ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಒಳನೋಟ: ಕೋಮುಕಿಡಿ– ಪ್ರಕರಣ ಹಿಂಪಡೆಯಲು ಪೈಪೋಟಿ!

Last Updated 30 ಅಕ್ಟೋಬರ್ 2021, 21:36 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಸಂದರ್ಭಗಳೆಲ್ಲ ಮಸೀದಿ– ಭಗವಾಧ್ವಜ ವಿವಾದ, ಕೋಮು ಸಂಘರ್ಷ, ಮತೀಯ ಗೂಂಡಾಗಿರಿ, ಗುಂಪು ಘರ್ಷಣೆ, ದೌರ್ಜನ್ಯಗಳಲ್ಲಿ ಭಾಗಿಯಾದವರ ಮೇಲಿನ ಕ್ರಿಮಿನಲ್‌ ಮೊಕದ್ದಮೆಗಳನ್ನು ಹಿಂಪಡೆಯಲು ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾರ ಪೈಪೋಟಿ ನಡೆಸುತ್ತಲೇ ಬಂದಿವೆ!

ಗಂಭೀರ ಪ್ರಕರಣಗಳನ್ನು ವಾಪಸ್‌ ಪಡೆಯುವಲ್ಲಿ ಈ ‘ಕ್ರಿಯೆ– ಪ್ರತಿಕ್ರಿಯೆ’, ದಂಗೆ– ದುಷ್ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ. ಜಾತಿ–ಧರ್ಮ ರಕ್ಷಣೆಯ ಹೆಸರಿನಲ್ಲಿ ದ್ವೇಷದ ವಿಷಬೀಜ ಬಿತ್ತುವ ಕೋಮು ಕ್ರಿಮಿಗಳನ್ನು ಮಟ್ಟ ಹಾಕಬೇಕಾದವರೇ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯುತ್ತಾರೆ. ಆ ಮೂಲಕ, ಹಿಂಸೆಗೆ ಬೇಕಾದ ‘ಅಸ್ತ್ರ’ವನ್ನು ಕೈಗೆ ಕೊಡುವ ಈ ‘ಸಂಪ್ರದಾಯ’ ಪ್ರಜಾತಂತ್ರಕ್ಕೆ ಅಪಾಯಕಾರಿಯಾಗಿದೆ ಎನ್ನುವ ಅಭಿಪ್ರಾಯವೂ ಇದೆ.

ಜಲಪರ, ಜನಪರ,ರೈತಪರ, ಕನ್ನಡಪರ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು, ಅದರ ಸದುದ್ದೇಶದ ಆಧಾರದ ಮೇಲೆ ಕೈಬಿಡುವ ಅಧಿಕಾರ ಸರ್ಕಾರಕ್ಕಿದೆ. ಅಷ್ಟಕ್ಕೆ ಸೀಮಿತವಾಗಬೇಕಿದ್ದ ಈ ಪ್ರಕ್ರಿಯೆ ಪಕ್ಷದವರನ್ನು, ಸಂಘಟನೆಗಳ ಕಾರ್ಯಕರ್ತರನ್ನು ರಕ್ಷಿಸುವ ಉದ್ದೇಶಕ್ಕೆ ಬಳಕೆಯಾಗುತ್ತಿರುವುದು ಕಳವಳಕಾರಿ. ನಿರ್ದಿಷ್ಟ ಸಮುದಾಯದ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಪಡಿಸುವುದರಿಂದ ಕೋಮು ದ್ವೇಷಕ್ಕೆ ತುಪ್ಪ ಸುರಿದಂತಾಗುತ್ತಿದೆ.

ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿ, ಹುಬ್ಬಳ್ಳಿ ಈದ್ಗಾ ವಿವಾದ, ಗಣಪತಿ ವಿಗ್ರಹ ವಿಸರ್ಜನೆ ಗಲಾಟೆ, ಕೋಮು ದ್ವೇಷದ ರಾಜಕಾರಣ 2008ರಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ನೆರವಾಗಿತ್ತು. ಆ ಋಣ ತೀರಿಸಲು, ರೈತ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈಬಿಡುವ ನೆಪದಲ್ಲಿ ಕೋಮು, ರಾಜಕೀಯ ಗಲಭೆಗಳೂ ಸೇರಿ 369 ಪ್ರಕರಣಗಳನ್ನು ಅಂದಿನ ಬಿ.ಎಸ್‌. ಯಡಿಯೂರಪ್ಪ ಸರ್ಕಾರ ವಾಪಸು ಪಡೆದಿತ್ತು. ಕೆ.ಎಸ್‌. ಈಶ್ವರಪ್ಪ, ಸಿ.ಟಿ. ರವಿ, ಅನಂತಕುಮಾರ್ ಹೆಗಡೆ, ಬಿ. ಶ್ರೀರಾಮುಲು, ಜಗದೀಶ ಕಾರಂತ ಸೇರಿದಂತೆ ಹಿಂದೂ ಜಾಗರಣ ವೇದಿಕೆಯ ಮುಖಂಡರ ಮೇಲಿನ ಪ್ರಕರಣಗಳೂ ಅದರಲ್ಲಿದ್ದುವು.

ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ (2013– 2018) ಮೈಸೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ 2009-10ರ ಅವಧಿಯಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದ 175 ಪ್ರಕರಣಗಳನ್ನು (2015ರಲ್ಲಿ) ಹಿಂಪಡೆದಿತ್ತು. ಮೈಸೂರು ಜಿಲ್ಲೆ ಕ್ಯಾತಮಾರನಹಳ್ಳಿಯಲ್ಲಿ 2009ರ ಏಪ್ರಿಲ್‌ನಲ್ಲಿ ನಡೆದ ಕೋಮು ಗಲಭೆಯ 40 ಪ್ರಕರಣಗಳು, ಪತ್ರಿಕೆಯೊಂದರಲ್ಲಿ ಮುಸ್ಲಿಂ ಲೇಖಕಿ ತಸ್ಲಿಮಾ ನಸ್ರೀನ್ ಅವರ ಲೇಖನ ಪ್ರಕಟಗೊಂಡ ಹಿನ್ನೆಲೆಯಲ್ಲಿ (2010ರಲ್ಲಿ) ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ 114 ಮತ್ತು ಹಾಸನದಲ್ಲಿ ನಡೆದ 21 ಕೋಮು ಗಲಭೆ ಪ್ರಕರಣಗಳು ಸೇರಿ 175 ಪ್ರಕರಣಗಳಲ್ಲಿ 1,600 ಮಂದಿಯ ವಿರುದ್ದದ ಪ್ರಕರಣಗಳನ್ನು ವಾಪಸ್‌ ಪಡೆಯಲಾಗಿತ್ತು. ಪಿಎಫ್‌ಐ, ಕೆಎಫ್‌ಡಿ, ಶ್ರೀರಾಮಸೇನೆ, ಬಜರಂಗದಳ ಕಾರ್ಯಕರ್ತರ ಮೇಲಿನ ಪ್ರಕರಣಗಳೂ ಅದರಲ್ಲಿದ್ದವು. ಶಿವಮೊಗ್ಗ ಮತ್ತು ಹಾಸನದಲ್ಲಿ ನಡೆದ ಗಲಭೆ ವೇಳೆ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ ನಷ್ಟವಾಗಿತ್ತು.

ತಮ್ಮ ಅಧಿಕಾರಾವಧಿಯ ಕೊನೆಯಲ್ಲಿ (2018ರ ಮಾರ್ಚ್) ಸಿದ್ದರಾಮಯ್ಯ, ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟ ಹಾಗೂ ನರಗುಂದ– ನವಲಗುಂದ ಚಳವಳಿಗಳಲ್ಲಿ ‍ಭಾಗವಹಿಸಿದ ಮತ್ತು ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಪ್ರತಿಭಟಿಸಿದ ರೈತರ ವಿರುದ್ಧ ದಾಖಲಾಗಿದ್ದ 60, ಕೋಮು ಗಲಭೆಗೆ ಸಂಬಂಧಿಸಿದ 29 ಪ್ರಕರಣಗಳು ಸೇರಿ ಒಟ್ಟು 127 ಮೊಕದ್ದಮೆಗಳನ್ನು ಹಿಂಪಡೆದಿದ್ದರು.

ಮತ್ತೆ ಬಿಎಸ್‌ವೈ ಸರದಿ: ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಪತನದ ಬಳಿಕ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿದ ಯಡಿಯೂರಪ್ಪ ನೇತೃತ್ವದ ಸರ್ಕಾರ ಕಾವೇರಿ, ಎತ್ತಿನಹೊಳೆ, ಕಳಸಾ ಬಂಡೂರಿ ಯೋಜನೆ ಸೇರಿದಂತೆ ಜಲಪರ ಹೋರಾಟಗಳಲ್ಲಿ ಭಾಗಿಯಾಗಿದ್ದ ಸ್ವಾಮೀಜಿಗಳು ಮತ್ತು ರೈತರ ವಿರುದ್ಧ ದಾಖಲಾಗಿದ್ದ 51 ಪ್ರಕರಣಗಳನ್ನು 2020ರ ಫೆಬ್ರುವರಿಯಲ್ಲಿ ವಾಪಸ್‌ ಪಡೆದಿದೆ. ಕಾನೂನು ಇಲಾಖೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಅಭಿಪ್ರಾಯ ಕಡೆಗಣಿಸಿ ಅದೇ ವರ್ಷ ಆಗಸ್ಟ್‌ನಲ್ಲಿ ಪ್ರತಾಪ್ ಸಿಂಹ, ಎಂ.ಪಿ. ರೇಣುಕಾಚಾರ್ಯ, ಬಿ.ಸಿ. ಪಾಟೀಲ, ಅಮೃತ್ ದೇಸಾಯಿ ಸೇರಿದಂತೆ ಬಿಜೆಪಿ ನಾಯಕರು ಮತ್ತು ಬೆಂಬಲಿಗರ ಮೇಲಿನ ಗಂಭೀರ ಸ್ವರೂಪದ ಮೊಕದ್ದಮೆಗಳೂ ಸೇರಿ 62 ಪ್ರಕರಣಗಳನ್ನು ಹಿಂಪಡೆದಿದೆ.

ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮೇಲೆ ಕಾರು ನುಗ್ಗಿಸಿದ ಆರೋಪದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ 2017ರಲ್ಲಿ ಬಿಳಿಕೆರೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ, ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ನಡೆದ ದಾಂಧಲೆ, ಕೋಮು ಗಲಭೆ ಆರೋಪದಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳು, ಹೊನ್ನಾಳಿ ಠಾಣೆಯಲ್ಲಿ ಎಂ.ಪಿ. ರೇಣುಕಾಚಾರ್ಯ ಬೆಂಬಲಿಗರ ವಿರುದ್ಧ 2019ರಲ್ಲಿ ದಾಖಲಾಗಿದ್ದ ಪ್ರಕರಣ, ಗಣೇಶ ವಿಸರ್ಜನೆ ವೇಳೆ ನಡೆದ ದೊಂಬಿ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಬಿ.ಸಿ. ಪಾಟೀಲ ಬೆಂಬಲಿಗರ ಮೇಲೆ ರಟ್ಟಿಹಳ್ಳಿ ಠಾಣೆಯಲ್ಲಿ ದಾಖಲಾದ ಪ್ರಕರಣ, 2015ರಲ್ಲಿ ಧಾರವಾಡದಲ್ಲಿ ಬಿಜೆಪಿ ಬೆಂಬಲಿಗರಿಂದ ಗಣೇಶ ವಿಗ್ರಹ ವಿಸರ್ಜನೆ ವೇಳೆ ಮಸೀದಿಗಳಿಗೆ ಕಲ್ಲು ತೂರಿ, ಜೀವಬೆದರಿಕೆ ಹಾಕಿದ ಪ್ರಕರಣಗಳೂ ಅದರಲ್ಲಿವೆ.

‘ಕಾಂಗ್ರೆಸ್ ಸರ್ಕಾರ ಕೋಮು ಗಲಭೆಗಳಲ್ಲಿ ಭಾಗಿಯಾದ ಅಲ್ಪಸಂಖ್ಯಾತರ ಮೇಲಿನ 175 ಪ್ರಕರಣಗಳನ್ನು ಕೈ ಬಿಟ್ಟಿದೆ. ಪಿಎಫ್‌ಐಯಂಥ ಸಂಘಟನೆಯ ವಿರುದ್ಧದ ಪ್ರಕರಣಗಳನ್ನೂ ಹಿಂಪಡೆಯಲಾಗಿದೆ’ ಎಂದು ಆರೋಪಿಸುವ ಬಿಜೆಪಿ ನಾಯಕರು, ‘ನಾವು ಅಂಥ ಪ್ರಕರಣ ಹಿಂಪಡೆದಿಲ್ಲ. ಹೋರಾಟಗಾರರ ಮೇಲಿನ ಪ್ರಕರಣ ಮಾತ್ರ ವಾಪಸ್ ಪಡೆದಿದ್ದೇವೆ. ವೈಯಕ್ತಿಕ ಮೊಕದ್ದಮೆಗಳನ್ನು ಹಿಂಪಡೆದಿಲ್ಲ’ ಎಂದು ಸಮರ್ಥಿಸುತ್ತಾರೆ!

ಸುಳ್ಳು ಪ್ರಕರಣ ಕೈಬಿಡಲು ಪತ್ರ

‘ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳೂ ಸೇರಿದಂತೆ ವಿವಿಧೆಡೆ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧ ದುರುದ್ದೇಶಪೂರ್ವಕವಾಗಿ ದಾಖಲಿಸಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು‘ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ‘ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನಗಳಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ’ ಎಂದಿದ್ದಾರೆ.

ಚರ್ಚ್ ದಾಳಿ– ತಾರ್ಕಿಕ ಅಂತ್ಯ ಕಾಣದ ಪ್ರಕರಣ: ಮಂಗಳೂರಿನ ಮಿಲಾಗ್ರಿಸ್‌ ಬಳಿಯ ಎಡೋರೇಶನ್‌ ಮಾನೆಸ್ಟ್ರಿಯಲ್ಲಿ 2008 ಸೆ. 14ರಂದು ಧರ್ಮ ಭಗಿನಿಯರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ನಡೆದಿದ್ದ ದಾಳಿಗೆ ಸಂಬಂಧಿಸಿದ ಪ್ರಕರಣವು ಇಂದಿಗೂ ತಾರ್ಕಿಕ ಅಂತ್ಯಕಂಡಿಲ್ಲ.

ಬಿಜೆಪಿ ಅವಧಿ– 2008 ಹಾಗೂ 2020ರಲ್ಲಿ ಕ್ರಮವಾಗಿ 369, 113 ಕ್ರಿಮಿನಲ್‌ ಪ್ರಕರಣ ವಾಪಸ್‌

ಕಾಂಗ್ರೆಸ್‌ ಅವಧಿ– 2015 ಹಾಗೂ 2018ರಲ್ಲಿ ಅನುಕ್ರಮವಾಗಿ 175, 127 ಕ್ರಿಮಿನಲ್‌ ಪ್ರಕರಣ ವಾಪಸ್‌

––––

ಕ್ರಿಮಿನಲ್‌ ಪ್ರಕರಣಗಳ ವಾಪಸ್‌

ಬಿಜೆಪಿ ಅವಧಿ

ವರ್ಷ; ಒಟ್ಟು ಪ್ರಕರಣಗಳು

2008; 369

2020; 113

ಕಾಂಗ್ರೆಸ್‌ ಅವಧಿ

ವರ್ಷ; ಒಟ್ಟು ಪ್ರಕರಣಗಳು

2015; 175

2018; 127

–––

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT