ಬುಧವಾರ, ಮೇ 25, 2022
27 °C

ಪ್ರಜ್ವಲ್ ರೇವಣ್ಣ ಆಯ್ಕೆ‌ ಅರ್ಜಿ: ಹೈಕೋರ್ಟ್‌‌ನಲ್ಲಿ ಮರು ವಿಚಾರಣೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಹೈಕೋರ್ಟ್‌ ಮರು ವಿಚಾರಣೆಗೆ ಕೈಗೆತ್ತಿಕೊಂಡಿದೆ.

ಈ ಕುರಿತಂತೆ ಪರಾಜಿತ ಅಭ್ಯರ್ಥಿ ಎ. ಮಂಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಪ್ರಕರಣದ ಐದನೇ ಪ್ರತಿವಾದಿ ಆರ್.ಜಿ.ಸತೀಶ್‌ (ಕಣದಲ್ಲಿದ್ದ ಪರಾಜಿತ ಅಭ್ಯರ್ಥಿ) ಅವರಿಗೆ ಖುದ್ದು ಸಮನ್ಸ್‌ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆಬ್ರುವರಿ 4ಕ್ಕೆ ಮುಂದೂಡಿದೆ. ಅರ್ಜಿದಾರ ಎ.ಮಂಜು ಪರ ಹಿರಿಯ ವಕೀಲ ಗಂಗಾಧರ ಗುರುಮಠ ಹಾಜರಾಗಿದ್ದರು.

ಪ್ರಕರಣದ ಹಿನ್ನೆಲೆ: ’2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಚುನಾವಣಾ ಅಕ್ರಮ ಎಸಗಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿಯ ಕುರಿತು ನಿಖರ ಮಾಹಿತಿ ನೀಡಿಲ್ಲ. ಆದ್ದರಿಂದ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು‘ ಎಂದು ಕೋರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ.ಮಂಜು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ’ಅರ್ಜಿ ದೋಷಪೂರಿತವಾಗಿದೆ. ಇದರಲ್ಲಿನ ಲೋಪಗಳನ್ನು ಸರಿಪಡಿಸಲು ಕಾಲಾವಕಾಶ ನೀಡಿದ ನಂತರವೂ ಕಾಲಮಿತಿಯಲ್ಲಿ ಅವುಗಳನ್ನು ಸರಿಪಡಿಸಿಲ್ಲ‘ ಎಂಬ ಅಭಿಪ್ರಾಯದೊಂದಿಗೆ ವಜಾಗೊಳಿಸಿತ್ತು.

ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ’ಅರ್ಜಿಯಲ್ಲಿನ ಲೋಪ ಸರಿಪಡಿಸಿ ಅರ್ಜಿದಾರರು ನಿಗದಿತ ನಮೂನೆಯಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು. ಹೈಕೋರ್ಟ್ ಅದನ್ನು ಪರಿಗಣಿಸಿ ಮರು ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಬೇಕು‘ ಎಂದು 2020ರ ಡಿಸೆಂಬರ್ 13ರಂದು ನಿರ್ದೇಶಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು