ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಶುದ್ಧ ಹನಿ ನೀರು ಇನ್ನೂ ಸಿಕ್ಕಿಲ್ಲ

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್
Last Updated 21 ನವೆಂಬರ್ 2020, 20:15 IST
ಅಕ್ಷರ ಗಾತ್ರ
ADVERTISEMENT
""

ಕಲಬುರ್ಗಿ: ‘ನಮ್ಮೂರಿನಲ್ಲಿ ತೆರೆದ ಬಾವಿ ನೀರು ಸರಬರಾಜಾಗುತ್ತದೆ. ಇದರಿಂದ ಕೆಲ ವರ್ಷಗಳ ಹಿಂದೆ ವಾಂತಿ ಭೇದಿ ಶುರುವಾಗಿತ್ತು. ಹೀಗಾಗಿ ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಯಿತು. ಮೂರು ತಿಂಗಳಲ್ಲೇ ಪತ್ರಾಸ್ ಶೆಡ್ ಕಿತ್ತು ಹೋಯ್ತು. ಅದರಲ್ಲಿನ ಯಂತ್ರಗಳೆಲ್ಲ ಮಾಯವಾದವು. ಒಂದು ಹನಿ ನೀರೂ ಇದುವರೆಗೆ ಸಿಕ್ಕಿಲ್ಲ...’

ಇದು ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮದ ಪಾರ್ವತಿ ಕರಬಸಪ್ಪ ಹೂಗಾರ ಅವರ ಆಕ್ರೋಶದ ಮಾತು.

‘ನಮ್ಮ ಊರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಮೂರು ತಿಂಗಳಾಗಿದೆ. ಇದುವರೆಗೂ ದುರಸ್ತಿಯಾಗಿಲ್ಲ. ಅಧಿಕಾರಿಗಳಿಗೆ ಸಮಸ್ಯೆ ಹೇಳಿದರೆ ನೆಪ ಹುಡುಕುತ್ತಾರೆ’ ಎಂಬುದು ರಾಯಚೂರು ತಾಲ್ಲೂಕಿನ ಶಾಖವಾದಿ ಗ್ರಾಮದ ಮಲ್ಲೇಶ್ ಅವರ ಆರೋಪ.

ಪಾರ್ವತಿ ಹಾಗೂ ಮಲ್ಲೇಶ್ ಅವರ ಅಭಿಪ್ರಾಯವೇ ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ, ಬೀದರ್, ಯಾದಗಿರಿ, ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಹಲವರದ್ದಾಗಿದೆ.

ಕಲಬುರ್ಗಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ₹ 4 ಲಕ್ಷದಿಂದ ₹ 10 ಲಕ್ಷ ವೆಚ್ಚ ಮಾಡಿ ವಿವಿಧ ಏಜೆನ್ಸಿಗಳು ಘಟಕಗಳನ್ನು ಅಳವಡಿಸಿವೆ. ಅವುಗಳ ಪೈಕಿ ಬಹುತೇಕ ಘಟಕಗಳು ಒಮ್ಮೆಯೂ ಶುದ್ಧ ನೀರು ಕೊಟ್ಟಿಲ್ಲ! ಕಲಬುರ್ಗಿ ತಾಲ್ಲೂಕಿನ ಹೇರೂರ (ಬಿ) ಗ್ರಾಮದ ಹೊರವಲಯದಲ್ಲಿರುವ ಘಟಕಕ್ಕೆ ಸಂಪರ್ಕ ಕಲ್ಪಿಸಲು ತೋಡಿದ ಕೊಳವೆ ಬಾವಿಯಲ್ಲಿ ನೀರೇ ಬಂದಿಲ್ಲ.

ಯಾದಗಿರಿ ಜಿಲ್ಲೆಯ ಕೆಂಭಾವಿ ಸಮೀಪದ ಕಿರದಳ್ಳಿ ತಾಂಡಾದಲ್ಲಿ ಬಹುಗ್ರಾಮ ಕುಡಿಯವ ನೀರು ಯೋಜನೆ ಸ್ಥಗಿತಗೊಂಡಿದೆ

ಆಳಂದ ತಾಲ್ಲೂಕಿನ ಮಾಡಿಯಾಳದಲ್ಲಿರುವ ಎರಡು, ಅಫಜಲಪುರ ತಾಲ್ಲೂಕಿನ ಗೊಬ್ಬುರ (ಬಿ) ಗ್ರಾಮದಲ್ಲಿರುವ ಒಂದು ಶುದ್ಧ ಕುಡಿಯುವ ನೀರಿನ ಘಟಕ ಮುಚ್ಚಿ ವರ್ಷಗಳೇ ಕಳೆದಿವೆ. ಅವೈಜ್ಞಾನಿಕ ಅಳವಡಿಕೆ, ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವುದು, ಗುತ್ತಿಗೆದಾರರು ಸಮರ್ಪಕವಾಗಿ ನಿರ್ವಹಿಸದ ಕಾರಣ ಗ್ರಾಮಸ್ಥರು ಇನ್ನೂ ಶುದ್ಧ ಕುಡಿಯುವ ನೀರಿನ ಕನವರಿಕೆಯಲ್ಲೇ ಇದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಶುದ್ಧನೀರಿ‌ನ ಘಟಕಗಳು 415 ಇದ್ದು, ಇದರಲ್ಲಿ 104 ಸ್ಥಗಿತಗೊಂಡಿವೆ. 311 ಸುಸ್ಥಿತಿಯಲ್ಲಿವೆ.

ಸುರಪುರ ತಾಲ್ಲೂಕಿನ ಕೆಂಭಾವಿ ಹೋಬಳಿ ವ್ಯಾಪ್ತಿಯಲ್ಲಿ ನೀರಿನಲ್ಲಿ ಆರ್ಸೆನಿಕ್ ಅಂಶ ಹೆಚ್ಚಾಗಿದ್ದು, ಜನರು ಚರ್ಮದ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳಿಗೆ ತುತ್ತಾಗಿದ್ದಾರೆ. ಕಿರದಳ್ಳಿ ತಾಂಡಾದಲ್ಲಿ ಅರ್ಸೇನಿಕ್ ಅಂಶ ನೀರಿನಲ್ಲಿ ಹೆಚ್ಚಾಗಿದೆ. ಶುದ್ಧ ನೀರಿನ ಘಟಕ ಇದ್ದರೂ ದುರಸ್ತಿ ಬಂದಾಗ ಅದೇ ನೀರು ಕುಡಿಯುವ ಪರಿಸ್ಥಿತಿ ಇದೆ.

ರಾಯಚೂರು ಜಿಲ್ಲೆಯಲ್ಲಿ ಒಟ್ಟು 616 ಘಟಕಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 116 ಘಟಕಗಳು ಎರಡು ವರ್ಷಗಳಿಂದ ಸ್ಥಗಿತವಾಗಿವೆ. ರಾಯಚೂರು ತಾಲ್ಲೂಕಿನ ಜೇಗರಕಲ್, ದೇವಸೂಗೂರು, ಕಾಡ್ಲೂರು, ಸಗಮಕುಂಟ, ಚಿಕ್ಕಸೂಗೂರು, ಮನ್ಸಲಾಪುರ, ಡಿ.ಯದ್ಲಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೀರಿನ ಘಟಕಗಳು ಇದ್ದರೂ ಕೆಟ್ಟಿವೆ.

ಗ್ರಾಮ ಪಂಚಾಯಿತಿಯಿಂದ ನಿರ್ವಹಣೆ ಆಗುತ್ತಿರುವ ಘಟಕಗಳು ಮಾತ್ರ ಸಮರ್ಪಕವಾಗಿವೆ.
ಖಾಸಗಿ ಏಜೆನ್ಸಿಗಳಿಗೆ ವಹಿಸಿದ್ದ ಘಟಕಗಳ ನಿರ್ವಹಣೆ ಆಗುತ್ತಿಲ್ಲ. ಎರಡು ಏಜೆನ್ಸಿಗಳಿಗೆ ವಹಿಸಿದ್ದ 80ಕ್ಕೂ ಹೆಚ್ಚು ಘಟಕಗಳು ನಿರ್ವಹಣೆಯಾಗದೇ, ಕೆಟ್ಟುನಿಂತಿವೆ.

ಸಿರವಾರ ತಾಲ್ಲೂಕಿನ ಅತ್ತನೂರಿನಲ್ಲಿ ಮೂರು ಘಟಕಗಳಿದ್ದರೂ ನೀರಿನ ಗುಣಮಟ್ಟ ಸರಿಯಾಗಿಲ್ಲ. ಕುಡಿಯುವ ನೀರಿಗೆ ಜನರು ಕೆರೆ ನೀರನ್ನೇಆಶ್ರಯಿಸುತ್ತಿದ್ದಾರೆ. ಕೆರೆ ನೀರನ್ನು ಶುದ್ಧೀಕರಣ ಮಾಡಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಬೇಡಿಕೆ ಈಡೇರಿಲ್ಲ. ‘ಶುದ್ಧ ನೀರು ಸೇವಿಸಿದ ಕೆಲವರಿಗೆ ಮೊಣಕಾಲು ಬೇನೆ, ಮೈಕೈ ಬೇನೆ ಬಂತು. ಜನರೆಲ್ಲ ಆ ನೀರನ್ನು ಕುಡಿಯುವುದು ಬಿಟ್ಟ ಕಾರಣ ಘಟಕ ಮುಚ್ಚಲಾಗಿದೆ’ ಎಂದು ಅತ್ತನೂರು ಗ್ರಾಮಸ್ಥರು ಹೇಳುತ್ತಾರೆ.

‘ಜಿಲ್ಲೆಯಲ್ಲಿ ಸದ್ಯ 30ರಿಂದ 40 ಶುದ್ಧ ನೀರಿನ ಘಟಕಗಳನ್ನು ತುರ್ತಾಗಿ ದುರಸ್ತಿ ಮಾಡಬೇಕಿದೆ. ಇದಕ್ಕಾಗಿ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಈಚೆಗೆ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಿದ್ದು, ದುರಸ್ತಿ ಕೈಗೊಳ್ಳಲಾಗು
ವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.

*****

ನಿರ್ವಹಣೆ ಪೂರ್ಣಗೊಂಡ 75 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಾತ್ರ ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. ಉಳಿದ ಘಟಕಗಳನ್ನು ನಿರ್ವಹಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ
-ಡಾ. ರಾಜಾ ಪಿ., ಕಲಬುರ್ಗಿ ಜಿ.ಪಂ. ಸಿಇಓ

ನಮ್ಮ ಊರಿನ ಜನಸಂಖ್ಯೆ 15 ಸಾವಿರ, 18 ಗ್ರಾ.ಪಂ. ಸದಸ್ಯರಿದ್ದಾರೆ. ವರ್ಷದ ಹಿಂದೆ ಎರಡು ಶುದ್ಧ ಕುಡಿಯುವ ಘಟಕಗಳನ್ನು ಅಳವಡಿಸಿದ್ದಾರೆ. ಆದರೆ, ನಿರ್ವಹಣೆಯಿಲ್ಲದೇ ತುಕ್ಕು ಹಿಡಿದುಹೋಗಿವೆ
-ಭೀಮಾಶಂಕರ ಮಾಡಿಯಾಳ, ಮಾಡಿಯಾಳ, ಕಲಬುರ್ಗಿ ಜಿಲ್ಲೆ

(ಮಾಹಿತಿ: ಕಲಬುರ್ಗಿ ಬ್ಯುರೊ)

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT