ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ-ಮುಖ್ಯ ಶಿಕ್ಷಕ ಕಾಶಿನಾಥ ಮತ್ತೆ ಸಿಐಡಿ ಕಸ್ಟಡಿಗೆ

ಕಲಬುರಗಿ: ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ, ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಆರೋಪಿ ಕಾಶಿನಾಥಗೆ ಮತ್ತೆ 7 ದಿನ ಸಿಐಡಿ ಕಸ್ಟಡಿಗೆ ನೀಡಲಾಗಿದೆ.
ಶುಕ್ರವಾರ ಆರೋಪಿಯನ್ನು ಸಿಐಡಿ ಅಧಿಕಾರಿಗಳು ವಿವಿಧ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿದರು. ಮೇ 2ರಂದು ಸಿಐಡಿ ಅಧಿಕಾರಿಗಳ ಎದುರು ಶರಣಾಗಿದ್ದ ಕಾಶಿನಾಥಗೆ ಮೇ 11ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
‘ಜ್ಞಾನಜ್ಯೋತಿ ಶಾಲೆಯಲ್ಲಿ ತೆರೆದಿದ್ದ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆಸುವಲ್ಲಿ ಆರೋಪಿ ಮುಖ್ಯ ಪಾತ್ರ ವಹಿಸಿದ್ದ. ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಸಾಗಣೆ, ಒಎಂಆರ್ ಶೀಟ್ನಲ್ಲಿ ಸರಿ ಉತ್ತರ ತಿದ್ದಿಸುವುದು, ಪ್ರಶ್ನೆ ಪತ್ರಿಕೆ ಬಹಿರಂಗ ಮಾಡಿದ್ದು ಮತ್ತು ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ದಾಖಲೆಗಳನ್ನು ನಾಪತ್ತೆ ಮಾಡುವಲ್ಲೂ ಪಾತ್ರ ವಹಿಸಿದ್ದ’ ಎಂದು ಮೂಲಗಳು ತಿಳಿಸಿವೆ.
‘ಎಂ.ಎಸ್. ಇರಾನಿ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಬಂಧಿತನಾದ ಪ್ರಭು ಎಂಬ ಅಭ್ಯರ್ಥಿಯ ಅವ್ಯವಹಾರ ಕುದುರಿಸುವಲ್ಲೂ ಆರೋಪಿ ಭಾಗಿಯಾದ ಬಗ್ಗೆ ಶಂಕೆಯಿದೆ’ ಎಂದು ಮೂಲಗಳು ತಿಳಿಸಿವೆ.
ಒಂದೇ ಬ್ಯಾರಕ್ನಲ್ಲಿ ಆರೋಪಿಗಳ ದಂಡು
ಪಿಎಸ್ಐ ನೇಮಕಾತಿ ಹಗರಣದ ಆರೋಪಿಗಳನ್ನು, ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಇತರ ವಿಚಾರಣಾಧೀನ ಕೈದಿಗಳ ಜೊತೆಗೆ ಒಂದೇ ಬ್ಯಾರಕ್ನಲ್ಲಿ ಇರಿಸಲಾಗಿದೆ.
‘ಪುರುಷರ ವಿಭಾಗದ ಒಂದು ಬ್ಯಾರಕ್ನಲ್ಲಿ 31 ವಿಚಾರಣಾಧೀನ ಕೈದಿಗಳಿದ್ದು, ಇದರಲ್ಲಿ ಪಿಎಸ್ಐ ಹಗರಣದವರೇ ಹೆಚ್ಚಿದ್ದಾರೆ. ಮಹಿಳಾ ವಿಭಾಗದಲ್ಲಿ ಕೂಡ ದಿವ್ಯಾ ಹಾಗರಗಿ ಸೇರಿ ಶಾಲೆಯ ಶಿಕ್ಷಕಿಯರನ್ನೂ ಒಂದೇ ಕಡೆ ಇರಿಸಲಾಗಿದೆ’ ಎಂದು ಜೈಲಿನ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.