತ್ತದೆ. ಇಂತಹ ಕೆಲಸ ಮಾಡಿದ ಪತ್ರಿಕೆಗೆ ನಮನಗಳು.

– ಎಚ್‌.ಎಸ್. ಗಜಾನನ, ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT