ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಎಸ್ 26 ಅಧಿಕಾರಿಗಳಿಗೆ ‘ಐಎಎಸ್‌’ ಬಡ್ತಿ?

ಯುಪಿಎಸ್‌ಸಿ ಆಯ್ಕೆ ಸಮಿತಿ ಸಭೆ ಇಂದು * ಮುಖ್ಯ ಕಾರ್ಯದರ್ಶಿ ಭಾಗಿ
Last Updated 28 ಡಿಸೆಂಬರ್ 2020, 20:10 IST
ಅಕ್ಷರ ಗಾತ್ರ

ಬೆಂಗಳೂರು: ಕೊನೆಗೂ 2006, 2008 ಮತ್ತು 2010ನೇ ಸಾಲಿನ ಕೆಎಎಸ್‌ ಅಧಿಕಾರಿಗಳ ‘ಐಎಎಸ್‌’ ಬಡ್ತಿ ಕನಸು ನನಸಾಗುವ ಮುಹೂರ್ತ ಬಂದಿದೆ. ಸೇವಾ ಜ್ಯೇಷ್ಠತೆ ಆಧಾರದಲ್ಲಿ 26 ಅಧಿಕಾರಿಗಳಿಗೆ ಐಎಎಸ್‌ (ಕರ್ನಾಟಕ ಕೇಡರ್) ಶ್ರೇಣಿಗೆ ಪದೋನ್ನತಿ ನೀಡಲು ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ನಿರ್ಧರಿಸಿದ್ದು, ಮಂಗಳವಾರ (ಡಿ. 29) ಆಯ್ಕೆ ಸಮಿತಿ ಸಭೆ (ಎಸ್‌ಸಿಎಂ) ನಡೆಯಲಿದೆ.

ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಪ್ರಕಾರ, 2016ರ ಸಾಲಿನಲ್ಲಿ 12, 2017ರಲ್ಲಿ ಇಬ್ಬರು, 2018ರಲ್ಲಿ ಮೂವರು, 2019ರಲ್ಲಿ 9 ಹೀಗೆ ಒಟ್ಟು 26 ಕೆಎಎಸ್‌ ಅಧಿಕಾರಿಗಳಿಗೆ ಐಎಎಸ್‌ ಪದೋನ್ನತಿ ಹೊಂದಲು ಅವಕಾಶವಿದೆ.

ರಾಜ್ಯ ಕೇಡರ್‌ ಸೇವೆಯಿಂದ (ಎಸ್‌ಸಿಎಸ್‌) 2016ರಿಂದ 2019ರ ಸಾಲುಗಳಲ್ಲಿ ನಿರ್ಣಯಿಸಿದ ಐಎಎಸ್‌ ಹುದ್ದೆಗಳಿಗೆ ಪದೋನ್ನತಿಗೆ ಆಯ್ಕೆ ಸಮಿತಿ ಸಭೆ ನಡೆಸುವಂತೆ ರಾಜ್ಯ ಸರ್ಕಾರ ಡಿ. 12ರಂದು ಯುಪಿಎಸ್‌ಸಿಗೆ ಪತ್ರ ಬರೆದಿತ್ತು.‌ ಡಿ. 17ರಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಯುಪಿಎಸ್‌ಸಿ, 29ರಂದು ಸಂಜೆ 4 ಗಂಟೆಗೆ ಆಯ್ಕೆ ಸಮಿತಿ ಸಭೆ ನಡೆಯಲಿದೆ ಎಂದು ತಿಳಿಸಿದೆ. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಭಾಗವಹಿಸಲಿದ್ದಾರೆ.

ಕೆಎಎಸ್‌ ವಿವಿಧ ಶ್ರೇಣಿಗಳಲ್ಲಿ ಕನಿಷ್ಠ, ಒಟ್ಟು ಎಂಟು ವರ್ಷ ಕರ್ತವ್ಯ ನಿರ್ವಹಿಸಿ, ಬಡ್ತಿಗೆ ಅರ್ಹರಾದ ಅಧಿಕಾರಿಗಳ ಹೆಸರನ್ನು ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿದೆ. ಈ ಪೈಕಿ, ಒಂದು ಹೆಸರನ್ನು ನಿಯಮದ ಪ್ರಕಾರ ಕನಿಷ್ಠ ಅವಧಿಯ ಕರ್ತವ್ಯ ನಿರ್ವಹಿಸಿಲ್ಲ ಎಂದು ಯುಪಿಎಸ್‌ಸಿ ಈಗಾಗಲೇ ತಿರಸ್ಕರಿಸಿದೆ. ಅರ್ಹರಿದ್ದ ಮೂವರು ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟಿದ್ದಾರೆ.

ಹಿಂಬಡ್ತಿ ಆತಂಕ: 1998, 1999, 2004ನೇ ಸಾಲಿನ ನೇಮಕಾತಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದ ಸಂದರ್ಭದಲ್ಲಿ (2015), ಕೆಎಎಸ್‌ ಅಧಿಕಾರಿಗಳ ಪೈಕಿ, 33 ಮಂದಿಗೆ ಯುಪಿಎಸ್‌ಸಿ, ‘ನ್ಯಾಯಾಲಯದ ಅಂತಿಮ ತೀರ್ಪಿಗೆ ಬದ್ಧ’ ಎಂಬ ಷರತ್ತು ವಿಧಿಸಿ ಐಎಎಸ್‌ಗೆ ಬಡ್ತಿ ನೀಡಿತ್ತು. ಆದರೆ, 1998ನೇ ಸಾಲಿನ ಕೆಎಎಸ್‌ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಹೈಕೋರ್ಟ್‌ ತೀರ್ಪಿನಂತೆ ಆಯ್ಕೆ ಪಟ್ಟಿಯನ್ನು ಕೆಪಿಎಸ್‌ಸಿ ಪರಿಷ್ಕರಿಸಿತ್ತು. ಅಲ್ಲದೆ, ಇದರಿಂದ ಐಎಎಸ್‌ಗೆ ಬಡ್ತಿ ಪಡೆದಿದ್ದ 9 ಅಧಿಕಾರಿಗಳಿಗೆ ಹಿಂಬಡ್ತಿ ಆತಂಕ ಎದುರಾಗಿದೆ. ಆದರೆ, ಈ ಪ್ರಕರಣದಲ್ಲಿ ಇತ್ತೀಚೆಗೆ ತೀರ್ಪು ನೀಡಿದ್ದ ಕರ್ನಾಟಕ ಆಡಳಿತ ನ್ಯಾಯಮಂಡಳಿ, ಆಯ್ಕೆ ಪಟ್ಟಿಯನ್ನು ಮತ್ತೆ ಪರಿಷ್ಕರಿಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಆದೇಶಿಸಿದೆ.

ಬಡ್ತಿ ನೀಡಲು ನಿರಾಕರಿಸಿದ್ದ ಯುಪಿಎಸ್‌ಸಿ!
26 ಅಧಿಕಾರಿಗಳಿಗೆ ಐಎಎಸ್‌ ಬಡ್ತಿ ನೀಡುವ ಸಂಬಂಧ, ಅರ್ಹರಾದ ಅಧಿಕಾರಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ವರ್ಷದ ಹಿಂದೆಯೇ ಡಿಒಪಿಟಿಗೆ ಕಳುಹಿಸಿತ್ತು. ಆದರೆ, ‘1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪಟ್ಟಿ ಪರಿಷ್ಕರಣೆಗೊಂಡಿರುವುದರಿಂದ, ಈ ಸಾಲಿನ ಅಧಿಕಾರಿಗಳಿಗೆ 2015ನೇ ಸಾಲಿನಲ್ಲಿ ನೀಡಿರುವ ಪದೋನ್ನತಿ ಪಟ್ಟಿ ಮರು ಪರಿಶೀಲಿಸದೆ, ಹೊಸದಾಗಿ ಬಡ್ತಿ ನೀಡಲು ಸಾಧ್ಯ ಇಲ್ಲ’ ಎಂದು ರಾಜ್ಯ ಸರ್ಕಾರಕ್ಕೆ ಯುಪಿಎಸ್‌ಸಿ ಪತ್ರ ಬರೆದಿತ್ತು.

ಯುಪಿಎಸ್‌ಸಿಗೆ ಸ್ಪಷ್ಟನೆ ನೀಡಿದ್ದ ಮುಖ್ಯ ಕಾರ್ಯದರ್ಶಿ, ‘2015ರ ಐಎಎಸ್‌ ಪದೋನ್ನತಿ ಪಟ್ಟಿಯ ಪರಿಷ್ಕರಣೆ, ನಂತರದ ಸಾಲಿಗೆ ಶಿಫಾರಸು ಮಾಡಿರುವ ಅಧಿಕಾರಿಗಳ ಜ್ಯೇಷ್ಠತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT