ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ, ಡಿಕೆಶಿ ಹೊರಗಿಟ್ಟು ಸುರ್ಜೇವಾಲ ಸಭೆ

ಐದು ಜಿಲ್ಲೆಗಳ ಕಾಂಗ್ರೆಸ್‌ ಮುಖಂಡರಿಂದ ಅಭಿಪ್ರಾಯ ಸಂಗ್ರಹ
Last Updated 24 ಜುಲೈ 2021, 17:35 IST
ಅಕ್ಷರ ಗಾತ್ರ

ತುಮಕೂರು: ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶನಿವಾರ ಇಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆಯಿಂದ ಹೊರಗಿಟ್ಟು ಅಭಿಪ್ರಾಯ ಸಂಗ್ರಹಿಸಿದರು.

ಪಕ್ಷ ಸಂಘಟನೆ ಸಲುವಾಗಿ ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ನಾಯಕರ ಸಭೆ ನಗರದ ರೆಸಾರ್ಟ್‌ವೊಂದರಲ್ಲಿ ನಡೆಯಿತು.

ಪ್ರತಿ ಜಿಲ್ಲೆಯ ಮುಖಂಡರ ಸಭೆಯನ್ನು ಪ್ರತ್ಯೇಕವಾಗಿ ಸುರ್ಜೇವಾಲ ನಡೆಸಿದರು. ರಾಜ್ಯದ ಇಬ್ಬರೂ ನಾಯಕರನ್ನು ಸಭೆಯಿಂದ ದೂರವಿಟ್ಟಿದ್ದರು. ಬೆಳಿಗ್ಗೆಯಿಂದ ಸಂಜೆವರೆಗೂ ಏಕಾಂಗಿಯಾಗಿ ಆಯಾ ಜಿಲ್ಲೆಯ ನಾಯಕರಿಂದ ಮಾಹಿತಿ ಪಡೆದುಕೊಂಡರು.

ಕೋಲಾರ ಜಿಲ್ಲೆಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸುವ ಸಮಯದಲ್ಲಿ ಮಾತ್ರ ಸಿದ್ದರಾಮಯ್ಯ, ಶಿವಕುಮಾರ್ ಅವರನ್ನು ಕರೆಸಲಾಯಿತು. ಸಭೆ ಆರಂಭದ ಐದು ನಿಮಿಷಗಳ ಕಾಲ ಇಬ್ಬರು ಇದ್ದರು. ನಂತರ ಹೊರಗೆ ಕಳುಹಿಸಲಾಯಿತು. ಬಳಿಕ ಸುರ್ಜೇವಾಲ ಅವರೇ ಸಭೆಯನ್ನು ಮುಂದುವರಿಸಿದರು. ಐದು ಜಿಲ್ಲೆಗಳ ಮುಖಂಡರ ಜತೆಗೂ ಸಭೆ ನಡೆಸಿದರು. ಪಕ್ಷ ಬಲಪಡಿಸಲು ಪ್ರತಿ ಜಿಲ್ಲೆಗೂ ಪ್ರತ್ಯೇಕ ಕಾರ್ಯತಂತ್ರ ರೂಪಿಸಲು ನಿರ್ದೇಶನ ನೀಡಿದರು ಎಂದು ಮೂಲಗಳು ತಿಳಿಸಿವೆ.

ಪಕ್ಷ ಸಂಘಟನೆಗೆ ಇರುವ ತೊಡಕುಗಳು, ಮುಂದೆ ಬಲಪಡಿಸಲು ಏನೆಲ್ಲ ಕಾರ್ಯತಂತ್ರ ರೂಪಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಿದ್ಧತೆ ಮಾಡಿಕೊಳ್ಳುವುದು, ತಳಮಟ್ಟದಿಂದ ಪಕ್ಷ ಸಂಘಟನೆಗೆ ಮಾಡುವಂತೆ ತಿಳಿಸಿದರು. ಮುಂದಿನ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧರಾಗುವಂತೆ ಸಲಹೆ ನೀಡಿದರು ಎನ್ನಲಾಗಿದೆ.

ಕಾಂಗ್ರೆಸ್ ತೆಗಿಬೇಕು!

ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಸಮಯದಲ್ಲಿ ‘ರಾಜ್ಯ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷ ತೆಗಿಯಬೇಕು’ ಎಂದು ಎರಡು ಬಾರಿ ಹೇಳಿದರು.

ನಂತರ ತಪ್ಪಿನ ಅರಿವಾಗಿ ಇಲ್ಲ, ’ಬಿಜೆಪಿ ತೆಗಿಯಬೇಕು’ ಎಂದು ಸ್ಪಷ್ಟಪಡಿಸಿದರು.

’ಬಿಎಸ್‌ವೈ ಬಳಸಿ, ಬಿಸಾಕಿದ ಬಿಜೆಪಿ‘

ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲ, ‘ಕೇಂದ್ರ, ರಾಜ್ಯದಲ್ಲಿ ಇರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪೌಷ್ಟಿಕ ಆಹಾರವಾಗಿ ಮಕ್ಕಳಿಗೆ ಮೊಟ್ಟೆ ನೀಡುವಲ್ಲೂ ಕಮಿಷನ್ ಪಡೆದುಕೊಳ್ಳಲು ಸಚಿವರು ಮುಂದಾಗಿದ್ದಾರೆ. ಇದಕ್ಕಿಂತ ಹೀನ ಕೃತ್ಯ ಮತ್ತೊಂದಿಲ್ಲ’ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಪಕ್ಷದ ನಾಯಕರನ್ನು ಬಳಸಿಕೊಂಡು ಕಸದ ತೊಟ್ಟಿಗೆ ಬಿಸಾಡುತ್ತಾರೆ. ಬಿಜೆಪಿ ಕಟ್ಟಿ ಬೆಳೆಸಿದ ಎಲ್.ಕೆ.ಅಡ್ವಾನಿ, ಮುರುಳಿ ಮನೋಹರ ಜೋಷಿ, ಜಸ್ವಂತ್ ಸಿಂಗ್ ಅವರಂತಹ ನಾಯಕರನ್ನು ಕಸದ ತೊಟ್ಟಿಗೆ ಹಾಕಿದ್ದಾರೆ. ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಅದೇ ಗತಿ ಬಂದಿದೆ. ಅವರನ್ನೂ ಬಳಸಿಕೊಂಡು ಬಿಸಾಡಲಾಗುತ್ತಿದೆ ಎಂದು ದೂರಿದರು.

ಸಿದ್ದರಾಮಯ್ಯ ಮಾತನಾಡಿ, ‘ಸೋಲಿನ ಭಯದಿಂದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ಬಿಜೆಪಿ ಸಿದ್ಧವಿಲ್ಲ. ಆದರೆ ರಾಜ್ಯ ಚುನಾವಣೆ ಆಯೋಗ ಮೀಸಲಾತಿ ಪಟ್ಟಿ ಪ್ರಕಟಿಸಿ, ಸಕಾಲಕ್ಕೆ ಸಿದ್ಧತೆ ಮಾಡಿಕೊಂಡಿದೆ. ಡಿಸೆಂಬರ್ ಒಳಗೆ ಚುನಾವಣೆ ಬರಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT