ಮಂಗಳವಾರ, ಮೇ 11, 2021
27 °C

ಪ್ರೊ.ನಂಜುಂಡಸ್ವಾಮಿ ನೆನೆದು ಭಾವುಕರಾದ ಟಿಕಾಯತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ವಾಸವಿದ್ದ ಮನೆ ಚಳವಳಿಯ ಮ್ಯೂಸಿಯಂ ಇದ್ದಂತೆ’ ಎಂದು ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯತ್ ಭಾವುಕರಾದರು.

ನಂಜುಂಡಸ್ವಾಮಿ ಅವರ ಮನೆಗೆ ಬಂದ ಟಿಕಾಯತ್ ಮತ್ತು ಮೋರ್ಚಾದ ಕಾರ್ಯದರ್ಶಿ ಯುದ್ಧವೀರ ಸಿಂಗ್ ಅವರನ್ನು ಸಾಮೂಹಿಕ ನಾಯಕತ್ವ ರೈತ ಸಂಘಟನೆಯ ಚುಕ್ಕಿ ನಂಜುಂಡಸ್ವಾಮಿ ಬರ ಮಾಡಿಕೊಂಡರು.

ಒಂದೆರಡು ನಿಮಿಷ ಕುಳಿತಿದ್ದ ಟಿಕಾಯತ್ ಅವರು, ನಂಜುಂಡಸ್ವಾಮಿ ಅವರು ಅಧ್ಯಯನ ಮತ್ತು ವಿಶ್ರಾಂತಿಗೆ ಬಳಸುತ್ತಿದ್ದ ಕೋಣೆಗೆ ಹೋದರು. ನಂಜುಂಡಸ್ವಾಮಿ ಬದುಕಿದ್ದಾಗ ಮಲಗುತ್ತಿದ್ದ ಮಂಚ, ಕುಳಿತುಕೊಳ್ಳುತ್ತಿದ್ದ ಕುರ್ಚಿಯಲ್ಲಿ ಕುಳಿತು ಭಾವುಕರಾದರು.

‘ಪ್ರೊಫೆಸರ್ ಮನೆಗೆ ಬಂದಾಗ ಅವರ ಪುಸ್ತಕಗಳು, ಇಲ್ಲಿರುವ ವಸ್ತುಗಳನ್ನು ನೋಡಿದರೆ ಅದೊಂದು ಚಳವಳಿಯ ಮ್ಯೂಸಿಯಂ ರೀತಿ ಕಾಣಿಸುತ್ತದೆ. ಅವರ ವಿಚಾರಧಾರೆಗಳು ನೆನಪಿಗೆ ಬರುತ್ತವೆ. ಪ್ರೊಫೆಸರ್ ಮತ್ತು ನಮ್ಮ ಕುಟುಂಬದ ಸಂಬಂಧ ಕೇವಲ ಹೋರಾಟಕ್ಕೆ ಸೀಮಿತ ಆಗಿರಲಿಲ್ಲ. ಮೂರ್ನಾಲ್ಕು ದಶಕ ಒಂದೇ ಕುಟುಂಬದಂತೆ ಇದ್ದೆವು. ಇಲ್ಲಿಗೆ ಬಂದರೆ ನಮ್ಮ ಮನೆಗೆ ಬಂದ ಅನುಭವವಾಗುತ್ತದೆ’ ಎಂದರು.

‘ರೈತರ ವಿಷಯ, ಅಂತರರಾಷ್ಟ್ರೀಯ ಕೃಷಿ ಕಾನೂನುಗಳು, 1993ರಲ್ಲಿ ಆದ ಗ್ಯಾಟ್ ಒಪ್ಪಂದದ ಬಗ್ಗೆ ಅವರು ನಮಗೆಲ್ಲಾ ಅರ್ಥ ಮಾಡಿಸುತ್ತಿದ್ದುದು ನೆನಪಿಗೆ ಬರುತ್ತಿದೆ. ನನ್ನ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಅವರಿಗೆ ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ. ಪ್ರೊಫೆಸರ್ ಅವರಿಗೆ ಹಿಂದಿ ಬರುತ್ತಿರಲಿಲ್ಲ. ಆದರೂ ಇಬ್ಬರು ಇಡೀ ದೇಶ ಸುತ್ತಿ ರೈತ ಚಳವಳಿ ಕಟ್ಟಿದರು. ಚಳವಳಿಗೆ ಭಾಷೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಅವರೇ ಸಾಕ್ಷಿ. ನಂಜುಂಡಸ್ವಾಮಿ ಮಕ್ಕಳು ಕೂಡ ಇಡೀ ದೇಶ ಸುತ್ತಿ ರೈತರನ್ನು ಸಂಘಟಿಸಬೇಕು’ ಎಂದು ಹೇಳಿದರು.

‘ಉತ್ತರ ಮತ್ತು ದಕ್ಷಿಣ ಭಾರತದ ಯುವ ಚಳವಳಿಗಾರರನ್ನು ಸೇರಿಸಿ ಅಮೃತಭೂಮಿಯಲ್ಲಿ ಹೊಸ ಸಮಸ್ಯೆ–ಸವಾಲುಗಳ ಬಗ್ಗೆ ಅಧ್ಯಯನ ಶಿಬಿರಗಳನ್ನು ಏರ್ಪಡಿಸಬೇಕು. ಇಂತಹ ಅಧ್ಯಯನ ಕೇಂದ್ರದ ಅಗತ್ಯದ ಬಗ್ಗೆ ಪ್ರೊಫೆಸರ್ ಅವರಿಗೆ 25 ವರ್ಷಗಳ ಹಿಂದೆಯೇ ತಿಳಿದಿತ್ತು. ಹೀಗಾಗಿಯೇ ಅಮೃತಭೂಮಿ ಸ್ಥಾಪಿಸಿದರು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು