ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಊರು–ಕೇರಿ' ತೊರೆದ ಸಿದ್ಧಲಿಂಗಯ್ಯ

Last Updated 11 ಜೂನ್ 2021, 22:58 IST
ಅಕ್ಷರ ಗಾತ್ರ

‘ಸಿದ್ದಲಿಂಗಯ್ಯ ಕನ್ನಡದ ಅಂಬೇಡ್ಕರ್’

‘ಸಿದ್ದಲಿಂಗಯ್ಯ ಅವರ ಕಾವ್ಯವು ವೈಚಾರಿಕ ಔಷಧದ ಮೂಲಕ ಸಾಮಾಜಿಕ ರೋಗಕ್ಕೆ ಮದ್ದು ಕೊಡುವಂತಹದ್ದಾಗಿದೆ. ಸಮಾಜ ನಿಂತ ನೀರಾಗಿದ್ದರಿಂದಲೇ ಅವರ ಕಾವ್ಯದಲ್ಲಿ ಅಷ್ಟೊಂದು ಆಕ್ರೋಶವಿದೆ. ‘ಕನ್ನಡದ ಅಂಬೇಡ್ಕರ್‌’ ಎಂದು ಮುಕ್ತ ಮನಸ್ಸಿನಿಂದ ಕರೆಯಬಹುದಾದ ಈ ಕವಿಯು, ಹೃದಯವಂತಿಕೆ, ಅಭಿಮಾನ, ಚಾಣಾಕ್ಷತನ, ಸೃಜನಶೀಲಗುಣ ಹಾಗೂ ನಿರ್ಭಯ ವ್ಯಕ್ತಿತ್ವಗಳಿಂದ ಕಾವ್ಯದಲ್ಲಿ ಅಖಂಡವಾಗಿಯೇ ಪ್ರಕಟವಾಗಿದ್ದಾರೆ. ಭಾರತೀಯ ಸಮುದಾಯದಲ್ಲಿ ಸಮತೆಯ ಹೂವು ಅರಳಲಿಲ್ಲವೇಕೆ ಎಂಬ ಜಿಜ್ಞಾಸೆ, ಬಡವರ ಬಾಳಿಗೆ ಬೆಳಕು ತರುವ ದಾರಿಯನ್ನು ಅನ್ವೇಷಿಸುವ ಹೆಬ್ಬಯಕೆ, ಜೋಪಡಿಯಲ್ಲಿ ಉರಿಯುವ ಒಲೆಯು ಮೊರೆದಂತೆ ಸದಾ ತಪ್ತವಾಗಿರುವ ಛಲ ಅವರಲ್ಲಿತ್ತು.

-ದೊಡ್ಡರಂಗೇಗೌಡ, ಕವಿ

ನೋವಿನ ಅಭಿವ್ಯಕ್ತಿಗೆ ಹೊಸ ಛಾಪು ಕೊಟ್ಟವರು

ಕೋವಿಡ್ ಮಹಾಮಾರಿಗೆ ಸಿದ್ದಲಿಂಗಯ್ಯ ಅವರು ಬಲಿಯಾದುದು ಮನವನ್ನು ಕಲಕುತ್ತಿದೆ. ಎಲ್ಲ ವಿಧದ ನೋವನ್ನುಂಡ ಸಮುದಾಯದ ಗಟ್ಟಿ ದನಿಯಾಗಿ, ಹೋರಾಟದ ಕಹಳೆಯೂದಿದ ಅವರು ಕನ್ನಡ ಬರಹ ಮತ್ತು ಮಾತಿನಲ್ಲಿ ನೋವಿನ ಅಭಿವ್ಯಕ್ತಿಯ ಹೊಸ ಛಾಪನ್ನೇ ಮೂಡಿಸಿದರು. ಕವಿ, ಸಾಹಿತಿ, ಅಧ್ಯಾಪಕ, ಶಾಸಕ, ಆಡಳಿತಗಾರ ಮುಂತಾಗಿ ಹಲವು ಆಯಾಮಗಳಲ್ಲಿ ಪರಿಚಿತರಾದ ಅವರು ಎಲ್ಲವನ್ನೂ ಮೀರಿ ಶ್ರೇಷ್ಠ ಮಾನವರಾಗಿದ್ದರು. ಸಂವೇದನೆಯಿದ್ದ ಒಬ್ಬ ಸಾಮಾಜಿಕ-ಸಾಹಿತ್ಯಕ ನೇತಾರರಾಗಿದದ ಅವರು ವೈಚಾರಿಕ ಮತಭೇದವಿದ್ದೂ ಸಹಚಿಂತನಕ್ಕೆ ಹಾಗೂ ಸಹಮತಿ ಇರುವಲ್ಲಿ ಅದನ್ನು ವ್ಯಕ್ತಪಡಿಸಲು ಹಿಂಜರಿಯುತ್ತಿರಲಿಲ್ಲ

–ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹ, ರಾ.ಸ್ವ. ಸಂಘ

ಹಾಡುಗಳಲ್ಲಿ ಎಂದಿಗೂ ಅಮರ

ಪ್ರಖರ ಚಿಂತನೆ ಮತ್ತು ವಿಡಂಬನಾ ಪ್ರಜ್ಞೆಯನ್ನು ಒಂದಾಗಿಸಿಕೊಂಡಿದ್ದ ವಿಶಿಷ್ಟ ವ್ಯಕ್ತಿತ್ವದ ಕವಿ ಸಿದ್ದಲಿಂಗಯ್ಯ. ವಿದ್ಯಾರ್ಥಿ ದೆಸೆಯಲ್ಲಿಯೇ ಬೂಸಾ ಹೆಸರಿನ ಚಳವಳಿಗೆ ಧುಮುಕಿದ ಅವರು ತೀವ್ರವಾದ ಪ್ರಗತಿಪರ ಕ್ರಿಯೆ ಮತ್ತು ಚಿಂತನೆಗಳಿಂದ ಪ್ರಸಿದ್ಧರು. ಅವರ ಮೊದಲ ಕವನ ಸಂಕಲನ ‘ಹೊಲೆ ಮಾದಿಗರ ಹಾಡು’ ಕನ್ನಡ ಕಾವ್ಯಲೋಕದಲ್ಲಿ ಸಂಚಲನ ಉಂಟು ಮಾಡಿತ್ತು. ಅವರ ಹೋರಾಟದ ಹಾಡುಗಳು ಚಳವಳಿಯ ಭಾಗವಾಗಿ ಬೆಳೆದವು. ಇಂತಹ ಹಾಡುಗಳಲ್ಲಿ ಅವರು ಎಂದಿಗೂ ಅಮರ. ಮೊದಲ ಬಂಡಾಯ ಸಾಹಿತ್ಯ ಸಮ್ಮೇಳನ ಸಂಘಟಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿದ್ದಲಿಂಗಯ್ಯ, ಸಂಘಟನೆ ಆರಂಭವಾದಾಗ ಮೊದಲ ಮೂವರು ರಾಜ್ಯ ಸಂಚಾಲಕರಲ್ಲಿ ಒಬ್ಬರಾಗಿ ದುಡಿದರು. ಸಂಘಟನೆಗೆ ಒಂದು ಶಕ್ತಿಯಾಗಿದ್ದರು.

-ಪ್ರೊ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

ಮಿಂಚು ಹರಿಸಿದ ‘ನನ್ನ ಜನರು’

ಸಿದ್ಧಲಿಂಗಯ್ಯನವರನ್ನು ನಾನು ಮೊದಲು ಕಂಡಿದ್ದು ವಿಶ್ವ ಕನ್ನಡ ಸಮ್ಮೇಳನದಲ್ಲಿ. ಕಲಾಭವನದ ಕಿಕ್ಕಿರಿದ ಸಭೆಯಲ್ಲಿ ಅವರು ‘ನನ್ನ ಜನರು’ ವಾಚಿಸಿದರು. ಅದು ಮಿಂಚನ್ನು ಹರಿಸಿತು. ನಾನು ಕರಗಿದೆ. ಕಣ್ಣು ಒದ್ದೆಯಾದವು. ನನ್ನ ಭಾವುಕ ಅನುಭವವನ್ನು ನಿರೂಪಿಸಿ ಪತ್ರ ಬರೆದೆ. ‘ಸಾವಿರಾರು ನದಿಗಳು’ ಸಂಕಲನ ಕಳಿಸಿಕೊಟ್ಟರು. ನನ್ನ ಮೂರುವರೆ ದಶಕದ ಅಧ್ಯಾಪನ ಬಾಳುವೆಯಲ್ಲಿ, ತರಗತಿಗಳಲ್ಲಿ ಅತಿಹೆಚ್ಚು ಚರ್ಚಿಸಿದ ಲೇಖಕರಲ್ಲಿ ಅವರೊಬ್ಬರು.

ದಲಿತ-ಬಂಡಾಯ ಸಾಹಿತ್ಯ ಮತ್ತು ದಲಿತ ಚಳವಳಿಗಳ ಚರಿತ್ರೆಯನ್ನು ಯಾರು ಬರೆದರೂ, ಅದರಲ್ಲಿ ಸಿದ್ಧಲಿಂಗಯ್ಯನವರ ಪಾತ್ರ ಮಹತ್ವದ್ದಾಗಿರಲೇಬೇಕು. ಕನ್ನಡದಲ್ಲಿ ಅಕ್ಷರಸ್ಥಕಾವ್ಯ ಹಾಡುಗಾರರ ಮೂಲಕ ಜನಪದವಾಗಿ ರೂಪಾಂತರಗೊಂಡಿದ್ದು ಬೇಂದ್ರೆ ಬಿಟ್ಟರೆ ಇವರದೇ. ಸರಳ ಪದಗಳಲ್ಲಿ, ಧ್ವನಿಪೂರ್ಣ ರೂಪಕಗಳಲ್ಲಿ, ತೀವ್ರತರ ರಾಜಕೀಯ ಪ್ರಜ್ಞೆಯನ್ನು ಹಾಯಿಸುತ್ತ, ಹಾಡುಕಟ್ಟುವ ಪ್ರತಿಭೆ-ಕುಶಲತೆ ಅವರಿಗೆ ಕೈವಶವಾಗಿತ್ತು. ಇದು`ಹೊಲೆಮಾದಿಗರ ಹಾಡು’ವಿನಲ್ಲಿ ಶುರುವಾಗಿ ‘ಹೋರಾಟದ ಹಾಡುಗಳು’ಗಳಲ್ಲಿ ಎತ್ತರಕ್ಕೇರಿತು.

ಕರ್ನಾಟಕದ ಬೇರೆ ಬೇರೆ ಸೈದ್ಧಾಂತಿಕ ಹಿನ್ನೆಲೆಯ ಜನ-ಚಳವಳಿಗಳು ಈ ಹಾಡುಗಳನ್ನು ಹಾಡಿಕೊಂಡೇ ಬೆಳೆದವು. ಆದರೆ ಈಚಿನ ವರ್ಷಗಳಲ್ಲಿ ಸಿದ್ಧಲಿಂಗಯ್ಯನವರ ರಾಜಕೀಯ ಒಲವುಗಳು, ಅವರ ಮೊದಲ ಘಟ್ಟದ ವ್ಯಕ್ತಿತ್ವವನ್ನು ಮುಖಾಮುಖಿಗೊಳಿಸಿ, ಕಸಿವಿಸಿ-ಪ್ರಶ್ನೆ ಹುಟ್ಟಿಸುತ್ತಿದ್ದವು. ಅವರಷ್ಟು ಓದುಗರ-ಚಳವಳಿಗಾರರ ಪ್ರೀತಿಗೂ ತಾಪಕ್ಕೂ ಈಡಾದ ಮತ್ತೊಬ್ಬ ಸಮಕಾಲೀನ ಲೇಖಕರಿಲ್ಲವೇನೊ?

ಸಿದ್ಧಲಿಂಗಯ್ಯನವರು ಈಚೆಗೆ ಸಭೆಗಳಲ್ಲಿ ತುಂಬ ನಗಿಸುತ್ತಿದ್ದರು. ನಗೆಗೆ ಅವರು ಬಳಸುತ್ತಿದ್ದ ಪ್ರಸಂಗಗಳಲ್ಲಿ, ಕಿರಂ ತೀರಿಕೊಂಡಾಗ ನಾನು ಉಲ್ಲೇಖಿಸಿದ್ದ ಘಟನೆಯೂ ಸೇರಿತ್ತು. ಕಿರಂ, ನನ್ನಪ್ಪನ ಜತೆಗೆ ‘ಯಾವ ಬೀಡಿ ಆರೋಗ್ಯಕ್ಕೆ ಒಳ್ಳೆಯದು’ ಎಂದು ಗಂಭೀರ ಚರ್ಚೆ ಮಾಡಿದ ಪ್ರಸಂಗವದು. ಇದು ಸಿದ್ಧಲಿಂಗಯ್ಯನವರಲ್ಲಿ ರೆಕ್ಕೆಪುಕ್ಕ ಹಚ್ಚಿಕೊಂಡು ಜಾನಪದವಾಗಿ ಪಾಠಾಂತರ ಪಡೆದುಕೊಂಡಿತ್ತು.

ಆಕ್ರೋಶ ದುಗುಡ ಕನಸುಗಳನ್ನು ಕನ್ನಡಿಗರ ಪ್ರಜ್ಞೆ ರೂಪಿಸಿದ ಲೇಖಕ, ಈಗ ನಗಿಸುತ್ತಿದ್ದರು. ಇದು ಅವರ ಅಭಿಜಾತ ಹಾಸ್ಯಪ್ರಜ್ಞೆಯ ಫಲವೂ ಆಗಿತ್ತು. ಸ್ವವ್ಯಕ್ತಿತ್ವದಲ್ಲಾದ ವೈರುಧ್ಯಕರ ಪಲ್ಲಟಗಳನ್ನು ಸಂಭಾಳಿಸಲು ಅವರು ಸೆಣಸಾಡುತ್ತಿದ್ದುದರ ಭಾಗವೂ ಆಗಿತ್ತು ಅನಿಸುತ್ತದೆ.

-ಪ್ರೊ. ರಹಮತ್‌ ತರೀಕೆರೆ, ಹಂಪಿ ಕನ್ನಡ ವಿಶ್ವವಿದ್ಯಾಲಯ

‘ನವ್ಯ’ಕ್ಕೆ ಬಹುರ್ಮುಖೀ ಕವಿತೆಗಳ ಉತ್ತರ ಕೊಟ್ಟ ಕವಿ

1973ರಲ್ಲಿ ಮೈಸೂರಿನಲ್ಲಿ ನಡೆದ ಜಾತಿ ವಿನಾಶ ಸಮ್ಮೇಳನ, 1974ರಲ್ಲಿ ಮತ್ತೆ ಮೈಸೂರಲ್ಲಿಯೇ ನಡೆದ ಬರಹಗಾರ ಮತ್ತು ಕಲಾವಿದರ ಒಕ್ಕೂಟದ ಸಮ್ಮೇಳನದ ಪ್ರಭಾವದಿಂದ ಸ್ಪೂರ್ತಿ ಪಡೆದ ಸಿದ್ದಲಿಂಗಯ್ಯನವರು 1975ರಲ್ಲಿ ‘ಹೊಲೆಮಾದಿಗರ ಹಾಡು’ ಪ್ರಕಟಿಸಿದಾಗ ಅವರಿಗೆ ಕೇವಲ 21 ವರ್ಷ. ಸಂಕಲನದ ಆರಂಭದಲ್ಲಿ ‘ಇವುಗಳನ್ನು ಗಟ್ಟಿಯಾಗಿ ಹಾಡಿಕೊಳ್ಳಿ’ ಎಂದು ಅವರು ಬರೆದುದನ್ನು ನಾವು ಹಲವರು ಅಕ್ಷರಶಃ ಪಾಲಿಸಿ ಕಾಲೇಜಿನ ವರಾಂಡಗಳಲ್ಲಿ ಹಾಡಿದ್ದು ಮಾತ್ರವಲ್ಲ, ಸಿಕ್ಕ ಸಿಕ್ಕ ಗೋಡೆಗಳಲ್ಲಿ ಅದರಲ್ಲಿನ ಕೆಲವು ಸಾಲುಗಳನ್ನು ಕದ್ದು ಕದ್ದು ಬರೆದು ಬಿಟ್ಟೆವು.

ರಾಜ್ಯದಾದ್ಯಂತ ನಡೆದ ಈ ಇಡೀ ಪ್ರಕ್ರಿಯೆಯೇ ಕನ್ನಡ ನವ್ಯ ಸಾಹಿತ್ಯಕ್ಕೆ ಕೊನೆ ಹಾಡಿಬಿಟ್ಟಿತು. ನವ್ಯದ ಅಂತರ್ಮುಖೀ ನೆಲೆಗಳಿಗೆ ಸಿದ್ದಲಿಂಗಯ್ಯನವರು ತಮ್ಮ ಬಹಿರ್ಮುಖೀ ಕವಿತೆಗಳ ಮೂಲಕ ಸಮರ್ಥವಾಗಿ ಉತ್ತರ ನೀಡಿದ್ದರು. ಅಲ್ಲಿಂದ ಮುಂದೆ ಸಾಹಿತ್ಯದ ಒಲವಿರುವ ಜನಗಳಿಂದ 'ಕವಿಗಳು’ ಎಂದೇ ಕರೆಯಿಸಿಕೊಂಡು ಕನ್ನಡಿಗರ ಕಣ್ಮಣಿಯಾಗಿ ಬೆಳೆದರು. 1979 ರಲ್ಲಿ ಪ್ರಕಟವಾದ ಅವರ ‘ಸಾವಿರಾರು ನದಿಗಳು’ ಕವನ ಸಂಕಲನವು ಅವರ ಬಹಿರ್ಮುಖತೆಯನ್ನು ಅತ್ಯುತ್ತಮ ಸಾಹಿತ್ಯವನ್ನಾಗಿ ಮಾರ್ಪಡಿಸಿದ್ದೇ ಆಗಿತ್ತು. ಅವರು ಬರೆದ -‘ ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರ , ಕಪ್ಪುಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು, ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು’ ಎಂಬ ಸಾಲುಗಳು ವಿಶ್ವಸಾಹಿತ್ಯಕ್ಕೆ ಅವರು ನೀಡಿದ ಅತ್ಯುತ್ತಮ ಕೊಡುಗೆ. ಈ ಕವಿತೆಯ ಇಂಗ್ಲಿಷ್‌ ಅನುವಾದವು ಜೆಎನ್‌ಯುವಿನ ಕ್ಯಾಂಟೀನ್‌ ಒಂದರಲ್ಲಿ ರಾರಾಜಿಸುತ್ತಿದ್ದು, ಅದನ್ನು ಸಾವಿರಾರು ವಿದ್ಯಾರ್ಥಿಗಳು ಓದುತ್ತಲೇ ಇದ್ದಾರೆ. ಕೆಲವು ವರ್ಷಗಳ ಹಿಂದೆ ಅದನ್ನು ನೋಡಿದ್ದ ಅವರು ಕಣ್ಣು ಮಿಟುಕಿಸಿ ನಕ್ಕು ಫೋಟೋ ತೆಗೆಸಿಕೊಂಡಿದ್ದರು.

ಕೊನೆ ಕೊನೆಗೆ ವ್ಯವಸ್ಥೆಯೊಂದಿಗೆ ರಾಜಿಮಾಡಿಕೊಂಡ ಅವರು ಹಲವರ ವ್ಯಂಗ್ಯಕ್ಕೂ ಗುರಿಯಾಗಿದ್ದರು. ಇದು ಅವರಿಗಿರುವ ಚಾರಿತ್ರಿಕ ಮಹತ್ವವನ್ನು ಕಡಿಮೆ ಮಾಡಲಾರದು.

- ಪ್ರೊ.ಪುರುಷೋತ್ತಮ ಬಿಳಿಮಲೆ, ಜಾನಪದ ವಿದ್ವಾಂಸ ಹಾಗೂ ವಿಶ್ರಾಂತ ಪ್ರಾಧ್ಯಾಪಕ, ಜೆಎನ್‌ಯು, ದೆಹಲಿ

ಸಮುದಾಯವನ್ನೇ ಕಾವ್ಯವಾಗಿಸಿದ ಕವಿ...

ಶ್ರೀರಾಮಪುರದ ಸ್ಮಶಾನದಲ್ಲಿ, ಗೋರಿ ಕಲ್ಲುಗಳ ಮೇಲೆ ಕುಳಿತು ಬರೆದ ಆ ದಲಿತ ಯುವಕನ ಪದ್ಯ ಮತ್ತು ಹಾಡುಗಳು ಕರ್ನಾಟಕದ ಬಹುದೊಡ್ಡ ಆಂದೋಲನವೊಂದರ ಆತ್ಮಗೀತೆಗಳಾದವು. ಆ ಕಾವ್ಯದ ರೂಪಕಗಳು, ಪ್ರತಿಮೆಗಳು, ಹಾಡುಗಳ ಧಾಟಿಯ ಹಿಂದೆ ಇರುವಂತಹ ಕೆಚ್ಚು, ವ್ಯಂಗ್ಯ, ಆಕ್ರೋಶಗಳೆಲ್ಲಾ ಹೇಗೆ ಸಶರೀರವಾಗಿ ಮೈತಳೆದವೆಂದರೆ ಕನ್ನಡದಲ್ಲಿ ದಲಿತ ಕಾವ್ಯ
ತಾನು ಸ್ವಯಂಭೂ ಅನ್ನುವ ಹಾಗೆಯೇ ಹುಟ್ಟಿಕೊಂಡುಬಿಟ್ಟಿತು.

ಕರ್ನಾಟಕದ ಚರಿತ್ರೆಯ ವಿಶಿಷ್ಟವಾದ ಘಟ್ಟವೆಂದರೆ ದಲಿತ ಸಂಘರ್ಷ ಸಮಿತಿ ಅಸ್ತಿತ್ವಕ್ಕೆ ಬಂದು ಬೆಳೆದ ರೀತಿ. ಪ್ರಾಯಶಃ ತುಂಬಾ ವಿರಳವಾಗಿ ಕಾಣುವ ಹಾಗೆ ಚಳವಳಿಯೊಂದು ಕಾವ್ಯ, ಕಥೆಗಳಲ್ಲೇ ಹುಟ್ಟಿದ್ದು ಎಂದರೆ ಅದು ದಲಿತ ಸಂಘರ್ಷ ಸಮಿತಿ. ಸಿದ್ದಲಿಂಗಯ್ಯನವರು ಹಾಡು, ರೂಪಕಗಳೇ ಇಡೀ ಜಗತ್ತನ್ನು ನೋಡುವ ದೃಷ್ಟಿಯ ಭಾಗವಾಗಿ ದಲಿತ ಸಮುದಾಯಗಳಿಗೆ ದತ್ತವಾಗಿ ಬಂದಿದ್ದನ್ನು ಕಾವ್ಯವಾಗಿ ಪರಿವರ್ತಿಸಿದರು. ಹೀಗಾಗಿ ಅವರು ಆಧುನಿಕ ಸಂದರ್ಭದ ಸಂಘರ್ಷದ ಕಾಲದಲ್ಲಿ ಕಾವ್ಯ ಬರೆದರೂ ಅದರ ಹಿಂದೆ ಸಾವಿರಾರು ವರ್ಷಗಳ ಸಮುದಾಯದ ಅನುಭವಗಳ ಜೊತೆಗೆ ಆ ಸಮುದಾಯಗಳು ಮಾತಿನಲ್ಲಿ, ಹಾಡಿನಲ್ಲಿ ಇಟ್ಟುಕೊಂಡಿದ್ದ ಅಪಾರ ಶ್ರದ್ಧೆಯ ದ್ಯೋತಕವೂ ಆಗಿದ್ದವು. ಹೀಗಾಗಿ ದಿಟ್ಟವಾದಂತಹ ಒಂದು ದೊಡ್ಡ ಚಳವಳಿ ಕಾವ್ಯದ ಮಗ್ಗಲನ್ನೂ ಪಡೆಯಲು ಸಿದ್ದಲಿಂಗಯ್ಯ ಕಾರಣ.

ಸಿದ್ದಲಿಂಗಯ್ಯನವರು ಪ್ರಥಮತಃ ಕವಿ. ಆದರೆ, ಅವರು ದಲಿತ ವ್ಯಕ್ತಿ, ದಲಿತ ಹೋರಾಟ ಗಾರರಾಗಿದ್ದರು. ಹೀಗಾಗಿ ದಲಿತ ಕಾವ್ಯ ಬರೆದರು. ಅವರ ಕಾವ್ಯದ ಪ್ರತಿಭಟನೆಯ ಅಂಶಗಳು ಅನಿವಾರ್ಯವಾಗಿ ಆ ಹೋರಾಟದ ಕಾಲದಲ್ಲಿ ಮುನ್ನೆಲೆಗೆ ಬಂದವು. ಆ ಕಾವ್ಯ ಶ್ರೀಮಂತವೂ ಆಗಿತ್ತು. ಅದು ಹಲವು ದನಿಗಳು, ಲಯಗಳನ್ನು ತನ್ನ ನೇಯ್ಗೆಯಲ್ಲಿ ಹಿಡಿದಿಟ್ಟುಕೊಂಡಿತ್ತು. ಇಂತಹದ್ದನ್ನು ಸಿದ್ದಲಿಂಗಯ್ಯ ಸಾಧಿಸಿದ್ದು ಸಾಂಸ್ಕೃತಿಕವಾಗಿ ಬಹುಮುಖ್ಯ ಘಟನೆ.

ವಿದ್ಯಾರ್ಥಿ ದಿಶೆಯಿಂದಲೇ ಅನೇಕ ಚಳವಳಿಗಳಲ್ಲಿ ಭಾಗವಹಿಸಿ ಆ ಮೂಲಕ ತಮ್ಮ ಅನುಭವಲೋಕವನ್ನು ವಿಸ್ತರಿಸಿಕೊಂಡಿದ್ದ ಸಿದ್ದಲಿಂಗಯ್ಯನವರು ಕನ್ನಡ ಸಂಸ್ಕೃತಿಗೆ ಕೊನೆಯವರೆಗೂ ಮುಖ್ಯವಾಗಿ ಉಳಿಯುವಂತಹ ಬರಹಗಾರರು.

-ಪ್ರೊ. ರಾಜೇಂದ್ರ ಚೆನ್ನಿವಿಮರ್ಶಕ ಹಾಗೂ ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT