ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನದಲ್ಲಿರುವುದು ಅದಾನಿ ಸರ್ಕಾರವೇ?: ರಾಹುಲ್ ಗಾಂಧಿಗೆ ಬಿಜೆಪಿ ಪ್ರಶ್ನೆ

Last Updated 8 ಅಕ್ಟೋಬರ್ 2022, 10:17 IST
ಅಕ್ಷರ ಗಾತ್ರ

‌ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಅವರನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ 'ಭಾಯ್' ಎಂದು ಸಂಬೋಧಿಸಿರುವುದು ಕಾಂಗ್ರೆಸ್‌ –ಬಿಜೆಪಿ ನಡುವೆ ಕೆಸರೆರೆಚಾಟಕ್ಕೆ ಕಾರಣವಾಗಿದೆ.

ಅಶೋಕ್ ಗೆಹಲೋತ್ ಹೇಳಿಕೆ ಉಲ್ಲೇಖಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ನರೇಂದ್ರ ಮೋದಿ ಸರ್ಕಾರವನ್ನು ಅದಾನಿ-ಅಂಬಾನಿ ಸರ್ಕಾರ ಎನ್ನುವ ರಾಹುಲ್‌ ಗಾಂಧಿ ಅವರೇ, ರಾಜಸ್ಥಾನದಲ್ಲಿರುವುದು ಅದಾನಿ ಸರ್ಕಾರವೋ, ಕಾಂಗ್ರೆಸ್‌ ಸರ್ಕಾರವೋ ಎಂದು ಪ್ರಶ್ನಿಸಿದೆ.

ಅಶೋಕ್ ಗೆಹಲೋತ್ ಹೇಳಿಕೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತವರ ಉದ್ಯಮಿ ಮಿತ್ರರ ವಿರುದ್ಧ ಸದಾ ಟೀಕೆ ಮಾಡುತ್ತಿರುವ ಕಾಂಗ್ರೆಸ್ ಮುಜುಗರಕ್ಕೊಳಗಾಗಿದೆ.

ಬಿಜೆಪಿಯಿಂದ ತೀವ್ರ ಟೀಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಗೆಹಲೋತ್, ಕಾಂಗ್ರೆಸ್ ಎಂದಿಗೂ ಕೈಗಾರಿಕಾ ವಿರೋಧಿಯಲ್ಲ. ಹೂಡಿಕೆಯನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಹಮ್ಮಿಕೊಂಡಿರುವ ರಾಜಸ್ಥಾನ ಹೂಡಿಕೆ ಸಮಾವೇಶದಲ್ಲಿ ಸಿಎಂ ಗೆಹಲೋತ್ ಪಕ್ಕದಲ್ಲಿ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ಆಸೀನರಾಗಿದ್ದರು.

ಮುಂದಿನ ಐದರಿಂದ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ₹65,000 ಕೋಟಿ ಬೃಹತ್ ಹೂಡಿಕೆ ಮಾಡುವುದಾಗಿ ಅದಾನಿ ಘೋಷಿಸಿದ್ದರು. ಇದರಲ್ಲಿ ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಣ, 10,000 ಎಂಡಬ್ಲ್ಯು ಸೌರ ವಿದ್ಯುತ್ ಸೌಲಭ್ಯ, ಸಿಮೆಂಟ್ ಘಟಕದ ವಿಸ್ತರಣೆ ಮುಂತಾದ ಯೋಜನೆಗಳು ಸೇರಿವೆ.

ಗೆಹಲೋತ್ ತಮ್ಮ ಭಾಷಣದಲ್ಲಿ 'ಅದಾನಿ ಭಾಯ್' ಎಂದು ಸಂಬೋಧಿಸಿದ್ದರಲ್ಲದೆ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಪಟ್ಟ ಅಲಂಕರಿಸಿರುವುದಕ್ಕೆ ಅದಾನಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು.

ಮತ್ತೊಂದೆಡೆ ಭಾರತ್ ಜೋಡೊ ಯಾತ್ರೆಯ ನಡುವೆ ಉದ್ಯಮ ಮಿತ್ರರತ್ತ ಒಲವು ತೋರುತ್ತಿರುವ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರಿಸಿದರು. ರೈತರು ಹಾಗೂ ಬಂಡವಾಳಶಾಹಿಗಳಿಗೆ ಸಾಲ ನೀಡುವ ವಿಚಾರದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದರು.

ಏತನ್ಮಧ್ಯೆ ಸಂಸತ್ತಿನಲ್ಲಿ ಅದಾನಿ ವಿರುದ್ಧ ರಾಹುಲ್ ಭಾಷಣ ಮಾಡುತ್ತಿರುವ ವಿಡಿಯೊ ಹಂಚಿರುವ ರಾಜಸ್ಥಾನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ, ಒಂದೆಡೆ ಕೇಂದ್ರ ಸರ್ಕಾರವು ಅದಾನಿ ಹಾಗೂ ಅಂಬಾನಿ ಪರವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಮತ್ತೊಂದೆಡೆ ರಾಜಸ್ಥಾನ ಸಿಎಂ ಅಶೋಕ್ ಗೆಹಲೋತ್ ಉದ್ಯಮಿ ಪರವಾಗಿದ್ದಾರೆ ಎಂದು ಹೇಳಿದ್ದಾರೆ.

ನಿನ್ನೆಯ ತನಕ ವಿರೋಧಿಗಳಾಗಿದ್ದವರೂ ಹಣದ ಹರಿವಿನ ಆಸೆಗಾಗಿ ಇಂದು ಜೊತೆಯಲ್ಲಿದ್ದರೆ. ಅವರು ತಮ್ಮ ನಿಲುವನ್ನು ಬದಲಿಸಿದ್ದಾರೆ ಎಂದು ಗೆಹಲೋತ್ ವಿರುದ್ಧ ಟೀಕಿಸಿದ್ದಾರೆ.

ಅದಾನಿಗೆ ಗೆಹಲೋತ್ ಅಭಿನಂದಿಸುತ್ತಿರುವ ಮತ್ತು ಜೊತೆಗೆ ಕುಳಿತುಕೊಂಡಿರುವ ಚಿತ್ರವನ್ನು ಹಂಚಿರುವ ಬಿಜೆಪಿ ನಾಯಕರು, ಇದು ಕಾಂಗ್ರೆಸ್‌ ಹೈಕಮಾಂಡ್‌ಗೆ ಮಾಡಿರುವ ಕಪಾಳಮೋಕ್ಷ ಎಂದಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT