ಗುರುವಾರ , ಜೂನ್ 30, 2022
22 °C

ಪಿಎಸ್‌ಐ ನೇಮಕಾತಿ ಅಕ್ರಮ: ಮರಳು ಉದ್ಯಮಿಗೂ ದಿವ್ಯಾ ಹಾಗರಗಿ ಪರಿಚಯ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದ ಆರೋಪಿ ದಿವ್ಯಾ ಹಾಗರಗಿ ಅವರೊಂದಿಗೆ ಮಹಾರಾಷ್ಟ್ರದ ಸೊಲ್ಲಾಪುರದ ಮರಳು ಉದ್ಯಮಿ ಸುರೇಶ ಕಾಟೇಗಾಂವ ಮತ್ತು ಕಾಳಿದಾಸ ಸಹ ಸಿಐಡಿಗೆ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣಕ್ಕೂ ಇವರಿಗೆ ಏನು ಸಂಬಂಧ ಎಂಬ ಜಾಡು ಹಿಡಿದು ಸಿಐಡಿ ತನಿಖೆ ಆರಂಭಿಸಿದೆ.

ದಿವ್ಯಾ ಹಾಗರಗಿ ಹಾಗೂ ಅವರ ಸಹಚರರಿಗೆ ಆಶ್ರಯ ನೀಡಿದ ಆರೋಪ ಸುರೇಶ ಕಾಟೇಗಾಂವ, ಕಾಳಿದಾಸ ಮೇಲಿದೆ. ಇದೂವರೆಗೂ ಕೇಳದೇ ಇದ್ದ ಈ ‘ಹೊಸ ಮುಖಗಳು’ ಈಗ ಏಕಾಏಕಿಯಾಗಿ ಪ್ರಕರಣದಲ್ಲಿ ಕಾಣಿಸಿಕೊಂಡಿವೆ. 

‘ಅಫಜಲಪುರದ ಹಿರಿಯ ರಾಜಕಾರಣಿಯೊಬ್ಬರ ಮೂಲಕ ದಿವ್ಯಾ ಹಾಗೂ ಸುರೇಶ ಅವರ ಪರಿಚಯವಾಗಿತ್ತು. ಜಿಲ್ಲೆಯ ಭೀಮಾತೀರದಲ್ಲಿ ಮರಳು ಗುತ್ತಿಗೆ ಪಡೆದವರಲ್ಲಿ ಸುರೇಶ ಕೂಡ ಒಬ್ಬರು. ಮಹಾರಾಷ್ಟ್ರದ ಸೊಲ್ಲಾಪುರ ಹಾಗೂ ಪುಣೆಯಲ್ಲಿ ಅವರು ಬೇರೆ ಉದ್ಯಮಗಳನ್ನೂ ಹೊಂದಿದ್ದಾರೆ. ಹೀಗಾಗಿ, ದಿವ್ಯಾ ಅವರು ಮಹಾರಾಷ್ಟ್ರಕ್ಕೆ ಹೋಗಿ ಅವರ ಬಳಿ ತಲೆಮರೆಸಿ
ಕೊಂಡಿದ್ದರು’ ಎಂದು ಸಿಐಡಿ ಮೂಲಗಳು ಮಾಹಿತಿ ನೀಡಿವೆ.

ಪುಣೆಯಲ್ಲೇ ಠಿಕಾಣೆ?

ರುದ್ರಗೌಡ ಪಾಟೀಲ ಏ.23ರಂದು ಮಹಾರಾಷ್ಟ್ರದ ಪುಣೆಯ ಹತ್ತಿರ ಸೆರೆ ಸಿಕ್ಕರು. ಇದಕ್ಕೂ ಮುನ್ನ ಅವರು ಸೊಲ್ಲಾಪುರದಲ್ಲಿ ತಲೆಮರೆಸಿಕೊಂಡಿದ್ದರು. ಶುಕ್ರವಾರ ಬಂಧಿಸಲಾದ ದಿವ್ಯಾ ಹಾಗರಗಿ ಹಾಗೂ ಇತರರು ಕೂಡ ಪುಣೆ ನಗರದಲ್ಲೇ ಸಿಕ್ಕಿಬಿದ್ದಿದ್ದಾರೆ. ಇದಕ್ಕೂ ಮುನ್ನ ಅವರು ಸೊಲ್ಲಾಪುರದ ಮರಳು ಉದ್ಯಮಿ ಮನೆಯಲ್ಲಿ ಆಶ್ರಯ ಪಡೆದಿದ್ದರು ಎಂಬುದು ವಿಚಾರಣೆ ವೇಳೆ
ಗೊತ್ತಾಗಿದೆ.

ದಿವ್ಯಾ ಸೆರೆ ಸಿಕ್ಕಿದ್ದು ಹೇಗೆ?‘: ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಶಹಾಬಾದ್ ‌ನಗರಸಭೆಯ ದ್ವಿತೀಯ ದರ್ಜೆ ಸಹಾಯಕಿ ಜ್ಯೋತಿ ಪಾಟೀಲ ಎಂಬುವವರನ್ನು ಗುರುವಾರ ವಶಕ್ಕೆ ಪಡೆದಿದ್ದರು. ಜ್ಞಾನಜ್ಯೋತಿ ಶಾಲೆ ಯಲ್ಲಿನ ಕೇಂದ್ರದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದಿದ್ದ ಸೇಡಂನ ಶಾಂತಿಬಾಯಿ ಬಸ್ಯನಾಯ್ಕ ಎಂಬುವ ವರಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳುವಲ್ಲಿ ಸಹಕರಿಸಿದ ಆರೋಪ‌ ಇವರ ಮೇಲಿತ್ತು.

ಜ್ಯೋತಿ ಪಾಟೀಲ ಅವರ ಮೊಬೈಲ್‌ ಕರೆಗಳ ಮಾಹಿತಿಯನ್ನು ಸಿಐಡಿ ತಂಡ ಜಾಲಾಡಿದಾಗ, ಆರೋಪಿಗಳಲ್ಲಿ ಒಬ್ಬರು ಜ್ಯೋತಿ ಪಾಟೀಲ ಅವರ ಜೊತೆ ಸಂಪರ್ಕದಲ್ಲಿ ಇರುವುದು ಗೊತ್ತಾಯಿತು. ಆ ಮೊಬೈಲ್‌ ಲೋಕೇ ಷನ್‌ ಪತ್ತೆ ಹಚ್ಚಿದ ತನಿಖಾಧಿಕಾರಿಗಳು, ಮಹಾರಾಷ್ಟ್ರದ ಪೊಲೀಸರ ನೆರವಿನೊಂದಿಗೆ ಆರೋಪಿಗಳನ್ನು ಬಂಧಿಸಿದರು ಎಂದು ಮೂಲಗಳು ತಿಳಿಸಿವೆ.

ಆರೋಪಿಗಳಲ್ಲಿ ಬಹುತೇಕರು ಈ ಅವಧಿಯಲ್ಲಿ ಮೊಬೈಲ್‌ ಬಳಸುತ್ತಿರಲಿಲ್ಲ. ಜ್ಯೋತಿ ಪಾಟೀಲ ಜೊತೆ ಸಂಪರ್ಕದಲ್ಲಿರುವ ಒಬ್ಬರು ಪದೇ ಪದೇ ಸಿಮ್‌ ಬದಲಿಸುತ್ತಿದ್ದರು. ಹೀಗಾಗಿ ಅವರ ಪತ್ತೆ ಕಷ್ಟಕರವಾಗಿತ್ತು ಎಂಬುದು ಸಿಐಡಿ ಮೂಲಗಳ ಮಾಹಿತಿ. ಆದರೆ, ಜ್ಯೋತಿ ಸೆರೆಸಿಕ್ಕ ಬಳಿಕ ಅವರಿಂದ ಮೊಬೈಲ್‌ ಸಂಖ್ಯೆಗಳನ್ನು ಪತ್ತೆ ಮಾಡಿದ ಅಧಿಕಾರಿಗಳು ದಿವ್ಯಾ ಬಂಧಿಸುವಲ್ಲಿ ಯಶಸ್ವಿಯಾದರು.

 

ನಾಲ್ವರ ವಿರುದ್ಧ ಬಂಧನ ವಾರಂಟ್‌

ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ, ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿ, ಇವರ ಸಹೋದರ ರವೀಂದ್ರ ಮೇಳಕುಂದಿ ಹಾಗೂ ಒಬ್ಬ ಶಿಕ್ಷಕಿ ವಿರುದ್ಧ ಇಲ್ಲಿಯ 3ನೇ ಜೆಎಂಎಫ್‌ ನ್ಯಾಯಾಲಯದ ಪ್ರಭಾರಿ ನ್ಯಾಯಾಧೀಶ ಸಂತೋಷ ಶ್ರೀವಾಸ್ತವ ಅವರು ಬಂಧನದ ವಾರಂಟ್‌ ಹೊರಡಿಸಿದ್ದಾರೆ.

ಸಿಐಡಿ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಶಿವಶರಣಪ್ಪ ಹೋತಪೇಟ ಅವರು ವಾದ ಮಂಡಿಸುತ್ತಿದ್ದಾರೆ.

 

ದಿವ್ಯಾ ಸುತ್ತಲೇ ಗಿರಕಿ ಹೊಡೆದ ಪ್ರಕರಣ

2021ರ ಅಕ್ಟೋಬರ್‌ 3ರಂದು ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆದ ಇಲ್ಲಿನ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯೇ ಈ ಎಲ್ಲ ಅಕ್ರಮಗಳ ಕೇಂದ್ರಸ್ಥಾನ. ಈ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದವರ ಪೈಕಿ 11 ಮಂದಿ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದರು. ಈ ಪೈಕಿ ಏಳು ಮಂದಿಯನ್ನು ಬಂಧಿಸಲಾಗಿದೆ.

ಪರೀಕ್ಷಾ ಅಕ್ರಮದ ಕುರಿತು ಸಿಐಡಿ ಅಧಿಕಾರಿಗಳು ಇಲ್ಲಿನ ಚೌಕ್‌ ಪೊಲೀಸ್‌ ಠಾಣೆಯಲ್ಲಿ ಏ. 9ರಂದು ಎಫ್‌ಐಆರ್‌ ದಾಖಲಿಸಿದ್ದರು. ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ ದಿನದಿಂದಲೇ ದಿವ್ಯಾ ಹಾಗೂ ಇತರ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಅಧಿಕಾರಿಗಳು ಆರು ತಂಡಗಳನ್ನು ರಚಿಸಿಕೊಂಡು 18 ದಿನಗಳಿಂದ ಅವರ ಹುಡುಕಾಟ ನಡೆಸಿದ್ದರು.

ಏತನ್ಮಧ್ಯೆ, ಸ್ಥಳೀಯ ನ್ಯಾಯಾಲಯವು ದಿವ್ಯಾ ಹಾಗೂ ಇತರ ಆರು ಆರೋಪಿಗಳ ವಿರುದ್ಧ ಬಂಧನ ವಾರಂಟ್‌ ಹೊರಡಿಸಿತ್ತು. ವಾರದಲ್ಲಿ ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆಯನ್ನೂ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು