ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.15ರೊಳಗೆ ಎಲ್ಲಾ ಶಾಲೆಗಳನ್ನು ತೆರೆಯಿರಿ: ಸುರೇಶ್‌ ಕುಮಾರ್‌ಗೆ ಪತ್ರ

‘ಮಕ್ಕಳ ನಡೆ ಶಾಲೆಯ ಕಡೆ’ ಅಭಿಯಾನದ ಸಮಿತಿ ಒತ್ತಾಯ * ಶಿಕ್ಷಣ ಸಚಿವರಿಗೆ ಬಹಿರಂಗ ಪತ್ರ
Last Updated 7 ಡಿಸೆಂಬರ್ 2020, 14:15 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಹಾಗಾಗಿ ಇದೇ 15ರ ಒಳಗೆ ರಾಜ್ಯ ಎಲ್ಲ ಶಾಲೆಗಳನ್ನು ಪುನರಾರಂಭಿಸಬೇಕು ಎಂದು ‘ಮಕ್ಕಳ ನಡೆ– ಶಾಲೆಯ ಕಡೆ’ ಅಭಿಯಾನ ಸಮಿತಿಯು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌ ಅವರನ್ನು ಒತ್ತಾಯಿಸಿದೆ.

ಶಾಲೆಗಳನ್ನು ತಕ್ಷಣವೇ ಏಕೆ ಪುನರಾರಂಭ ಮಾಡಬೇಕು ಎಂಬುದಕ್ಕೆ ಕಾರಣಗಳನ್ನು ವಿವರಿಸಿ ಸಮಿತಿಯು ಸಚಿವರಿಗೆ ಸುದೀರ್ಘ ಪತ್ರ ಬರೆದಿದೆ. ‘ಡಿ 15ರ ಒಳಗೆ ಶಾಲೆಗಳನ್ನು ಪುನರಾರಂಭಗೊಳಿಸದಿದ್ದರೆ ಡಿ 16ರಂದು ನಾವಾಗಿ ಶಾಲೆಗಳನ್ನು ತೆರೆದು ಎಲ್ಲಾ ಮಕ್ಕಳಿಗೆ ಪಾಠಗಳನ್ನೂ, ಬಿಸಿಯೂಟವನ್ನೂ ಆರಂಭಿಸಲಿದ್ದೇವೆ’ ಎಂದು ಸಮಿತಿ ತಿಳಿಸಿದೆ.

ಸಮಿತಿಯು ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರದ ಪೂರ್ಣ ಪಾಠ ಇಂತಿದೆ.

ಮಾನ್ಯ ಶಿಕ್ಷಣ ಸಚಿವರೇ,

ಕೊರೊನಾ ಸೋಂಕನ್ನು ನಿಯಂತ್ರಿಸುವ ನೆಪದಲ್ಲಿ ಶಾಲೆ-ಕಾಲೇಜುಗಳನ್ನು ಮಾರ್ಚ್ ತಿಂಗಳಿನಿಂದಲೇ ಮುಚ್ಚಿದ ರಾಜ್ಯಗಳಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ. ಸೆಪ್ಟೆಂಬರ್ ಬಳಿಕ ರಾಜ್ಯದಲ್ಲಿ ಕೊರೊನಾ ಸೋಂಕಿನ ಹರಡುವಿಕೆಯು ಗಣನೀಯವಾಗಿ ಇಳಿದಿದೆಯೆಂದು ಎಲ್ಲಾ ಅಂಕಿಅಂಶಗಳು ತೋರಿಸುತ್ತಿದ್ದು, ಸರ್ಕಾರವೂ ಅದನ್ನೇ ಹೇಳುತ್ತಿದೆ. ಕೊರೊನಾ ಹರಡುವಿಕೆಯು ಆರಂಭವಾಗುವ ಮೊದಲೇ ತರಾತುರಿಯಿಂದ ದಿಗ್ಬಂಧನ ವಿಧಿಸಿ, ಆ ಬಳಿಕ ಕೊರೊನಾ ಹರಡುವುದು ಹೆಚ್ಚಿದರೂ ಆ ದಿಗ್ಬಂಧನಗಳನ್ನು ಸಡಿಲಿಸತೊಡಗಿ, ಕಳೆದ 3-4 ತಿಂಗಳಲ್ಲಿ ಸಾರ್ವಜನಿಕ ಚಟುವಟಿಕೆಗಳಿಗೆಲ್ಲ ಅನುವು ಮಾಡಲಾಗಿದೆ. ಪ್ರಯಾಣ, ಹೋಟೆಲ್‌-ಬಾರ್‌, ಮಾರುಕಟ್ಟೆಗಳು, ಸಭೆ-ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ಚುನಾವಣಾ ಪ್ರಚಾರ ಮುಂತಾದ ಎಲ್ಲಾ ಚಟುವಟಿಕೆಗಳಿಗೆ ಮುಕ್ತ ಅವಕಾಶವನ್ನು ನೀಡಲಾಗಿದೆ. ಅಲ್ಲೆಲ್ಲ ಜನಸಂದಣಿ ನಿಯಂತ್ರಿಸುವುದಕ್ಕೆ, ದೈಹಿಕ ಅಂತರ ಕಾಪಾಡುವಿಕೆ, ಮಾಸ್ಕ್ ಧರಿಸುವಿಕೆಗಳನ್ನು ಖಾತರಿಗೊಳಿಸುವುದಕ್ಕೆ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ಕಂಡುಬರುತ್ತಿದೆ. ಹಾಗೆಯೇ, ಕೊರೊನಾ ಹರಡುವುದಕ್ಕೆ ಮುಖ್ಯ ಕಾರಣರಾಗಿರುವ ಮತ್ತು ಈ ಸೋಂಕಿನಿಂದ ಸಮಸ್ಯೆಗೀಡಾಗುವ ಅಪಾಯವು ಅತಿ ಹೆಚ್ಚುಳ್ಳ ವಯಸ್ಕರಿಗೆ ಮುಕ್ತವಾಗಿ ಎಲ್ಲೆಡೆಯೂ ತಿರುಗಾಡಲು ಅವಕಾಶ ನೀಡಲಾಗಿದೆ. ಅವರು ಮಕ್ಕಳನ್ನು ತಮ್ಮ ಜೊತೆ ಎಲ್ಲೆಡೆ ಕರೆದೊಯ್ಯುವುದಕ್ಕೂ ಅವಕಾಶ ನೀಡಲಾಗಿದೆ. ಆ ನಡುವೆ, ಕೊರೊನಾ ಸೋಂಕು ವ್ಯಾಪಕವಾಗಿಯೂ, ಕ್ಷಿಪ್ರವಾಗಿಯೂ ಹರಡುತ್ತಿದ್ದ ಮೇ-ಜುಲೈ ಅವಧಿಯಲ್ಲೇ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ, ಸಿಇಟಿ, ನೀಟ್ ಇತ್ಯಾದಿ ಪರೀಕ್ಷೆಗಳನ್ನೂ ಯಶಸ್ವಿಯಾಗಿ ನಡೆಸಲಾಗಿದೆ. ಅದರಿಂದ ವಿದ್ಯಾರ್ಥಿಗಳಿಗಾಗಲೀ, ಶಿಕ್ಷಕರಿಗಾಗಲೀ ಯಾವುದೇ ಸಮಸ್ಯೆಗಳಾಗಲೇ ಇಲ್ಲ ಎನ್ನುವ ಸತ್ಯವೂ ಆ ಮುಂದಿದೆ. ಇವುಗಳ ಬಳಿಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಿ ಸಾಕಷ್ಟು ಪ್ರಯೋಜನಕರವಾಗಿ ನಡೆಸಲು ಸಾಧ್ಯವಾಗಿತ್ತು. ಆದರೆ, ಮಾಧ್ಯಮಗಳ ಗದ್ದಲದ ನಡುವೆ, ಏಕಪಕ್ಷೀಯವಾಗಿ, ಏಕಾಏಕಿಯಾಗಿ ಅದನ್ನು ನಿಲ್ಲಿಸಲಾಯಿತು. ಹೀಗೆ, ಕೊರೊನಾದಿಂದ ಸಮಸ್ಯೆಯಾಗಬಲ್ಲ ಎಲ್ಲಕ್ಕೂ ಅವಕಾಶ ನೀಡಿ, ಕೇವಲ ಶಾಲೆಗಳನ್ನೂ, ವಿದ್ಯಾಗಮದಂತಹ ಬಡಮಕ್ಕಳ ಶೈಕ್ಷಣಿಕ ಕಾರ್ಯಕ್ರಮಗಳನ್ನಷ್ಟೇ ಮುಚ್ಚಿರುವುದು ಮತ್ತು ಬಹುಸಂಖ್ಯಾತ ಮಕ್ಕಳಿಗೆ ಬಳಸಲಿಕ್ಕಾಗದ, ಅರ್ಥವೂ ಆಗದ, ಅನೇಕ ಸಮಸ್ಯೆಗಳಿಗೆ ಕಾರಣವಾಗುವ ಆನ್ ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗಿರುವುದು ಬಹು ದೊಡ್ಡ ಹುನ್ನಾರವೆಂದೇ ನಮಗೆಲ್ಲರಿಗೂ ಅನಿಸುತ್ತಿದೆ.

ಎಲ್ಲವನ್ನು ತೆರೆಯಲಾಗಿದ್ದರೂ ಶಾಲೆಗಳನ್ನು ತೆರೆಯುವುದಕ್ಕೆ ಸರ್ಕಾರವು ಇನ್ನೂ ನಿರ್ಧರಿಸಿಲ್ಲ. ಒಂದಿಲ್ಲೊಂದು ಕುಂಟು ನೆಪಗಳನ್ನು ನೀಡಿ ಮಕ್ಕಳನ್ನೂ, ಹೆತ್ತವರನ್ನೂ ಅನಿಶ್ಚಿತತೆಗೂ, ಆತಂಕಕ್ಕೂ ದೂಡಲಾಗಿದೆ. ಶಾಲೆಗಳನ್ನು ಒಂಬತ್ತು ತಿಂಗಳ ಕಾಲ ಮುಚ್ಚಿರುವುದು ಮಕ್ಕಳ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಶೈಕ್ಷಣಿಕ, ಪೌಷ್ಠಿಕ ಬೆಳವಣಿಗೆಗಳ ಮೇಲೆ ಅತಿ ತೀವ್ರವಾದ, ಗಂಭೀರವಾದ, ಶಾಶ್ವತವಾದ ದುಷ್ಪರಿಣಾಮಗಳನ್ನುಂಟು ಮಾಡಲಿದೆ. ಅವರ ಮೇಲಿನ ದೌರ್ಜನ್ಯಗಳನ್ನು ಬಹಳಷ್ಟು ಹೆಚ್ಚಿಸಿ, ಮಕ್ಕಳ ಸಕಲ ಹಕ್ಕುಗಳನ್ನು ಉಲ್ಲಂಘಿಸಿದಂತಾಗಿರುತ್ತದೆ. ನಾವೆಲ್ಲರೂ ಒಗ್ಗೂಡಿ ಇದೇ ಡಿಸೆಂಬರ್ 15ರಿಂದ ಎಲ್ಲಾ ಶಾಲೆಗಳಲ್ಲಿ ಬಾಲವಾಡಿಯಿಂದ 12ರವರೆಗಿನ ಎಲ್ಲಾ ತರಗತಿಗಳನ್ನು ಆರಂಭಿಸುವಂತೆ ಈ ಮೂಲಕ ಒತ್ತಾಯಿಸುತ್ತಿದ್ದೇವೆ. ಇದರಲ್ಲಿ ಸರ್ಕಾರವು ವಿಫಲವಾದರೆ ಡಿ 16ರಂದು ನಾವಾಗಿ ಶಾಲೆಗಳನ್ನು ತೆರೆದು ಎಲ್ಲಾ ಮಕ್ಕಳಿಗೆ ಪಾಠಗಳನ್ನೂ, ಬಿಸಿಯೂಟವನ್ನೂ ಆರಂಭಿಸಲಿದ್ದೇವೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ.

ಇದಕ್ಕೆ ಪೂರಕವಾಗಿ ಈ ಕೆಳಗಿನ ವಸ್ತುನಿಷ್ಠ ಮಾಹಿತಿಯನ್ನು ತಮ್ಮ ಅವಗಾಹನೆಗಾಗಿ ನೀಡುತ್ತಿದ್ದೇವೆ. ಶಾಲೆಗಳನ್ನು ಮುಚ್ಚಿರುವುದೇ ತಪ್ಪು ಹಾಗೂ ಅವನ್ನು ಕೂಡಲೇ ತೆರೆಯದಿದ್ದರೆ ಅದು ಘನ ಘೋರ ಅಪರಾಧವಾಗುತ್ತದೆ. 3ರಿಂದ 20 ವರ್ಷದೊಳಗಿನವರ ಎಲ್ಲರ ಮೇಲೂ ಇದು ಶಾಶ್ವತವಾದ ಹಾನಿಯುಂಟು ಮಾಡಲಿದೆ ಎಂದು ವಿಶ್ವದ ಎಲ್ಲಾ ಉನ್ನತ ಸಂಸ್ಥೆಗಳೂ, ತಜ್ಞರೂ ಏಕಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲಾ ದೇಶಗಳಲ್ಲಿ ಶಾಲೆಗಳು ಕೆಲವೇ ದಿನಗಳ ಕಾಳ ಮುಚ್ಚಿದ್ದು, ಈಗಾಗಲೇ ಮತ್ತೆ ತೆರೆದಿವೆ. ಮುಂದೆ ಕೊರೊನಾ ಎಷ್ಟು ಹರಡಿದರೂ ಶಾಲೆಗಳನ್ನು ಮುಚ್ಚುವುದೇ ಇಲ್ಲವೆಂದು ಅನೇಕ ಆಡಳಿತಗಳು ಈಗಾಗಲೇ ಹೇಳಿವೆ. ಅಮೆರಿಕ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಆನ್ ಲೈನ್ ಶಿಕ್ಷಣವನ್ನು ರದ್ದು ಪಡಿಸಿ ಶಾಲೆಗಳಲ್ಲೇ ನೇರ ಶಿಕ್ಷಣವಷ್ಟೇ ಇರುವಂತೆ ಈ ಹಿಂದಿನ ವ್ಯವಸ್ಥೆಯನ್ನೇ ಮತ್ತೆ ಜಾರಿಗೊಳಿಸಲಾಗುತ್ತಿದೆ.

ಶಾಲಾ ಮಕ್ಕಳಿಗೆ ಕೊರೊನಾ ಸೋಂಕು ಯಾವುದೇ ಸಮಸ್ಯೆಯುಂಟು ಮಾಡುವುದಿಲ್ಲ. ಮಾಡಿರುವುದಕ್ಕೆ ಸಾಕ್ಷ್ಯಾಧಾರಗಳೂ ಲಭ್ಯವಿಲ್ಲ. ಆದರೆ ಶಾಲೆ ಮುಚ್ಚಿರುವ ಈ ಮಹಾ ತಪ್ಪಿನಿಂದಾಗಿ ಪ್ರತೀ ಮಗುವಿಗೂ ಬಹಳಷ್ಟು ಹಾನಿಯಾಗಿದ್ದು, ಅದು ಶಾಶ್ವತವೂ ಆಗಿರಲಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ, ಸಿಡಿಸಿ, ಯುನಿಸೆಫ್ ಮತ್ತಿತರ ಅನೇಕ ಸಂಸ್ಥೆಗಳು ಈಗಾಗಲೇ ತಿಳಿಸಿವೆ. ದಿನಕ್ಕೆ 2 ಗಂಟೆಗೂ ಹೆಚ್ಚು ಕಾಲ ಫೋನ್, ಟಿವಿ ಪರದೆ ನೋಡುತ್ತಿದ್ದರೆ 3ರಿಂದ 5 ವರ್ಷಗಳ ಒಳಗಿನ ಮಕ್ಕಳ ಭಾಷೆ, ಬರವಣಿಗೆ, ಗ್ರಹಿಕೆಗಳು ಕುಗ್ಗುತ್ತವೆ ಎಂದೂ, 5ರಿಂದ 7 ಗಂಟೆ ಅವನ್ನು ಬಳಸಿದರೆ ಮಿದುಳಿನ ಬೆಳವಣಿಗೆಯೇ ಕುಂಠಿತಗೊಂಡು ಮಿದುಳು ತೆಳ್ಳಗಾಗಿ ಶಾಶ್ವತ ಹಾನಿಯಾಗುತ್ತದೆಂದೂ ಅಧ್ಯಯನಗಳು ತೋರಿಸಿವೆ. ಕೊರೊನಾ ನೆಪದಲ್ಲಿ ಶಾಲೆಗಳನ್ನು ಮುಚ್ಚಿದ್ದರಿಂದ ಮಕ್ಕಳ ಕಲಿಕೆಯು ನಿಂತದ್ದಷ್ಟೇ ಅಲ್ಲ, ಮಕ್ಕಳ ಸಾಗಾಣಿಕೆ, ದುಡಿತ, ಲೈಂಗಿಕ ದೌರ್ಜನ್ಯ, ಇತರ ದೌರ್ಜನ್ಯಗಳು, ಬಾಲ್ಯ ವಿವಾಹ, ಕುಪೋಷಣೆ, ಹೆತ್ತವರೊಡನೆ ಸಂಘರ್ಷ... ಎಲ್ಲವೂ ಬಹಳಷ್ಟು ಹೆಚ್ಚುತ್ತಿವೆ ಎಂಬ ವರದಿಗಳು ಎಲ್ಲೆಡೆಯಿಂದಲೂ ಪ್ರತಿನಿತ್ಯವೂ ಬರುತ್ತಿವೆ. ಮಕ್ಕಳು ಇದುವರೆಗೆ ಕಲಿತಿರುವುದನ್ನೂ, ಕಲಿಕೆಯ ಕ್ರಮಗಳನ್ನೂ ಮರೆತು, ಕಲಿಕೆಯಲ್ಲಿ ಆಸಕ್ತಿಯನ್ನೇ ಕಳೆದುಕೊಂಡು, ತಮ್ಮ ಹೆಸರು, ವಿಳಾಸಗಳನ್ನು ಹೇಳುವಲ್ಲಿಯೂ ತಡಬಡಾಯಿಸುತ್ತಿರುವಂಥ ದುಃಖಕರವಾದ ಸ್ಥಿತಿಯು ಎಲ್ಲೆಡೆ ಕಂಡುಬರುತ್ತಿದೆ.

ಕರ್ನಾಟಕ ಸರ್ಕಾರವೇ ಹೇಳಿರುವಂತೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಅಧಿಕೃತ ಸಂಖ್ಯೆಗಿಂತ 30 ಪಟ್ಟು ಹೆಚ್ಚಿರಬಹುದು. ಅಂದರೆ 90 ಲಕ್ಷದಷ್ಟು ಪ್ರಕರಣಗಳು ಅಧಿಕೃತವಾಗಿ ವರದಿಯಾಗಿರುವಲ್ಲಿ, ನಿಜವಾದ ಸಂಖ್ಯೆಯು ಸುಮಾರು 3 ಕೋಟಿಯಿಂದ 4 ಕೋಟಿಗಳಷ್ಟಾಗಿರಬಹುದು. ಈ ಒಂಬತ್ತು ತಿಂಗಳು ಶಾಲೆಗಳನ್ನು ಮುಚ್ಚಿದ್ದರಿಂದ ಕೊರೊನಾ ಸೋಂಕಿನ ಹರಡುವಿಕೆಯನ್ನು ತಡೆಯುವಲ್ಲಿ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ 20 ವರ್ಷಕ್ಕಿಂತ ಕೆಳಗಿನವರ ಪ್ರಮಾಣವು ಶೇ 37ರಷ್ಟಿದ್ದರೆ, ಸೋಂಕಿತರಲ್ಲಿ ಈ ವಯೋವರ್ಗದವರು ಕೇವಲ ಶೇ 11. ಅಂದರೆ ವಯಸ್ಕರಿಗೆ ಹೋಲಿಸಿದರೆ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಡಿಮೆ ಪ್ರಮಾಣದಲ್ಲಿ ಉಂಟಾಗುತ್ತದೆ ಎನ್ನುವುದು ಸ್ಪಷ್ಟವಾಗಿದೆ.

ಕೊರೊನಾ ಸೋಂಕಿತರಲ್ಲಿ ಶೇ 99ಕ್ಕೂ ಹೆಚ್ಚಿನವರು ಯಾವುದೇ ಚಿಕಿತ್ಸೆಯಿಲ್ಲದೆ ಮನೆಯಲ್ಲೇ ಇದ್ದು ಗುಣಮುಖರಾಗುತ್ತಾರೆ. 20 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಂತೂ ಕೊರೊನಾ ಸೋಂಕಿನ ಯಾವ ಲಕ್ಷಣಗಳಿಲ್ಲದೆಯೇ ಒಂದೆರಡು ದಿನಗಳಲ್ಲೇ ತಾನಾಗಿ ವಾಸಿಯಾಗುವ ಸಾಧ್ಯತೆ ಅತಿ ಹೆಚ್ಚು. ಇದೇ ಕಾರಣಕ್ಕೆ ಮಕ್ಕಳಿಂದ ಮಕ್ಕಳಿಗೆ ಅಥವಾ ಮಕ್ಕಳಿಂದ ಹಿರಿಯರಿಗೆ ಕೊರೊನಾ ಹರಡುವ ಸಾಧ್ಯತೆಗಳು ಕೂಡ ಅತಿ ಕಡಿಮೆ ಎಂದು ಹಲವಾರು ವರದಿಗಳಲ್ಲಿ ಹೇಳಲಾಗಿದೆ. ಶಾಲೆಗಳನ್ನು ತೆರೆಯುವುದರಿಂದ ಮಕ್ಕಳಿಗಾಗಲೀ, ಶಿಕ್ಷಕರಿಗಾಗಲೀ, ಮಕ್ಕಳ ಮನೆಯಲ್ಲಿರುವ ಹಿರಿಯರಿಗಾಗಲೀ ಕೊರೊನಾ ಸೋಂಕು ಹರಡುವ ಅಪಾಯವು ಹೆಚ್ಚುವುದಿಲ್. ಶಾಲೆಗಳನ್ನು ಮುಚ್ಚುವುದರಿಂದ ಕೊರೊನಾ ಹರಡುವುದನ್ನು ತಡೆಯುವುದಕ್ಕೆ ಅಥವಾ ಕೊರೊನಾದಿಂದಾಗುವ ಜೀವಹಾನಿಯನ್ನು ತಡೆಯುವುದಕ್ಕೆ ಯಾವುದೇ ಪ್ರಯೋಜನವಿಲ್ಲವೆಂದೂ ಎಲ್ಲಾ ವರದಿಗಳಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ, ಕೊರೊನಾ ಹರಡುವಿಕೆಯನ್ನು ತಡೆಯುವುದು ಮಕ್ಕಳ ಜವಾಬ್ದಾರಿಯಲ್ಲ, ಅದಕ್ಕಾಗಿ ಶಾಲೆಗಳನ್ನು ಮುಚ್ಚುವುದು ಪರಿಹಾರವೂ ಅಲ್ಲ ಎನ್ನುವುದು ಸುಸ್ಪಷ್ಟ.

ಕೊರೊನಾ ಪೀಡಿತರಲ್ಲಿ ಶೇ 99ಕ್ಕೂ ಹೆಚ್ಚಿನವರು ಯಾವುದೇ ಚಿಕಿತ್ಸೆಯ ಅಗತ್ಯವೂ ಇಲ್ಲದೆ ವಾಸಿಯಾದರೆ, ಸಾವಿರಕ್ಕೆ 4 ಮಂದಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಬೇಕಾಗುತ್ತದೆ. ಅವರಲ್ಲೂ ಶೇ 70ರಷ್ಟು ಮಂದಿ ಆಧುನಿಕ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಾರೆ. ಹೀಗೆ ಸಮಸ್ಯೆಗಳಾಗುವವರಲ್ಲಿ ಬಹುತೇಕ ಎಲ್ಲರೂ 30 ವರ್ಷಕ್ಕೆ, ಅದರಲ್ಲೂ 60 ವರ್ಷಕ್ಕೆ, ಮೇಲ್ಪಟ್ಟವರೇ ಆಗಿರುತ್ತಾರೆ. ಮೊದಲೇ ಇತರ ಗಂಭೀರ ರೋಗಗಳನ್ನು ಹೊಂದಿದ್ದವರೇ ಆಗಿರುತ್ತಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವವರಲ್ಲಿ 20 ವರ್ಷಕ್ಕಿಂತ ಕೆಳಗಿನವರ ಸಂಖ್ಯೆಯು ತೀರಾ ಅತ್ಯಲ್ಪ.

ರಾಜ್ಯದಲ್ಲಿ ಕೊರೊನಾ ಸಾವಿನ ಪ್ರಮಾಣವು ಶೇ 0.07ರಷ್ಟು, ಅಂದರೆ 10 ಸಾವಿರಕ್ಕೆ ಏಳರಷ್ಟು ಇದೆ. ಅವರಲ್ಲಿ ಶೇ 99.3ರಷ್ಟು ಮಂದಿ 20 ವರ್ಷಕ್ಕಿಂತ ಮೇಲ್ಪಟ್ಟವರೇ ಆಗಿದ್ದಾರೆ. ರಾಜ್ಯದಲ್ಲಿ ಮೃತ ಪಟ್ಟವರಲ್ಲಿ ಮಕ್ಕಳ (0-20 ವಯಸ್ಸು) ಪ್ರಮಾಣ ಶೇ 0.7; 10 ವರ್ಷಗಳಿಗಿಂತ ಕೆಳಗಿನವರು ಶೇ 0.2, 10-20 ರ್ಷಗಳ ನಡುವಿನವರು ಶೇ 0.5ರಷ್ಟು ಇದ್ದಾಎ. ಇವರೂ ಕೂಡ ಮೊದಲೇ ಅತಿ ಗಂಭೀರ ಸಮಸ್ಯೆಗಳನ್ನು ಹೊಂದಿದ್ದವರು. ಅಂದರೆ ಸಾಮಾನ್ಯ ಮಕ್ಕಳಿಗೆ ಕೊರೊನಾದಿಂದ ಅಪಾಯವು ತೀರಾ ನಗಣ್ಯವಾಗಿದೆ.

ಒಟ್ಟಿನಲ್ಲಿ ಮಕ್ಕಳಿಗೆ ಕೊರೊನಾ ಸೊಂಕು ತಗಲುವುದೇ ವಿರಳ, ಆದರೂ ರೋಗಲಕ್ಷಣಗಳಿರುವುದೇ ಅಪರೂಪ. ಸಮಸ್ಯೆಗಳಾಗುವುದು ಇನ್ನೂ ಅಪರೂಪ. ಸಾವುಂಟಾಗುವ ಸಾಧ್ಯತೆಗಳು ತೀರಾ ಕಡಿಮೆ. ಅಂದರೆ 20 ವರ್ಷಕ್ಕಿಂತ ಕೆಳಗಿನ ಮಕ್ಕಳು ಕೊರೊನಾದಿಂದ ಅತಿ ಹೆಚ್ಚು ಸುರಕ್ಷಿತರು. ಅವರಿಂದ ಇತರರಿಗೆ ಹರಡುವ ಸಾಧ್ಯತೆಗಳೂ ಕಡಿಮೆ. ಆದ್ದರಿಂದ ಅವರನ್ನು ಮನೆಯೊಳಗೆ ಕೂಡಿ ಹಾಕುವುದಕ್ಕೆ ಯಾವ ಕಾರಣವೂ ಇಲ್ಲ. ಶಾಲೆ ಮುಚ್ಚುವ ಅಗತ್ಯವಂತೂ ಇಲ್ಲವೇ ಇಲ್ಲ.

ಶಾಲೆಗಳನ್ನು ತೆರೆದಾಕ್ಷಣ ಮಕ್ಕಳಿಗೂ, ಶಿಕ್ಷಕರಿಗೂ, ಅವರಿಂದ ಇತರರಿಗೂ ಕೊರೊನಾ ಹರಡಲಿದೆ ಎನ್ನುವುದಕ್ಕೂ ಆಧಾರಗಳಿಲ್ಲ. ಈಗಾಗಲೇ ಹೇಳಿದಂತೆ, ಶಾಲೆಗಳನ್ನು 9 ತಿಂಗಳು ಮುಚ್ಚಿದ್ದಾಗಲೂ ರಾಜ್ಯದ 3 ಕೋಟಿಯಿಂದ 4 ಕೋಟಿ ಜನರಿಗೆ ಕೊರೊನಾ ಹರಡಿದೆ ಎಂದ ಮೇಲೆ ಅದರಲ್ಲಿ ಶಾಲೆಗಳ ಪಾತ್ರ ಏನೇನೂ ಇಲ್ಲ ಎನ್ನುವುದು ಸ್ಪಷ್ಟ. ಇಷ್ಟು ಜನರಿಗೆ ಈಗಾಗಲೇ ಕೊರೊನಾ ಬಾಧಿಸಿ ಹೋಗಿರುವುದರಿಂದ ಅವರೆಲ್ಲರಲ್ಲೂ ರೋಗ ನಿರೋಧಕ ಶಕ್ತಿಯು ಬೆಳೆದಿದ್ದು, ಸೋಂಕಿನ ಹರಡುವಿಕೆಯು ಇಳಿಯುವುದಕ್ಕೆ ಕಾರಣವಾಗಿದೆ. ಆದ್ದರಿಂದ ಇನ್ನು ಶಾಲೆಗಳನ್ನು ತೆರೆಯುವುದರಿಂದ ಮತ್ತೆ ಭಾರೀ ಪ್ರಮಾಣದಲ್ಲಿ ಸೋಂಕು ಹರಡಬಹುದೆನ್ನುವ ಭೀತಿಯು ಆಧಾರರಹಿತ.

ಶಾಲೆಗಳನ್ನು ತೆರೆದ ಬಳಿಕ ಕೆಲವು ಮಕ್ಕಳಿಗೂ, ಇತರರಿಗೂ ಕೊರೊನಾ ತಗಲಿದರೆ ಅದಕ್ಕೆ ಶಾಲೆಗಳನ್ನಷ್ಟೇ ಹೊಣೆಯಾಗಿಸುವುದೂ ಸರಿಯಲ್ಲ. ಒಬ್ಬರಿಂದೊಬ್ಬರಿಗೆ ಕೊರೊನಾ ಸೋಂಕು ಉಂಟಾಗುವುದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವೇ ಇಲ್ಲ ಎಂದ ಮೇಲೆ ಅಂಥ ಉದ್ದೇಶದಿಂದ ಶಾಲೆ ಮುಚ್ಚುವುದು ಅಪರಾಧವೇ ಆಗುತ್ತದೆ. ಕೊರೊನಾ ನಿಭಾಯಿಸುವ ಉದ್ದೇಶವು ತೀವ್ರ ಸಮಸ್ಯೆಗಳನ್ನು ಮತ್ತು ಸಾವುಗಳನ್ನು ತಡೆಯುವುದು ಮಾತ್ರವೇ ಆಗಿದ್ದು, ಅದಕ್ಕೆ ಶಾಲೆ ಮುಚ್ಚಿ ಯಾವ ಪ್ರಯೋಜನವೂ ಇಲ್ಲ. ಅದರ ಬದಲಿಗೆ, ಕೊರೊನಾ ಸೋಂಕು ತೀವ್ರಗೊಳ್ಳುವ ಅಪಾಯವುಳ್ಳವರಿಗೆ (ಹಿರಿವಯಸ್ಕರು; ಮಧುಮೇಹ, ಅಧಿಕ ರಕ್ತದೊತ್ತಡ, ವಿಪರೀತ ಬೊಜ್ಜು, ಯಕೃತ್ತು, ಮೂತ್ರಪಿಂಡ ಹಾಗೂ ಹೃದಯ ರೋಗಗಳನ್ನು ಹೊಂದಿರುವವರು, ರಕ್ತದ ಕ್ಯಾನ್ಸರ್ ಇರುವವರು ಇತ್ಯಾದಿ) ಕೊರೊನಾ ಸೋಂಕು ತಗುಲದಂತೆ ರಕ್ಷಣೆ ನೀಡುವ ಬಗ್ಗೆ, ಅವರು ಸೋಂಕಿತರಾದರೆ ಅದನ್ನು ನಿಭಾಯಿಸುವ ಬಗ್ಗೆ ಮತ್ತು ತೀವ್ರಗೊಂಡರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ಮಾಡಬೇಕು. ಹೀಗೆ ಕೊರೊನಾ ನಿಭಾಯಿಸುವುದರ ಮೂಲ ಉದ್ದೇಶದ ಬಗ್ಗೆ ಸರ್ಕಾರವು ಸ್ಪಷ್ಟತೆಯನ್ನು ಹೊಂದಿದ್ದರೆ ಮತ್ತು ಶಾಲೆಗಳು ಎಂದಿನಂತೆ ನಡೆಯುವುದಕ್ಕೂ, ಕೊರೊನಾ ನಿಭಾಯಿಸುವುದಕ್ಕೂ ಯಾವುದೇ ಸಂಬಂಧವೂ ಇಲ್ಲವೆಂದು ಇತರೆಲ್ಲಾ ದೇಶಗಳು ಅರಿತಿರುವ ಸತ್ಯ. ಇದನ್ನು ತಿಳಿದಿದ್ದರೆ ನಮ್ಮ ರಾಜ್ಯದ ಮಕ್ಕಳನ್ನು ಕೊರೊನಾ ನಿಯಂತ್ರಣಕ್ಕೆ ಹೊಣೆಗಾರರನ್ನಾಗಿ ಮಾಡಬೇಕಾಗುವುದಿಲ್ಲ.

ಕೊರೊನಾ ಸೋಂಕು ತಡೆಯಲು ಲಸಿಕೆಗಳು ಲಭಿಸುವವರೆಗೆ ಶಾಲೆಗಳನ್ನು ತೆರೆಯಬಾರದು ಎಂಬ ವಾದವನ್ನು ಮಾಧ್ಯಮಗಳು ಈಗಾಗಲೇ ಹರಡಿವೆ. ಇದು ಕಾರ್ಯಸಾಧ್ಯವಲ್ಲದ, ತೀರಾ ಅಸಂಬದ್ಧವಾದ ವಾದವಾಗಿದೆ. ಕೊರೊನಾ ಲಸಿಕೆಗಳು ಬರುವುದಕ್ಕೆ ಇನ್ನೂ ಕೆಲವು ತಿಂಗಳುಗಳು ಬೇಕು. ಬಂದರೂ ಅವು ಮಕ್ಕಳಿಗೆ ದೊರೆಯವು. ಇಲ್ಲಾಗಲೀ, ಇತರ ದೇಶಗಳಲ್ಲಾಗಲೀ ಮಕ್ಕಳಿಗೆ ಲಸಿಕೆ ನೀಡುವ ಪ್ರಸ್ತಾವವೇ ಇಲ್ಲ. ಮಕ್ಕಳಿಗೆ ಕೊರೊನಾ ಬಾಧಿಸುವುದಿಲ್ಲ ಎಂದ ಮೇಲೆ ಅವರಿಗೆ ಅವುಗಳ ಅಗತ್ಯವೂ ಇಲ್ಲ. ಆದ್ದರಿಂದ ಶಾಲೆಗಳನ್ನು ಆರಂಭಿಸುವುದಕ್ಕೆ ಲಸಿಕೆಗಳನ್ನು ಕಾಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೋವಿಡ್‌ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ವಿಸ್ತೃತ ಸಲಹೆಗಳನ್ನೊಳಗೊಂಡ ಮಾರ್ಗಸೂಚಿ ಹೊರಡಿಸಿದೆ. ಕೋವಿಡ್ ಕಾರಣದಿಂದ ಹಲವು ಮಕ್ಕಳು ತಮ್ಮ ಮೂಲಭೂತ ಹಕ್ಕುಗಳನ್ನು ಕಳೆದುಕೊಳ್ಳುವಂತಾಗಿದೆಯೆಂದೂ, ಈಗಾಗಲೇ ಮಕ್ಕಳಿಗಿದ್ದ ಸಂಕಷ್ಟಗಳ ಜೊತೆಗೆ ಲಭ್ಯವಿದ್ದ ಆಹಾರ, ಪೋಷಣೆ, ಆರೋಗ್ಯ, ಶಿಕ್ಷಣ, ರಕ್ಷಣೆ ಮತ್ತು ನ್ಯಾಯದಾನ ವ್ಯವಸ್ಥೆಗಳನ್ನು ಕಸಿಯುವ ಮೂಲಕ ಹೊಸ ಬಗೆಯ ಸಂಕಷ್ಟಗಳನ್ನು ಸೃಷ್ಟಿಸಿ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ ಎಂದೂ ಹೇಳಿದೆ. ಅದರಲ್ಲೂ ವಿಶೇಷವಾಗಿ ವಲಸೆ ಕಾರ್ಮಿಕರ, ದಿನಗೂಲಿ ನೌಕರರ, ಬೀದಿಬದಿಯಲ್ಲಿ ಕೆಲಸ ನಿರ್ವಹಿಸಿ ಅಲ್ಲೇ ವಾಸಿಸುವ ಜನರ ಮಕ್ಕಳು, ಬಾಲ ಕಾರ್ಮಿಕರು, ವಿಶೇಷ ಅಗತ್ಯವುಳ್ಳ, ಆರೈಕೆ ಸಂಸ್ಥೆಗಳಲ್ಲಿನ ಮಕ್ಕಳು ತೀವ್ರತರನಾದ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದೂ ಅದು ಅಭಿಪ್ರಾಯಪಟ್ಟಿದೆ.

ಜೊತೆಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ ಹಾಗು ಸಮಗ್ರ ಬಾಲ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಮಕ್ಕಳಿಗೆ ದೊರೆಯುತ್ತಿದ್ದ ಬಿಸಿಯೂಟ ಮತ್ತು ಪೂರಕ ಪೌಷ್ಠಿಕಾಂಶ ಸೇವೆಗಳು ಸ್ಥಗಿತಗೊಂಡು ವ್ಯವಸ್ಥೆಯಲ್ಲಿ ವ್ಯತ್ಯಯವಾದ ಕಾರಣ ಮಕ್ಕಳ ಆಹಾರ ಭದ್ರತೆ ಕುರಿತಾದ ಆತಂಕಗಳು ಮತ್ತಷ್ಟು ಹೆಚ್ಚಿವೆ ಎಂದು ಆಯೋಗವು ಉಲ್ಲೇಖಿಸಿದೆ.

ಕೇವಲ ಶೇ 15 ರಷ್ಟು ಗ್ರಾಮೀಣ ಕುಟುಂಬಗಳಿಗೆ ಮಾತ್ರ ಇಂಟರ್ನೆಟ್ ವ್ಯವಸ್ಥೆ ಲಭ್ಯವಿದೆ. ಆನ್‌ ಲೈನ್‌ ಮೂಲಕ ಶಿಕ್ಷಣ ಪಡೆಯಲು ಸಾಧ್ಯವಾಗದಿರುವುದರಿಂದ ಅನೇಕ ವಿದ್ಯಾರ್ಥಿಗಳು ಅಸಹಾಯಕತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಅನೇಕ ಪ್ರಕರಣಗಳು ವರದಿಯಾಗಿವೆ. ಸರ್ಕಾರಿ ಶಾಲೆಯಲ್ಲಿ ಕಲಿಸುತ್ತಿರುವ ಶೇಕಡ 75 ರಷ್ಟು ಪಾಲಕರು ತಮ್ಮ ಮಕ್ಕಳಿಗೆ ತಂತ್ರಜ್ಞಾನದ ಮೂಲಕ ಶಿಕ್ಷಣ ಒದಗಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಜೊತೆಗೆ, ಆನ್‌ ಲೈನ್‌ ಶಿಕ್ಷಣ ಪ್ರಾರಂಭವಾದ ಮೇಲೆ ಗೌಪ್ಯತೆ, ಸೈಬರ್‌ ಪೀಡನೆ ಮತ್ತು ನಿಂದನೆಯ ಹೊಸ ಸಮಸ್ಯೆಗಳು ಹೆಚ್ಚಾಗಿವೆ. ಈ ವೇದಿಕೆಗಳಲ್ಲಿ ಅನುಚಿತ ಕಲಿಕಾ ವಿಷಯಗಳು ತಲೆಯೆತ್ತುತ್ತಿರುವ ಅನೇಕ ಉದಾಹರಣೆಗಳಿವೆ. ಇದಲ್ಲದೆ ಅನಧಿಕೃತ ಜನರು ಆನ್‌ಲೈನ್ ತರಗತಿಗಳಿಗೆ ಒಳನುಸುಳುವ ಮೂಲಕ ಹೆಣ್ಣು ಮಕ್ಕಳ ಚಿತ್ರಗಳನ್ನು ತೆಗೆದುಕೊಳ್ಳುವ ನಿದರ್ಶನಗಳು ಗೌಪ್ಯತೆಯ ಕಾಳಜಿಗಳನ್ನು ಎತ್ತಿ ತೋರಿಸುತ್ತವೆ ಎಂದು ಆಯೋಗವು ಸಾಕ್ಷಾಧಾರಗಳನ್ನು ಉಲ್ಲೇಖಿಸಿ ಆತಂಕ ವ್ಯಕ್ತಪಡಿಸಿದೆ.

ಶಾಲೆಗಳು ಮುಚ್ಚಿ ಮಕ್ಕಳು ಶಿಕ್ಷಣದಿಂದ ವಿಮುಖರಾಗಿರುವುದರಿಂದ ಬಾಲ್ಯದ ದುಡಿಮೆ ಹಾಗೂ ಬಾಲ್ಯ ವಿವಾಹಗಳು ಹೆಚ್ಚುತ್ತಿರುವ ಬಗ್ಗೆ ರಾಜ್ಯದ ಹೈಕೋರ್ಟ್‌ ಕೂಡ ಈಗೆರಡು ದಿನಗಳ ಹಿಂದೆ ಮಕ್ಕಳ ಶಿಕ್ಷಣದ ಹಕ್ಕಿನ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಕಳವಳ ವ್ಯಕ್ತಪಡಿಸಿದೆ. ಇನ್ನು ಹತ್ತು ದಿನಗಳೊಳಗಾಗಿ ವಿದ್ಯಾಗಮದಂತಹ ಕಾರ್ಯಕ್ರಮಗಳನ್ನು ಪುನರಾರಂಭಿಸುವ ಬಗ್ಗೆ ಯೋಚಿಸಬೇಕೆಂದು ಸರ್ಕಾರಕ್ಕೆ ಸೂಚಿಸಿದೆ.

ರಾಜ್ಯದ ಶಾಲಾಭಿವೃದ್ಧಿ ಸಮಿತಿಗಳು ಮತ್ತು ಅವುಗಳ ಸಮನ್ವಯ ಸಮಿತಿಯು ಶಾಲೆಗಳನ್ನು ತೆರೆಯುವುದಕ್ಕೆ ಈಗಾಗಲೇ ಆಗ್ರಹಿಸಿದ್ದು, ಈಗ ಮತ್ತೊಮ್ಮೆ ಈ ಮನವಿಯ ಮೂಲಕ ಅದನ್ನೇ ಒತ್ತಾಯಿಸುತ್ತಿವೆ. ಇವೆಲ್ಲವುಗಳನ್ನು ಆಧರಿಸಿ ನಾವು ರಾಜ್ಯದ ಮಕ್ಕಳ ಪರವಾಗಿ ಈ ಕೆಳಗಿನ ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಡುತ್ತಿದ್ದೇವೆ:

ಬಾಲವಾಡಿಯಿಂದ 12ನೇ ತರಗತಿಯವರೆಗೆ ಎಲ್ಲಾ ಶಾಲೆಗಳನ್ನು ಡಿಸೆಂಬರ್ 15ರೊಳಗಾಗಿ ಪೂರ್ಣ ಪ್ರಮಾಣದಲ್ಲಿ ಆರಂಭಿಸಬೇಕು.
ಡಿಸೆಂಬರ್ 15ಕ್ಕೆ ಆರಂಭಿಸಿದರೆ ಜೂನ್ ಮಧ್ಯದವರೆಗೆ ಈ 2020-2021 ಶೈಕ್ಷಣಿಕ ವರ್ಷವೆಂದು ಶಾಲೆಗಳನ್ನು ನಡೆಸಿ 180 ದಿನಗಳ ಕಾಲಾವಕಾಶದಲ್ಲಿ ಎಲ್ಲಾ ಪಾಠಗಳನ್ನು ಬೋಧಿಸುವುದಕ್ಕೆ ಸಾಧ್ಯವಿದೆ. ಅದರಲ್ಲಿ ಯಾವುದಾದರೂ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದಿದ್ದರೆ ಸ್ಥಳೀಯ ಮಟ್ಟದಲ್ಲೇ ಮಾಡಿಕೊಳ್ಳುವುದಕ್ಕೂ ಸಾಧ್ಯವಿದೆ. ಆದ್ದರಿಂದ ಈ ಶೈಕ್ಷಣಿಕ ವರ್ಷವನ್ನು 2020ರ ಡಿ.15ರಿಂದ2021ರ ಜೂನ್ 15ರವರೆಗೆ ಎಂದು ಪರಿಗಣಿಸಬೇಕು. ಆ ಬಳಿಕ ಪರೀಕ್ಷೆಗಳನ್ನು ನಡೆಸಿ, ಜುಲೈ 2021ರಿಂದ ಮುಂದಿನ ಶೈಕ್ಷಣಿಕ ವರ್ಷವನ್ನು ಆರಂಭಿಸಬೇಕೆಂದೂ ಆಗ್ರಹಿಸುತ್ತೇವೆ.

ಆನ್ ಲೈನ್ ಶಿಕ್ಷಣದಿಂದ ಹೆಚ್ಚಿನ ಮಕ್ಕಳಿಗೆ ಪ್ರಯೋಜನವಾಗುತ್ತಿಲ್ಲ. ಅದು ಹಲಬಗೆಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಡಿ.15ರಿಂದ ಶಾಲೆಗಳನ್ನು ಆರಂಭಿಸಿದೊಡನೆ ಎಲ್ಲಾ ಸ್ತರಗಳಲ್ಲಿ ಆನ್ ಲೈನ್ ಶಿಕ್ಷಣವನ್ನು ರದ್ದು ಪಡಿಸಬೇಕು. ಯಾವುದೇ ಸಮಸ್ಯೆಗಳ ಕಾರಣಕ್ಕೆ ಯಾರೇ ವಿದ್ಯಾರ್ಥಿಗಳಿಗೆ ಶಾಲೆಗೆ ಬರುವುದು ಅಸಾಧ್ಯವಾದರೆ ಅಂಥ ಮಕ್ಕಳಿಗೆ ಇತರ ವ್ಯವಸ್ಥೆಗಳನ್ನು ಕಲ್ಪಿಸಬಹುದು.
ರಾಜ್ಯದ ಕೊರೊನಾ ಕಾರ್ಯಪಡೆಯು ಕಾಲೇಜುಗಳ ಪುನರಾರಂಭಕ್ಕೆಂದು ಸಿದ್ಧಪಡಿಸಿರುವ ಮಾರ್ಗಸೂಚಿಯು ಅವೈಜ್ಞಾನಿಕವಾಗಿದೆ. ಎಲ್ಲರೂ ಕೊರೊನಾ ವೈರಸ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕೆಂಬ ತೀರಾ ಅಸಮಂಜಸವಾದ, ಬೇರೆಲ್ಲೂ ಮಾಡಿರದ ಸಲಹೆಗಳನ್ನು ನೀಡಿದೆ. ಅಂಥ ಕಾರ್ಯಪಡೆಯ ಸಲಹೆಗಳೇ ಶಾಲೆಗಳನ್ನು ಪುನರಾರಂಭಿಸದಿರುವುದಕ್ಕೂ ಕಾರಣವೆಂದು ನಮ್ಮ ಅರಿವಿಗೆ ಬಂದಿರುತ್ತದೆ. ಆದ್ದರಿಂದ ಶಾಲೆಗಳನ್ನು ಡಿ 15ರಿಂದ ಪುನರಾರಂಭಿಸುವ ವಿಚಾರದಲ್ಲಿ ಈ ಕಾರ್ಯಪಡೆಯ ಸಹಮತವಿಲ್ಲದಿದ್ದರೆ ಅದನ್ನು ಕಡೆಗಣಿಸಬೇಕು. ಎಲ್ಲಾ ಮಕ್ಕಳಿಗೆ ಕೊರೊನಾ ಪರೀಕ್ಷೆ ಮಾಡಿಸಬೇಕೆಂದು ಈ ಕಾರ್ಯಪಡೆಯೇನಾದರೂ ಸಲಹೆಯಿತ್ತರೆ ಅದನ್ನು ಕೂಡ ಕಡೆಗಣಿಸಬೇಕೆಂದೂ ಆಗ್ರಹಿಸುತ್ತೇವೆ.

ಕೊರೊನಾ ಕಾಲದಲ್ಲಿ ಶಾಲೆಗಳನ್ನು ನಡೆಸುವುದಕ್ಕೆ ಪಾಲಿಸಬೇಕಾದ ಕ್ರಮಗಳ ಬಗ್ಗೆ ಯುನಿಸೆಫ್, ಸಿ.ಡಿ.ಸಿ., ಮತ್ತು ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್ ಮುಂತಾದ ದೇಶಗಳ ಆರೋಗ್ಯ ಇಲಾಖೆಗಳು ಬಹು ಸರಳವಾದ, ವೈಜ್ಞಾನಿಕವಾದ ಮಾರ್ಗದರ್ಶಿಗಳನ್ನು ಬಹು ಹಿಂದೆಯೇ ಪ್ರಕಟಿಸಿವೆ. ಮಾತ್ರವಲ್ಲ, ಆ ದೇಶಗಳಲ್ಲೆಲ್ಲ ಶಾಲೆಗಳನ್ನು ಬಹು ಯಶಸ್ವಿಯಾಗಿ, ಸುರಕ್ಷಿತವಾಗಿ ನಡೆಸಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಅವೇ ಮಾರ್ಗಸೂಚಿಗಳನ್ನಾಧರಿಸಿ ನಿಯಮಗಳನ್ನು ರೂಪಿಸಬಹುದಾಗಿದೆ.

ಮಾಧ್ಯಮಗಳು, ಅದರಲ್ಲೂ ಟಿ.ವಿ ವಾಹಿನಿಗಳು, ಕೊರೊನಾ ಸೋಂಕಿನ ಬಗ್ಗೆ ಆರಂಭದಿಂದಲೂ ತೀರಾ ಅತಿರೇಕದ, ಅವೈಜ್ಞಾನಿಕವಾದ, ಆಧಾರರಹಿತವಾದ ಮಾಹಿತಿಯನ್ನು ಅಬ್ಬರದೊಂದಿಗೆ ಬಿತ್ತರಿಸುತ್ತಿರುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಾತ್ರವಲ್ಲ, ಸರ್ಕಾರವು ಶಾಲೆಗಳನ್ನು ತೆರೆಯುವುದಕ್ಕೆ ಅಡ್ಡಿಯಾಗುತ್ತಿದೆ. ಶಾಲೆಗಳನ್ನು ಮುಚ್ಚಿರುವುದು ಮಕ್ಕಳಿಗೆ ಸಿಹಿ ಸುದ್ದಿ ಎಂಬ ಹೇಳಿಕೆಗಳು ತೀರಾ ಅಸಂಬದ್ಧವೂ, ಅಪಾಯಕಾರಿಯೂ ಆಗಿವೆ. ಆದ್ದರಿಂದ ಡಿ. 15ಕ್ಕೆ ಪೂರ್ವಭಾವಿಯಾಗಿ ಮುಂದಿನ ಒಂದು ವಾರ ಈ ಎಲ್ಲಾ ವಾಹಿನಿಗಳು ಮತ್ತು ವಾರ್ತಾ ಪತ್ರಿಕೆಗಳು ರಾಜ್ಯದಲ್ಲಿ ಕೊರೊನಾ ಸೋಂಕಿನ ವಾಸ್ತವ ಸ್ಥಿತಿಯನ್ನು ಜನರಿಗೆ ತಿಳಿಸಿ, ಶಾಲೆಗಳ ತೆರೆಯುವಿಕೆಯು ನಿರಪಾಯಕರವೆಂಬ ಸತ್ಯವನ್ನು ಎಲ್ಲರಿಗೂ ಮನದಟ್ಟು ಮಾಡುವಂತೆ ಹೇಳಬೇಕಾಗಿದೆ. ಅದಕ್ಕೆ ಅಗತ್ಯವಾದ ಎಲ್ಲಾ ಅಂಕಿಅಂಶಗಳನ್ನು ಸರ್ಕಾರವು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತೇವೆ. ಜೊತೆಗೆ, ಸರ್ಕಾರವು ಕೂಡಾ ಮಕ್ಕಳಲ್ಲೂ, ಪೋಷಕರಲ್ಲೂ ಧೈರ್ಯ ತುಂಬುವಂತಹ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದೂ, ಅದಕ್ಕಾಗಿ ವಿಶೇಷ ಅಭಿಯಾನವನ್ನೇ ಸಂಘಟಿಸಬೇಕೆಂದೂ ವಿನಂತಿಸುತ್ತೇವೆ.

ಈ 9 ತಿಂಗಳ ಕಾಲ ಶಾಲೆಗಳನ್ನು ಮುಚ್ಚಿಟ್ಟದ್ದರಿಂದಾಗಿ ಮಕ್ಕಳ ಮೇಲೆ ಅಪಾರವಾದ ಪರಿಣಾಮಗಳಾಗಿದ್ದು, ಅವರ ದೈಹಿಕ, ಮಾನಸಿಕ, ಶೈಕ್ಷಣಿಕ ಹಾಗೂ ಪೌಷ್ಟಿಕ ಸ್ಥಿತಿಗತಿಗಳು ಕುಂಠಿತವಾಗಿವೆ. ಅವೆಲ್ಲವುಗಳಿಗೆ ಸೂಕ್ತ ನೆರವಿನ ಅಗತ್ಯವಿದ್ದು, ಅದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನೂ, ತಜ್ಞರ ಸೇವೆಗಳನ್ನೂ ಏರ್ಪಡಿಸಬೇಕೆಂದು ಆಗ್ರಹಿಸುತ್ತೇವೆ. ಅದಕ್ಕಾಗಿ ಶಾಲೆಗಳಿಗೆ ವಿಶೇಷ ಅನುದಾನದ ಅಗತ್ಯವಿದ್ದರೆ ಅದನ್ನು ಒದಾಗಿಸಬೇಕೆಂದೂ ಕೇಳಿಕೊಳ್ಳುತ್ತೇವೆ.

ಮಕ್ಕಳಿಗೆ ಈ 9 ತಿಂಗಳಲ್ಲಿ ಬಿಸಿಯೂಟವೂ ಸೇರಿದಂತೆ ಪೌಷ್ಟಿಕ ಆಹಾರದ ಲಭ್ಯತೆಯಲ್ಲಿ ಕೊರತೆಯಿದ್ದುದರಿಂದ ಮುಂದಿನ 6 ತಿಂಗಳಲ್ಲಿ ಅದನ್ನು ಸರಿದೂಗಿಸುವುದಕ್ಕಾಗಿ ಮೊಟ್ಟೆ, ಬೀಜಗಳು ಇತ್ಯಾದಿ ಪೌಷ್ಠಿಕ ಆಹಾರವಸ್ತುಗಳನ್ನು ವಿಶೇಷವಾಗಿ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸುತ್ತೇವೆ.

ಖಾಸಗಿ ಶಾಲೆಗಳಲ್ಲಿ ಶುಲ್ಕವನ್ನು ಭರಿಸುವ ಬಗ್ಗೆ ಸಮಸ್ಯೆಗಳಿದ್ದರೆ ಅಲ್ಲಿನ ವಿದ್ಯಾರ್ಥಿಗಳ ಶಿಕ್ಷಣಕ್ಕೂ, ಶಿಕ್ಷಕರು ಮತ್ತು ಇತರ ಸಿಬ್ಬಂದಿಯ ಸಂಬಳಗಳಿಗೂ ಯಾವುದೇ ಅಡ್ಡಿಗಳಾಗದಂತೆ ಅವನ್ನು ಬಗೆಹರಿಸುವ ಜವಾಬ್ದಾರಿಯನ್ನು ಸರ್ಕಾರವು ನಿರ್ವಹಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಯಾವುದೇ ವಿದ್ಯಾರ್ಥಿಯ ಕಲಿಕೆಗೆ ಅಡಚಣೆಯಾಗದಂತೆ ಖಾತರಿಪಡಿಸಬೇಕಾಗಿದೆ.

ಕೊರೊನಾ ಸೋಂಕಿನಿಂದ ತೊಂದರೆಗೀಡಾಗುವ ಅಪಾಯವು ಹೆಚ್ಚಿರುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲಾ ನೆರವನ್ನು ಒದಗಿಸುವುದಕ್ಕೆ ಸರಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ.

ಈ ಎಲ್ಲಾ ಕೆಲಸಗಳಲ್ಲಿ ಸರ್ಕಾರಕ್ಕೆ ಅಗತ್ಯವಾದ ನೆರವನ್ನು ಒದಗಿಸಲು ನಾವು ಸಿದ್ಧರಿದ್ದೇವೆ. ಶಾಲೆಗಳನ್ನು ತೆರೆಯುವುದಕ್ಕೆ ಅಗತ್ಯವಾದ ವೈಜ್ಞಾನಿಕ ಮಾಹಿತಿಯನ್ನು ಒದಗಿಸುವುದು, ಪೋಷಕರಲ್ಲೂ, ಶಿಕ್ಷಕರಲ್ಲೂ, ವಿದ್ಯಾರ್ಥಿಗಳಲ್ಲೂ ಧೈರ್ಯ ತುಂಬಿ ಶಾಲೆಗಳಿಗೆ ಮರಳುವಂತೆ ಉತ್ತೇಜಿಸುವುದು, ಶಾಲೆಗಳಲ್ಲಿ ಅಗತ್ಯವಾದ ಶುಚಿತ್ವವನ್ನು ಏರ್ಪಡಿಸುವುದು, ಕೊರೊನಾ ಸೋಂಕಿನ ಬಗ್ಗೆ ವಸ್ತುನಿಷ್ಠವಾದ ಮಾಹಿತಿಯನ್ನು ಪ್ರಚುರಪಡಿಸುವ ಕೆಲಸಗಳಲ್ಲಿ ಕೈ ಜೋಡಿಸಲು ನಾವೆಲ್ಲರೂ ಬದ್ಧರಾಗಿದ್ದೇವೆ.

ಆದ್ದರಿಂದ ನಮ್ಮ ಈ ಅಹವಾಲನ್ನು ಪರಿಗಣಿಸಿ ಇದೇ ಡಿ. 15ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬಾಲವಾಡಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಶಿಕ್ಷಣವನ್ನು ಪುನರಾರಂಭಿಸಬೇಕೆಂದು ಮತ್ತೊಮ್ಮೆ ಕೇಳಿಕೊಳ್ಳುತ್ತೇವೆ. ಸರ್ಕಾರವು ಇದರಲ್ಲಿ ವಿಫಲವಾದರೆ ಡಿ.16ರಿಂದ ನಾವು, ಅಂದರೆ ಈ ರಾಜ್ಯದ ಮಕ್ಕಳು ಮತ್ತು ಪೋಷಕರು, ನಾವಾಗಿ ಈ ಶಾಲೆಗಳನ್ನು ತೆರೆಯಲಿದ್ದೇವೆ.

ಮಕ್ಕಳ ನಡೆ -ಶಾಲೆಯ ಕಡೆ ಅಭಿಯಾನದ ಸಮಿತಿಯ ಪರವಾಗಿ

ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿ-ಯುವಜನ ಸಂಘಟನೆಗಳು


1. ಮೊಹಿದ್ದೀನ್ ಕುಟ್ಟಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ.
2. ವಿ ಎಂ ನಾರಾಯಣ ಸ್ವಾಮಿ ಎನ್‌ಎಸ್ ಮತ್ತು ಚಂದ್ರಶೇಖರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
3. ಜ್ಯೋತಿ ಕೆ., ರಾಜ್ಯ ಅಧ್ಯಕ್ಷರು, ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್ಎಫ್),
4. ವಾಸುದೇವರೆಡ್ಡಿಕೆ, ರಾಜ್ಯ ಕಾರ್ಯದರ್ಶಿ, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ)
5. ಸರೋವರ್ ಬೆಂಕೀಕೆರೆ,ರಾಜ್ಯ ಸಂಚಾಲಕರು, ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್)
6. ಡಾ.ಶ್ರೀನಿವಾಸ್, ರಾಜ್ಯ ಸಂಚಾಲಕರು, ಭಾರತೀಯ ವಿದ್ಯಾರ್ಥಿ ಸಂಘಟನೆ (ಬಿವಿಎಸ್)
7. ತೋಳಿ ಭರಮಣ್ಣ, ರಾಜ್ಯ ಸಂಚಾಲಕರು, ವಿದ್ಯಾರ್ಥಿ ಬಂಧುತ್ವ ವೇದಿಕೆ
8. ತಿಪ್ಪೇಸ್ವಾಮಿ ಕೆ.ಟಿ, ರಾಜ್ಯ ಸಂಚಾಲಕರು, ಕರ್ನಾಟಕ ಯುವ ಸಮನ್ವಯ

ಅಭಿಯಾನವನ್ನು ವೈಯುಕ್ತಿಕ ನೆಲೆಯಲ್ಲಿ ಬೆಂಬಲಿಸುತ್ತಿರುವ ತಜ್ಞರು


9. ಡಾ. ನಿರಂಜನಾರಾಧ್ಯ ವಿ.ಪಿ, ಅಭಿವೃದ್ಧಿ ಶಿಕ್ಷಣ ತಜ್ಞರು
10. ಡಾ.ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯಕೀಯ ತಜ್ಞರು, ಲೇಖಕರು
11. ಡಾ. ಸಿದ್ದನಗೌಡ ಪಾಟೀಲ, ಸಂಪಾದಕರು, ಹೊಸತು ಮಾಸ ಪತ್ರಿಕೆ, ಪ್ರಗತಿಪರ ಚಿಂತಕರು.
12. ಡಾ. ವಡ್ಡಗೆರೆ ನಾಗರಾಜಯ್ಯ, ಕವಿ, ಸಾಂಸ್ಕೃತಿಕ ಚಿಂತಕರು, ಸಾಮಾಜಿಕ ಕಾರ್ಯಕರ್ತರು
13. ಶ್ರೀಪಾದ ಭಟ್, ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಹೋರಾಟಗಾರರು, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ
14. ಬಿ.ಆರ್.ಭಾಸ್ಕರ್ ಪ್ರಸಾದ್, ಪ್ರಧಾನ ಸಂಪಾದಕ ನ್ಯೂಸ್ 14, ರಾಜ್ಯಾಧ್ಯಕ್ಷ,ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ.
15. ಡಾ. ಬಿ.ಆರ್. ಮಂಜುನಾಥ್, ರಾಜ್ಯ ಅಧ್ಯಕ್ಷರು, ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ.
16. ಡಾ.ಕೆ.ಎಸ್. ಜನಾರ್ಧನ, ರಾಜ್ಯ ಮಂಡಳಿ ಅಧ್ಯಕ್ಷರು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಉನ್ನತ ಪದವೀಧರರ ಒಕ್ಕೂಟ
17. ಡಾ.ಹೆಚ್.ಜಿ. ಜಯಲಕ್ಷ್ಮಿ, ವೈದ್ಯರು, ಲೇಖಕರು, ಮಹಿಳಾ ಪರ ಹೋರಾಟಗಾರರು.
18. ಡಾ. ಪಿ.ವಿ ಭಂಡಾರಿ, ಮನೋರೋಗ ತಜ್ಞರು
19. ಡಾ. ವಾಣಿ ಕೋರಿ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು
20. ಡಾ. ಬಾಲಸರಸ್ವತಿ, ಚರ್ಮ ತಜ್ಞರು2020ರಿಂದ
21. ಡಾ. ಭಾನು ಪ್ರಕಾಶ್ ಎಎಸ್, ನರಶಸ್ತ್ರಚಿಕಿತ್ಸೆ ವೈದ್ಯರು, ಸತ್ಯ ಆರೋಗ್ಯ.
22. ರಾಜಾರಾಂ ತಲ್ಲೂರು, ಪತ್ರಕರ್ತರು, ಲೇಖಕರು
23. ಜಿ.ರವಿ, ವಿಕಲಚೇತನ ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕುಗಳ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು
24. ಪಾರ್ಥಸಾರಥಿ ಕೆಎಸ್, ನಿವೃತ್ತ ಬಿಎಸ್ಎನ್‌ಎಲ್ ಅಧಿಕಾರಿ ಹಾಗೂ ಲೇಖಕರು.
25. ಭಾರತಿ ಪ್ರಶಾಂತ್, ಸಾಮಾಜಿಕ ಹೋರಾಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT