ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಇಳಿಸದಿದ್ದರೆ ಹೋರಾಟ ತೀವ್ರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

Last Updated 20 ಸೆಪ್ಟೆಂಬರ್ 2021, 8:17 IST
ಅಕ್ಷರ ಗಾತ್ರ

ಬೆಂಗಳೂರು: 'ಬಿಜೆಪಿ ಸರ್ಕಾರ ದಿನನಿತ್ಯ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಜನರ ಬದುಕು ದುಸ್ಥಿತಿಗೆ ತಲುಪಿದೆ. ಯಾರಿಗೂ ಸಂಬಳ ಹೆಚ್ಚಾಗಿಲ್ಲ. ಪಿಂಚಣಿ ಹೆಚ್ಚಾಗಿಲ್ಲ. ಕೋವಿಡ್ ಸಂದರ್ಭದಲ್ಲಿ ಯಾರಿಗೂ ಪರಿಹಾರವೂ ಸಿಕ್ಕಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಚೇರಿಯಿಂದ ವಿಧಾನಸೌಧದವರೆಗೆ ಸೈಕಲ್ ಜಾಥಾ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸರ್ಕಾರದ ಈ ಜನವಿರೋಧಿ ನೀತಿ ವಿರೋಧಿಸಿ ನಾವು ಈ ಪ್ರತಿಭಟನೆ ಮಾಡಿದ್ದೇವೆ. ಜನರ ಪರ ಧ್ವನಿ ಎತ್ತಲು ಕಳೆದ ವಾರ ಎತ್ತಿನ ಗಾಡಿಯಲ್ಲಿ ಸದನಕ್ಕೆ ಬಂದಿದ್ದೆವು. ಇಂದು ಸೈಕಲ್ ಮೂಲಕ ಬಂದಿದ್ದೇವೆ. ಸರ್ಕಾರ ಬೆಲೆ ಇಳಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇರುವಾಗ ಅದರ ಲಾಭ ಜನಸಾಮಾನ್ಯರಿಗೆ ಸಿಗುವಂತೆ ಮಾಡಿಲ್ಲ. ಪೆಟ್ರೋಲ್ ಬೆಲೆ ₹ 100 ರ ಗಡಿ ದಾಟಿದೆ, ಡೀಸೆಲ್ ₹ 94 ಆಗಿದೆ. ಅಡುಗೆ ಅನಿಲ ₹ 880 ಆಗಿದೆ. ಇದರಿಂದ ಇತರೆ ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗಿದೆ’ ಎಂದರು.

‘ಪೆಟ್ರೋಲ್ ಬೆಲೆಯಲ್ಲಿ ₹ 25 ಡೀಸೆಲ್ ಬೆಲೆಯಲ್ಲಿ ₹ 20 ಹಾಗೂ ಅಡುಗೆ ಅನಿಲದ ಬೆಲೆ ₹ 150 ಕಡಿಮೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತಮ್ಮ ತಾಳಿ, ಒಡವೆ ಮಾರಿಕೊಂಡು ಜೀವನ ಮಾಡುವ ಸ್ಥಿತಿಗೆ ತಲುಪಿದ್ದಾರೆ’ ಎಂದರು.

ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ನೇತೃತ್ವದಲ್ಲಿ ಸೈಕಲ್‌ ಜಾಥಾ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಶಾಸಕರಾದ ಪ್ರಿಯಾಂಕ್ ಖರ್ಗೆ, ಎನ್‌.ಎ. ಹ್ಯಾರಿಸ್, ಡಾ. ರಂಗನಾಥ್, ವಿಧಾನ ಪರಿಷತ್‌ ಸದಸ್ಯರಾದ ಎಸ್. ರವಿ, ಯು.ಬಿ. ವೆಂಕಟೇಶ್, ಗೋವಿಂದರಾಜು ಇದ್ದರು.

ಈ ಹಿಂದೆ ರಾಜ್ಯದಾದ್ಯಂತ ಸೈಕಲ್ ಜಾಥಾ, 100 ನಾಟೌಟ್‌ನಂಥ ಕಾರ್ಯಕ್ರಮಗಳ ಮೂಲಕ ಜನರ ಪರವಾಗಿ ಬೀದಿಗಿಳಿದು ಹೋರಾಟ ಮಾಡಿದ್ದ ಕಾಂಗ್ರೆಸ್, ವಿಧಾನ ಮಂಡಲ ಅಧಿವೇಶನದ ಮೊದಲ ದಿನ ಎತ್ತಿನಗಾಡಿ ಯಾತ್ರೆ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಈ ಹೋರಾಟದ ಮುಂದುವರಿದ ಭಾಗವಾಗಿ ಸೈಕಲ್ ಜಾಥಾ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT