ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಎಸ್ಟೇಟ್‌ ನಂಟಿದ್ದರೆ ಎತ್ತಂಗಡಿ: ಡಿ.ಸಿಗಳಿಗೆ ಬೊಮ್ಮಾಯಿ ಎಚ್ಚರಿಕೆ

ಎರಡನೇ ದಿನವೂ ಸತತ ಐದು ಗಂಟೆ ಸಭೆ ನಡೆಸಿದ ಸಿ.ಎಂ l ನಾನೇ ಬಾಸ್ ಎಂಬ ದರ್ಪ ಬಿಡಿ–ಸೂಚನೆ
Last Updated 31 ಡಿಸೆಂಬರ್ 2021, 18:33 IST
ಅಕ್ಷರ ಗಾತ್ರ

ಬೆಂಗಳೂರು: ‘ರಿಯಲ್‌ ಎಸ್ಟೇಟ್‌ ವ್ಯಕ್ತಿಗಳ ಜತೆ ನಂಟು ಇಟ್ಟುಕೊಂಡಿದ್ದರೆ ಮುಲಾಜಿಲ್ಲದೇ ಎತ್ತಂಗಡಿ ಮಾಡಬೇಕಾಗುತ್ತದೆ. ನಿಮ್ಮ ಕಚೇರಿಗಳಲ್ಲಿ ‘ಬಾಸಿಸಂ’ ಮಾಡುವುದನ್ನು ನಿಲ್ಲಿಸಿ; ಕಠಿಣ ಶ್ರಮ ಹಾಕಿ ಜನರ ಕೆಲಸಗಳನ್ನು ಮಾಡಿ ಇಲ್ಲವೇ ಬೇರೆ ಇಲಾಖೆ ಹುಡುಕಿಕೊಳ್ಳಿ. . .’

2021ರ ವರ್ಷದ ಕೊನೆಯ ದಿನ ಈ ರೀತಿ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯ ಚಾಟಿ ಬೀಸಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಭೆಯನ್ನು ಗುರುವಾರ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಬೊಮ್ಮಾಯಿ, ಶುಕ್ರವಾರ ಎಲ್ಲ ಜಿಲ್ಲಾಧಿಕಾರಿಗಳ ಸಭೆ ನಡೆಸಿದರು. ದಕ್ಷತೆ, ಪ್ರಾಮಾಣಿಕತೆ ರೂಢಿಸಿಕೊಂಡು ತ್ವರಿತಗತಿಯಲ್ಲಿ ಕೆಲಸ ಮಾಡುವಂತೆ ಅವರು ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದರು. ಸುಮಾರು ಐದು ಗಂಟೆಗಳ ಕಾಲ ಸಭೆ ನಡೆಸಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಪ್ರಗತಿಯಲ್ಲಿ ವೇಗ ಕಾಣದ ಜಿಲ್ಲಾಧಿಕಾರಿಗಳ ಕಿವಿ ಹಿಂಡಿದರು.

‘ಭೂವ್ಯವಹಾರಗಳ ವಿಷಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು. ರಿಯಲ್‌ಎಸ್ಟೇಟ್‌ ವ್ಯಕ್ತಿಗಳಿಂದ ದೂರ ಇರಬೇಕು. ಅವರ ಜತೆ ಯಾವುದೇ ರೀತಿಯ ನಂಟು ಇಟ್ಟುಕೊಳ್ಳಬಾರದು. ಒಂದು ವೇಳೆ ಯಾರಾದರೂ ಅಂತಹ ನಂಟು ಇಟ್ಟುಕೊಂಡಿದ್ದರೆ ಸುಮ್ಮನೆ ಬಿಡುವುದಿಲ್ಲ. ಸಾಮಾನ್ಯ ಜನರ ಕೆಲಸ ಮಾಡಲು ಆ ಹುದ್ದೆಗಳಲ್ಲಿ ಕೂತಿದ್ದೀರಿ ಎಂಬುದನ್ನು ಮರೆಯಬಾರದು. ‘ನಾನೇ ಬಾಸ್‌’ ಎಂಬ ದರ್ಪದ ಧೋರಣೆ ಇಟ್ಟುಕೊಳ್ಳಬೇಡಿ. ಇಂತಹ ಪ್ರವೃತ್ತಿಯಿಂದ ಜನಸಾಮಾನ್ಯರು ನರಳುವಂತಾಗುತ್ತದೆ. ಅದಕ್ಕೆ ಆಸ್ಪದ ನೀಡಬಾರದು’ ಎಂದು ಅವರು ಹೇಳಿದರು.

‘ಅಧಿಕಾರ ಎಂದರೆ ಜವಾಬ್ದಾರಿ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಜಿಲ್ಲಾ ಮ್ಯಾಜಿಸ್ಟ್ರೇಟ್‌ ಎಂಬ ಗತ್ತಿನಲ್ಲಿ ವರ್ತಿಸಬೇಡಿ. ಅಧಿಕಾರದಿಂದ ಹೆಚ್ಚು ವಿನಯಶೀಲರಾಗಬೇಕು. ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರ ಕಾರ್ಯವೈಖರಿ ಮೇಲೆ ನಿಗಾ ಇಡಿ. ಅವರಿಗೆ ಕೆಲಸ ಕೊಟ್ಟು ನಿಮ್ಮ ಹೊರೆ ಕಡಿಮೆ ಮಾಡಿಕೊಳ್ಳಿ. ನೀವು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಸರ್ಕಾರ ವರ್ಚಸ್ಸೂ ಹೆಚ್ಚಾಗುತ್ತದೆ’ ಎಂದು ಬೊಮ್ಮಾಯಿ ಕಿವಿಮಾತು
ಹೇಳಿದರು.

‘ನೀವು ಜನರ ಸೇವೆ ಮಾಡುವ ಸೇವಕರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಆದ್ದರಿಂದ ಜನರ ಮಧ್ಯೆ ಹೋಗಿಯೇ ಕೆಲಸ ಮಾಡಬೇಕು ಎಂದು ಬಯಸುತ್ತೇನೆ. ಕೆಳ ಹಂತದ ಅಧಿಕಾರಿಗಳು ಜಿಲ್ಲಾಧಿಕಾರಿಗಳಂತೆ ವರ್ತಿಸಲು ಅವಕಾಶ ಕೊಡಬೇಡಿ. ಸ್ವಂತಿಕೆ, ವಿವೇಚನೆ ಬಳಸಿ ಕೆಲಸ ಮಾಡಿ’ ಎಂದೂ ಸಲಹೆ ನೀಡಿದರು.

‘ಸರ್ಕಾರ ಮತ್ತು ಜನರ ಮಧ್ಯೆ ಜಿಲ್ಲಾಧಿಕಾರಿಗಳು ಬಹು ಮುಖ್ಯಕೊಂಡಿ. ನೀವು ಜನರಿಗೆ ಸ್ಪಂದಿಸದೇ ಕೆಲವರ ಹಿತಾಸಕ್ತಿಯಲ್ಲಿ ಕೆಲಸ ಮಾಡಿದರೆ, ಜಿಲ್ಲಾಧಿಕಾರಿಗಳಾಗಿರಲು ಅರ್ಹತೆ ಕಳೆದುಕೊಳ್ಳುತ್ತೀರಿ. ಇತರ ಐಎಎಸ್‌ ಅಧಿಕಾರಿಗಳಿಗೂ ನಿಮಗೂ ವ್ಯತ್ಯಾಸ ಇದೆ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಅವರು ಹೇಳಿದರು.

ವರ್ಷದೊಳಗೆ ಪ್ರಕರಣಗಳ ವಿಲೇವಾರಿಗೆ ಸೂಚನೆ

ಗೋಮಾಳ, ಬಗರ್‌ಹುಕುಂ, ಡೀಮ್ಡ್‌ ಅರಣ್ಯ ಪ್ರದೇಶಗಳ ವ್ಯಾಜ್ಯಗಳಿಗೆ ತಕ್ಷಣವೇ ಕಾನೂನು ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಇವುಗಳಿಗೆ ಪರಿಹಾರ ಸಿಗದೇ ಇರುವ ಕಾರಣ ಜನರು ಅನಿಶ್ಚಿತತೆಯಿಂದ ಬದುಕುತ್ತಿದ್ದಾರೆ. ಇದಕ್ಕಾಗಿ ಸರ್ಕಾರ ನಿಶ್ಚಿತ, ಸ್ಪಷ್ಟ ಆಡಳಿತ, ಗೊಂದಲಗಳಿಲ್ಲದ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಜಿಲ್ಲಾಧಿಕಾರಿಗಳು ಸವಾಲುಗಳಿಗೆ ಸ್ಪಷ್ಟತೆಯಿಂದ ಸಕಾರಾತ್ಮಕ ಪರಿಹಾರ ನೀಡಬೇಕು ಎಂದು ಹೇಳಿದರು.

ಐದು ವರ್ಷಗಳಿಂದ ಬಾಕಿ ಇರುವ ಜಮೀನು ವ್ಯಾಜ್ಯ ಮತ್ತು ನ್ಯಾಯಾಲಯ ಪ್ರಕರಣಗಳು ರೈತರ ಆರ್ಥಿಕ ಸ್ಥಿತಿಗತಿ ನಿರ್ಧರಿಸುತ್ತದೆ. ಆದ್ದರಿಂದ ತಹಶೀಲ್ದಾರ, ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಬಾಕಿ ಇರುವ ಕೋರ್ಟ್‌ ಪ್ರಕರಣಗಳು ಶೀಘ್ರದಲ್ಲಿ ಇತ್ಯರ್ಥವಾಗಬೇಕು. ಇದಕ್ಕೆ ಅವಶ್ಯಕತೆ ಇದ್ದಲ್ಲಿ, ಹೆಚ್ಚುವರಿ ತಹಶೀಲ್ದಾರ್‌, ಉಪವಿಭಾಗಾಧಿಕಾರಿಗಳ ನಿಯೋಜನೆಗೆ ಪ್ರಸ್ತಾವನೆ ಸಲ್ಲಿಸಬೇಕು. ಒಂದು ವರ್ಷದೊಳಗೆ ಎಲ್ಲ ನ್ಯಾಯಾಲಯಗಳ ಪ್ರಕರಣಗಳು ವಿಲೇವಾರಿ ಆಗಬೇಕು ಎಂದು ಸೂಚಿಸಿದರು.

‘10 ಗಂಟೆ ಕೆಲಸ ಮಾಡಿ; ಇಲ್ಲವೇ ಹೊರಡಿ’

‘ಜನರಿಗಾಗಿ ದಿನಕ್ಕೆ ಕನಿಷ್ಠ 10 ಗಂಟೆಗಳ ಕಾಲ ಕೆಲಸ ಮಾಡಲೇಬೇಕು. ಅಷ್ಟು ಮಾಡಲು ಆಗುವುದಿಲ್ಲವೇ, ಆಗದಿದ್ದರೆ ಆರಾಮವಾಗಿ ಕೆಲಸ ಮಾಡಬಹುದಾದ ಇಲಾಖೆಗಳನ್ನು ಹುಡುಕಿಕೊಂಡು ಹೋಗಿ. ನಾವು ಬೇರೆಯವರನ್ನು ಹುಡುಕಿಕೊಳ್ಳುತ್ತೇವೆ’ ಎಂದು ಬೊಮ್ಮಾಯಿ ಎಚ್ಚರಿಕೆ ಕೊಟ್ಟರು.

ಬೆಳೆ ಪರಿಹಾರ ನೀಡಲು ವಿಳಂಬ ಮಾಡಿದ ಜಿಲ್ಲಾಧಿಕಾರಿಗಳಿಗೆ ಮೇಲಿನಂತೆ ಮಾತಿನ ಚಾಟಿ ಬೀಸಿದ ಅವರು, ‘ಜಿಲ್ಲಾಧಿಕಾರಿ ಹುದ್ದೆ ಮಹತ್ವದ್ದು ಎಂಬುದನ್ನು ಮರೆಯಬೇಡಿ’ ಎಂದೂ ಹೇಳಿದರು.


ಜಿಲ್ಲೆಗಳಲ್ಲಿ ಉತ್ತಮ ಆಡಳಿತವನ್ನು ನೀಡಲು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿ, ಬದಲಾವಣೆ ಬಗ್ಗೆ ಚಿಂತಿಸದೇ, ನೀವೇ ಬದಲಾವಣೆ ತನ್ನಿ
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT