ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವೈಎಸ್ಪಿ ಮನೆಯಲ್ಲಿ ‘ಒಎಂಆರ್‌’ ಟ್ರಂಕ್ ಬೀಗ, ಕೀಗಳು ಪತ್ತೆ

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ: ಆರೋಪಿಗಳ ಮನೆ ಮೇಲೆ ಸಿಐಡಿ ದಾಳಿ
Last Updated 14 ಮೇ 2022, 20:31 IST
ಅಕ್ಷರ ಗಾತ್ರ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಡಿವೈಎಸ್ಪಿ ಶಾಂತಕುಮಾರ್ ಮನೆ ಮೇಲೆ ಸಿಐಡಿ ಅಧಿಕಾರಿಗಳು ಶನಿವಾರ ದಾಳಿ ಮಾಡಿದ್ದು, ‘ಒಎಂಆರ್‌’ ಪ್ರತಿಗಳನ್ನು ಸಂಗ್ರಹಿಸಿಡುತ್ತಿದ್ದ ಟ್ರಂಕ್‌ ಬೀಗಗಳು ಹಾಗೂ ಕೀಗಳು ಪತ್ತೆಯಾಗಿವೆ.

ನ್ಯಾಯಾಲಯದಿಂದ ವಾರೆಂಟ್ ಪಡೆದುಕೊಂಡಿದ್ದ ಸಿಐಡಿ ಆರ್ಥಿಕ ಗುಪ್ತದಳ ವಿಭಾಗದ ಡಿವೈಎಸ್ಪಿ ಬಿ.ಕೆ. ಶೇಖರ್ ನೇತೃತ್ವದ ತಂಡ, ಶಾಂತಕುಮಾರ್ ಹಾಗೂ ಇತರೆ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿತು. ಬೆಳಿಗ್ಗೆಯಿಂದ ಸಂಜೆಯವರೆಗೂ ಶೋಧ ನಡೆಸಿತು.

‘ಪೊಲೀಸ್ ನೇಮಕಾತಿ ವಿಭಾಗದ ಹಲವು ದಾಖಲೆಗಳನ್ನು ಹಾಗೂ ಕೆಲ ಅಭ್ಯರ್ಥಿಗಳು ನೀಡಿದ್ದ ಹಣವನ್ನು ಆರೋಪಿಗಳು, ತಮ್ಮ ಮನೆಯಲ್ಲಿಟ್ಟುಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಇದ್ದಿದ್ದರಿಂದ, ಪ್ರತ್ಯೇಕ ತಂಡಗಳ ಮೂಲಕ ಏಕಕಾಲದಲ್ಲಿ ದಾಳಿ ಮಾಡಲಾಯಿತು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಆಡುಗೋಡಿ ಪೊಲೀಸ್ ವಸತಿ ಸಮುಚ್ಚಯದಲ್ಲಿರುವ ಶಾಂತಕುಮಾರ್ ಮನೆಯಲ್ಲಿ ಶೋಧ ನಡೆಸಲಾಯಿತು. ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆಯ ಒಎಂಆರ್ ಪ್ರತಿಗಳನ್ನು ಸಂಗ್ರಹಿಸಿಟ್ಟಿದ್ದ ಟ್ರಂಕ್‌ಗಳ ಬೀಗಗಳು ಹಾಗೂ ಕೀಗಳು ಪತ್ತೆಯಾದವು. ನೇಮಕಾತಿ ವಿಭಾಗಕ್ಕೆ ಸಂಬಂಧಪಟ್ಟ ಸಿ.ಡಿ.ಗಳು ಮತ್ತು ಪೆನ್‌ಡ್ರೈವ್ ಕೂಡ ಸಿಕ್ಕಿವೆ’ ಎಂದೂ ತಿಳಿಸಿವೆ.

'ನಿಗದಿತ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಒಎಂಆರ್ ಪ್ರತಿಗಳನ್ನು ಟ್ರಂಕ್‌ನಲ್ಲಿ ಸಂಗ್ರಹಿಸಿ ಬೆಂಗಳೂರಿನ ಪೊಲೀಸ್ ನೇಮಕಾತಿ ವಿಭಾಗಕ್ಕೆ ಕಳುಹಿಸಲಾಗಿತ್ತು. ಅಂಥ ಟ್ರಂಕ್‌ಗಳನ್ನು ಅಕ್ರಮವಾಗಿ ತೆರೆದು ಒಎಂಆರ್‌ ಪ್ರತಿಗಳನ್ನು ಹೊರ ತೆಗೆದು ತಿದ್ದಿರುವ ಅನುಮಾನವಿತ್ತು. ಇದೀಗ ಟ್ರಂಕ್‌ಗಳ ಬೀಗಗಳು ಹಾಗೂ ಕೀಗಳು ಸಿಕ್ಕಿದ್ದು, ಪ್ರಕರಣಕ್ಕೆ ಪುರಾವೆಯಾಗಿ ಪರಿಗಣಿಸಲಾಗುವುದು’ ಎಂದೂ ಹೇಳಿವೆ.

₹ 16 ಲಕ್ಷ ನಗದು ಪತ್ತೆ: ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಶ್ರೀಧರ್‌ ಅವರ ಬಸವೇಶ್ವರ
ನಗರದ ಶಾರದಾ ಕಾಲೊನಿಯಲ್ಲಿರುವ ಮನೆ ಮೇಲೂ ದಾಳಿ ನಡೆದಿದೆ.

‘ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ಶ್ರೀಧರ್‌ನನ್ನು ಬಂಧಿಸಿ ಕಸ್ಟಡಿಗೆ ಪಡೆಯಲಾಗಿದೆ. ಆತನ ಮನೆ
ಯಲ್ಲಿ ₹ 16 ಲಕ್ಷ ನಗದು ಸಿಕ್ಕಿದ್ದು, ಅದನ್ನು ಜಪ್ತಿ ಮಾಡಲಾಗಿದೆ. ಜೊತೆಯಲ್ಲಿ, ಕೆಲ ದಾಖಲಾತಿಗಳೂ ಪತ್ತೆಯಾಗಿವೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಸಬ್‌ ಇನ್‌ಸ್ಪೆಕ್ಟರ್‌ಗಳಾದ ಲೋಕೇಶಪ್ಪ, ಮಂಜುನಾಥ್ ಮನೆಯಲ್ಲೂ ಪರಿಶೀಲನೆ ನಡೆಸಲಾಯಿತು’ ಎಂದೂ ತಿಳಿಸಿವೆ.

‘ಮಾಹಿತಿ ನೀಡದ ಡಿವೈಎಸ್ಪಿ’

‘ಪಿಎಸ್‌ಐ ಅಕ್ರಮ ಪ್ರಕರಣದಲ್ಲಿ ಶಾಂತಕುಮಾರ್ ಭಾಗಿಯಾಗಿರುವುದಕ್ಕೆ ಪುರಾವೆಗಳು ಇವೆ. ಅವುಗಳನ್ನು ಮುಂದಿಟ್ಟು ವಿಚಾರಣೆ ನಡೆಸಿದರೂ ಶಾಂತಕುಮಾರ್ ಯಾವುದೇ ಮಾಹಿತಿ ಬಾಯ್ಬಿಡುತ್ತಿಲ್ಲ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಕೆಲ ಪ್ರಶ್ನೆಗಳಿಗಷ್ಟೇ ಉತ್ತರಿಸುವ ಆರೋಪಿ, ಬಹುತೇಕ ಪ್ರಶ್ನೆಗಳಿಗೆ ಮೌನವಾಗುತ್ತಿದ್ದಾರೆ. ಪ್ರಕರಣದಲ್ಲಿ ಪ್ರಭಾವಿಗಳು ಭಾಗಿಯಾಗಿರುವ ಮಾಹಿತಿ ಇದ್ದು, ಕೆಲದಿನ ವಿಚಾರಣೆ ಬಳಿಕವೇ ಎಲ್ಲವೂ ಗೊತ್ತಾಗಲಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT