ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ನಿಂದನೆಗೆ ಇಳಿದರೆ ಕಠಿಣ ಕ್ರಮ: ಶಾಸಕ ಪ್ರಿಯಾಂಕ್‌ ಖರ್ಗೆ

Last Updated 17 ನವೆಂಬರ್ 2021, 12:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕೀಯ ಸವಾಲುಗಳನ್ನು ಘನತೆಯಿಂದ ಎದುರಿಸಲು ಆಗದ ಬಿಜೆಪಿ ಮುಖಂಡರು ತಮ್ಮ ಹಾಗೂ ಕುಟುಂಬದ ವಿರುದ್ಧ ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ. ಅದು ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾನ್ಯವಾಗಿ ನಾನಾಗಿಯೇ ಯಾರ ಬಗ್ಗೆಯೂ ವೈಯಕ್ತಿಕ ದಾಳಿ ಮಾಡುವುದಿಲ್ಲ. ನನ್ನ ಮನೆಯಲ್ಲಿ ಆ ರೀತಿ ಬೆಳೆಸಿಲ್ಲ. ಬಿಜೆಪಿಯವರು ನನ್ನ ಹಾಗೂ ನನ್ನ ಕುಟುಂಬದ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿರುವುದು ಅತಿರೇಕಕ್ಕೆ ಹೋಗುತ್ತಿದೆ’ ಎಂದರು.

‘ಬಿಟ್‌ಕಾಯಿನ್‌ ಹಗರಣದ ಬಗ್ಗೆ ಪ್ರಶ್ನಿಸಿದ ಬಳಿಕ ವಸೂಲಿ ರಾಜ, ಬಿಟ್‌ಕಾಯಿನ್‌ ರಾಜ, ಬಿಟ್‌ ಕಾಯಿನ್‌ ಕಿಂಗ್‌ ಎಂಬ ಬಿರುದುಗಳು ಬಂದಿವೆ. ಹತ್ತೇ ದಿನಗಳಲ್ಲಿ ರಾಜ್ಯದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದೇನೆ. ನಮ್ಮ ಕುಟುಂಬದ ಬಳಿ ₹ 50,000 ಕೋಟಿ ಆಸ್ತಿ ಇದೆ ಎಂದು ಗಣೇಶ್‌ ಕಾರ್ಣಿಕ್‌ ಹೇಳಿದ್ದಾರೆ. ಅವರು ಯಾವ ಕ್ಯಾಪ್ಟನ್‌ ಎಂಬ ಅನುಮಾನ ಬರುತ್ತಿದೆ’ ಎಂದು ಹೇಳಿದರು.

ರೇಣುಕಾಚಾರ್ಯ ಕೂಡ ಅದೇ ರೀತಿ ಆರೋಪ ಮಾಡಿದ್ದಾರೆ. ಅವರ ಸರ್ಕಾರವೇ ಇದೆ. ತನಿಖೆ ಮಾಡಿಸಲಿ. ಅವರಿಂದ ತಾವು ಏನನ್ನೂ ಕಲಿಯಬೇಕಿಲ್ಲ. ಎಲ್ಲರಿಗೂ ಎರಡು ದಿನಗಳಲ್ಲಿ ವಕೀಲರ ಮೂಲಕ ಕಾನೂನು ಕ್ರಮದ ನೋಟಿಸ್‌ ಜಾರಿಗೊಳಿಸಲಾಗುವುದು ಎಂದು ತಿಳಸಿದರು.

ತಂದೆಯ ಬಗ್ಗೆ ಹೆಮ್ಮೆ ಇದೆ:‘ಮೈಸೂರು ಸಂಸದರು ಏಕವಚನದಲ್ಲಿ ಮಾತನಾಡಿದರು. ಹೇಳುವ ಶಕ್ತಿ ಇರುವವರಿಗೆ ಕೇಳುವ ಶಕ್ತಿಯೂ ಇರಬೇಕು. ಪ್ರತಾಪ ಸಿಂಹಗೆ ಹಿಂದೂ ಮತ್ತು ಬೌದ್ಧ ಧರ್ಮ ಎರಡರ ಬಗ್ಗೆಯೂ ಅರಿವಿಲ್ಲ. ಪ್ರಿಯಾಂಕ ಅಲ್ಲ ಪ್ರಿಯಾಂಕ್‌ ಎಂಬುದು ನನ್ನ ಹೆಸರು. ಪ್ರಿಯಾಂಕ್‌ ಎಂದರೆ ಎಲ್ಲರಿಂದಲೂ ಪ್ರೀತಿ ಗಳಿಸುವವನು ಎಂದರ್ಥ. ಹಾಗೆ ಆಗಲು ನನಗೆ ಸಾಧ್ಯವಾಗಿಲ್ಲ. ಇನ್ನಾದರೂ ಆಗಬೇಕೆಂದು ಪ್ರಯತ್ನಿಸುತ್ತಿರುವೆ’ ಎಂದು ಪ್ರಿಯಾಂಕ್‌ ಹೇಳಿದರು.

‘ಪ್ರತಾಪ್‌ ಎಂದರೆ ಘನತೆ ಮತ್ತು ಗಾಂಭೀರ್ಯವುಳ್ಳ ವ್ಯಕ್ತಿ ಎಂದರ್ಥ. ಪ್ರತಾಪ್‌ ಸಿಂಹ ಹಾಗೆ ಇಲ್ಲ. ಬಿಜೆಪಿ ಸಂಸದೆ ಮನೇಕಾ ಗಾಂಧಿಯವರು ಹಿಂದೂ ಹೆಸರುಗಳ ಬಗ್ಗೆ ಬರೆದ ಪುಸ್ತಕ ಓದಿಕೊಳ್ಳಲಿ. ಪ್ರತಾಪ್‌ ಸಿಂಹಗೆ ಹಿಂದೂ ಮತ್ತು ಬೌದ್ಧ ಧರ್ಮಗಳ ಬಗ್ಗೆ ಸರಿಯಾದ ಅರಿವು ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರತಾಪ್‌ ಸಿಂಹ ನನ್ನನ್ನು ಮರಿ ಖರ್ಗೆ ಎಂದಿದ್ದಾರೆ. ನನ್ನ ತಂದೆಯ ಬಗ್ಗೆ ನನಗೆ ಹೆಮ್ಮೆ ಇದೆ. ಬಿ.ವೈ. ವಿಜಯೇಂದ್ರ ಅವರಿಗೆ ಮರಿ ಯಡಿಯೂರಪ್ಪ ಎಂದು ಹೇಳುವ ಧೈರ್ಯ ನಿಮಗೆ ಇದೆಯೆ? ಜಯ್‌ ಶಾ ಅವರಿಗೆ ಚೋಟಾ ಶಾ ಎನ್ನುವ ಧೈರ್ಯ ಇದೆಯೆ? ಬೆತ್ತಲೆ ಜಗತ್ತು ಎಂದು ಯಾರ ವಿರುದ್ಧ ಬರೆದಿದ್ದೀರಿ? ಈಗ ಯಾರ ಬಳಿ ಹೋಗಿ ಕೈ ಕಟ್ಟಿಕೊಂಡು ಕುಳಿತಿದ್ದೀರಿ?’ ಎಂದು ಪ್ರಶ್ನಿಸಿದರು.

ತಡೆಯಾಜ್ಞೆ ತಂದವರು ಯಾರು?:‘ವಾಟ್ಸ್‌ ಆ್ಯಪ್‌ ಚಾಟಿಂಗ್‌, ಎಸ್‌ಎಂಎಸ್‌, ಆಡಿಯೊ ಕ್ಲಿಪ್ಪಿಂಗ್‌ ಪ್ರಸಾರ ಮಾಡದಂತೆ ನಾನೇನೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿಲ್ಲ. ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ನನ್ನ ವಿರುದ್ಧ ದೂರು ದಾಖಲಾಗಿದೆಯೋ? ಅಥವಾ ನಿಮ್ಮ ವಿರುದ್ಧವೋ ಎಂದು ಪ್ರಿಯಾಂಕ್‌ ಪ್ರಶ್ನಿಸಿದರು. ತಡೆಯಾಜ್ಞೆ ತಂದವರು ಯಾರು? ಯಾರ ವಿರುದ್ಧ ದೂರು ದಾಖಲಾಗಿದೆ ಎಂಬುದನ್ನು ಪ್ರತಾಪ್‌ ಸಿಂಹ ಹೇಳಲಿ’ ಎಂದು ಸವಾಲು ಹಾಕಿದರು.

‘ಘನತೆಯಿಂದ ಚರ್ಚೆಗೆ ಬರುವುದಾದರೆ ಸಿದ್ಧ. ನನ್ನ ಮತ್ತು ಕುಟುಂಬದ ವಿರುದ್ಧ ವೈಯಕ್ತಿಕ ದಾಳಿಗೆ ಇಳಿದರೆ ನಾನು ಕೈಕಟ್ಟಿ ಕೂರುವುದಿಲ್ಲ. ಶರಣರ ನಾಡಿನಿಂದ ಬಂದಿರುವ ನನ್ನಲ್ಲಿ ಬಸವ ತತ್ವ, ಬುದ್ಧ ತತ್ವದ ಜತೆಗೆ ಅಂಬೇಡ್ಕರ್‌ ಅವರಿಂದ ಬಂದ ಹೋರಾಟ ಗುಣವೂ ರಕ್ತಗತವಾಗಿದೆ. ನನ್ನ ಸ್ವಾಭಿಮಾನ ಮನುವಾದಿಗಳು ಕೊಟ್ಟ ಭಿಕ್ಷೆಯಲ್ಲ. ಸ್ವಾಭಿಮಾನಕ್ಕಾಗಿ ಹೋರಾಟಕ್ಕೆ ಸಿದ್ಧ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT